ಬೆಂಗಳೂರು: ಮಾಡ್ಯೂಲರ್ ಆಸ್ಪತ್ರೆ ಉದ್ಘಾಟನೆ; ಕೇಂದ್ರ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯ!

| Updated By: shivaprasad.hs

Updated on: Oct 10, 2021 | 12:53 PM

ಕೇಂದ್ರ ಸಚಿವ ಮನ್​ಸುಖ್ ಮಾಂಡವೀಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಹಲವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾಯವಾಗಿದೆ. ಈ ಹಿಂದೆ ಕೂಡ ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿತ್ತು.

ಬೆಂಗಳೂರು: ಮಾಡ್ಯೂಲರ್ ಆಸ್ಪತ್ರೆ ಉದ್ಘಾಟನೆ; ಕೇಂದ್ರ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯ!
ಮಾಡ್ಯೂಲರ್ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ, ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಸೇರಿದಂತೆ ಇತರ ಗಣ್ಯರು
Follow us on

ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾಯವಾಗಿದೆ. ನಗರದ ರಾಜೀವ್ ಗಾಂಧಿ ಆಸ್ಪತ್ರೆ ಆವರಣದಲ್ಲಿ ನಡೆದ ಮಾಡ್ಯೂಲರ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಬಳಕೆಯನ್ನೇ ಮಾಡಲಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಆರೋಗ್ಯ ಇಲಾಖೆಯ ಅಧಿಕೃತ ಕಾರ್ಯಕ್ರಮದಲ್ಲೇ ಕನ್ನಡಕ್ಕೆ ಅವಕಾಶ ನೀಡಲಾಗಿಲ್ಲ. ಈ ಹಿಂದೆ ಮೆಟ್ರೋ ಉದ್ಘಾಟನೆಯಲ್ಲಿ ಕನ್ನಡವಿಲ್ಲದೆ ಸಾಕಷ್ಟು ಟೀಕೆಗಳು ಎದುರಾಗಿತ್ತು.

ರಾಜ್ಯದಲ್ಲಿ ಶೇ.83ರಷ್ಟು ಜನರಿಗೆ ಮೊದಲ ಡೋಸ್ ವ್ಯಾಕ್ಸೀನ್ ನೀಡಲಾಗಿದೆ; ಕೇಂದ್ರ ಸಚಿವ ಮನ್​​ಸುಖ್ ಮಾಂಡವೀಯ ಹೇಳಿಕೆ:
ರಾಜ್ಯದಲ್ಲಿ ಶೇ.83ರಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ಸಂಸ್ಥೆ ಆವರಣದಲ್ಲಿ ನಡೆದ ಕೊವಿಡ್ ಫೀಲ್ಡ್ ಹಾಸ್ಪಿಟಲ್ ಉದ್ಘಾಟನೆಯಲ್ಲಿ ಅವರು ಮಾತನಾಡಿದರು. ಕರ್ನಾಟಕದ ಪ್ರತಿ ಹಳ್ಳಿಯಲ್ಲೂ ಲಸಿಕೆ ನೀಡಲಾಗಿದೆ. ಜನರಿಗೆ ಲಸಿಕೆ ತಲುಪುವಂತೆ ಸರ್ಕಾರ ನೋಡಿಕೊಂಡಿದೆ. ಮೋದಿ ಹುಟ್ಟುಹಬ್ಬದ ದಿನ ದಾಖಲೆ ಮಟ್ಟದಲ್ಲಿ ಲಸಿಕೆ ನೀಡಲಾಗಿದ್ದು, ಅದಕ್ಕಾಗಿ ನಾನು ಕರ್ನಾಟಕದ ಜನರಿಗೆ ಚಿರಋಣಿಯಾಗಿದ್ದೇನೆ ಎಂದು ಅವರು ನುಡಿದಿದ್ದಾರೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮಾಡ್ಯೂಲರ್ ಆಸ್ಪತ್ರೆ ಪ್ರಾರಂಭಿಸಲಾಗುವುದು; ಸಿಎಂ ಬೊಮ್ಮಾಯಿ:
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮಾಡ್ಯೂಲರ್ ಆಸ್ಪತ್ರೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಕೋವಿಡ್ ಫೀಲ್ಡ್ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ಎಲ್ಲಾ ಜಿಲ್ಲೆಯಲ್ಲೂ ಇದೇ ಮಾದರಿಯ ಮಾಡ್ಯುಲರ್ ಆಸ್ಪತ್ರೆ ಆರಂಭಿಸಲಾಗುವುದು. ಆದರೆ ಅವುಗಳ ನಿರ್ಮಾಣಕ್ಕೆ ಸ್ವಲ್ಪ ಸಮಸ್ಯೆಯಿದೆ. ವೈದ್ಯರು, ನರ್ಸ್, ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಬಳಿಕ ಪ್ರತಿ ಜಿಲ್ಲೆಯಲ್ಲಿ ಮಾಡ್ಯೂಲರ್ ಆಸ್ಪತ್ರೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್, ಶಾಸಕ ಗರುಡಾಚಾರ್ ಹಾಗೂ ರಾಜೀವ ಗಾಂಧಿ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಭಾಗಿಯಾಗಿದ್ದರು.

ಇದನ್ನೂ ಓದಿ:

‘ಉಚಿತ ಅಂಗಾಂಗ ಕಸಿ ಯೋಜನೆ ಮೂಲಕ ಕರ್ನಾಟಕ ಬೇರೆಲ್ಲಾ ರಾಜ್ಯಗಳಿಗಿಂತ ಮುಂದಿದೆ’; ಕೇಂದ್ರ ಸಚಿವ ಮಾಂಡವೀಯ ಶ್ಲಾಘನೆ

ಕಾಶ್ಮೀರದಲ್ಲಿ ಆತಂಕದ ವಾತಾವರಣ: ಕಣಿವೆ ತೊರೆಯುತ್ತಿದ್ದಾರೆ ಕಾಶ್ಮೀರಿ ಪಂಡಿತ್, ಸಿಖ್ ಸಮುದಾಯದ ಸರ್ಕಾರಿ ಸಿಬ್ಬಂದಿ

ರಾಜಕೀಯ ಬದುಕು ಕೊಟ್ಟ ಪಕ್ಷವನ್ನೇ ನಿಂದಿಸುತ್ತಿದ್ದಾರೆ; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಸರಣಿ ಟ್ವೀಟ್

Published On - 12:46 pm, Sun, 10 October 21