ಬೆಂಗಳೂರಿನ ಕಲಾಗ್ರಾಮದಲ್ಲಿ ಕನ್ನಡಾಂಬೆಯ ಕಂಚಿನ ಪ್ರತಿಮೆ ನಿರ್ಮಾಣ: ಸಂಕ್ರಾಂತಿಯಿಂದ ಭುವನೇಶ್ವರಿಗೆ ನಿತ್ಯಾರ್ಚನೆ

ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಕಲಾಗ್ರಾಮದಲ್ಲಿ ಸುಮಾರು ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಭುವನೇಶ್ವರಿಯ‌ ಕಂಚಿನ ಪ್ರತಿಮೆ‌ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನ ಕಲಾಗ್ರಾಮದಲ್ಲಿ ಕನ್ನಡಾಂಬೆಯ ಕಂಚಿನ ಪ್ರತಿಮೆ ನಿರ್ಮಾಣ: ಸಂಕ್ರಾಂತಿಯಿಂದ ಭುವನೇಶ್ವರಿಗೆ ನಿತ್ಯಾರ್ಚನೆ
ಕನ್ನಡಾಂಬೆ
Edited By:

Updated on: Jul 25, 2022 | 6:32 PM

ಬೆಂಗಳೂರು: ನಗರದ ಕಲಾಗ್ರಾಮದಲ್ಲಿ ಭುವನೇಶ್ವರಿಯ(Bhuvaneshwari Devi) ಕಂಚಿನ ಪ್ರತಿಮೆ ಸ್ಥಾಪನೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ(Kannada and Culture Department) ಮುಂದಾಗಿದೆ. ಜ್ಞಾನಭಾರತಿಯಲ್ಲಿರುವ ಕಲಾಗ್ರಾಮದಲ್ಲಿ ಸುಮಾರು ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಭುವನೇಶ್ವರಿಯ‌ ಕಂಚಿನ ಪ್ರತಿಮೆ‌ ನಿರ್ಮಾಣ ಮಾಡಲು ಮುಂದಾಗಿದ್ದು ಪ್ರತಿಮೆ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ನಿರ್ದೇಶನ ನೀಡಿದ್ದಾರೆ.

ನಾಡ ದೇವಿ ಕನ್ನಡ ಭುವನೇಶ್ವರಿಯ ನಿತ್ಯ ಅರ್ಚನೆಗೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಈಗ ಇನ್ನೊಂದು ವಿನೂತನ ಯೋಜನೆ ರೂಪಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭುವನೇಶ್ವರಿಯ ಬೃಹತ್ ಕಂಚಿನ ಪ್ರತಿಮೆ ನಿರ್ಮಾಣಕ್ಕೆ‌ ತೀರ್ಮಾನಿಸಿದೆ. ಬೆಂಗಳೂರಿನ ಜ್ಞಾನಭಾರತಿಯಲ್ಲಿರುವ ಕಲಾಗ್ರಾಮದಲ್ಲಿ ಸುಮಾರು ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಭುವನೇಶ್ವರಿಯ‌ ಕಂಚಿನ ಪ್ರತಿಮೆ‌ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನಿರ್ದೇಶನ ನೀಡಿದ್ದಾರೆ. ತಜ್ಞರು ಅಂಗೀಕರಿಸಿದ ಕನ್ನಡತಾಯಿ ಭುವನೇಶ್ವರಿ ವಿಗ್ರಹವನ್ನೇ ಇಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಶಿಲ್ಪಕಲಾ ಅಕಾಡೆಮಿಗೆ ನೀಡಲಾಗಿದೆ.

ಇನ್ನು ಈ ಬಗ್ಗೆ ಕನ್ನಡ-ಸಂಸ್ಕೃತಿ ಮತ್ತು ಇಂಧನ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿದ್ದು, ಕನ್ನಡ ತಾಯಿ ಭುವನೇಶ್ವರಿಯ ವಿಗ್ರಹವನ್ನು ಸರಕಾರದ ವತಿಯಿಂದ ಇದುವರೆಗೆ ಎಲ್ಲಿಯೂ ನಿರ್ಮಿಸಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ. ಮೂರು ತಿಂಗಳಲ್ಲಿ ಪ್ರತಿಮೆ‌ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಕ್ಕೆ ಸೂಚನೆ‌ ನೀಡಿದ್ದೇನೆ ಎಂದರು.

ಹೇಗಿರಲಿದೆ ವಿಗ್ರಹ?

ರಾಜ್ಯದ ಇತಿಹಾಸದಲ್ಲೇ‌ ಇದೇ‌ ಮೊದಲ ಬಾರಿಗೆ ಭುವನೇಶ್ವರಿಯ ಬೃಹತ್ ವಿಗ್ರಹ ನಿರ್ಮಾಣಕ್ಕೆ ಸರಕಾರವೇ ಚಾಲನೆ ನೀಡುತ್ತಿದೆ. ಸುಮಾರು ಮೂವತ್ತು ಅಡಿ ಎತ್ತರದ ಕಂಚಿನ ವಿಗ್ರಹ ಇದಾಗಿರಲಿದ್ದು, ಹತ್ತು ಅಡಿ ಎತ್ತರದ ವೈಭವದ ಪೀಠದಲ್ಲಿ ವಿಗ್ರಹವನ್ನು ಸ್ಥಾಪಿಸಲಾಗುತ್ತದೆ. ಇದರ ಜೊತೆಗೆ ನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಚಿತ್ರಣವೂ ಇಲ್ಲಿರುತ್ತದೆ. ವಿಗ್ರಹ ರಚನೆ ಹಾಗೂ ಸ್ಥಳ‌ ನಿರ್ಮಾಣ ಪೂರ್ಣಗೊಳಿಸುವುದಕ್ಕೆ ಮೂರು ತಿಂಗಳ ಕಾಲ‌ಮಿತಿ ನೀಡಲಾಗಿದೆ.

ಸಂಕ್ರಾತಿಯೊಳಗೆ ವಿಗ್ರಹ‌ ನಿರ್ಮಾಣ ಕಾರ್ಯ‌ಪೂರ್ಣಗೊಳಿಸುವಂತೆ ಸೋಮವಾರ ನಡೆದ ಇಲಾಖಾ ಸಭೆಯಲ್ಲಿ ಸಚಿವ ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ. ನವೆಂಬರ್ ತಿಂಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಈ ಯೋಜನೆಗೆ ಚಾಲನೆ ಕೊಡಿಸಲು‌ ತೀರ್ಮಾನಿಸಲಾಗಿದೆ.

ಏಕೆ ಈ ಪ್ರಸ್ತಾಪ?

ರಾಜ್ಯದಲ್ಲಿ ಅನೇಕ ಗಣ್ಯರು ಹಾಗೂ ಸಾಮಾಜಿಕ ಹೋರಾಟಗಾರರ ಪುತ್ಥಳಿ ಹಾಗೂ ಪ್ರತಿಮೆಗಳು ಇವೆ. ಕನ್ನಡಾಂಬೆಯ ವಿಗ್ರಹವನ್ನು ಸರಕಾರ ನಿರ್ಮಿಸಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ಸಚಿವ ಸುನೀಲ್ ಕುಮಾರ್ ಅವರ ವಿನೂತನ ಚಿಂತನೆಯ ಫಲವಾಗಿ ಚಾಲನೆ ದೊರಕಿದೆ. ಇದರಿಂದ ಕಲಾಗ್ರಾಮ ನಗರ ಪ್ರಮುಖ ಪ್ರವಾಸಿ ತಾಣವಾಗಿಯೂ ಅಭಿವೃದ್ಧಿಯಾಗಲಿದೆ. ಇಲ್ಲಿ‌ ಸ್ಥಾಪನೆಯಾಗಿರುವ ಸುಸಜ್ಜಿತ ಆಡಿಟೋರಿಯಂ ನಲ್ಲಿ‌ ಪ್ರತಿ ದಿನವೂ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ‌ ಯೋಜನೆ ರೂಪಿಸುವಂತೆ ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

Published On - 6:32 pm, Mon, 25 July 22