ಬೆಂಗಳೂರು: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ವಿರುದ್ಧ ವೋಟರ್ ಐ.ಡಿ. ಸಂಗ್ರಹ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಪಿಐಎಲ್ ಸಲ್ಲಿಸಲಾಗಿತ್ತು. ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಆನಂದ್ ಮತ್ತು ಸಂತೋಷ್ ಎಂಬುವವರು ಪಿಐಎಲ್ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್, ಪೊಲೀಸರು ಸಲ್ಲಿಸಿದ್ದ ಚಾರ್ಜ್ ಷೀಟ್ನ ಪರಾಮರ್ಶೆ ನಡೆಸಿ ತನಿಖೆಯ ಲೋಪದೋಷಗಳ ಬಗ್ಗೆ ವರದಿ ಸಲ್ಲಿಸಲು ಐಪಿಎಸ್ ಅಧಿಕಾರಿಯನ್ನು ನೇಮಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿತ್ತು.
ಅದರಂತೆ ತನಿಖೆ ಪರಾಮರ್ಶೆ ನಡೆಸಿ ಐಪಿಎಸ್ ಅಧಿಕಾರಿಯ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು. ಪೊಲೀಸರ ತನಿಖೆಯಲ್ಲಿ ಕೆಲ ಲೋಪವಿರುವುದು ಪರಾಮರ್ಶೆಯಲ್ಲಿ ಪತ್ತೆಯಾಗಿದೆ. ಪೊಲೀಸರ ತನಿಖೆ ಇನ್ನೂ ಪೂರ್ಣವಾಗಿಲ್ಲ. ಮುನಿರತ್ನ ವಿರುದ್ಧ ತನಿಖೆ ಇನ್ನೂ ಮುಂದುವರಿದಿದೆ. ಸಿಬಿಐ ತನಿಖೆಯನ್ನೇ ಕೋರಿರುವ ಅರ್ಜಿದಾರರು ರಾಜ್ಯ ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂದು 51 ಪುಟಗಳ ತನಿಖೆ ಪರಾಮರ್ಶೆ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಶಾಸಕ ಮುನಿರತ್ನ ರಾಜ್ಯ ಪೊಲೀಸರ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹೀಗಾಗಿ ತನಿಖೆ ವಿಳಂಬವಾಗಿದೆ. ಸಿಬಿಐ ತನಿಖೆಗೆ ನಾವು ಸಹಕರಿಸುತ್ತೇವೆ. ಹಾಗಾಗಿ ಸಿಬಿಐಗೆ ಪ್ರಕರಣ ಒಪ್ಪಿಸುವಂತೆ ಅರ್ಜಿದಾರರ ಪರ ವಕೀಲ ಕೆಬಿಕೆ ಸ್ವಾಮಿ ಮನವಿ ಮಾಡಿದ್ದರು.
ಸದ್ಯಕ್ಕೆ ಸಿಬಿಐ ತನಿಖೆ ಅಗತ್ಯ ಇಲ್ಲವೆಂದಿರುವ ಹೈಕೋರ್ಟ್, ತನಿಖೆ ಮುಂದುವರಿಸಲು ಪೊಲೀಸರಿಗೆ ಸೂಚಿಸಿದೆ. ಎರಡು ಪ್ರಕರಣಗಳಲ್ಲಿ ತನಿಖೆ ಇನ್ನೂ ಮುಂದುವರಿದಿದೆ. ಅಲ್ಲದೇ ಸಿಬಿಐ ಕೂಡಾ ತನಿಖೆ ನಡೆಸಲು ಅಸಹಾಯಕತೆ ವ್ಯಕ್ತಪಡಿಸಿದೆ. ಅರ್ಜಿದಾರರು ಪಕ್ಷವೊಂದರ ಕಾರ್ಯಕರ್ತರಾಗಿದ್ದು ಮುನಿರತ್ನ ಜೊತೆ ರಾಜಕೀಯ ವಿರೋಧಿಗಳಾಗಿರುವಂತಿದೆ. ತನಿಖೆ ಮುಂದುವರಿದಿರುವುದರಿಂದ ಅರ್ಜಿದಾರರು ಪೊಲೀಸರ ತನಿಖೆಗೆ ಸಹಕರಿಸಬೇಕು. ಹಾಗೇ ಅರ್ಜಿದಾರರು ಎತ್ತಿರುವ ತನಿಖಾ ಲೋಪವನ್ನು ತನಿಖಾಧಿಕಾರಿ ಪರಿಗಣಿಸಬೇಕು ಎಂದು ಸಿಜೆ ಎ.ಎಸ್.ಒಕಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಡಿಸಿ, ತನಿಖಾ ಪ್ರಗತಿ ವರದಿ ಸಲ್ಲಿಸಲು ಪೊಲೀಸರಿಗೆ ಸೂಚಿಸಿದೆ.
Published On - 5:30 pm, Wed, 20 January 21