ವಿಧಾನಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿಎಂ ಬಸವರಾಜ ಬೊಮ್ಮಾಯಿ: ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ನಿರ್ಧಾರ
ಯಾವುದೋ ಒಂದು ಹೇಳಿಕೆಯನ್ನೇ ದೊಡ್ಡದು ಮಾಡಿಕೊಂಡು ಧರಣಿ ನಡೆಸಲು ಮುಂದಾಗಿದ್ದಾರೆ. ಈಶ್ವರಪ್ಪನವರ ಹೇಳಿಕೆಯಲ್ಲಿ ಕಾನೂನು ವಿರೋಧಿ ಅಂಶಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಅವರು ನೀಡಿರುವ ಕೇಸರಿ ಧ್ವಜಕ್ಕೆ ಸಂಬಂಧಿಸಿದ ಹೇಳಿಕೆಯ ಮೇಲೆ ಗುರುವಾರವೂ ಪ್ರತಿಪಕ್ಷ ಕಾಂಗ್ರೆಸ್ (Congress) ಮತ್ತು ಆಡಳಿತ ಪಕ್ಷ ಬಿಜೆಪಿ (BJP) ನಡುವೆ ಮಾತಿನ ಚಕಮಕಿ ಮುಂದುವರಿಯಿತು. ವಿಧಾನಸಭೆಯಲ್ಲಿ ಮುಂಜಾನೆ ಸದನದಲ್ಲಿ ಕಲಾಪ ಆರಂಭವಾದ ತಕ್ಷಣವೇ ಈಶ್ವರಪ್ಪ ಹೇಳಿಕೆಯ ವಿಚಾರವನ್ನು ಪ್ರತಿಪಕ್ಷಗಳ ಸದಸ್ಯರು ಪ್ರಸ್ತಾಪಿಸಿದರು. ಕಾಂಗ್ರೆಸ್ ಸದಸ್ಯರ ಮಾತಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai), ಕಾಂಗ್ರೆಸ್ ಪಕ್ಷದವರ ಧೋರಣೆಯೇ ನನಗೆ ಅರ್ಥವಾಗುತ್ತಿಲ್ಲ. ಯಾವುದೋ ಒಂದು ಹೇಳಿಕೆಯನ್ನೇ ದೊಡ್ಡದು ಮಾಡಿಕೊಂಡು ಧರಣಿ ನಡೆಸಲು ಮುಂದಾಗಿದ್ದಾರೆ. ಈಶ್ವರಪ್ಪನವರ ಹೇಳಿಕೆಯಲ್ಲಿ ಕಾನೂನು ವಿರೋಧಿ ಅಂಶಗಳಿಲ್ಲ. ವಿರೋಧ ಪಕ್ಷದ ಶಾಸಕರು ತಮ್ಮ ಜವಾಬ್ದಾರಿಯನ್ನ ಸಂಪೂರ್ಣ ಮರೆತಿದ್ದಾರೆ. ಕಾಂಗ್ರೆಸ್ನವರು ಕೇವಲ ರಾಜಕೀಯಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಕಠಿಣ ಮಾತುಗಳಲ್ಲಿ ಟೀಕಿಸಿದರು.
ನಾವು ರಾಜ್ಯದ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಸಹಕರಿಸುವುದು ಬಿಟ್ಟು ಪ್ರತಿಪಕ್ಷದವರು ಈ ವಿಷಯದಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆಯಿಂದ ಕಾನೂನು ಉಲ್ಲಂಘನೆ ಆಗಿಲ್ಲ. ಕಾನೂನು ಉಲ್ಲಂಘನೆಯಾಗದ ಹೇಳಿಕೆಯನ್ನೇ ದೊಡ್ಡದು ಮಾಡಿಕೊಂಡು ಕಾಂಗ್ರೆಸ್ ಸದ್ಯರು ಧರಣಿ ನಡೆಸುತ್ತಿದ್ದಾರೆ. ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸುವ ಮೂಲಕ ಕಾಂಗ್ರೆಸ್ ನೈತಿಕವಾಗಿ ಕುಸಿದಿದೆ ಎಂದರು.
ಈಶ್ವರಪ್ಪ ರಾಜೀನಾಮೆ ನಂತರವೇ ಮಾತು: ಸಿದ್ದರಾಮಯ್ಯ
ರಾಷ್ಟ್ರಧ್ವಜಕ್ಕೆ ಅವಮಾನವಾಗುವ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಮೊದಲು ರಾಜೀನಾಮೆ ನೀಡಬೇಕು. ಅನಂತರವೇ ನಾನು ಸದನದಲ್ಲಿ ಮಾತನಾಡುತ್ತೇನೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ವಿಧಾನಸಭೆ ಕಲಾಪವನ್ನು ನಾಳೆ (ಫೆ.18) ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಯಿತು.
ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲು ಕಾಂಗ್ರೆಸ್ ಶಾಸಕರು ನಿರ್ಧರಿಸಿದ್ದಾರ.ಎ ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿಗೆ ವ್ಯವಸ್ಥೆ ಕಲ್ಪಿಸುವಂತೆ ವಿಧಾನಸಭೆ ಕಾರ್ಯದರ್ಶಿಗೆ ವಿಪಕ್ಷ ನಾಯಕರು ಮನವಿ ಮಾಡಿದರು. ರಾತ್ರಿಗೆ ಸಸ್ಯಾಹಾರಿ ಊಟ, ಹಾಸಿಗೆ, ಟೀ-ಕಾಫಿ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಕಲಾಪವನ್ನು ಸ್ಪೀಕರ್ ಮುಂದೂಡಿದರೂ ಬಹುತೇಕ ಕಾಂಗ್ರೆಸ್ ಶಾಸಕರು ಇನ್ನೂ ಸದನದಲ್ಲಿಯೇ ಇದ್ದರು. ಪ್ರತಿಪಕ್ಷ ಸದಸ್ಯರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದರು.
ಇದನ್ನೂ ಓದಿ: ಸಂಧಾನ ಸಭೆ ವಿಫಲ: ವಿಧಾನಸಭೆಯಲ್ಲಿ ಧರಣಿ ಮುಂದುವರಿಸಲು ವಿಪಕ್ಷ ಕಾಂಗ್ರೆಸ್ ನಿರ್ಧಾರ
ಇದನ್ನೂ ಓದಿ: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ, ಆಂಬುಲೆನ್ಸ್ ವ್ಯವಸ್ಥೆ ಸುಧಾರಣೆಗೆ ಬೇಡಿಕೆ