ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಿಸಿದರೆ ಸ್ವಾಗತ: ಎಚ್​ಡಿ ಕುಮಾರಸ್ವಾಮಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 01, 2022 | 12:33 PM

ಸಮಾಜ ಕಲ್ಯಾಣ ಇಲಾಖೆಗೆ ₹ 14 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಈ ಪೈಕಿ ಕೇವಲ 4 ಸಾವಿರ ಕೋಟಿಯಷ್ಟು ಮಾತ್ರವೇ ಖರ್ಚಾಗಿದೆ ಎಂದು ಅವರು ಹೇಳಿದರು.

ಮುಸ್ಲಿಂ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಿಸಿದರೆ ಸ್ವಾಗತ: ಎಚ್​ಡಿ ಕುಮಾರಸ್ವಾಮಿ
ವಿದ್ಯಾರ್ಥಿಗಳೊಂದಿಗೆ ರಾಗಿರೊಟ್ಟಿ ಸವಿದ ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ
Follow us on

ನೆಲಮಂಗಲ: ಮುಸ್ಲಿಂ ಹೆಣ್ಮಕ್ಕಳಿಗೆ ಪ್ರತ್ಯೇಕ ಕಾಲೇಜು ಆರಂಭಿಸಿದರೆ, ಅದನ್ನು ಜೆಡಿಎಸ್ ಸ್ವಾಗತಿಸಲಿದೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ನರಸೀಪುರದಲ್ಲಿ ಮಾತನಾಡಿದ ಅವರು, ಮುಸ್ಲಿಂ ಹೆಣ್ಮಕ್ಕಳು ಕೂಡ ನಮ್ಮ ಕರ್ನಾಟಕದವರಲ್ಲವೇ. ಅವರ ವಿದ್ಯಾಭ್ಯಾಸಕ್ಕಾಗಿ ಪ್ರತ್ಯೇಕ ಕಾಲೇಜು ಆರಂಭಿಸಿದರೆ ಒಳ್ಳೆಯದು ಎಂದು ತಿಳಿಸಿದರು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಆರಂಭಿಸಿರುವ ‘ಪಂಚರತ್ನ’ ರಥಯಾತ್ರೆಯಲ್ಲಿ ಪಾಲ್ಗೊಂಡಿರುವ ಅವರು, ‘ಇವತ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸ ಮುಗಿಸಿ ತುಮಕೂರಿಗೆ ಹೋಗುತ್ತಿದ್ದೇವೆ. ತುಮಕೂರು ನಗರದಲ್ಲಿಂದು ರಥಯಾತ್ರೆ ಸಾಗಲಿದೆ’ ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ₹ 14 ಸಾವಿರ ಕೋಟಿ ಅನುದಾನ ನೀಡಲಾಗಿತ್ತು. ಈ ಪೈಕಿ ಕೇವಲ 4 ಸಾವಿರ ಕೋಟಿಯಷ್ಟು ಮಾತ್ರವೇ ಖರ್ಚಾಗಿದೆ. ಅಧಿಕಾರಿಗಳು ಕಾಲಮಿತಿಯಲ್ಲಿ ಸಮರ್ಪಕ ರೀತಿಯಲ್ಲಿ ಹಣ ಬಳಕೆ ಮಾಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಆದರೆ ಯಾರೂ ಇದನ್ನು ಮಾಡುತ್ತಿಲ್ಲ. ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಿಲ್ಲ ಅಷ್ಟೇ. ಅನುದಾನಗಳು ವ್ಯಾಪಕವಾಗಿ ದುರ್ಬಳಕೆಯಾಗುತ್ತಿವೆ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ದೂರಿದರು.

ಇದನ್ನೂ ಓದಿ: ವಕ್ಫ್​ ಬೋರ್ಡ್​ನ 10 ಮಹಿಳಾ ಕಾಲೇಜು ಆರಂಭ ಪ್ರಸ್ತಾವಕ್ಕೆ ಸಿಎಂ ಬೊಮ್ಮಾಯಿ ತಿರಸ್ಕಾರ

ಮೈಸೂರಿನಲ್ಲಿ ಜಿಟಿಡಿ ಬೆಂಬಲಿಗರು ಜೆಡಿಎಸ್‌ಗೆ ರಾಜೀನಾಮೆ ಕೊಟ್ಟಿರುವ ಕುರಿತು ಪ್ರಸ್ತಾಪಿಸಿದ ಅವರು, ರಾಜೀನಾಮೆ ಕೊಟ್ಟಿರುವವರನ್ನ ಕರೆಸಿ ಮತನಾಡುತ್ತೇನೆ. ನನಗೆ ಅವರ ಮೇಲೆ ವಿಶ್ವಾಸವಿದೆ ಎಂದರು. ನರಸೀಪುರದಲ್ಲಿ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿರುವ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಕುಮಾರಸ್ವಾಮಿ ದಿಢೀರ್ ಭೇಟಿ ನೀಡಿದರು. ವಿದ್ಯಾರ್ಥಿ ನಿಲಯದ ಮಕ್ಕಳೊಂದಿಗೆ ರಾಗಿ ರೊಟ್ಟಿ, ಕಾಳು, ಸೊಪ್ಪಿನ ಪಲ್ಯ, ಚಟ್ನಿ, ಪೊಂಗಲ್ ಸವಿದರು. ಲಕ್ಕೂರು ಗ್ರಾಮ ದೇವತೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದರು.

ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ

ಜೆಡಿಎಸ್ ಪಂಚರತ್ನ ಯಾತ್ರೆಯು ತುಮಕೂರು ಪ್ರವೇಶಿಸಿದೆ. ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಅವರ ತುಮಕೂರು ಜಿಲ್ಲಾ ಪ್ರವಾಸವು ಸಿದ್ದಗಂಗಾ ಮಠದಿಂದ ಆರಂಭವಾಗಲಿದೆ. ಸಿದ್ದಗಂಗಾ ಮಠದಲ್ಲಿ ಕುಮಾರಸ್ವಾಮಿ ಅವರು, ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದು ನಮಿಸಿದರು. ತುಮಕೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆಯು ಒಟ್ಟು 10 ದಿನಗಳ ಅವಧಿಯಲ್ಲಿ 10 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಇಂದು ತುಮಕೂರು ನಗರದಲ್ಲಿ ನಡೆಯುವ ಪ್ರಚಾರ ಸಭೆಗಳಲ್ಲಿ ಎಚ್​ಡಿಕೆ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ವಕ್ಫ್​ ಮಂಡಳಿಯಿಂದ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ 10 ಹೊಸ ಕಾಲೇಜು: ಸರ್ಕಾರಿ ಕಾಲೇಜುಗಳ ಪಠ್ಯಕ್ರಮ

ಮತ್ತಷ್ಟು ಕರ್ನಾಟಕ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Thu, 1 December 22