ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅನುಮತಿ ನಿರಾಕರಣೆ: ನಾಗರಿಕ ಒಕ್ಕೂಟ ಆಕ್ರೋಶ
Chamarajapet Idgah Maidan: ಚಾಮರಾಜಪೇಟೆ ಕನ್ನಡ ರಾಜ್ಯೋತ್ಸವಕ್ಕೆ ಅನುಮತಿ ನಿರಾಕರಿಸಿದ ಕಂದಾಯ ಇಲಾಖೆ ಕ್ರಮಕ್ಕೆ ‘ಚಾಮರಾಜಪೇಟೆ ನಾಗರಿಕರ ಒಕ್ಕೂಟ’ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರು: ಚಾಮರಾಜಪೇಟೆ ಕನ್ನಡ ರಾಜ್ಯೋತ್ಸವಕ್ಕೆ (Chamarajapet Idgah Maidan) ಅನುಮತಿ ನಿರಾಕರಿಸಿದ ಕಂದಾಯ ಇಲಾಖೆ ಕ್ರಮವನ್ನು ‘ಚಾಮರಾಜಪೇಟೆ ನಾಗರಿಕರ ಒಕ್ಕೂಟ’ ಅಸಮಾಧಾನ ವ್ಯಕ್ತಪಡಿಸಿದೆ. ‘ನ 30 ರ ಒಳಗೆ ಯಾವುದಾದರೂ ಒಂದು ದಿನ ರಾಜ್ಯೋತ್ಸವ ಆಚರಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಸಲಹೆ ಮಾಡಿದ್ದಾರೆ. ಇದನ್ನು ನಾವು ಒಪ್ಪುವುದಿಲ್ಲ. ನ 15 ರ ಒಳಗೆ ರಾಜ್ಯೋತ್ಸವ ಆಚರಿಸಬೇಕು’ ಎಂದು ನಾಗರಿಕರ ಒಕ್ಕೂಟ ಸರ್ಕಾರಕ್ಕೆ ಮತ್ತೊಂದು ಗಡುವು ಕೊಟ್ಟಿತು.
‘ನಾವು ಯಾವುದೇ ಧಾರ್ಮಿಕ ಆಚರಣೆಗೆ ಅನುಮತಿ ಕೇಳಿಲ್ಲ. ನಾಡಹಬ್ಬದ ಆಚರಣೆಗೆ ಅವಕಾಶ ಮಾಡಿ ಕೊಡಿ ಎಂದು ವಿನಂತಿಸಿದ್ದೆವು ಅಷ್ಟೇ. ಆದರೆ ಸರ್ಕಾರವು ಅನುಮತಿ ನಿರಾಕರಿಸಿದೆ. ನಾವು ಕೂಡಲೇ ವಕೀಲರೊಂದಿಗೆ ಈ ಸಂಬಂಧ ಚರ್ಚಿಸುತ್ತೇವೆ. ಕಾನೂನು ತಜ್ಞರ ಸಲಹೆ ಪಡೆದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ. ಪ್ರಸ್ತುತ ವಿವಾದವು ನ್ಯಾಯಾಲಯದಲ್ಲಿರುವುದರಿಂದ ನಾವು ಸುಮ್ಮನಿದ್ದೇವೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹೋರಾಟ ಮುಂದುವರಿಸುತ್ತೇವೆ’ ಎಂದು ಒಕ್ಕೂಟದ ಅಧ್ಯಕ್ಷ ರಾಮೇಗೌಡ ಘೋಷಿಸಿದರು.
‘ಕಾನೂನಿಗೆ ಗೌರವ ಕೊಟ್ಟು ನಾವು ಸುಮ್ಮನಿದ್ದೇವೆ. ಇಲ್ಲದಿದ್ದರೆ ಪೊಲೀಸರು ಎಷ್ಟೇ ಭದ್ರತೆ ತೆಗೆದುಕೊಂಡಿದ್ದರೂ ನಾವು ಇಂದೇ ಧ್ವಜ ಹಾರಿಸುತ್ತಿದ್ದೆವು. ಈ ಬೆಳವಣಿಗೆಗೆ ಶಾಸಕ ಜಮೀರ್ ಅಹಮದ್ ನೇರ ಕಾರಣ. ಅವರಿಗೆ ಹಿಂದುಗಳ ಮತ ಬೇಕು ಆದರೆ ಹಿಂದೂಗಳ ಹಬ್ಬ, ಧಾರ್ಮಿಕತೆ ಬೇಕಿಲ್ಲ. ಕನ್ನಡ ರಾಜ್ಯೋತ್ಸವ ಮಾಡ್ತೀನಿ ಎಂದು ಅಂದು ಘೋಷಿಸಿದ್ದರು. ಆದರೆ ಇಂದು ಸುಮ್ಮನಾಗಿದ್ದಾರೆ. ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಮನಸ್ಸು ಮಾಡಿದ್ದರೆ ಇಂದೇ ಕನ್ನಡ ಧ್ವಜ ಹಾರಿಸಬಹುದಿತ್ತು. ಮೈದಾನದ ವಿವಾದ ಇತ್ಯರ್ಥ ಪಡಿಸುವ ಸಂಬಂಧ ಮುಂದಿನ 15 ದಿನಗಳ ಒಳಗಾಗಿ ಇವರು ಕೋರ್ಟ್ಗೆ ಅರ್ಜಿ ಸಲ್ಲಿಸದಿದ್ದರೆ ನಾವೇ ಕೋರ್ಟ್ ಮೆಟ್ಟಿಲೇರುತ್ತೇವೆ’ ಎಂದು ಅವರು ಘೋಷಿಸಿದರು.
ಅನುಮತಿ ನಿರಾಕರಣೆ
ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣಕ್ಕೆ ಅನುಮತಿ ಕೋರಿ ನಾಗರಿಕ ಒಕ್ಕೂಟವು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಮಾಡಿತ್ತು. ಈ ಮನವಿ ಆಧರಿಸಿ ನಗರ ಜಿಲ್ಲಾಧಿಕಾರಿ ಶ್ರೀನಿವಾಸ್ ಸೂಕ್ತ ನಿರ್ದೇಶನ ಕೋರಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಕಂದಾಯ ಇಲಾಖೆಯು ಯಾವುದೇ ಸಲಹೆ, ಸೂಚನೆ ನೀಡಿರಲಿಲ್ಲ. ಸರ್ಕಾರ ಅನುಮತಿ ನೀಡದಿದ್ದರೂ ಧ್ವಜಾರೋಹಣ ಮಾಡುತ್ತೇವೆ ಎಂದು ಒಕ್ಕೂಟವು ಘೋಷಿಸಿತ್ತು. ಆದರೆ ಕಾನೂನು ಚೌಕಟ್ಟು ಮೀರಿದರೆ ಕ್ರಮ ಕೈಗೊಳ್ಳುವುದಾಗಿ ಚಾಮರಾಜಪೇಟೆ ಠಾಣೆ ಪೊಲೀಸರು ಎಚ್ಚರಿಸಿದ್ದರು. ಹೀಗಾಗಿ ನಂತರ ಚಾಮರಾಜಪೇಟೆ ನಾಗರಿಕ ಒಕ್ಕೂಟ ಮೌನಕ್ಕೆ ಶರಣಾಯಿತು.
ಚಾಮರಾಜಪೇಟೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅವಕಾಶವಿಲ್ಲ ಎಂದು ಘೋಷಿಸಿದ ನಂತರ ಪೊಲೀಸರು ಮೈದಾನದ ಸುತ್ತ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಬಂದೋಬಸ್ತ್ಗಾಗಿ 200ಕ್ಕೂ ಹೆಚ್ಚು ಪೊಲೀಸರು, 2 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.
Published On - 9:08 am, Tue, 1 November 22