ಬೆಂಗಳೂರು: ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್ಲೈನ್ ತರಗತಿ ನಿಲ್ಲುತ್ತದೆ. ಶಾಲಾ ಕಾಲೇಜುಗಳು ಆನ್ಲೈನ್ ವಿಧಾನದಲ್ಲಿ ನಡೆಯುತ್ತದೆ. ಅಲ್ಲದೆ, 6ನೇ ತಾರೀಖಿನಿಂದ ಜಾರಿಯಾಗುವಂತೆ ಕರ್ನಾಟಕ ರಾಜ್ಯಾದ್ಯಂತ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಇರಲಿದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ. ವೀಕೆಂಡ್ ಕರ್ಫ್ಯೂ ವೇಳೆ, ಆಹಾರ ವಸ್ತು, ಹೊಟೆಲ್ಗಳಲ್ಲಿ ಪಾರ್ಸೆಲ್, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
10, 12ನೇ ತರಗತಿ ಹೊರತುಪಡಿಸಿ ಉಳಿದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ನಡೆಯಲಿದೆ. ಈ ನಿಯಮವು ಬೆಂಗಳೂರಿಗೆ ಮಾತ್ರ ಸಂಬಂಧಿಸಿದ್ದಾಗಿದೆ. ಉಳಿದ ಕಡೆಗಳಲ್ಲಿ ಶಾಲಾ ಕಾಲೇಜುಗಳು ಈಗಿರುವಂತೆಯೇ ನಡೆಯಲಿದೆ. ಆದರೆ, ವೀಕೆಂಡ್ ಕರ್ಫ್ಯೂ ಸಹಿತ, 50:50 ನಿಯಮವು ಇಡೀ ಕರ್ನಾಟಕ ರಾಜ್ಯಕ್ಕೆ ಅನ್ವಯ ಆಗಲಿದೆ.
ಕರ್ನಾಟಕದಲ್ಲಿ ಸರ್ಕಾರಿ ಕಚೇರಿಗಳು ಮಾಲ್ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ಚಿತ್ರಮಂದಿರ, ಮಾಲ್, ಬಾರ್, ಪಬ್ಗಳ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರ ಪ್ರವೇಶ (50:50 ನಿಯಮ) ಇರುತ್ತದೆ. ಇಲ್ಲಿಗೆ ಭೇಟಿ ನೀಡುವವರಿಗೆ ಲಸಿಕೆ ಕಡ್ಡಾಯ ಆಗಿರಲಿದೆ. ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಡಬಲ್ ಡೋಸ್ ಕಡ್ಡಾಯ ಆಗಿರಲಿದೆ. ಮದುವೆ ಹೊರಾಂಗಣದಲ್ಲಿದ್ದರೆ 200, ಒಳಾಂಗಣದಲ್ಲಿದ್ದರೆ 100 ಜನರಿಗೆ ಮಾತ್ರ ಅವಕಾಶ. ಅವರಿಗೂ 2 ಡೋಸ್ ಆಗಿರಬೇಕು ಎಂದು ಹೇಳಿದ್ದಾರೆ.
ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ
ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ಕಡ್ಡಾಯ. ವಿದೇಶಿ ಪ್ರಯಾಣಿಕರ ಟ್ರ್ಯಾಕಿಂಗ್-ಟ್ರೇಸಿಂಗ್ ಬಲಪಡಿಸಲು ತೀರ್ಮಾನಿಸಲಾಗಿದೆ. ಎಂದು ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಂತರ ಸಚಿವರಾದ ಆರ್. ಅಶೋಕ್, ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಕೊವಿಡ್ ನಿರ್ವಹಣೆ ಸಭೆ ನಡೆಯಿತು. ನಾವು ತೆಗೆದುಕೊಂಡ ತೀರ್ಮಾನಗಳನ್ನು ವೈಜ್ಞಾನಿವಾಗಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ, ಅಕ್ಕಪಕ್ಕದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಗಳಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ಪರಾಮರ್ಶಿಸಿದೆವು. ಒಮಿಕ್ರಾನ್ ಸೋಂಕು ಕೊವಿಡ್ಗಿಂತ 5 ಪಟ್ಟು ಜಾಸ್ತಿ ಆಗ್ತಿದೆ ಅಂತ ತಜ್ಞರು ವರದಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪಸ್ತುತ 3048 ಮಂದಿಗೆ ಸೋಂಕು ಬಂದಿದೆ. 147 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ನಮ್ಮ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಶೇ 3ಕ್ಕಿಂತ ಹೆಚ್ಚಾಗುತ್ತಿದೆ. 20ರಿಂದ 50 ವರ್ಷದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿಗೆ ಒಂದು, ರಾಜ್ಯದ ಇತರೆಡೆಗೆ ಮತ್ತೊಂದು ನಿಯಮಾವಳಿ ರೂಪಿಸಲು ನಿರ್ಧಾರ
ಶಾಲಾ ಕಾಲೇಜು ರಜೆ ಬೆಂಗಳೂರಿಗೆ ಮಾತ್ರ ಅನ್ವಯ ಆಗುತ್ತದೆ. ಆದರೆ, ಉಳಿದ ನಿಯಮಗಳು ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಮೇಲಿನ ನಿಯಮಾವಳಿ ರೂಪಿಸಲಾಗಿದೆ. ಕಳೆದ 3 ದಿನಗಳಿಂದ ಕೊವಿಡ್ ಎರಡು ಮೂರು ದಿನಗಳಲ್ಲಿ ಡಬಲ್ ಆಗ್ತಿದೆ. 3ರಿಂದ 6, 6ರಿಂದ 9 ಸಾವಿರ ಆಗ್ತಿದೆ. ಐದಾರು ದಿನಗಳಲ್ಲಿ 10 ಸಾವಿರ ದಾಟುವ ಅಪಾಯ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 10 ಸಾವಿರ ದಾಟಿದೆ ಎಂದು ಹೇಳಿದ್ದಾರೆ. ಶೇ 80ರಿಂದ 85ರಷ್ಟು ಸೋಂಕು ಮೆಟ್ರೊ ನಗರಗಳಲ್ಲಿ ಕಾಣಿಸಿಕೊಳ್ತಿದೆ. ದೇಶದೆಲ್ಲೆಡೆ ಇದೇ ವಿದ್ಯಮಾನ ವರದಿಯಾಗಿದೆ. ಅಮೆರಿಕದಲ್ಲಿಯೂ ಪ್ರಸ್ತುತ 5 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಪರಿಸ್ಥಿತಿ ನಿರ್ವಹಿಸಲು ಬೆಂಗಳೂರಿಗೆ ಒಂದು, ರಾಜ್ಯದ ಇತರೆಡೆಗೆ ಮತ್ತೊಂದು ನಿಯಮಾವಳಿ ರೂಪಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ರೆಡ್ ಅಲರ್ಟ್ ಅಡಿ ಬಂದಿರುವ ಬೆಂಗಳೂರು ಮಹಾನಗರ
ಬೆಂಗಳೂರಿನಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ ಬೆಂಗಳೂರು ಮಹಾನಗರ ರೆಡ್ ಅಲರ್ಟ್ ಅಡಿ ಬಂದಿದೆ. ಬೆಂಗಳೂರಿನ ಪಾಸಿಟಿವಿಟಿ ರೇಟ್, ಜಿಲ್ಲೆಗಳ ಪಾಸಿಟಿವಿಟಿ ರೇಟ್ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಸಿಎಂಗೆ ವಿವರಣೆ ನೀಡಲಾಗಿದೆ. ಬೆಂಗಳೂರಿನ ವಲಯವಾರು ಪಾಸಿಟಿವಿಟಿ ರೇಟ್ ಬಗ್ಗೆ ವಿವರಣೆ ನೀಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಬೆಡ್ ಸ್ಟೇಟಸ್ ಬಗ್ಗೆ ಮಾಹಿತಿ ಪಡೆಯಲಾಗಿದೆ. ಎಷ್ಟು ಬೆಡ್ ವ್ಯವಸ್ಥೆ ಇದೆ. ಹೆಚ್ಚುವರಿಯಾಗಿ ಎಷ್ಟು ಬೆಡ್ ಹೆಚ್ಚಿಸಬೇಕು. ಬೆಡ್ ಗಳನ್ನ ಹೆಚ್ಚಳ ಮಾಡಿಕೊಳ್ಳ ಬೇಕು ಎಂದು ತಜ್ಞರಿಂದ ಮಾಹಿತಿ ಲಭ್ಯವಾಗಿದೆ. ಆಕ್ಸಿಜನ್ ಬೆಡ್ಗಳ ಲಭ್ಯತೆ ಸದ್ಯಕ್ಕೆ ಕೊರತೆ ಇಲ್ಲ. ಕೊವಿಡ್ ಕೇರ್ ಸೆಂಟರ್ ಗಳನ್ನೂ ಪ್ರಾರಂಭಿಸಬೇಕು. ಈಗ ನಿಧಾನವಾಗಿ ಆಸ್ಪತ್ರೆ ಬೆಡ್ಗಳು ಭರ್ತಿ ಆಗುತ್ತಿವೆ. ಇದುವರೆಗೆ ಸರಾಸರಿ ಶೇಕಡಾ 5ರಷ್ಟು ಆಸ್ಪತ್ರೆ ಬೆಡ್ ಭರ್ತಿ ಆಗಿದೆ ಎಂದು ಮಾಹಿತಿ ನೀಡಲಾಗಿದೆ.
ಸಭೆಯಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ, ವೀಕೆಂಡ್ ಕರ್ಫ್ಯೂ ಬಗ್ಗೆ ಚರ್ಚೆ
ನೈಟ್ ಕರ್ಫ್ಯೂ ಮುಂದುವರಿಕೆ ಬಗ್ಗೆ ಚರ್ಚಿಸಲಾಗಿದೆ. ನೈಟ್ ಕರ್ಫ್ಯೂ ಮುಂದುವರಿಕೆ ಜೊತೆಗೆ ಕಠಿಣ ರೂಲ್ಸ್ ಜಾರಿ ಮಾಡುವ ಬಗ್ಗೆ ಹೇಳಲಾಗಿದೆ. ಎರಡು ವಾರಗಳ ಕಾಲ ನೈಟ್ ಕರ್ಫ್ಯೂ ಮುಂದುವರಿಕೆ ಬಗ್ಗೆ ಮಾತನಾಡಲಾಗಿದೆ. ಪ್ರವಾಸೊದ್ಯಮ ಸ್ಥಳಗಳಿಗೆ ನಿರ್ಬಂಧ ವಿಧಿಸುವುದು. ವೀಕೆಂಡ್ ಕರ್ಫ್ಯೂ ಜಾರಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳು ಕೇಳಿಬಂದಿದೆ. ವೀಕೆಂಡ್ ಕರ್ಫ್ಯೂ ಜಾರಿ ಮಾಡಿದರೆ ಪ್ರವಾಸಿ ತಾಣಗಳಲ್ಲಿ ಜನ ಜಂಗುಳಿ ನಿಯಂತ್ರಿಸಬಹುದು. ಇಲ್ಲದಿದ್ದರೆ ಕಷ್ಟ. ಬನ್ನೇರುಘಟ್ಟ ಪಾರ್ಕ್ಗೆ ಕಳೆದೊಂದು ವಾರದಿಂದ 10 ಸಾವಿರಕ್ಕೂ ಹೆಚ್ಚು ಜನ ವಿಸಿಟ್ ಮಾಡಿದ್ದಾರೆ. ಉಳಿದ ಪ್ರವಾಸಿ ತಾಣಗಳೂ ತುಂಬುತ್ತಿವೆ ಎಂಬ ಬಗ್ಗೆ ಮಾತುಕತೆ ನಡೆದಿದೆ.
ಶಾಲೆ- ಕಾಲೇಜು, ಆನ್ಲೈನ್- ಆಫ್ಲೈನ್ ತರಗತಿ?
ಸಭೆಯಲ್ಲಿ ತಜ್ಞರ ಜೊತೆ ಶಾಲಾ-ಕಾಲೇಜುಗಳ ಕುರಿತು ಚರ್ಚೆ ನಡೆಸಲಾಗಿದೆ. ತಮಿಳುನಾಡು ಸೇರಿ ಕೆಲ ರಾಜ್ಯಗಳಲ್ಲಿ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ. ನಮ್ಮ ರಾಜ್ಯದಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಲಸಿಕೆ ಪಡೆದ ಮಕ್ಕಳಿಗೆ ಆನ್ಲೈನ್ ತರಗತಿ ನಡೆಸುವ ಬಗ್ಗೆ ಅಭಿಪ್ರಾಯಗಳು ಕೇಳಿಬಂದಿದೆ. ಪಾಸಿಟಿವಿಟಿ ರೇಟ್ ನೋಡಿಕೊಂಡು ಆನ್ಲೈನ್ ಕ್ಲಾಸ್ ಮಾಡುವ ಬಗ್ಗೆ ಚಿಂತಿಸಲಾಗಿದೆ. ಸಭೆಯಲ್ಲಿ 24X7 ವ್ಯಾಕ್ಸಿನೇಷನ್ ಸೆಂಟರ್ ಪ್ರಾರಂಭದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ಕೊರೊನಾ ನಿಯಂತ್ರಣ ಸಭೆಯಲ್ಲಿ ವಿಸ್ತೃತ ಚರ್ಚೆ
ಕೊರೊನಾ ನಿಯಂತ್ರಣ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಬೇರೆ ಬೇರೆ ರಾಜ್ಯಗಳ ಪಾಸಿಟಿವಿಟಿ ರೇಟ್ ಬಗ್ಗೆ ಚರ್ಚೆ ನಡೆಸಲಾಗಿದೆ. ದೆಹಲಿ ಮಾದರಿಯ ನಿಯಮಗಳ ಬಗ್ಗೆ ಬೊಮ್ಮಾಯಿಗೆ ಮಾಹಿತಿ ನೀಡಲಾಗಿದೆ. ಸಿಎಂ ಬೊಮ್ಮಾಯಿಗೆ ತಾಂತ್ರಿಕ ಸಲಹಾ ಸಮಿತಿ ಮಾಹಿತಿ ನೀಡಿದೆ. ದೆಹಲಿಯಲ್ಲಿನ ಕ್ರಮಗಳ ಬಗ್ಗೆ ಸಿಎಂ ಗಮನಕ್ಕೆ ತಂದ ಸಮಿತಿ, ದೆಹಲಿ ಮಾದರಿ ಅನುಸರಿಸುವುದೇ ಸೂಕ್ತವೆಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಭೆಯಲ್ಲಿ 50:50 ರೂಲ್ಸ್ ಜಾರಿಗೊಳಿಸುವ ಬಗ್ಗೆ ಒತ್ತಾಯ ಕೇಳಿಬಂದಿದೆ. ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಕುರಿತು ಸಿಎಂ ಮಾಹಿತಿ ಪಡೆದಿದ್ದಾರೆ. ಬೆಡ್ಗಳನ್ನ ಹೆಚ್ಚಳ ಮಾಡಿಕೊಳ್ಳಬೇಕೆಂದು ತಜ್ಞರಿಂದ ಮಾಹಿತಿ ಸಿಕ್ಕಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ದೆಹಲಿ ಸೇರಿ ಕೆಲ ರಾಜ್ಯಗಳಲ್ಲಿನ ಟಫ್ ರೂಲ್ಸ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ಆಕ್ಸಿಜನ್ ಬೆಡ್, ಐಸಿಯು ಬೆಡ್ಗಳ ಬಗ್ಗೆ ಕೂಡ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ನೈಟ್ ಕರ್ಫ್ಯೂ ಮುಂದುವರಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನೈಟ್ಕರ್ಫ್ಯೂ ಜತೆಗೆ ಕಠಿಣ ರೂಲ್ಸ್ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸುವ ಕುರಿತು ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ. ಸಾರ್ವಜನಿಕ ಸಮಾರಂಭಗಳಲ್ಲಿ ಜನರಿಗೆ ಮಿತಿ ನಿಗದಿ ಸಾಧ್ಯತೆ ಬಗ್ಗೆಯೂ ಮಾತನಾಡಲಾಗಿದೆ.
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 2,479 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು
ಇದನ್ನೂ ಓದಿ: ಬೆಂಗಳೂರಿನಲ್ಲಿ 2 ಸಾವಿರ ಗಡಿ ದಾಟಿದ ಕೊರೊನಾ ಕೇಸ್; 24 ಗಂಟೆಯಲ್ಲಿ ಕೊವಿಡ್ ಪ್ರಕರಣಗಳು ದ್ವಿಗುಣ
Published On - 10:04 pm, Tue, 4 January 22