ಕರ್ನಾಟಕದಲ್ಲಿ ಒಂದು ಪರ್ಸೆಂಟ್ ಕೂಡಾ ಕಮಿಷನ್ ವ್ಯವಹಾರ ಇಲ್ಲ: ನೀರಾವರಿ ಸಚಿವ ಗೋವಿಂದ ಕಾರಜೋಳ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 04, 2022 | 6:37 PM

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಜತೆ ಕಾಂಗ್ರೆಸ್ ನಾಯಕರು ಚೆನ್ನಾಗಿದ್ದಾರೆ. ಅವರಿಗೆ ಒಂದು ಹೇಳಿ, ಫೈಲ್ ಕ್ಲಿಯರ್ ಮಾಡಿಸಲು ಆಗುವುದಿಲ್ಲವೇ ಎಂದು ಕಾರಜೋಳ ಪ್ರಶ್ನಿಸಿದರು.

ಕರ್ನಾಟಕದಲ್ಲಿ ಒಂದು ಪರ್ಸೆಂಟ್ ಕೂಡಾ ಕಮಿಷನ್ ವ್ಯವಹಾರ ಇಲ್ಲ: ನೀರಾವರಿ ಸಚಿವ ಗೋವಿಂದ ಕಾರಜೋಳ
ನೀರಾವರಿ ಸಚಿವ ಗೋವಿಂದ ಕಾರಜೋಳ
Follow us on

ಬೆಂಗಳೂರು: ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಾಮಗಾರಿ ನಿರ್ವಹಣೆಯಲ್ಲಿ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ನೀರಾವರಿ ಸಚಿವ, ಕರ್ನಾಟಕದಲ್ಲಿ ಒಂದೇ ಒಂದು ಪರ್ಸೆಂಟ್ ಕೂಡಾ ಕಮಿಷನ್ ವ್ಯವಹಾರ ನಡೆಯುತ್ತಿಲ್ಲ ಎಂದರು. ರಾಜ್ಯದಲ್ಲಿ 42 ಸಾವಿರ ಗುತ್ತಿಗೆದಾರರಿದ್ದಾರೆ. ಈ ಪೈಕಿ 820 ಮಂದಿ ಕೆಂಪಣ್ಣನವರ ಜೊತೆ ಇದ್ದಾರೆ. ಕೆಂಪಣ್ಣ ರಾಜಕೀಯ ಪ್ರೇರಿತವಾಗಿ ಆರೋಪಿಸುತ್ತಿದ್ದಾರೆ. ಇದು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ. ನಮ್ಮ ಸರ್ಕಾರ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಿದರು.

ನಗರದ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗಾಗಿ ₹ 9,000 ಕೋಟಿ ಮೊತ್ತದ ಡಿಪಿಆರ್ ರೂಪಿಸಲಾಗಿದೆ. ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗಾಗಿ ರೂಪಿಸುತ್ತಿರುವ ಯೋಜನೆಯಿದು. ಯೋಜನೆ ಪ್ರಶ್ನಿಸಿ ತಮಿಳುನಾಡು ಸುಪ್ರೀಂಕೋರ್ಟ್​ಗೆ ಹೋಗಿದೆ. ಬಿಜೆಪಿ ನಾಯಕ ಅಣ್ಣಾಮಲೈರತ್ತ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೊಟ್ಟು ಮಾಡುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್​ ಜತೆ ಇವರಿಬ್ಬರೂ ಚೆನ್ನಾಗಿದ್ದಾರೆ. ಅವರಿಗೆ ಒಂದು ಹೇಳಿ, ಫೈಲ್ ಕ್ಲಿಯರ್ ಮಾಡಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಮೇಕೆದಾಟು ಯೋಜನೆ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದೆ. ಕಾಂಗ್ರೆಸ್​ನವರು ಮೈಮೇಲೆ ದೆವ್ವ ಬಂದವರಂತೆ ವರ್ತಿಸುತ್ತಿದ್ದಾರೆ. ಬುಟ್ಟಿಯಲ್ಲಿ ಹಾವಿದೆ ಅಂದಿದ್ದೆ, ಆದರೆ ಯಾವ ಹಾವು ಅಂದಿದ್ನಾ? ಕಾಂಗ್ರೆಸ್​ನವರು ಯಾಕೆ ಮೈಮೇಲೆ ಚೇಳು ಬಿದ್ದಂತೆ ಆಡುತ್ತಿದ್ದಾರೆ. ಇನ್ನೆರಡು ದಿನ ಕಾಯಿರಿ, ಆಮೇಲೆ ದಾಖಲೆ ಬಿಡುಗಡೆ ಮಾಡುವೆ ಎಂದು ಪ್ರತಿಕ್ರಿಯಿಸಿದರು.

ಕರ್ನಾಟಕ ನೀರಾವರಿ ನಿಗಮಕ್ಕೆ ₹ 5809 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಮೊತ್ತದಲ್ಲಿ ₹ 3,200 ಕೋಟಿ ಖರ್ಚು ಮಾಡಲಾಗಿದೆ. ಉಳಿದ ₹ 2609 ಕೋಟಿ ಅನುದಾನ ಮಾರ್ಚ್​ ಒಳಗೆ ಖರ್ಚಾಗುತ್ತದೆ. ಇಂದು ಕಾವೇರಿ, ವಿಶ್ವೇಶ್ವರಯ್ಯ, ಕೃಷ್ಣ ಹಾಗೂ ಕರ್ನಾಟಕ ನೀರಾವರಿ ನಿಗಮಗಳ ಬಗ್ಗೆ ಚರ್ಚೆಯಾಯಿತು. ಕರ್ನಾಟಕ ನೀರಾವರಿ ನಿಗಮಕ್ಕೆ ₹ 5809 ಕೋಟಿ ಅನುದಾನ ನೀಡಲಾಗಿದೆ. ಈವರೆಗೆ ₹ 3200 ಕೋಟಿ ಖರ್ಚಾಗಿದೆ. ಉಳಿದ ಅನುದಾನ ಮಾರ್ಚ್ ಒಳಗೆ ಖರ್ಚಾಗಲಿದೆ ಎಂದು ವಿವರಿಸಿದರು.

ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ರೈತರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ ಪ್ರೋತ್ಸಾಹ ನೀಡುತ್ತೇವೆ. ಭೂಸ್ವಾಧೀನಕ್ಕೆ ಮೊದಲು ಹಣ ಪಾವತಿಸುವಂತೆ ಸೂಚಿಸಿದ್ದೇವೆ. ವಿವಿಧ ನಿಗಮಗಳಲ್ಲಿ ನಕಲಿ ಬಿಲ್ ಮೂಲಕ ₹ 28 ಕೋಟಿ ಪಾವತಿಯಾಗಿರುವ ಬಗ್ಗೆ ಮಾಹಿತಿಯಿದೆ. ನಕಲಿ ಬಿಲ್ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳು ಹಾಗೂ ಇಬ್ಬರು ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಅಕ್ರಮ ಮಾಡಿರುವವರಿಂದ ಸರ್ಕಾರದ ಹಣ ವಸೂಲಿ ಮಾಡುತ್ತೇವೆ. ಕಾಮಗಾರಿ ವಿಳಂಬ ಮಾಡುವ ಗುತ್ತಿಗೆದಾರರ ಟೆಂಡರ್​ ರದ್ದುಪಡಿಸಿ, ದಂಡ ವಿಧಿಸಲಾಗುವುದು. ನೀರಾವರಿ ನಿಗಮ 64 ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. 2,297 ಕೆರೆಗಳನ್ನು ತುಂಬಿಸಲು ₹ 60,176 ಕೋಟಿ ಖರ್ಚಾಗಿದೆ. 2021ರ ನವೆಂಬರ್ ತಿಂಗಳಲ್ಲಿ ₹ 410 ಕೋಟಿ ಬಳಸಲಾಗಿದೆ. ಬಾಕಿ ₹ 7,800 ಕೋಟಿ ಬಿಲ್ ಸದ್ಯದಲ್ಲೇ ಕ್ಲಿಯರ್ ಮಾಡುತ್ತೇವೆ. ₹ 1 ಕೋಟಿಗೂ ಕಡಿಮೆ ಮೊತ್ತದ ಗುತ್ತಿಗೆದಾರರ ಬಿಲ್ ಪಾವತಿಸಲಾಗಿದೆ ಎಂದರು.

ಇದನ್ನೂ ಓದಿ: ಶೇ. 40 ಕಮಿಷನ್ ಕೊಡಬೇಕಾಗಿತ್ತು, ಯಡಿಯೂರಪ್ಪಗೆ ಪತ್ರ ಬರೆದಿದ್ದೆವು ಸ್ಪಂದಿಸಿರಲಿಲ್ಲ- ಗುತ್ತಿಗೆದಾರರ ಅಧ್ಯಕ್ಷ ಕೆಂಪಣ್ಣ ಪುನರುಚ್ಚಾರ
ಇದನ್ನೂ ಓದಿ: ಕರ್ನಾಟಕದಲ್ಲಿ ಕಮಿಷನ್ ದಂಧೆ: ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ, ಸರ್ಕಾರ ವಜಾ ಮಾಡಲು ಆಗ್ರಹ

Published On - 6:35 pm, Tue, 4 January 22