ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ, ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಇಂದು (ಅಕ್ಟೋಬರ್ 28) ಆಯೋಜಿಸಿರುವ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ನಡೆಯಲು ಸಿದ್ಧತೆಗಳು ನಡೆದಿದೆ.
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೈಗೊಂಡಿರುವ ವಿಶೇಷ ಅಭಿಯಾನ ಇದಾಗಿದ್ದು ‘ಕನ್ನಡಕ್ಕಾಗಿ ನಾವು’ ಅಭಿಯಾನದಡಿ ಇಂದು 5 ಲಕ್ಷ ಜನ ಕನ್ನಡ ಹಾಡು ಹಾಡಲಿದ್ದಾರೆ. ವಿಶ್ವದಾದ್ಯಂತ ಇಂದು ಒಂದು ಸಾವಿರ ಸ್ಥಳಗಳಲ್ಲಿ ಸಾಮೂಹಿಕ ಗೀತ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೂ ಗಾಯನ ಮಾಡಲಾಗುತ್ತಿದ್ದು ಇಂದು ಬೆಳಗ್ಗೆ 11ರಿಂದ 11.30ರವರೆಗೆ ಗಾಯನ ಕಾರ್ಯಕ್ರಮ ನಡೆಯಲಿದೆ. ವಿವಿಧ ಪ್ರಮುಖ ಸ್ಥಳಗಳಲ್ಲಿ ಉದ್ಯಮಿಗಳು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರಿಂದ ಸಮೂಹ ಗಾಯನ ಕಾರ್ಯಕ್ರಮ ನಡೆಯಲಿದ್ದು ಇಂದು ಕನ್ನಡದ 3 ಹಾಡುಗಳನ್ನು ಹಾಡುವಂತೆ ಸರ್ಕಾರ ಮನವಿ ಮಾಡಿದೆ. ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಹಾಡುಗಳನ್ನ ಹಾಡಲು ಮನವಿ ಮಾಡಲಾಗಿದ್ದು ಸಮಯ ಇದ್ದರೆ ಮತ್ತಷ್ಟು ಹಾಡುಗಳನ್ನ ಹಾಡಬಹುದು.
ವಿಮಾನ ನಿಲ್ದಾಣಗಳಲ್ಲೂ ಮೊಳಗಲಿದೆ ಕನ್ನಡದ ಗಾಯನ
ಈ ಅಭಿಯಾನದ ಅಂಗವಾಗಿ ವಿಶೇಷವಾಗಿ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲೂ ಸಹ ಈ ಕನ್ನಡದ ಗೀತಗಾಯನ ಅನುರುಣಿಸಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿಯೂ ಸಹ ಸಾವಿರರು ಜನ ಒಟ್ಟಿಗೆ ನಿಂತು ಈ ಕನ್ನಡ ಗೀತೆಗಳ ಗಾಯನ ಮಾಡಲಿದ್ದಾರೆ.
ಮೆಟ್ರೋದಲ್ಲಿ ಮೊಳಗಲಿದೆ ಕನ್ನಡ ಕಂಠ
ಬೆಂಗಳೂರು ಮೆಟ್ರೋದಲ್ಲಿ ಕನ್ನಡಮಯ ವಾತಾವರಣ ಉಂಟುಮಾಡಲು ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಮೆಟ್ರೋದ ಎಲ್ಲಾ ರೈಲುಗಳಲ್ಲೂ ಸುಗಮ ಸಂಗೀತ ಗಾಯನ ತಂಡಗಳು ಈ ಮೂರು ಗೀತೆಗಳನ್ನು ಹಾಡುತ್ತವೆ. ಮೆಟ್ರೋದ ಎಲ್ಲಾ 51 ನಿಲ್ದಾಣಗಳಲ್ಲಿ ಈ ಕನ್ನಡ ಗೀತೆಗಳ ಗಾಯನ ಧ್ವನಿವರ್ಧಕಗಳ ಮೂಲಕ ಪ್ರಸಾರವಾಗಲಿದೆ. ಅದರ ಜೊತೆಗೆ ಅತ್ಯಂತ ಜನ ನಿಬಿಡವಾದ 5 ಮೆಟ್ರೋ ನಿಲ್ದಾಣಗಳಲ್ಲಿ ಸಮೂಹ ಗೀತಗಾಯನ ನಡೆಯಲಿದೆ. ಅದರ ಜೊತೆಗೆ ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಅದರ ಮೂಲಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಕನ್ನಡಮಯ ಬೆಂಗಳೂರು
ಬೆಂಗಳೂರಿನ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳು ಹಾಗೂ ೧೯೮ ವಾರ್ಡ್ಗಳಲ್ಲಿ ಸ್ಥಳೀಯ ಶಾಸಕರು ಮತ್ತು ನಗರ ಸಭಾ ಸದಸ್ಯರ ಸಹಯೋಗದೊಂದಿಗೆ ಈ ಗೀತಗಾಯನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಮುಂಭಾಗದ ಆವರಣಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನದ ಉದ್ಯೋಗಿಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಎಲ್ಲಾ ಆಸಕ್ತ ಸಾರ್ವಜನಿಕರು ಒಂದಾಗಿ ಸೇರಿ ಕನ್ನಡದ ಈ ಮೂರು ಗೀತೆಗಳನ್ನು ಹಾಡುವ ಮೂಲಕ ತಮ್ಮ ಕನ್ನಡ ಪ್ರೇಮ ಮೆರೆಯಲಿದ್ದಾರೆ. ಬೆಂಗಳೂರಿನ ಎಲ್ಲಾ ಕೈಗಾರಿಕಾ ಪ್ರದೇಶಗಳು, ಬಸ್ಸು ಮತ್ತು ಆಟೋ ನಿಲ್ದಾಣಗಳು ಈ ಕನ್ನಡ ಗೀತಗಾಯನಕ್ಕೆ ಕಿವಿಯಾಗಲಿವೆ.
ಬಹಳ ಮುಖ್ಯವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮುಖ್ಯಕಾರ್ಯದರ್ಶಿಗಳ ಜೊತೆ ಸ್ವತಃ ತಾವೇ ಸಾವಿರಾರು ಸಂಖ್ಯೆಯ ಅಧಿಕಾರಿ / ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಸಚಿವ ಸುನಿಲ್ ಕುಮಾರ್ ಘೋಷಿಸಿದರು. ವಿಕಾಸಸೌಧ, ವಿಧಾನಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿಯೂ ಈ ಗೀತಗಾಯನ ಆಯೋಜಿಸಿದ್ದು, ಎಲ್ಲಾ ಐಎಎಸ್, ಕೆಎಎಸ್ ಅಧಿಕಾರಿಗಳು ಸಚಿವಾಲಯದ ಅಧಿಕಾರಿ / ಸಿಬ್ಬಂದಿ, ವಿಧಾನಮಂಡಲದ ಅಧಿಕಾರಿ/ಸಿಬ್ಬಂದಿಗಳು ಈ ಗೀತಗಾಯನದಲ್ಲಿ ಭಾಗವಹಿಸಿ ವಿಧಾನಸೌಧದ ಆವರಣದಲ್ಲಿ ಕನ್ನಡ ಕಂಠದ ಅನುರುಣನಕ್ಕೆ ಸಾಕ್ಷಿಯಾಗಲಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯ ಮುಂಭಾಗದಲ್ಲಿಯೂ ಸಹ ಈ ಗೀತಗಾಯನದ ಸಂಭ್ರಮ ಅನಾವರಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಸಾವಿರಕ್ಕೂ ಹೆಚ್ಚು ಸ್ಥಳ, ಐದು ಲಕ್ಷ ಕಂಠಗಳಲ್ಲಿ ಕನ್ನಡ ಗೀತೆ ಗಾಯನ! ಅಭೂತಪೂರ್ವ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ
Published On - 9:40 am, Thu, 28 October 21