ಸ್ಟಿಂಗ್ ಆಪರೇಷನ್: ಜೆಡಿಎಸ್ನ ಐಟಿ ಟೀಮ್ ಟಾರ್ಗೆಟ್; ಮೋಹನ್ ಪತ್ನಿ ಮೇಲೆ ಪೋಲಿಸರಿಂದ ದೌರ್ಜನ್ಯ ಆರೋಪ
ಜೆಡಿಎಸ್ ವಕ್ತಾರ ಪ್ರದೀಪ್, ಸ್ಟಿಂಗ್ ಆಪರೇಷನ್ ತನಿಖೆ ಸಂಬಂಧ ಮೋಹನ್ ಪತ್ನಿ ಪವಿತ್ರಾ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ನೋಟಿಸ್ ಇಲ್ಲದೆ ಮನೆ ಶೋಧಿಸಿ, ಮೊಬೈಲ್ ಹಾಗೂ ಪೆನ್ ಡ್ರೈವ್ ವಶಪಡಿಸಿಕೊಂಡಿದ್ದಾರೆ. ಮಹಿಳೆಯ ಗೌಪ್ಯತೆಗೆ ಧಕ್ಕೆ ತಂದಿರುವ ಪೊಲೀಸರ ಕ್ರಮವನ್ನು ಖಂಡಿಸಿದ್ದು, ನಿಜವಾದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 23: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂದು ಸ್ವತಃ ದೂರುದಾರ ಮಾಜಿ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಇನ್ನು ಈ ವಿಚಾರವಾಗಿ ಜೆಡಿಎಸ್ನ ಐಟಿ ವಿಂಗ್ನವರ ವಿಚಾರಣೆ ಕೂಡ ಮಾಡಲಾಗಿದೆ. ಆದರೆ ಅದು ಇನ್ನೂ ಮುಂದುವರೆದಿದ್ದು, ತೊಂದರೆ ಕೊಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಮತ್ತು ಕಾನೂನು ಸಲಹೆಗಾರ ಪ್ರದೀಪ್ ಗಂಭೀರ ಆರೋಪ ಮಾಡಿದ್ದಾರೆ.
ಮೋಹನ್ ಹೆಂಡತಿ ಮೇಲೆ ಪೋಲಿಸರು ಅಟ್ಯಾಕ್ ಮಾಡಿದ್ದಾರೆ: ಪ್ರದೀಪ್
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರದೀಪ್, ‘ಸ್ಟಿಂಗ್ ಆಪರೇಷನ್ ಯಾವ ರೀತಿ ತನಿಖೆ ನಡೆಯುತ್ತಿದೆ ಎನ್ನುವುದು ಗಮನಿಸಿದ್ದೇನೆ. ಜೆಡಿಎಸ್ನ ಐಟಿ ವಿಂಗ್ನವರಿಗೆ ತೊಂದರೆ ಕೊಡುತ್ತಿದ್ದಾರೆ. ಐಟಿ ವಿಂಗ್ನ ಮೋಹನ್ ಅವರ ಮನೆಯಲ್ಲಿ ಇಂದು ರಾತ್ರಿ 7.30ರವರೆಗೆ ಸರ್ಚ್ ಮಾಡಿದ್ದಾರೆ. ಮೋಹನ್ ಅವರ ಹೆಂಡತಿ ಪವಿತ್ರರ ಮೊಬೈಲ್ ಕೇಳುತ್ತಾರೆ. ಫೋನ್ ಕೊಡದಿದ್ದಕ್ಕೆ ಪೋಲಿಸರು ಅಟ್ಯಾಕ್ ಮಾಡಿದ್ದಾರೆ. ಆ ಹೆಣ್ಣುಮಗಳಿಗೂ ಇದ್ದಕ್ಕೂ ಸಂಬಂಧವಿಲ್ಲ’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಸ್ಟಿಂಗ್ ಪ್ರಕರಣದಿಂದ ಸರ್ಕಾರಕ್ಕೆ ಡ್ಯಾಮೇಜ್’: ಶೀಘ್ರವೇ ತನಿಖೆ ಪೂರ್ಣ ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
‘ಮನೆ ಸರ್ಚ್ ಮಾಡಲು ನೋಟಿಸ್ ಕೊಟ್ಟಿಲ್ಲ ಅಂದಿದ್ದಕ್ಕೆ ರಾತ್ರಿ 7:30ಕ್ಕೆ ಅವರ ಮನೆಯಲ್ಲೇ ನೋಟಿಸ್ ನೀಡಿದ್ದಾರೆ. ಪವಿತ್ರರ ಬೆಡ್ ರೂಂಗೆ ಬಲವಂತವಾಗಿ ನುಗ್ಗಿ ಅವರನ್ನು ಎಳೆದಾಡಿದ್ದಾರೆ. ಅವರ ಕೈಗೆ ತರಚಿದ ಗಾಯಗಳಾಗಿವೆ. ಮೋಹನ್ ಅವರ ತಾಯಿಯನ್ನು ಸಹ ಎಳೆದಾಡಿದ್ದಾರೆ. ಡಿಸಿಪಿ ಫೋನ್ ಮಾಡಿ ಆ ಮಹಿಳೆಯ ಮೊಬೈಲ್ನ್ನು ತೆಗೆದುಕೊಂಡು ಬರಲೇಬೇಕು ಅಂತಾ ಹೇಳುತ್ತಾರೆ. ಹಾಗಾಗಿ ಪೆನ್ ಡ್ರೈವ್, ಫೋನ್ ತೆಗೆದುಕೊಂಡು ಹೋಗಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
ಗೃಹಮಂತ್ರಿಗಳಿಗೆ ಸವಾಲು ಹಾಕಿದ ಪ್ರದೀಪ್
‘ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ. ಡಿಸಿಪಿ ಪೋಲಿಸರಿಗೆ ವಾರ್ನಿಂಗ್ ಮಾಡುತ್ತಾರೆ. ಐಟಿ ಸೆಲ್ನಾ, ಜೆಡಿಎಸ್ನ್ನು ಈ ಸ್ಟಿಂಗ್ನಲ್ಲಿ ಸಿಲುಕಿಸಬೇಕು ಎಂಬ ಉದ್ದೇಶವಿದೆ. ನಾನು ಗೃಹ ಮಂತ್ರಿಗಳಿಗೆ ಕೇಳುತ್ತೇನೆ. ಆ ಮಹಿಳೆ ಹತ್ತಿರ ಏನಾದರೂ ದಾಖಲೆಗಳಿದ್ದರೆ ನೀಡಲಿ. ಯಾವ ವ್ಯಕ್ತಿ ನಿಜವಾದ ಆರೋಪಿ ಇದ್ದಾನೆ, ಅವನನ್ನು ಈ ಸರ್ಕಾರ ಸುಮ್ಮನೆ ಬಿಟ್ಟಿದೆ. ಮೋಹನ ಅವರ ಹೆಸರು ಎಫ್ಐಆರ್ನಲ್ಲಿ ಇಲ್ಲ. ಈಗ ಅವರ ಮೊಬೈಲ್ ಕೊಟ್ಟಿದ್ದೇವೆ. ಒಂದು ದಾಖಲೆವಾದರೂ ತೋರಿಸಿ. ಹೆಣ್ಣುಮಗಳ ಗೌಪ್ಯತೆಗೆ ಧಕ್ಕೆ ಆಗಲ್ವಾ, ಮೋಹನ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಆದರೆ ಅವರ ಹೆಂಡತಿಯ ಫೋನ್ ಏಕೆ, ನಿಮಗೆ ತಾಕತ್ತಿದ್ದರೆ ಸರಿಯಾಗಿ ಕೆಲಸ ಮಾಡಿ. ಗೃಹಮಂತ್ರಿಗಳು ಏಕೆ ಸುಮ್ಮನಿದ್ದಾರಾ, ನಿಮಗೆ ತಾಕತ್ತಿದ್ದರೆ ಅವರನ್ನು ಅರೆಸ್ಟ್ ಮಾಡಿ’ ಎಂದು ಅವರು ಸವಾಲು ಹಾಕಿದ್ದಾರೆ.
ಮೋಹನ ಹೆಂಡತಿಯ ಮೇಲೆ ಪೊಲೀಸರಿಂದ ದೌರ್ಜನ್ಯ
‘ಮೋಹನ ಹೆಂಡತಿಯ ಮೇಲೆ ಪೊಲೀಸರಿಂದ ದೌರ್ಜನ್ಯವಾಗಿದೆ. ಐದು ಪೆನ್ ಡ್ರೈವ್ ತೆಗೆದುಕೊಂಡಿದ್ದಾರೆ. ಅವರ ಮದುವೆ ಸೇರಿದಂತೆ ಹಲವು ವಿಡಿಯೋಗಳು ಪೆನ್ ಡ್ರೈವ್ನಲ್ಲಿವೆ. ಆ ಪೆನ್ ಡ್ರೈವ್ನಲ್ಲಿ ಏನಿತ್ತು ಅಂತ ರಿಲೀಸ್ ಮಾಡಲಿ, ಅದರಲ್ಲಿ ಏನು ಇಲ್ಲ ಅಂದರೆ ನೀವು ಪರಿಹಾರ ಕಟ್ಟಿಕೊಡಬೇಕು. ಇಲ್ಲ ಈ ರಾಜ್ಯದ ಜನರ ಮುಂದೆ ನೀವು ಕ್ಷಮಾಪಣೆ ಕೇಳಿ’ ಎಂದರು. ಈ ವೇಳೆ ಪ್ರದೀಪ್, ಪೋಲಿಸರು ಮೋಹನ್ ಹೆಂಡತಿ ಮೇಲೆ ಹಲ್ಲೆ ಮಾಡಿದ ಆಡಿಯೋ ಬಿಡುಗಡೆ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
