ಐಪಿಎಲ್ ಕ್ರೇಜ್: ಪಂದ್ಯ ಮುಗಿದ 50 ನಿಮಿಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 22,000 ಜನ ಪ್ರಯಾಣ!

ಬೆಂಗಳೂರಿನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಾಖಲೆ ಬರೆದಿದೆ. ಪಂದ್ಯ ಮುಗಿದ ಕೇವಲ 50 ನಿಮಿಷಗಳಲ್ಲಿ 22,000ಕ್ಕೂ ಹೆಚ್ಚು ಅಭಿಮಾನಿಗಳು ಮೆಟ್ರೋ ಬಳಸಿದ್ದು, ಸಂಚಾರ ದಟ್ಟಣೆ ತಪ್ಪಿಸಲು ಬಿಎಂಆರ್‌ಸಿಎಲ್ 39 ಹೆಚ್ಚುವರಿ ರೌಂಡ್ ಟ್ರಿಪ್‌ಗಳನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ಪಂದ್ಯಗಳಿಗೂ ವಿಶೇಷ ಸೌಲಭ್ಯಗಳ ತಯಾರಿ ನಡೆಸಲಾಗಿದೆ.

ಐಪಿಎಲ್ ಕ್ರೇಜ್: ಪಂದ್ಯ ಮುಗಿದ 50 ನಿಮಿಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 22,000 ಜನ ಪ್ರಯಾಣ!
ನಮ್ಮ ಮೆಟ್ರೋ
Image Credit source: @OfficialBMRCL
Edited By:

Updated on: Mar 30, 2026 | 9:16 AM

ಬೆಂಗಳೂರು, ಮಾರ್ಚ್​ 30: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL 2026) ಉದ್ಘಾಟನಾ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳ ಸಾಗರವೇ ಹರಿದುಬಂದಿದ್ದು, ನಮ್ಮ ಮೆಟ್ರೋ (Namma Metro) ಕೂಡ ಸಾಕ್ಷಿಯಾಗಿದೆ. ಪಂದ್ಯದ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣಕ್ಕೆ ನಾಗರಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಸಾಮಾನ್ಯ ದಿನಗಳಿಗಿಂತ ದ್ವಿಗುಣ ಪ್ರಮಾಣದಲ್ಲಿ ಪ್ರಯಾಣಿಕರು ಮೆಟ್ರೋ ಬಳಸಿದ್ದಾರೆ ಎಂದು ಬಿಎಂಆರ್​ಸಿಎಲ್ ಮೂಲಗಳು ತಿಳಿಸಿವೆ.

ಪಂದ್ಯ ಮುಗಿದ ಕೇವಲ 50 ನಿಮಿಷಗಳ ಅವಧಿಯಲ್ಲಿ ಸುಮಾರು 22,000 ಜನರು ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ನಿಲ್ದಾಣಗಳಿಂದ ಸುರಕ್ಷಿತವಾಗಿ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿ ಸಂಚಾರ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ಬಿಎಂಆರ್‌ಸಿಎಲ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿತ್ತು. ಮೆಜೆಸ್ಟಿಕ್ ಕಡೆಗೆ 13 ಹಾಗೂ ವೈಟ್‌ಫೀಲ್ಡ್ ಕಡೆಗೆ 9 ರೈಲುಗಳು ಸೇರಿದಂತೆ ಒಟ್ಟು 39 ರೌಂಡ್ ಟ್ರಿಪ್‌ಗಳನ್ನು ಕಾರ್ಯಾಚರಣೆ ಮಾಡಲಾಗಿದೆ.

ಹೆಚ್ಚುವರಿ ರೈಲುಗಳ ಸಂಚಾರ

ಪರ್ಪಲ್ ಲೈನ್‌ನಲ್ಲಿ 18, ಗ್ರೀನ್ ಲೈನ್‌ನಲ್ಲಿ 15 ಮತ್ತು ಯಲ್ಲೋ ಲೈನ್‌ನಲ್ಲಿ 6 ಹೆಚ್ಚುವರಿ ಸಂಚಾರಗಳನ್ನು ನಡೆಸುವ ಮೂಲಕ ಪ್ರಯಾಣಿಕರ ದಟ್ಟಣೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಪ್ರತಿ ಮೂರು ನಿಮಿಷಕ್ಕೊಮ್ಮೆ ರೈಲು ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳಿಗೂ ಇನ್ನಷ್ಟು ಸೌಲಭ್ಯಗಳನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಇದನ್ನೂ ಓದಿ: ಇಂದಿನಿಂದ ಐಪಿಎಲ್​, ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ತಡರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚಾರ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಮೆಟ್ರೋರೈಲು ಸಂಚಾರದ ಅವಧಿಯನ್ನು ತಡರಾತ್ರಿ ವರೆಗೆ ವಿಸ್ತರಿಸುತ್ತಿದೆ. ಸಾಮಾನ್ಯವಾಗಿ ರಾತ್ರಿ 11 ಗಂಟೆಗೆ ಕೊನೆಗೊಳ್ಳುತ್ತಿದ್ದ ರೈಲು ಸಂಚಾರವನ್ನು ಪಂದ್ಯ ಮುಗಿದ ನಂತರ ಸಾವಿರಾರು ಅಭಿಮಾನಿಗಳು ಏಕಕಾಲಕ್ಕೆ ನಿಲ್ದಾಣಕ್ಕೆ ಬರುವ ಹಿನ್ನೆಲೆಯಲ್ಲಿ ವಿಸ್ತರಿಸಲಾಗುತ್ತಿದೆ. ಐಪಿಎಲ್ ಉದ್ಘಾಟನಾ ಪಂದ್ಯದ ದಿನ ರಾತ್ರಿ 2 ಗಂಟೆ ವರೆಗೆ ಮೆಟ್ರೋ ಸಂಚಾರ ವಿಸ್ತರಣೆ ಮಾಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us