ಬೆಂಗಳೂರು: ಕನ್ನಡ ರಾಜ್ಯೋತ್ಸವದ ಹೊಸಿಲಿನಲ್ಲಿ ಕರ್ನಾಟಕ ಸರ್ಕಾರ ಆಯೋಜಿಸಿರುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ಆನ್ಲೈನ್ ಮತ್ತು ಅಫ್ಲೈನ್ ಅಭಿಯಾನದಿಂದ ಪ್ರೇರೇಪಿತರಾಗಿರುವ ಸಾವಿರಾರು ಜನರು ಗೀತ ಗಾಯನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 50 ಸಾವಿರ ಜನರು ಆಯ್ದ 6 ಹಾಡುಗಳನ್ನು ಸಾಮೂಹಿಕವಾಗಿ ಹಾಡಲಿದ್ದಾರೆ. ಬೆಂಗಳೂರಿನ ವಿಧಾನಸೌಧ ಮೆಟ್ಟಿಲು, ಎಲ್ಲ ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳು, ಆಟೊ ತಂಗುದಾಣಗಳು, ಕಾರಾಗೃಹ, ಐಟಿಬಿಟಿ ಸಂಸ್ಥೆಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಲಾಲ್ಬಾಗ್ಗಳಲ್ಲಿ ಗೀತ ಗಾಯನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾರ್ಯಕ್ರಮ ರೂಪಿಸುವಂತೆ ಶಾಸಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಲಹೆ ಮಾಡಿದೆ. ಮೈಸೂರು ಅರಮನೆ, ಚಿತ್ರದುರ್ಗದ ಕೋಟೆ, ಮಂಗಳೂರು ಕಡಲತೀರ, ತುಮಕೂರು ಸಿದ್ದಗಂಗಾ ಮಠ, ಪ್ರವಾಸಿ ತಾಣಗಳಾದ ಶೃಂಗೇರಿ, ಹಂಪಿ, ಬೇಲೂರು, ಪಾವಗಡದ ಸೌರಶಕ್ತಿ ಘಟಕ, ರಾಯಚೂರು ಉಷ್ಣವಿದ್ಯುತ್ ಸ್ಥಾವರ, ಮಣಿಪಾಲದ ಕೆಎಂಸಿ, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಹಲವೆಡೆ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ.
ಹೊರ ರಾಜ್ಯ ಮತ್ತು ಹೊರ ದೇಶಗಳಲ್ಲಿಯೂ ಕನ್ನಡಾಭಿಮಾನಿಗಳು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇದರ ಜೊತೆಗೆ ವೈಯಕ್ತಿಕ ಮಟ್ಟದಲ್ಲಿಯೂ ಸಾಕಷ್ಟು ಜನರು ಈ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಅಭಿಯಾನಕ್ಕಾಗಿ ಸರ್ಕಾರವು ರೂಪಿಸಿರುವ ಪೋರ್ಟಲ್ ಮತ್ತು ಫೇಸ್ಬುಕ್ ಪುಟವು ಜನರ ಗಮನ ಸೆಳೆದಿದ್ದು, ನೋಂದಣಿ ಮಾಡಿಕೊಂಡವರ ಸಂಖ್ಯೆ ನಿನ್ನೆಯೇ (ಅ 27) ಕೋಟಿ ದಾಟಿತ್ತು. ‘41 ದೇಶಗಳು, 27 ರಾಜ್ಯಗಳು, 18,800 ಸಂಘ-ಸಂಸ್ಥೆಗಳು, 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕನ್ನಡದ ಹಾಡುಗಳು ಮೊಳಗಲಿವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಿಳಿಸಿದೆ.
ರಾಜ್ಯ ಸರ್ಕಾರವು ಕೋಟಿ ಕಂಠ ಗಾಯನಕ್ಕೆಂದೇ ಆರಂಭಿಸಿರುವ ವಿಶೇಷ ಫೇಸ್ಬುಕ್ ಪುಟದಲ್ಲಿಯೂ ಹಲವರು ತಾವು ಹಾಡಿದ ಗೀತೆಗಳನ್ನು ಹಂಚಿಕೊಂಡಿದ್ದಾರೆ. ಅಂಥದ್ದೊಂದು ಹಾಡು ಇಲ್ಲಿದೆ.
ವಿಮಾನದಲ್ಲೂ ಕನ್ನಡ ಗಾನ
ಬೆಂಗಳೂರಿನಿಂದ ಗ್ವಾಲಿಯರ್ಗೆ ತೆರಳಿದ ಸ್ಪೈಸ್ ಜೆಟ್ ವಿಮಾನದಲ್ಲಿ ಕನ್ನಡ ಗಾಯನ ಎಲ್ಲರ ಗಮನ ಸೆಳೆಯಿತು. ಕೋಟಿ ಕಂಠ ಗಾಯನ ಅಭಿಯಾನದ ಹಿನ್ನೆಲೆಯಲ್ಲಿ ವಿಮಾನದ ಪೈಲಟ್ ಹಾಗೂ ಪ್ರಯಾಣಿಕರು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹಾಡಿದರು.
ಯಾವೆಲ್ಲಾ ಹಾಡು?
ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’, ಹುಯಿಲಗೋಳ ನಾರಾಯಣರಾವ್ ವಿರಚಿತ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’, ಚನ್ನವೀರ ಕಣವಿ ಅವರ ‘ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ’, ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವಾ’, ಡಿ.ಎಸ್.ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ.
ಹಾಡುಗಳ ಪೂರ್ಣ ಪಠ್ಯವನ್ನು ಸರ್ಕಾರವು ಫೇಸ್ಬುಕ್ ಪುಟದಲ್ಲಿ ನೀಡಿದೆ.
ಬಿಜೆಪಿ ವಲಯದಲ್ಲಿ ರಾಜಕೀಯ ಲೆಕ್ಕಾಚಾರ
ಬಿಜೆಪಿಯಿಂದಲೂ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆದಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕ್ರಮ ನಡೆಸುವಂತೆ ಹಿರಿಯ ನಾಯಕರು ಸೂಚಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲೂ ಕಾರ್ಯಕ್ರಮ ಆಯೋಜಿಸಲಾಗಿದೆ. ಕೋಟಿ ಗಾಯನ ಕಾರ್ಯಕ್ರಮದ ಹಿಂದೆ ರಾಜಕೀಯ ಲೆಕ್ಕಾಚಾರವೂ ಇದೆ ಎಂದು ವಿಶ್ಲೇಷಿಸಲಾಗಿದೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಡೆಯಿಂದ ಮುಂದಿನ ಚುನಾವಣೆಯಲ್ಲಿ ಹೊಡೆತ ಬೀಳದಂತೆ ತಡೆಯಲು ಈ ಕಾರ್ಯಕ್ರಮ ನೆರವಾಗಬಹುದು ಎಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ.
ಚುನಾವಣೆಯು ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಕನ್ನಡ ಅಸ್ಮಿತೆಯನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಧರ್ಮದ ವಿಚಾರಗಳಲ್ಲಿನ ಬಿಜೆಪಿ ನಿಲುವಿನ ಬಗ್ಗೆ ಎದ್ದಿದ್ದ ಸಾರ್ವಜನಿಕ ಚರ್ಚೆಗೆ ಕನ್ನಡ ಪ್ರೇಮದ ಮೂಲಕ ತೆರೆ ಎಳೆಯುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕನ್ನಡದ ಹೆಸರಲ್ಲಿ ಅವರನ್ನು ಒಂದೇ ವೇದಿಕೆಗೆ ತಂದು ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಪರೋಕ್ಷ ತಂತ್ರಗಾರಿಕೆಗೆ ಬಿಜೆಪಿ ಈ ಮೂಲಕ ಮುಂದಾಗಿದೆ.
Published On - 9:27 am, Fri, 28 October 22