ಬೆಂಗಳೂರು, ಸೆ.23: ರಾಜ್ಯದಲ್ಲೇ ಬರಗಾಲ ಘೋಷಣೆಯಾಗಿದೆ. ಮುಂಗಾರು ಮಳೆ(Monsoon) ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹೀಗಿರೋವಾಗ ತಮಿಳುನಾಡಿಗೆ ನೀರು ಹರಿಸೋಕೆ ಸಾಧ್ಯವೇ ಇಲ್ಲ. ಒಂದು ವೇಳೆ ನೀರು ಹರಿಸಿದ್ರೂ, ಮುಂದಿನ ಫೆಬ್ರವರಿಯಿಂದ ನಮ್ಮ ರಾಜ್ಯದಲ್ಲೇ ಕುಡಿಯಲು ಕೂಡ ನೀರು ಲಭಿಸೋದಿಲ್ಲ. ಇಷ್ಟೆಲ್ಲಾ ಅಂಶಗಳು ರಾಜ್ಯ ಸರ್ಕಾರಕ್ಕೆ(Karnataka Government) ಗೊತ್ತಿದ್ರೂ ಇದನ್ನು ಕೋರ್ಟ್ ಗಮನಕ್ಕೆ ತರೋದ್ರಲ್ಲಿ ವಿಫಲವಾಗಿದೆ. ಅಷ್ಟೇ ಅಲ್ಲದೇ, ನೀರಿನ ವಿಚಾರದಲ್ಲೂ ರಾಜಕೀಯ ನಡೆಸುತ್ತಿದೆ. ಇದನ್ನು ಹತ್ತಿಕ್ಕಲು ಇಂದು ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ(Protest) ನಡೆಸಲು ಮುಂದಾಗಿವೆ. ಕೇಂದ್ರ,ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿ ಬೆಂಗಳೂರು ಅಥವಾ ಕರ್ನಾಟಕ ಬಂದ್ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ಬಾರಿ ರಾಜ್ಯದಲ್ಲೇ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಆಗದೇ ಈಗಾಗಲೇ ಬರಗಾಲ ಘೋಷಿಸಲಾಗಿದೆ. ಇದರ ಮಧ್ಯೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ಸ್‌ನಂತೆ 15 ದಿನಗಳ ಕಾಲ 75 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರ ಧ್ವನಿಯೆತ್ತೋದ್ರಲ್ಲಿ ರಾಜ್ಯ ಸರ್ಕಾರ ಹಾಗು ನಮ್ಮ ವಕೀಲರು ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ, ಪ್ರಧಾನಿ ಮೋದಿಗೆ ಈ ವಿಚಾರವನ್ನು ಮನದಟ್ಟು ಮಾಡಬೇಕಿದ್ದ ರಾಜ್ಯದ ಸಂಸದರೂ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಸಂಸದರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋರಾಟದಲ್ಲಿ ಭಾಗಿಯಾಗಬೇಕು ಅಂತ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕರೆ ಕೊಟ್ಟಿದ್ದಾರೆ.
ಇನ್ನು ವಾಟಾಳ್ ನಾಗರಾಜ್ ಮಹತ್ವದ ಸುದ್ದಿಗೋಷ್ಟಿ ಕರೆದಿದ್ದಾರೆ. ಕರ್ನಾಟಕ ಬಂದ್ ನಡೆಸಬೇಕಾ ಏನು ಅನ್ನೋದ್ರ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ. ಕಾವೇರಿ ಕಿಚ್ಚಿಗೆ ಕರುನಾಡು ಬಂದ್ ಆಗುತ್ತಾ? ಎಂಬ ಪ್ರಶ್ನೆ ಎದ್ದಿದೆ. ಕರ್ನಾಟಕ ಜಲಸಂರಕ್ಷಣಾ ಸಮಿತಿಯಿಂದ ಇಂದು ಫ್ರೀಡಂಪಾರ್ಕ್ ನಲ್ಲಿ ಮಹತ್ವದ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ 100 ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಪ್ರಮುಖ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಲೇಔಟ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಐಟಿ ಕಂಪನಿಗಳು ಭಾಗಿಯಾಗಲಿವೆ. ಸಭೆಯ ಬಳಿಕ ಹೋರಾಟದ ರೂಪುರೇಷೆಯ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಬಂದ್ ಮೂಲಕ ಕಾವೇರಿ ನೀರಿನ ರಕ್ಷಣೆಗೆ ಆಗ್ರಹ ಮಾಡುವ ಬಗ್ಗೆ ಜಲಸಂರಕ್ಷಣಾ ಸಮಿತಿ ನಿರ್ಧಾರ ಮಾಡಲಿದೆ.
ಇದನ್ನೂ ಓದಿ: ಸೆ.23 ಮಂಡ್ಯ ಬಂದ್ಗೆ ಕರೆ: ಕಾನೂನು ಬಾಹಿರ ಚಟುವಟಿಕೆಗಳು ನಡೆದರೇ ಕ್ರಮ ಕೈಗೊಳ್ಳಲಾಗುವುದು: ಜಿ ಪರಮೇಶ್ವರ್
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ