Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಜಪಾನ್​ ತಂತ್ರಜ್ಞಾನ ಅಳವಡಿಕೆ: ಏನಿದರ ವಿಶೇಷ, ಇಲ್ಲಿದೆ ವಿವರ

|

Updated on: Feb 13, 2024 | 11:28 AM

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಪಾನ್​ನ ತಂತ್ರಜ್ಞಾನವೊಂದನ್ನು ಅಳವಡಿಸಲು ಮುಂದಾಗಲಾಗಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್​​ಗಳಲ್ಲಿ ಅಳವಡಿಸಲಾಗುತ್ತಿದ್ದು, ಸಾಧ್ಯಾಸಾಧ್ಯತೆ ನೋಡಿಕೊಂಡು ನಗರದ ಎಲ್ಲ ಪ್ರಮುಖು ಜಂಕ್ಷನ್​ಗಳಿಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗಿರುವುದಾಗಿ ವರದಿಯಾಗಿದೆ.

Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಜಪಾನ್​ ತಂತ್ರಜ್ಞಾನ ಅಳವಡಿಕೆ: ಏನಿದರ ವಿಶೇಷ, ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 13: ಸುಗಮ ಸಂಚಾರ ನಿರ್ವಹಣೆಗಾಗಿ ಇತ್ತೀಚೆಗೆ ಬೆಂಗಳೂರಿನ (Bengaluru) ಹಲಸೂರು ಬಳಿಯ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್​​ಗಳಲ್ಲಿ ಜಪಾನೀಸ್ (MODERATO) ತಂತ್ರಜ್ಞಾನ ಮೋಡರೇಟೊವನ್ನು ಆಧರಿಸಿದ ಹೊಸ ಟ್ರಾಫಿಕ್ ಸಿಗ್ನಲಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಇದು ವಾಹನಗಳು ಮತ್ತು ಪಾದಚಾರಿಗಳನ್ನು ನಿಯಂತ್ರಿಸಲು ನೆರವಾಗುತ್ತಿದೆ. ಪ್ರತಿ ಜಂಕ್ಷನ್‌ನಲ್ಲಿರುವ ವಾಹನಗಳ ದಟ್ಟಣೆಯ ಆಧಾರದ ಮೇಲೆ ಸಿಗ್ನಲ್ ಸಮಯವನ್ನು ಕ್ರಿಯಾತ್ಮಕವಾಗಿ ಹೊಂದಿಸುವ ಮೂಲಕ ಸಂಚಾರ ನಿರ್ವಹಣೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಈ ಅತ್ಯಾಧುನಿಕ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ವಿವಿಧ ಕಾರಣಗಳಿಂದಾಗಿ ತುಸು ವಿಳಂಬವಾಗಿತ್ತು. ಇದೀಗ ಅವು ಎಂಜಿ ರಸ್ತೆ, ಹೊಸೂರು ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿರುವ 28 ಪ್ರಮುಖ ಜಂಕ್ಷನ್‌ಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಹೊಸ ವ್ಯವಸ್ಥೆಯು ಪ್ರತಿ ಜಂಕ್ಷನ್‌ನಲ್ಲಿರುವ ವಾಹನಗಳ ದಟ್ಟಣೆಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಸಿಗ್ನಲ್‌ಗಳನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ‘ಮನಿ ಕಂಟ್ರೋಲ್’ ವರದಿ ತಿಳಿಸಿದೆ.

ಸದ್ಯ ಕೆನ್ಸಿಂಗ್ಟನ್ ರಸ್ತೆ ಮತ್ತು ಮರ್ಫಿ ರಸ್ತೆಯ ಜಂಕ್ಷನ್​ಗಳಲ್ಲಿ ಆರಂಭಿಕ ಪರೀಕ್ಷಾ ಉದ್ದೇಶಗಳಿಗಾಗಿ ತಾತ್ಕಾಲಿಕವಾಗಿ ಜಪಾನೀಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಫೆಬ್ರವರಿ ಅಂತ್ಯದಲ್ಲಿ ಅಧಿಕೃತ ಪರೀಕ್ಷಾ ಹಂತದ ಕಾರ್ಯಾಚರಣೆ ಆರಂಭವಾಗಲಿದೆ. ಮಾರ್ಚ್ ವೇಳೆಗೆ ನಗರದ ಪ್ರಮುಖ ಪ್ರದೇಶಗಳ ಜಂಕ್ಷನ್​​ಗಳಲ್ಲಿ ನೂತನ ತಂತ್ರಜ್ಞಾನದ ಸಿಗ್ನಲ್ ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಯೋಜನೆಯ ಮೇಲ್ವಿಚಾರಣೆ ವಹಿಸಿರುವ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ದೀಪಾ ಚೋಳನ್ ತಿಳಿಸಿದ್ದಾರೆ.

72 ಕೋಟಿ ರೂಪಾಯಿಗಳ ಈ ಸಿಗ್ನಲಿಂಗ್ ಯೋಜನೆಯನ್ನು ಜಪಾನಿನ ಸಂಸ್ಥೆಯಾದ ನಗೋಯಾ ಎಲೆಕ್ಟ್ರಿಕ್ ವರ್ಕ್ಸ್ ಕಂಪನಿ ಲಿಮಿಟೆಡ್ ಕಾರ್ಯಗತಗೊಳಿಸುತ್ತಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ಇತರ ಕೆಲವು ಕಾರಣಗಳಿಂದಾಗಿ ಯೋಜನೆ ವಿಳಂಬವಾಗಿತ್ತು.

ಈ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ?

ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ (ATSCS) ಸ್ವಯಂಚಾಲಿತ ಟ್ರಾಫಿಕ್ ಕೌಂಟರ್‌ಗಳನ್ನು ಒಳಗೊಂಡಿದೆ. ಸಿಗ್ನಲ್ ಟೈಮಿಂಗ್‌ನ ರಿಯಲ್ ಟೈಮ್ ಆಪ್ಟಿಮೈಸೇಶನ್‌ಗಾಗಿ ಜಪಾನ್​ನ ತಂತ್ರಜ್ಞಾನ ಮೋಡರೇಟೊವನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಕಬ್ಬನ್ ಪಾರ್ಕ್​ನಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಾಣದ ನಿರ್ಧಾರ ಕೈಬಿಟ್ಟ ಸರ್ಕಾರ

ಈ ವ್ಯವಸ್ಥೆಯು ಜಂಕ್ಷನ್‌ಗಳಲ್ಲಿನ ವಿಳಂಬವನ್ನು ಶೇ 13ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಬೆಂಗಳೂರಿನಲ್ಲಿ ಪ್ರಮುಖವಾಗಿ ಟ್ರಾಫಿಕ್ ಜಾಮ್ ಉಂಟಾಗುವ ಪ್ರದೇಶಗಳು, ಪ್ರಾಥಮಿಕವಾಗಿ ಹೊರ ವರ್ತುಲ ರಸ್ತೆ ಮತ್ತು ಹೊರವಲಯದಲ್ಲಿವೆ. ಈ ಪ್ರದೇಶಗಳು ಗಮನಾರ್ಹವಾದ ಸಂಚಾರ ದಟ್ಟಣೆ ಅನುಭವಿಸುತ್ತವೆ. ಹೀಗಾಗಿ ಆಧುನಿಕ ತಂತ್ರಜ್ಞಾನವು ಟ್ರಾಫಿಕ್​ ಜಾಮ್ ತಡೆಯುವ ನಿಟ್ಟಿನಲ್ಲಿ ಬಹಳ ಅನಿವಾರ್ಯವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:27 am, Tue, 13 February 24