ಬೆಂಗಳೂರು: ರಾಜ್ಯದಲ್ಲಿ ಮುಂದಿನ ನವೆಂಬರ್ ತಿಂಗಳಲ್ಲಿ ಇನ್ವೆಸ್ಟ್ ಕರ್ನಾಟಕ ಹೂಡಿಕೆ ಸಮಾವೇಶ ನಡೆಯಲಿದೆ ಎಂದು ವಿಧಾನಸೌಧದಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಚರ್ಚಿಸಿ ಇನ್ನೊಂದು ವಾರದಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದು ವಿಧಾನಸೌಧದಲ್ಲಿ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ರಾಜ್ಯದ ಎಲ್ಲ ನಾಲ್ಕು ಕಂದಾಯ ವಿಭಾಗವಾರು ಕೈಗಾರಿಕಾ ಅದಾಲತ್ ನಡೆಸಿ, ಉದ್ಯಮಿಗಳ ಅಹವಾಲು ಆಲಿಸಲಾಗುವುದು. ದುಬೈನಲ್ಲಿ ಶೀಘ್ರವೇ ಮೇಳ ನಡೆಯಲಿದ್ದು ರಾಜ್ಯ ಸರ್ಕಾರವು ಹೂಡಿಕೆದಾರರನ್ನು ಆಕರ್ಷಿಸಲು ಕೈಗಾರಿಕಾ ಇಲಾಖೆಯ ಸ್ವಾಲ್ ಹಾಕಲಿದೆ. ನಂತರದ ದಿನಗಳಲ್ಲಿ ವಿವಿಧ ದೇಶಗಳಲ್ಲಿ ರೋಡ್ ಶೋ ನಡೆಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಉದ್ಯೋಗ ಮಿತ್ರ ಸಂಸ್ಥೆಯು ದೇಶದ ಅಗ್ರಮಾನ್ಯ ಹೂಡಿಕೆ ಪ್ರಚಾರ ಏಜೆನ್ಸಿಯಾಗಿ ಹೊರ ಹೊಮ್ಮಿದೆ ಎಂದು ತಿಳಿಸಿದ ಅವರು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 62,085 ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಳಕೆ ಮಾಡದ ಕೈಗಾರಿಕಾ ಭೂಮಿಯನ್ನು ಹಿಂಪಡೆಯಲು ಚಿಂತನೆ ನಡೆದಿದೆ. ಜಮೀನಿಗಾಗಿ ಹಣ ಪಾವತಿಸಿದ್ದವರಿಗೆ ಅವಕಾಶ ನೀಡಲಾಗುವುದು, ಹಣ ತುಂಬದವರಿಗೆ ನೊಟೀಸ್ ನೀಡುತ್ತೇವೆ. ಉದ್ಯಮಿಗಳಿಗೆ ಕಿರುಕುಳ ಆಗದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತಾಪವಾಗುವ ದೂರುಗಳ ಬಗ್ಗೆ ಕೈಗಾರಿಕಾ ಸಚಿವರ ಹಂತದಲ್ಲಿಯೇ ಸಾಧ್ಯವಾದ ಮಟ್ಟಿಗೂ ತೀರ್ಮಾನಿಸಲಾಗುವುದು. ನಮ್ಮ ವ್ಯಾಪ್ತಿಗೆ ಮೀರಿದ ವಿಚಾರಗಳಿದ್ದರೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಪರಿಹರಿಸಲು ಯತ್ನಿಸುತ್ತೇವೆ. 30 ದಿನಗಳ ಕಾಲಾವಕಾಶ ನೀಡಿದ ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಕಲಬುರಗಿ ರಾಜಕಾರಣ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರಿಂದ ಬೆಂಬಲ ದೊರೆತರೆ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ. ಮೇಯರ್ ಹುದ್ದೆಗೆ ಜೆಡಿಎಸ್ ಬೇಡಿಕೆ ಇಟ್ಟಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಕುರಿತು ರಾಜ್ಯಾಧ್ಯಕ್ಷರು ನಿರ್ಧಾರ ಮಾಡುತ್ತಾರೆ. ಅವರ ನಿರ್ಧಾರದಂತೆ ಉಸ್ತುವಾರಿ ಸಚಿವನಾಗಿ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆ ವೇತನ ಬಾಕಿ ಉಳಿಸಿಲ್ಲ
ಮಂಡ್ಯ ಜಿಲ್ಲೆ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ವೇತನ ಬಾಕಿ ಉಳಿಸಿಕೊಂಡಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿರುವ ಅವರು, ಕಾರ್ಮಿಕರಿಗೆ ವೇತನ ಕೊಟ್ಟಿಲ್ಲ ಎಂಬುದು ಸುಳ್ಳು. ಸಕ್ಕರೆ ಕಾರ್ಖಾನೆಯಲ್ಲಿ ಪ್ರಸ್ತುತ ಯಾವುದೇ ಸಮಸ್ಯೆಯಿಲ್ಲ. ಅಲ್ಲಿನ ಪ್ರತಿಭಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ನನಗೂ, ಸಕ್ಕರೆ ಕಾರ್ಖಾನೆಗೂ ಯಾವುದೇ ಸಂಬಂಧವಿಲ್ಲ. ನಾನು ಅದರ ಭಾಗವೂ ಅಲ್ಲ. 2008ರಲ್ಲೇ ನಿರಾಣಿ ಗ್ರೂಪ್‌ಗೆ ರಾಜೀನಾಮೆ ನೀಡಿದ್ದೇನೆ. ಈಗ ಆ ಉದ್ಯಮ ಸಮೂಹದಲ್ಲಿ ನಾನು ನಿರ್ದೇಶಕನೂ ಆಗಿಲ್ಲ. ಕಾರ್ಖಾನೆಯ ಬಗ್ಗೆ ಸಂಬಂಧಿಸಿದವರು ಉತ್ತರ ನೀಡುತ್ತಾರೆ ಎಂದು ಹೇಳಿದರು.
(Invest Karnataka Event on November says Industry Minister)
ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿದ್ದೇವೆ: ಮುರುಗೇಶ್ ನಿರಾಣಿ
ಇದನ್ನೂ ಓದಿ: ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವುದಕ್ಕೆ ಥಾಯ್ಲೆಂಡ್ ದೇಶಕ್ಕೆ ಆಹ್ವಾನ ನೀಡಿದ ಸಚಿವ ಮುರುಗೇಶ್ ನಿರಾಣಿ