ಅಹೋರಾತ್ರಿ ಧರಣಿ ಹಿಂಪಡೆಯಲು ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಯಡಿಯೂರಪ್ಪ ಯತ್ನ
ಅಹೋರಾತ್ರಿ ಧರಣಿ ಹಿಂಪಡೆಯಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ಭೇಟಿಯಾಗಿ ವಿನಂತಿಸಿದರು.
ಬೆಂಗಳೂರು: ಅಹೋರಾತ್ರಿ ಧರಣಿ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ಭೇಟಿಯಾಗಿ ವಿನಂತಿಸಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಹೋರಾತ್ರಿ ಧರಣಿ ಮಾಡದಂತೆ ಮನವಿ ಮಾಡಿದ್ದೇವೆ. ಸುಮಾರು 2 ಗಂಟೆಗಳ ಕಾಲ ನಾನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆರ್.ಅಶೋಕ್ ಮನವೊಲಿಕೆ ಮಾಡಿದೆವು. ಆದರೂ ಅವರು ಮನಸ್ಸು ಬದಲಿಸಲಿಲ್ಲ. ನಾಳೆ ನಿಮ್ಮದೇ ಆದಂಥ ರೀತಿಯಲ್ಲಿ ಪ್ರತಿಭಟನೆ ಮಾಡಿ. ಆದರೆ ಇಲ್ಲಿ ಅಹೋರಾತ್ರಿ ಧರಣಿ ಬೇಡ ಎಂದು ಹೇಳಿದರೂ ಕಾಂಗ್ರೆಸ್ ನಾಯಕರು ಸ್ಪಂದಿಸಲಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಧರಣಿ ವಿಚಾರವನ್ನು ಟೀಕಿಸಿದ ಬಿಜೆಪಿ ಶಾಸಕ ಸಿ.ಟಿ.ರವಿ, ನಿದ್ದೆ ಮಾಡುತ್ತಿರುವವರನ್ನು ಎಬ್ಬಿಸಬಹುದು, ಆದರೆ ಮಲಗಿದಂತೆ ನಟಿಸುವವರನ್ನು ಏನೂ ಮಾಡಲು ಆಗುವುದಿಲ್ಲ. ಸೈನಿಕರ ಸರ್ಜಿಕಲ್ ಸ್ಟ್ರೈಕ್ ಮೇಲೆ ಅನುಮಾನ ಪಟ್ಟವರು. ಅವರೇ ಪಾಕಿಸ್ತಾನಕ್ಕೆ ಹೋಗಿ ಕೇಳಬಹುದಿತ್ತು. ನಮ್ಮ ರಾಷ್ಟ್ರಭಕ್ತಿಗೆ ಇವರ ಸರ್ಟಿಫಿಕೇಟ್ ಬೇಕೆ ಎಂದು ಪ್ರಶ್ನಿಸಿದರು. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಷಡ್ಯಂತ್ರ ಬಯಲಾಯ್ತು. ಆ ಕಾರಣಕ್ಕೆ ಈ ವಿಷಯವನ್ನು ತಂದಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ? ರಾಷ್ಟ್ರಧ್ವಜ ತೆಗೆದು ಹಾಕುತ್ತೇನೆ ಎಂದು ಹೇಳಿದ್ದಾರಾ? ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಪಕ್ಷದ ಧ್ವಜ ಹಾಗೂ ರಾಷ್ಟ್ರಧ್ವಜವನ್ನು ಜೊತೆಜೊತೆಗೆ ಹಾರಿಸುತ್ತಾರೆ. ಭಗವಾಧ್ವಜ ನಮ್ಮ ಸ್ಫೂರ್ತಿ ಎಂದು ಸಮರ್ಥಿಸಿಕೊಂಡರು. ನಮ್ಮ ನಿಲುವು ಭಾರತ್ ಮಾತಾ ಕಿ ಜೈ ಕಡೆ. ಕಾಂಗ್ರೆಸ್ನವರ ನಿಲುವು ಇಟಲಿ ಮಾತಾ ಕಿ ಜೈ ಕಡೆ. ಅವರಿಗೆ ಟೆರರಿಸ್ಟ್ಗಳು, ಬಿನ್ ಲಾಡೆನ್ನಂಥವರು ಗೊತ್ತು. ಆದರೆ ನಮಗೆ ಗೊತ್ತಿರೋರು ಅಬ್ದುಲ್ ಕಲಾಂನಂಥವರು ಎಂದು ವಾಗ್ದಾಳಿ ನಡೆಸಿದರು.
ವಿಧಾನಪರಿಷತ್ನಲ್ಲೂ ಕಾಂಗ್ರೆಸ್ ಅಹೋರಾತ್ರಿ ಧರಣಿಗೆ ಮುಂದುವರಿಸಿದ ಹಿನ್ನೆಲೆಯಲ್ಲಿ ಧರಣಿ ನಿರತ ಕಾಂಗ್ರೆಸ್ ಸದಸ್ಯರೊಂದಿಗೆ ಸಭಾಪತಿ ಬಸವರಾಜ ಹೊರಟ್ಟಿ ಮಾತುಕತೆ ನಡೆಸಿದರು. ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ಸದಸ್ಯರು ಮುಂದಾದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸದನಕ್ಕೆ ಆಗಮಿಸಿ ಧರಣಿ ನಿರತರನ್ನು ಭೇಟಿಯಾದರು.
ವಿಧಾನ ಪರಿಷತ್ಗೆ ಕಾಂಗ್ರೆಸ್ ಹಿರಿಯ ನಾಯಕರು ಭೇಟಿ ನೀಡಿ, ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಇಂದು ಮಧ್ಯಾಹ್ನ ಶಿಕ್ಷಣ ಸಚಿವರ ಜೊತೆಗೆ ನಡೆದ ಭೋಜನಾಕೂಟದ ಬಗ್ಗೆ ಸದಸ್ಯ ನಜೀರ್ ಅಹ್ಮದ್ ನಾಯಕರಿಗೆ ಮಾಹಿತಿ ನೀಡಿದರು. ಈ ವೇಳೆ ಹಿಜಾಬ್ ವಿಚಾರದ ಬಗ್ಗೆಯೂ ಮಾತುಕತೆ ನಡೆದ ಬಗ್ಗೆ ಕಾಂಗ್ರೆಸ್ನ ಅಲ್ಪಸಂಖ್ಯಾತ ಸದಸ್ಯರು ಡಿ.ಕೆ.ಶಿವಕುಮಾರ್ ಅವರಿಗೆ ಮಾಹಿತಿ ನೀಡಿದರು. ಉರ್ದು ಶಾಲೆಗಳ ವಿಚಾರ ಮತ್ತು ಹಿಜಾಬ್ ವಿಚಾರದ ಬಗ್ಗೆಯೂ ಮಾತುಕತೆ ನಡೆದ ಬಗ್ಗೆಯೂ ಸದಸ್ಯರು ವಿವರಿಸಿದರು. ಗೃಹ ಸಚಿವರಿಂದ ಈಶ್ವರಪ್ಪ ಹೇಳಿಕೆ ಸಮರ್ಥನೆ ಹಾಗೂ ಹಿಜಾಬ್ ವಿಚಾರದ ಕಾಂಗ್ರೆಸ್ ನಾಯಕರು ಪರಿಣಾಮಕಾರಿಯಾಗಿ ಮಾತನಾಡುತ್ತಿಲ್ಲ ಎಂಬ ವಿಚಾರದ ಬಗ್ಗೆ ಈ ವೇಳೆ ಚರ್ಚೆ ನಡೆಯಿತು.
ಸಚಿವ ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿ, ದೇಶದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಸದನದಲ್ಲಿ ನಾವು ನಡೆಸುತ್ತಿರುವ ಪ್ರತಿಭಟನೆ ಕೈಬಿಡುವಂತೆ ಮುಖ್ಯಮಂತ್ರಿ @BSBommai, ಮಾಜಿ ಮುಖ್ಯಮಂತ್ರಿ @BSYBJP, ಸಚಿವ ಅಶೋಕ್ ಅವರು ನಮ್ಮನ್ನು ಭೇಟಿ ಮಾಡಿ ಮನವಿ ಮಾಡಿದರು. pic.twitter.com/SZLPouYrTo
— Siddaramaiah (@siddaramaiah) February 17, 2022
ಇದನ್ನೂ ಓದಿ: ಸದನದಲ್ಲಿ ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ನಿರ್ಧಾರ: ಮನವೊಲಿಕೆಗೆ ಅಶೋಕ್, ಯಡಿಯೂರಪ್ಪ, ಕಾಗೇರಿ ಪ್ರಯತ್ನ
ಇದನ್ನೂ ಓದಿ: ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಎಂ ಬಸವರಾಜ ಬೊಮ್ಮಾಯಿ: ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ನಿರ್ಧಾರ