ಕರ್ನಾಟಕದಲ್ಲಿ ಕಮಿಷನ್ ದಂಧೆ: ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ, ಸರ್ಕಾರ ವಜಾ ಮಾಡಲು ಆಗ್ರಹ
ಭ್ರಷ್ಟಾಚಾರ ತಾಂಡವವಾಡುತ್ತಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್ ಮನವಿ ಮಾಡಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರ ನೆಲೆಗೊಂಡಿರುವ ಬಗ್ಗೆ ಕಾಂಗ್ರೆಸ್ ನಿಯೋಗ ಗುರುವಾರ (ನ.25) ರಾಜ್ಯಪಾಲರಿಗೆ ದೂರು ನೀಡಿದೆ. ಭ್ರಷ್ಟಾಚಾರ ತಾಂಡವವಾಡುತ್ತಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕೆಂದು ಕಾಂಗ್ರೆಸ್ ಮನವಿ ಮಾಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕ ರಮೇಶ್ ಕುಮಾರ್ ಸೇರಿದಂತೆ ಹಲವರು ದೂರು ನೀಡಿದ ನಿಯೋಗದಲ್ಲಿದ್ದರು. ಗುತ್ತಿಗೆದಾರರು ಪ್ರಧಾನಿಗೆ ಬರೆದಿರುವ ಪತ್ರ ಆಧರಿಸಿ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ.
ದೂರು ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಸಂವಿಧಾನಾತ್ಮಕವಾಗಿ ಸರ್ಕಾರ ನಡೆಯುತ್ತಿಲ್ಲ. 356 ಅಡಿಯಲ್ಲಿ ರಾಷ್ಟ್ರಪತಿ ಅಳ್ವಿಕೆ ಜಾರಿ ಮಾಡುವಂತೆ ಮನವಿ ಮಾಡಿದ್ದೇವೆ. ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಅಳ್ವಿಕೆ ಜಾರಿ ಮಾಡಬೇಕು. ಇಂಥ ಭ್ರಷ್ಟ ಸರ್ಕಾರವನ್ನು ನಾವು ಎಂದೂ ಕಂಡಿಲ್ಲ ಎಂದು ಹೇಳಿದರು. ಅಧಿಕಾರದಲ್ಲಿರುವವರು ಗುತ್ತಿಗೆದಾರರದಿಂದ ಶೇ 40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ನರೇಂದ್ರ ಮೋದಿ ಅವರು ಈ ಹಿಂದೆ ಕರ್ನಾಟಕಕ್ಕೆ ಬಂದಿದ್ದಾಗ ನಮ್ಮದು ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದ್ದರು. ಈಗ ನಡೆಯುತ್ತಿರುವುದೇನೆ ಎಂದು ಪ್ರಶ್ನಿಸಿದರು. ಇಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯು ಅಕ್ರಮ ಹಣ ವರ್ಗಾವಣೆ ಕಾಯ್ದೆಯ (ಮನಿ ಲಾಂಡರಿಂಗ್) ಅಡಿಯಲ್ಲಿ ಬರುತ್ತದೆ ಎಂದರು.
ಕೆಂಪಣ್ಣ ಎನ್ನುವವರು 6ನೇ ಜುಲೈ 2021ರಂದು ಪ್ರಧಾನಿಗೆ ಪತ್ರ ಬರೆದಿದ್ದರು. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥ ಬೆಳವಣಿಗೆ ನಡೆದಿದೆ. ಕೆಂಪಣ್ಣ ಬರೆದಿರುವ ದಾಖಲೆ ಕೊಟ್ಟಿದ್ದೇವೆ. ಬಿಡಿಎ ದಾಳಿಯ ವೇಳೆ ₹ 300 ಕೋಟಿ ನಷ್ಟವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. 365ನೇ ವಿಧಿ ಅನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಇದರ ಜೊತೆಗೆ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಹಿಂದೆ ಪ್ರಧಾನಿ ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಲೇವಡಿ ಮಾಡಿದ್ದರುನನ್ನ ಸರ್ಕಾರದ ವಿರುದ್ಧ ದಾಖಲೆ ಇಲ್ಲದೆ ಮೋದಿ ಆರೋಪಿಸಿದ್ದರು. ಶೇ 70ರಷ್ಟು ಹಣ ಕಮಿಷನ್ ರೂಪದಲ್ಲೇ ಹೋಗುತ್ತಿದೆ. ಕರ್ನಾಟಕದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಸಾಂವಿಧಾನಾತ್ಮಕ ರೀತಿಯಲ್ಲಿ ಸರ್ಕಾರ ನಡೆಯುತ್ತಿಲ್ಲ. ಆದಷ್ಟು ಬೇಗ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು. ಇವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ದುಪ್ಪಟ್ಟು ಅಂದಾಜು: ಡಿ.ಕೆ.ಶಿವಕುಮಾರ್ ದೂರು ಶೇ 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೂಡಲೇ ರಾಜ್ಯ ಸರ್ಕಾರವನ್ನು ರಾಜ್ಯಪಾಲರು ವಜಾ ಮಾಡಿ, ನ್ಯಾಯಾಂಗ ತನಿಖೆ ನಡೆಸಬೇಕು. ಗುತ್ತಿಗೆ ಕಾಮಗಾರಿ ವೇಳೆ ಕಾಮಗಾರಿ ವೆಚ್ಚವನ್ನು ದುಪ್ಪಟ್ಟು ಅಂದಾಜು (ಡಬಲ್ ಎಸ್ಟಿಮೇಷನ್) ಮಾಡಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಹಂತಹಂತವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ರಾಜಭವನ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಇದನ್ನೂ ಓದಿ: ಡ್ರಗ್ಸ್ ತನಿಖೆ ದಾರಿ ತಪ್ಪಿಸಲೆಂದೇ ಬಿಟ್ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ ಇದನ್ನೂ ಓದಿ: Bitcoin ಜಟಾಪಟಿ: ಹಿಟ್ ಅಂಡ್ ರನ್ ರಾಜಕೀಯ ಶುರು ಮಾಡಿದ ಸಿದ್ದರಾಮಯ್ಯ: ಬಿಜೆಪಿ ವಾಗ್ದಾಳಿ, ಪ್ರಧಾನಿ ಸೂಚನೆ ಸರಿಯಿಲ್ಲ: ಕಾಂಗ್ರೆಸ್
Published On - 8:46 pm, Thu, 25 November 21