ಅಧಿವೇಶನದಲ್ಲಿ ಕುಸಿದ ಚರ್ಚೆಯ ಗುಣಮಟ್ಟ: ಜೆಡಿಎಸ್ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ವಿಷಾದ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 17, 2022 | 8:40 PM

ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಹಾಗೂ ಕಲಾಪವನ್ನು ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆಗ್ರಹಿಸಿದರು

ಅಧಿವೇಶನದಲ್ಲಿ ಕುಸಿದ ಚರ್ಚೆಯ ಗುಣಮಟ್ಟ: ಜೆಡಿಎಸ್ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ವಿಷಾದ
ಜೆಡಿಎಸ್ ನಾಯಕರಾದ ಎಚ್​.ಡಿ.ಕುಮಾರಸ್ವಾಮಿ ಮತ್ತು ಎಚ್​.ಡಿ.ದೇವೇಗೌಡ
Follow us on

ಬೆಂಗಳೂರು: ರಾಗಿ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಗಮನ ಹರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸುತ್ತೇನೆ. ನಮ್ಮ ಮಾತಿಗೆ ಅವರು ಬೆಲೆ ಕೊಡುತ್ತಾರೋ ಇಲ್ಲವೋ ಗೊತ್ತಿಲ್ಲ. ವೈ.ಎಸ್​.ವಿ.ದತ್ತ ಅವರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ರಾಗಿ ಬೆಳೆಗಾರರಲ್ಲಿ ಸಣ್ಣ ರೈತರು, ದೊಡ್ಡ ರೈತರು ಎಂಬ ಭೇದ ಮಾಡಬಾರದು. ಈ ವಿಷಯವನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತೇನೆ ಎಂದರು. ಕೇಂದ್ರ ಸರ್ಕಾರವು ರಾಗಿಗೆ 3,377 ರೂಪಾಯಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. ಕಳೆದ ವರ್ಷ ರಾಗಿಗೆ ಬೆಂಬಲ ಬೆಲೆ 3,295 ರೂಪಾಯಿ ಇತ್ತು. ಈ ವರ್ಷ ಕೇವಲ 52 ರೂಪಾಯಿ ಹೆಚ್ಚಿಸಿದ್ದಾರೆ. ಯಾವ ಆಧಾರದ ಮೇಲೆ ಸರ್ಕಾರ 52 ರೂಪಾಯಿ ಹೆಚ್ಚಳ ಮಾಡಿದ್ದಾರೋ ಗೊತ್ತಿಲ್ಲ ಎಂದರು.

ಬೆಂಬಲ ಬೆಲೆಯನ್ನು ನೆಪಮಾತ್ರಕ್ಕೆ 52 ರೂಪಾಯಿ ಹೆಚ್ಚಳ ಮಾಡಿದ್ದಾರೆ ನಾನು ನಿರಂತರವಾಗಿ ರೈತರ ಪರವಾಗಿ ಹೋರಾಡಲು ಸಿದ್ಧನಿದ್ದೇನೆ. ನಾನು ರೈತ ಕುಟುಂಬಕ್ಕೇ ಸೇರಿದವನು. ರೈತರಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಲ್ಲುತ್ತೇನೆ. ಪ್ರತಿ ಕ್ವಿಂಟಲ್ ರಾಗಿಗೆ 4 ಸಾವಿರ ರೂಪಾಯಿಯನ್ನಾದರೂ ಬೆಂಬಲ ಕೊಡಬೇಕು. ಕೇವಲ 52 ರೂಪಾಯಿ ಹೆಚ್ಚು ಮಾಡುವುದರಿಂದ ಏನು ಪ್ರಯೋಜನವಾಗುತ್ತದೋ ನನಗೆ ಗೊತ್ತಾಗುತ್ತಿಲ್ಲ ಎಂದರು. ಇವರು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಅಷ್ಟೇ ಎಂದು ಟೀಕಿಸಿದರು.

ರಸಗೊಬ್ಬರದ ದರವೂ ವಿಪರೀತ ಹೆಚ್ಚಾಗಿದೆ. ಇದನ್ನೆಲ್ಲಾ ಗಮನದಲ್ಲಿರಿಸಿಕೊಂಡು ಬೆಂಬಲ ಬೆಲೆ ನಿಗದಿಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು. 20ರಂದು ದೆಹಲಿಗೆ ಹೋಗುತ್ತೇನೆ. ಈಗ ಹಲವು ರಾಜ್ಯಗಳ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಪ್ರಧಾನಮಂತ್ರಿಯ ಭೇಟಿಗೆ ಸಮಯ ಕೇಳುತ್ತೇನೆ. ಭೇಟಿಗೆ ಅವಕಾಶ ಸಿಕ್ಕರೆ ರೈತರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲು ಪ್ರಯತ್ನ ಮಾಡುತ್ತೇನೆ ಎಂದರು. ನಾನು ಪ್ರಧಾನಿ ಆಗಿದ್ದಾಗ ಏನೆಲ್ಲ ಕೊಟ್ಟೆ ಎಂದು ಹೇಳಲು ಹೋಗುವುದಿಲ್ಲ. ನಾನೀಗ ರಾಜ್ಯಸಭಾ ಸದಸ್ಯ. ಸಂಸತ್ ಅಧಿವೇಶನದಲ್ಲಿ ಬಜೆಟ್ ಬಗ್ಗೆ ರಾಷ್ಟ್ರಪತಿ ಭಾಷಣದ ಬಗ್ಗೆ ಮಾತಾಡಿದ್ದೇನೆ ಎಂದು ವಿವರಿಸಿದರು.

ಹಿಂದೆ ಸದನದಲ್ಲಿ ಹಿರಿಯರ ಮಾತಿಗೆ ಗೌರವ ಇರುತ್ತಿತ್ತು. ನಾನು ಎಂದಿಗೂ ಸದನದ ಬಾವಿಗೆ ಹೋಗಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ನಾನು ನನ್ನ ಅಭಿಪ್ರಾಯ ಹೇಳುತ್ತಾ, ಸಲಹೆಗಳನ್ನು ಕೊಡುತ್ತಿದ್ದೆ. ನಾನು ಒಮ್ಮೆಯೂ ಅಶ್ಲೀಲ ಪದವನ್ನು ಬಳಸಿಲ್ಲ. ಸದನದ ಕಲಾಪಗಳ ಗುಣಮಟ್ಟದ ತೀರಾ ತಳಮಟ್ಟಕ್ಕೆ ಹೋಗ್ತಿದೆ. ನಾವು ಹಿಂದೆ ಎಂತೆಂಥವರನ್ನು ನೋಡಿದ್ದೆವು. ನಿನ್ನೆ-ಮೊನ್ನೆ ಕರ್ನಾಟಕದ ಸದನದಲ್ಲಿ ಏನಾಯಿತು ಎಂಬುದನ್ನೂ ನೋಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಈಗ ಹಿಜಾಬ್ ವಿಚಾರದ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ರಾಜ್ಯದ ಈಗ ನಡೆಯುತ್ತಿರುವ ಬೆಳವಣಿಗೆಗಳು ದಾರಿ ತಪ್ಪುತ್ತಿವೆ. ಪ್ರಾರಂಭದಲ್ಲೇ ಇಂಥದ್ದನ್ನು ಚಿವುಟಿ ಹಾಕಬೇಕಿತ್ತು. ಆಡಳಿತ ಪಕ್ಷವೇ ಈ ಕೆಲಸ ಮಾಡಬೇಕಿತ್ತು. ಹಿಜಬ್ ವಿಚಾರದಲ್ಲಿ ಕೋರ್ಟ್ ಆದೇಶವನ್ನೂ ಗೌರವಿಸುವುದಿಲ್ಲ ಎಂದು ಹೆಣ್ಣುಮಕ್ಕಳು ಹೇಳುತ್ತಿದ್ದಾರೆ. ಈ ವಿಚಾರವನ್ನು ಹರಡಲು ಬಿಟ್ಟರೆ ಮುಂದೆ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು. ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು, ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿಕೊಟ್ಟರು ಈಗ ಏನಾಗ್ತಿದೆ ಎಂದು ಕಳವಳ ತೋಡಿಕೊಂಡರು.

ಸದನ ಅನಿರ್ದಿಷ್ಟಾವಧಿ ಮುಂದೂಡಿಕೆಗೆ ಎಚ್​ಡಿಕೆ ಆಗ್ರಹ

ವಿಧಾನಮಂಡಲದಲ್ಲಿ ಕಲಾಪ ಹಾಳು ಮಾಡುತ್ತಿರುವವರನ್ನು ಸದನದಿಂದ ಹೊರಗೆ ಹಾಕಬೇಕು. ಇಲ್ಲವೇ ಅನಿರ್ಧಿಷ್ಟಾವಧಿ ಮುಂದೂಡಬೇಕು. ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಹಾಗೂ ಕಲಾಪವನ್ನು ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆಗ್ರಹಿಸಿದರು. ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಲಾಪವನ್ನು ಹಾಳು ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಕೇಸರಿ ಬಾವುಟದ ವಿಷಯ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳು ಮಾಡಿದರು. ಸಚಿವರೊಬ್ಬರ ರಾಜೀನಾಮೆ ಪಡೆಯಬೇಕು ಎಂಬುದನ್ನೇ ಪ್ರತಿಷ್ಠೆ ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಅವಹೇಳನ ಮಾಡುತ್ತಿದ್ದಾರೆ. ಹತ್ತು ನಿಮಿಷ ಧರಣಿ ಮಾಡುವುದು, ಆಮೇಲೆ ಸದನವನ್ನು ಮುಂದಕ್ಕೆ ಹಾಕುವುದು, ಕಲಾಪ ನಡೆಸುವ ರೀತಿ ಇದಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನವನ್ನು ಕರೆದಿದ್ದೀರಿ. ಸರ್ಕಾರಕ್ಕೆ ಸದನವನ್ನು ಸಕ್ರಮವಾಗಿ ನಡೆಸುವ ಶಕ್ತಿ ಮತ್ತು ಬದ್ಧತೆ ಇಲ್ಲದಿದ್ದರೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿ. ಸುಖಾಸುಮ್ಮನೆ ದಿನಕ್ಕೆ 2 ಕೋಟಿ ರೂಪಾಯಿಯಷ್ಟು ಜನರ ತೆರಿಗೆಯನ್ನು ಯಾಕೆ ಪೋಲು ಮಾಡುತ್ತೀರಿ. ಕೇವಲ ಟಿಎ, ಡಿಎ ಪಡೆಯಲು ಕಲಾಪ ನಡೆಸಬೇಡಿ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಹಿಜಾಬ್ ಮತ್ತು ಕೇಸರಿ ಶಾಲು ವಿವಾದದಿಂದ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಅಲ್ಲೆಲ್ಲಾ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಮಕ್ಕಳು ಪರಸ್ಪರ ಹೊಡೆದಾದಿಕೊಳ್ಳುವ ಸನ್ನಿವೇಶ ಉಂಟಾಗಿದೆ. ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕಿತ್ತು. ಬೇಸಿಗೆ ಬರುವುದಕ್ಕೆ ಮುನ್ನವೇ ರಾಜ್ಯದಲ್ಲಿ ದಿನಕ್ಕೆ ಎರಡೂವರೆ ಗಂಟೆ ಕಾಲ ಲೋಡ್ ಶೆಡ್ಡಿಂಗ್ ಶುರುವಾಗಿದೆ. ವಿದ್ಯುತ್ ಕಡಿತದಿಂದ ರೈತರು ಬೆಳೆಗಳಿಗೆ ರಾತ್ರಿ ಹೊತ್ತು ನೀರು ಹರಿಸಬೇಕಾದ ಕಷ್ಟದ ಸ್ಥಿತಿ ಎದುರಾಗಿದೆ. ಆಡಳಿತಾರೂಢ ಪಕ್ಷಕ್ಕೆ ಮತ್ತು ಅಧಿಕೃತ ವಿರೋಧ ಪಕ್ಷಕ್ಕೆ ಇದರ ಬಗ್ಗೆ ಕಾಳಜಿ ಇಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಕಲಾಪವನ್ನು ಹಾಳು ಮಾಡಿ ಜನರ ನಿರೀಕ್ಷೆಗಳನ್ನು ಕಾಲ ಕಸದಂತೆ ನೋಡುತ್ತಿವೆ. ಈ ವಿಷಯಗಳನ್ನು ಪ್ರಸ್ತಾಪ ಮಾಡಲು ಉದ್ದೇಶಿಸಿದ್ದೆ. ಆದರೆ ಅವಕಾಶ ಸಿಗಲಿಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಕೇಸರಿ ಪವಿತ್ರ ವಸ್ತ್ರ

ಹಿಂದೂಗಳ ಪಾಲಿಗೆ ಕೇಸರಿ ಪವಿತ್ರ ವಸ್ತ್ರವಾಗಿದ್ದು ಅದರ ಪಾವಿತ್ರ್ಯತೆಯನ್ನು ಯಾರೂ ಹಾಳು ಮಾಡಬಾರದು. ಹಿಂದೂ ಸಂಸ್ಕೃತಿ, ಪರಂಪರೆಯಲ್ಲಿ ಕೇಸರಿ ಬಣ್ಣ ಹಾಗೂ ಕೇಸರಿ ವಸ್ತ್ರಕ್ಕೆ ಪೂಜ್ಯ ಸ್ಥಾನವಿದೆ. ನಮ್ಮ ಪೂರ್ವಿಕರ ಕಾಲದಿಂದ ಇದು ನಡೆದುಕೊಂಡು ಬಂದಿದೆ. ಸರ್ವಸಂಗ ಪರಿತ್ಯಾಗಿಗಳು, ಸಂತರು, ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಪೂಜ್ಯರು ಕೇಸರಿ ವಸ್ತ್ರಗಳನ್ನು ಧರಿಸುತ್ತಾರೆ. ಆದರೆ ಬಿಜೆಪಿ, ಆರ್​ಎಸ್​ಎಸ್​ ಮತ್ತದರ ಸಹ ಸಂಘಟನೆಗಳು ಕೇಸರಿ ಬಾವುಟವನ್ನು ಇಟ್ಟುಕೊಂಡೇ ಹೋರಾಟ ಮಾಡುತ್ತಿವೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎನ್ನುವುದು ಆ ಸಂಘಟನೆಗಳ ಮಹದಾಸೆ. ಅವರ ಅಜೆಂಡಾ ಕೂಡ ಅದೇ. ಆ ಹಿನ್ನೆಲೆಯೊಳಗೆ ಸಚಿವ ಈಶ್ವರಪ್ಪ ಅವರು ಮುಂದೊಂದು ದಿನ ಕೆಂಪುಕೋಟೆ ಮೇಲೂ ಕೇಸರಿ ಭಾವುಟವನ್ನು ಯಾರಾದರೂ ಹಾರಿಸಬಹುದು ಎಂದು ಹೇಳಿದ್ದರು. ನಾನೇ ಹಾರಿಸುತ್ತೇನೆ ಎಂದು ಅವರೇನೂ ಹೇಳಿಲ್ಲ. ಹೀಗಿದ್ದರೂ ಕಾಂಗ್ರೆಸ್ ಪ್ರತಿಷ್ಠೆಗೆ ಬಿದ್ದು ಕಲಾಪವನ್ನು ಹಾಳು ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿಯೂ ಧ್ವಜಸ್ತಂಭಗಳನ್ನು ನೆಡುವುದು ಮತ್ತು ಅವುಗಳಲ್ಲಿ ತಮ್ಮ ಸಂಘಟನೆಗಳ ಬಾವುಟ ಹಾರಿಸುವ ಪದ್ಧತಿಯಿದೆ. ನಮ್ಮಲ್ಲೂ ಕನ್ನಡ ಸಂಘಟನೆಗಳು ಕನ್ನಡ ಬಾವುಟವನ್ನು ಹಾರಿಸುತ್ತವೆ. ತಮಿಳುನಾಡಿನಲ್ಲಿಯೂ ಇಂಥ ದೃಶ್ಯಗಳನ್ನು ಕಾಣಬಹುದು. ಖಾಲಿ ಇರುವ ಧ್ವಜ ಸ್ತಂಭಗಳಲ್ಲಿ ಕೇಸರಿ ಭಾವುಟ ಹಾರಿಸುವುದನ್ನು ನೋಡಿದ್ದೇವೆ. ಈ ವಿಷಯವನ್ನು ದೊಡ್ಡದು ಮಾಡಿ ಸದನದ ಕಲಾಪವನ್ನು ಹಾಳು ಮಾಡುವುದು ಎಷ್ಟು ಸರಿ? ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಹಿತ ಮರೆತು ವರ್ತಿಸುತ್ತಿವೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು. ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ವೆಂಕಟರಾವ್ ನಾಡಗೌಡ ಅವರು ಹಾಜರಿದ್ದರು.

ಇದನ್ನೂ ಓದಿ: ರೈತರ ಬಗ್ಗೆ ಸಚಿವರ ಉಡಾಫೆ ಧೋರಣೆ: ರಾಗಿ ಬೆಳೆಗಾರರ ಕಷ್ಟಕ್ಕೆ ಕನ್ನಡಿ ಹಿಡಿದ ಜೆಡಿಎಸ್ ನಾಯಕ ವೈಎಸ್​ವಿ ದತ್ತ

ಇದನ್ನೂ ಓದಿ: ಹಾಸನ ಜಿಲ್ಲೆ ರೈತರಿಗೆ ಅನ್ಯಾಯ: ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಜೆಡಿಎಸ್ ನಾಯಕ ರೇವಣ್ಣ ಆಗ್ರಹ