ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ಕಾಂಗ್ರೆಸ್​​ಗೆ ಟಕ್ಕರ್​ ಕೊಡಲು ಕೇಸರಿ ಪಡೆ ರಣತಂತ್ರ

ಕರ್ನಾಟಕ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಬಳ್ಳಾರಿ ಘಟನೆ, ಕೋಗಿಲು ಲೇಔಟ್ ಅಕ್ರಮ ಮನೆ ತೆರವು ಕುರಿತು ಪಾರ್ಟಿಯ ನಡೆ ಬಗ್ಗೆ ಸಭೆಯಲ್ಲಿ ರೂಪುರೇಷೆ ಸಿದ್ಧಗೊಂಡಿದೆ. ಪರಿಷತ್ ಹಾಗೂ ಉಪಚುನಾವಣೆಗಳ ಸಿದ್ಧತೆ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದ್ದು, ಪಕ್ಷದ ಮುಂದಿನ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ.

ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ಕಾಂಗ್ರೆಸ್​​ಗೆ ಟಕ್ಕರ್​ ಕೊಡಲು ಕೇಸರಿ ಪಡೆ  ರಣತಂತ್ರ
ಕೋರ್​​ ಕಮಿಟಿ ಸಭೆ
Edited By:

Updated on: Jan 05, 2026 | 7:27 PM

ಬೆಂಗಳೂರು, ಜನವರಿ 05: ಮಲ್ಲೇಶ್ವರಂನ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಮೀಟಿಂಗ್​ನಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕೋಗಿಲು ಲೇಔಟ್​​ನಲ್ಲಿ ಅಕ್ರಮ ಮನೆಗಳ ತೆರವು, ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿರುವ ಮಾರಾಮಾರಿ, ಪರಿಷತ್​​ ಚುನಾವಣೆ ಮತ್ತು ವಿಧಾನಸಭೆ ಬೈ ಎಲೆಕ್ಷನ್​ ಸೇರಿ ಪ್ರಮುಖ ವಿಚಾರಗಳ ಬಗ್ಗೆ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಪಕ್ಷದ ಮುಂದಿನ ನಡೆ ಬಗ್ಗೆಯೂ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ.

ಸಭೆಯ ತೀರ್ಮಾನಗಳೇನು?

ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಗಲಾಟೆ ವಿಚಾರದಲ್ಲಿ ಬಳ್ಳಾರಿಯಲ್ಲಿ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಕೋಗಿಲು ಲೇಔಟ್​ನಲ್ಲಿ ಅಕ್ರಮ ಮನೆಗಳ ತೆರವು ಸಂಬಂಧ ರಾಜ್ಯವ್ಯಾಪಿ ಹೋರಾಟದ ಜೊತೆಗೆ ಕೋರ್ಟ್​ ಮೊರೆ ಹೋಗಲು ಬಿಜೆಪಿ ತೀರ್ಮಾನಿಸಿದೆ. ಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಮೈತ್ರಿ ಪಕ್ಷ JDS ಜತೆ ಚರ್ಚಿಸಿ, ಹೈಕಮಾಂಡ್​ಗೆ ಸಂಭಾವ್ಯ ಪಟ್ಟಿ ಕಳುಹಿಸಲು ನಿರ್ಧರಿಸಲಾಗಿದೆ. ಬಾಗಲಕೋಟೆ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗಳ ಬೈಎಲೆಕ್ಷನ್​​​ ಕುರಿತು 2 ವೀಕ್ಷಕರ ಸಮಿತಿ ರಚನೆಗೆ ತೀರ್ಮಾನ ಆಗಿದ್ದು, ಬಳ್ಳಾರಿ ಘರ್ಷಣೆ ವಿಚಾರದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸಲು ಕೂಡ ಕೇಸರಿ ಪಡೆ ನಿರ್ಧರಿಸಿದೆ.

ಇದನ್ನೂ ಓದಿ: ಕೋಗಿಲು ನಿವಾಸಿಗಳ ಪಟ್ಟಿ ಸಿದ್ಧ; ಲೇಔಟ್​ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

ಸಭೆಯಲ್ಲಿ ಯಾರೆಲ್ಲ ಭಾಗಿ?

ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಗೋವಿಂದ ಕಾರಜೋಳ, ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಡಾ. ಅಶ್ವತ್ಥ್ ನಾರಾಯಣ, ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್​​ ಕೋರ್​​ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:25 pm, Mon, 5 January 26