ಬೆಂಗಳೂರು: ಎಲ್ಲಾ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ. ಇದನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಕನ್ನಡ ನಮ್ಮ ಮಾತೃಭಾಷೆ, ಅದು ರಾಷ್ಟ್ರೀಯ ಭಾಷೆಯೂ ಹೌದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಕೇಂದ್ರ ಸರ್ಕಾರವು ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆಗೆ ವೇದಿಕೆಯಲ್ಲಿಯೇ ತಿರುಗೇಟು ನೀಡಿದ ಅವರು, ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆ ಅಧಿವೇಶನ ನಡೆಯಲಿದೆ. ಕನ್ನಡ ಬಳಕೆ ಕಡ್ಡಾಯ ನಿಯಮ ಜಾರಿಗೆ ತರುತ್ತೇವೆ ಎಂದರು.
ಈಗಾಗಲೇ ಕನ್ನಡ ಕಡ್ಡಾಯ ಮಸೂದೆ ಮಂಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಕಾನೂನುಬದ್ಧವಾಗಲಿದೆ. ಕನ್ನಡಕ್ಕೆ ನಮ್ಮ ಸರ್ಕಾರ ಕಾನೂನಿನ ರಕ್ಷಣೆ, ಕವಚ ನೀಡುತ್ತಿದೆ. ಕಾನೂನಿನ ಬಗ್ಗೆ ವ್ಯಾಖ್ಯಾನ ಆಗಲಿ, ಚರ್ಚೆಯಾಗಲಿ. ಎಲ್ಲರ ಸಲಹೆ ಪಡೆದು ಅನುಷ್ಠಾನಕ್ಕೆ ತರಲು ನಾವು ಸಿದ್ಧ. ಎಲ್ಲೆಡೆ ಕನ್ನಡ ಡಿಂಡಿಮ ಬಾರಿಸಲಿ ನವ ಕರ್ನಾಟಕದಿಂದ ನವ ಭಾರತ ಸೃಷ್ಟಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ನಾಡಿನ ಎಲ್ಲ ಜನರಿಗೆ 67ನೇ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ ಮುಖ್ಯಮಂತ್ರಿ, ಕನ್ನಡ ನಾಡಿನಲ್ಲಿ ಹುಟ್ಟಲು ಏಳು ಜನ್ಮದ ಪುಣ್ಯಬೇಕು. ಕರ್ನಾಟಕ ನಿಸರ್ಗ ಸಂಪತ್ತಿನಿಂದ ಕೂಡಿರುವ ನಾಡು. ನಮ್ಮ ರಾಜ್ಯದ ಹವಾಮಾನ ಹಳ್ಳ-ಕೊಳ್ಳ, ನದಿ ನಮ್ಮ ಹೆಮ್ಮೆ. ಕರ್ನಾಟಕ ಏಕೀಕರಣದ ಹೋರಾಟವನ್ನು ನಾವ್ಯಾರೂ ಮರೆಯುವಂತಿಲ್ಲ. ಆಲೂರು ವೆಂಕಟರಾಯರು ಏಕೀಕರಣ ಹೋರಾಟದ ರೂವಾರಿ ಎಂದು ಸ್ಮರಿಸಿದರು.
ಭಾರತದ ಭವಿಷ್ಯ ರೂಪಿಸುವ ಶಕ್ತಿ ಇರುವ ನಾಡು ಕರ್ನಾಟಕ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ನಮ್ಮ ಕನ್ನಡ. ಕನ್ನಡ ಬಾವುಟವನ್ನು ಎಲ್ಲ ರಂಗದಲ್ಲೂ ಹಾರಿಸಬೇಕಿದೆ ಎಂದು ಹೇಳಿದರು. ಶಿಕ್ಷಣ ಆರೋಗ್ಯ, ಉದ್ಯೋಗ ಜೊತೆ ಭಾರತದ ಭವಿಷ್ಯವನ್ನೂ ಕೂಡಾ ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ. ಪ್ರತಿಯೊಬ್ಬರೂ ಕರ್ನಾಟಕ ನಾಡನ್ನು ಕಟ್ಟಲು ತೀರ್ಮಾನ ಮಾಡಿದರೆ ಇಡೀ ವಿಶ್ವದಲ್ಲೇ ಮೊದಲ ರಾಜ್ಯ ನಮ್ಮದಾಗುತ್ತದೆ. ಕಲಾವಿದರು, ಸಾಹಿತಿಗಳು, ಕವಿಗಳಿಗೆ ಅತಿ ಹೆಚ್ಚು ಪ್ರಶಸ್ತಿ ಸಿಕ್ಕಿರುವ ಹೆಗ್ಗಳಿಕೆ ನಮ್ಮ ರಾಜ್ಯಕ್ಕೆ ಇದೆ ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ. ಸುಮಾರು 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುತ್ತಿದ್ದೇವೆ. ಗ್ರಾಮೀಣ ಭಾಗದ ಯುವಕರಿಗೆ ಔದ್ಯೋಗಿಕ ನೆರವಿಗೆ ಮುಂದಾಗಿದ್ದೇವೆ. ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ. ಅದನ್ನು 2 ವರ್ಷದಲ್ಲಿ ತುಂಬಲು ಕ್ರಮ ಕೈಗೊಳ್ಳುತ್ತೇವೆ ಎಂದು ಘೋಷಿಸಿದರು.
ಈ ವರ್ಷ ನಮ್ಮ ರಾಜ್ಯದ ಎಲ್ಲ ಕೆರೆಕಟ್ಟೆಗಳು ತುಂಬಿವೆ. ರೈತರಿಗೆ ಯಾವುದೇ ನೀರಿನ ಸಮಸ್ಯೆಯಾಗದಂತೆ ವರುಣನ ಅರ್ಶೀವಾದವಾಗಿದೆ. ಪ್ರವಾಹದಿಂದ ಸಂತ್ರಸ್ತರಾದ ರೈತರಿಗೆ ಸರ್ಕಾರವು ಎರಡುಪಟ್ಟು ಪರಿಹಾರ ನೀಡಿದೆ. ಮನೆ ಕಟ್ಟುವ ವಿಚಾರದಲ್ಲಿಯೂ ನಮ್ಮ ಸರ್ಕಾರ ಕೇಂದ್ರಕ್ಕಿಂತ ಹೆಚ್ಚಿನ ಹಣ ನೀಡಿದೆ. 8000 ಶಾಲಾ ಕೊಠಡಿ ನಿರ್ಮಿಸುತ್ತಿದ್ದೇವೆ. ಶಾಲಾ ಕೊಠಡಿ ನಿರ್ಮಾಣದಲ್ಲಿ ನಮ್ಮ ಸರ್ಕಾರವು ದಾಖಲೆ ಮಾಡಿದೆ. ‘ವಿವೇಕ’ ಎನ್ನುವ ಹೆಸರಿನಲ್ಲಿ ಈ ಕಾರ್ಯ ನಡೆಸುತ್ತಿದ್ದೇವೆ. ನೀತಿ ಆಯೋಗವು ಹೊಸ ಸಂಶೋಧನೆಗಾಗಿ ನಮ್ಮ ನಾಡಿಗೆ ಮೊದಲ ಸ್ಥಾನ ನೀಡಿದೆ ಎಂದು ಹೇಳಿದರು.
“ಸಮಸ್ತ ಕನ್ನಡಿಗರಿಗೆ ೬೭ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು” ಮುಖ್ಯಮಂತ್ರಿ @BSBommai pic.twitter.com/wEkaEBpmvB
— CM of Karnataka (@CMofKarnataka) November 1, 2022