ಕಾಂಗ್ರೆಸ್(Congress) ಜಾರಿ ಮಾಡಿದ ಗ್ಯಾರಂಟಿಗಳ(Congress Guarantee) ಸುತ್ತ ದಿನಕ್ಕೊಂದು ಗೊಂದಲ ಹುಟ್ಟಿಕೊಳ್ಳುತ್ತಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗೋಕೆ ಸರ್ಕಾರ ಷರತ್ತುಗಳ ಸಂಕೋಲೆ ಹೊರಡಿಸೋಕೆ ಮುಂದಾಗ್ತಿದೆ ಅನ್ನೋ ಸುದ್ದಿ ನಡುವೆ, ಜನಸಾಮಾನ್ಯರು ಯೋಜನೆಗಳನ್ನ ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಅಂತ ತಲೆ ಕೆಡಿಸಿಕೊಂಡು ಕೂತಿದ್ದಾರೆ. ಇದರ ನಡುವೆ ನೂತನ ಕೃಷಿ ಸಚಿವ ಚೆಲುವರಾಯಸ್ವಾಮಿ (Cheluvarayaswamy) ಸ್ಫೋಟಕ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಉಚಿತ ಭರವಸೆಗಳೆಲ್ಲ ಕೇವಲ ಚುನಾವಣಾ ಗಿಮಿಕ್ ಅಷ್ಟೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಲು ಇಂಥ ಗಿಮಿಕ್ಗಳನ್ನು ಮಾಡಲಾಗಿದೆ ಎಂದಿದ್ದಾರೆ. ಈ ಮೂಲಕ ಕಾಂಗ್ರೆಸ್ನ ಇನ್ನೊಂದು ಮುಖ ಜನರ ಮುಂದಿಟ್ಟಿದ್ದಾರೆ. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿಗೆ ಅಸ್ತ್ರವಾಗಿದೆ. ಇನ್ನು ಮತ್ತೊಂದೆಡೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಇಂದಿನಿಂದ ಮೂರು ದಿನ 4 ರಾಜ್ಯಗಳ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಗುಜರಾತ್ನಲ್ಲಿ ಭಾರಿ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯಪಾಲ ಥಾವರ್ ಚಂದ್ ಅವರನ್ನು ಕಾನೂನು ಸಚಿವ ಎಚ್ ಕೆ ಪಾಟೀಲ್ ಭೇಟಿ ಮಾಡಿದ್ದಾರೆ. ರಾಜಭವನದಲ್ಲಿ ಸೌಹಾರ್ದ ಭೇಟಿಯಾಗಿ ಮಾತುಕತೆ ನಡೆಸಿದರು.
ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷತೆ ವಹಿಸಲು ಬರಗೂರು ನಿರಾಕರಣೆ ಹಿನ್ನೆಲೆ ಸರ್ಕಾರದ ಮಟ್ಟದಲ್ಲಿ ತಾತ್ಕಾಲಿಕವಾಗಿ ವಿವಾದಿತ 3 ಪಠ್ಯಕ್ಕೆ ಕತ್ತರಿಗೆ ಚಿಂತನೆ ಮಾಡಲಾಗುತ್ತಿದೆ. ಶಿಕ್ಷಣತಜ್ಞರ ಸಲಹೆ ಮೇರೆಗೆ ಕೆಲವು ಪಠ್ಯಕ್ಕೆ ಮಾತ್ರ ಕತ್ತರಿಹಾಕಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷತೆ ತಿರಸ್ಕರಿಸುವ ಮೂಲಕ ಪಠ್ಯ ಪರಿಷ್ಕರಣೆಯಿಂದ ಬರಗೂರು ರಾಮಚಂದ್ರಪ್ಪ ಹಿಂದೆ ಸರಿದಿದ್ದಾರೆ. ನಾನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನಾಗಿಲ್ಲ. ಪಠ್ಯಪರಿಷ್ಕರಣೆಗೆ ಹೊಸ ಸಮಿತಿ ಆಗಿಲ್ಲ. ನಾನು ಅಧ್ಯಕ್ಷನಾಗಲು ಒಪ್ಪಿಲ್ಲ ಎಂದು ಹೇಳಿದ್ದಾರೆ.
ಜೂ.11ರಂದು ವಿಧಾನಸೌಧದ ಮುಂಭಾಗ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಯ ಲೋಗೋ ಹಾಗೂ ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಅನಾವರಣಗೊಳಿಸಲಿದ್ದಾರೆ.
ನಾಳೆ ಬೆಂಗಳೂರಿನಲ್ಲಿ ಶಾಸಕರು, ಪರಾಜಿತ ಅಭ್ಯರ್ಥಿಗಳ ಜೊತೆ ಬಿಜೆಪಿ ಚುನಾವಣಾ ಅವಲೋಕನಾ ಸಭೆ ಮಾಡಲಿದೆ. ನಾಳೆಯ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ಕಟೀಲು, ಮಾಜಿ ಸಿಎಂಗಳಾದ B.S.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಲಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆ ಜಾರಿಗೆ ಸಾರಿಗೆ ಇಲಾಖೆಯಿಂದ 10 ಪುಟಗಳ ಮಾರ್ಗಸೂಚಿ ಪ್ರಕಟಿಸಿದೆ. ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಸ್ಮಾರ್ಟ್ಕಾರ್ಡ್ ಪಡೆಯುವವರೆಗೆ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದಾಗಿದೆ.
ಗದಗ: ಮುಂಡರಗಿ ಪಟ್ಟಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. KFCS ಗೋದಾಮು ಬಳಿ ಆಹಾರ ಇಲಾಖೆ, ಪೊಲೀಸರಿಂದ ದಾಳಿ ಮಾಡಿದ್ದು, 9.59 ಲಕ್ಷ ಮೌಲ್ಯದ 50 ಕೆಜಿ ತೂಕದ 399 ಅಕ್ಕಿಚೀಲ, ಮಿನಿ ಲಾರಿ ವಶಕ್ಕೆ ಪಡೆದಿದ್ದಾರೆ.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ ಉಂಟಾಗಿದೆ. ಜಿಲ್ಲೆ ಯ ಶಿಡ್ಲಘಟ್ಟ ಕಾಂಗ್ರೆಸ್ ಭವನದಲ್ಲಿ ಘಟನೆ ನಡೆದಿದೆ. ಆತ್ಮಾವಲೋಕನಾ ಸಭೆಯಲ್ಲಿ ಕಾಂಗ್ರೆಸ್ ಬಣಗಳ ಮಧ್ಯೆ ಗಲಾಟೆ ನಡೆದಿದೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿದೆ.
ಸಿಎಂ ಸಿದ್ದರಾಮಯ್ಯ ಅವರನ್ನು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಇಂದು ಭೇಟಿ ಮಾಡಿದ್ದಾರೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ನಾಯಕರೊಂದಿಗೆ ಚರ್ಚೆ ಮಾಡಿದರು. ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ನಜೀರ್ ಅಹಮದ್, ಗೋವಿಂದರಾಜು, ಸಚಿವ ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆ ಬಗ್ಗೆ ಸಚಿವ ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಚಲುವರಾಯಸ್ವಾಮಿ ಏನೋ ಹೇಳಲು ಹೋಗಿ ಏನೋ ಹೇಳಿರಬೇಕು. ಮಂತ್ರಿಗಳು ಏನೇ ಹೇಳಲಿ, ನಾವು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನಾವು 15 ದಿನಗಳಲ್ಲೇ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.
ಪಿಡಬ್ಲ್ಯೂಡಿ, ಹೆಸ್ಕಾಂ ಸೇರಿ ಹಲವು ಇಲಾಖೆಗಳ ಬಗ್ಗೆ ಪ್ರತ್ಯೇಕ ಸಭೆ ಮಾಡುತ್ತೇವೆ. ಬಹಳಷ್ಟು ಜನರು ಮಹಾನಗರ ಪಾಲಿಕೆ ಸಿಬ್ಬಂದಿ ಬಗ್ಗೆ ಅಭಿಪ್ರಾಯ ವ್ಯಕ್ತ ಮಾಡಿದ್ದೀರಿ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ಆಶಯವಿದೆ. ತಕ್ಷಣ ಎಲ್ಲರನ್ನೂ ಬದಲಾವಣೆ ಮಾಡಬೇಕು ಎಂಬ ಆಸೆಯೂ ಇಲ್ಲ, ಇಚ್ಚೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಈ ಚುನಾವಣೆ ಸೋಲಿನಿಂದ ಬೇಸರವಾಗಿ ನನ್ನ ಮನಸ್ಸು ಕಲ್ಲಾಗಿದೆ. ವೈಯಕ್ತಿಕ ಕಷ್ಟ ಹೇಳಿಕೊಂಡು ಯಾರು ಕೂಡ ನನ್ನ ಬಳಿ ಬರಬೇಡಿ. ಚುನಾವಣೆ ಸೋತು ಕಷ್ಟದಲ್ಲಿದ್ದೇನೆ, ಆದರೂ ಬಂದು ಸಹಾಯ ಕೇಳ್ತೀರಿ ಎಂದು ಹೇಳಿದ್ದಾರೆ.
ಮಂಡ್ಯ: ಇನ್ಮುಂದೆ ಸಹಾಯ ಕೇಳಿಕೊಂಡು ಯಾರೂ ನನ್ನ ಬಳಿ ಬರಬೇಡಿ ಎಂದು ಮಂಡ್ಯ ಜಿಲ್ಲೆಯ ಮದ್ದೂರು ಕ್ಷೇತ್ರದ ಕೊಪ್ಪದಲ್ಲಿ ಸುರೇಶ್ಗೌಡ ಹೇಳಿದರು. ಇನ್ಮುಂದೆ ಯಾವುದೇ ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ. ನಂಬಿದವರಿಂದಲೇ ನನಗೆ ಮೋಸ ಆಗಿದೆ, ನಾನೀಗ ಸೋತಿದ್ದೇನೆ ಎಂದಿದ್ದಾರೆ.
ಶಾಸಕ ನರೇಂದ್ರಸ್ವಾಮಿಗೆ ಟೋಲ್ ಸಿಬ್ಬಂದಿ ಆವಾಜ್ ಪ್ರಕರಣದಲ್ಲಿ ಸ್ಪೀಕರ್ ಯು.ಟಿ.ಖಾದರ್ಮಧ್ಯಪ್ರವೇಶಿಸಿದ್ದಾರೆ. ಶಾಸಕರ ಜೊತೆ ಸೌಜನ್ಯದಿಂದ ವರ್ತಿಸುವಂತೆ ಸ್ಪೀಕರ್ ಸೂಚನೆ ನೀಡಿದ್ದು, ಶಾಸಕರ ಹಕ್ಕು ಬಾಧ್ಯತೆಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕು. ಸಂಬಂಧಿಸಿದವರು ಟೋಲ್ ಸಿಬ್ಬಂದಿಗೆ ಮಾರ್ಗದರ್ಶನ ನೀಡಬೇಕು ಎಂದಿದ್ದಾರೆ.
ದಾವಣಗೆರೆ: ಅತಿವೃಷ್ಟಿಯಿಂದ ಮನೆ ಹಾನಿಯಾದಾಗ ಪ್ರತಿ ಹಳ್ಳಿಗೂ ಭೇಟಿ ನೀಡಿದ್ದೇನೆ. ಮನೆ ಕಳೆದುಕೊಂಡವರಿಗೆ ಪಕ್ಷಾತೀತವಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಆದರೆ ಹಾಲಿ ಶಾಸಕರು ಬಿಜೆಪಿಯವರಿಗೆ ಮಾತ್ರ ಮನೆ ಕೊಡಿಸಿದ್ದಾರೆಂದಿದ್ದಾರೆ. ಕಾಂಗ್ರೆಸ್ನವರಿಗೆ ನೀಡಿದ್ದ ಮನೆ ಕ್ಯಾನ್ಸಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ ಎಂದು ಹೊನ್ನಾಳಿಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ತುಮಕೂರು: ಜಾತ್ರಾ ಮಹೋತ್ಸವದಲ್ಲಿ ನೂಕುನುಗ್ಗಲಾಗಿ 30 ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದರ ಏರಿಕೆಯಾಗಿತ್ತು. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಾರಿಗೆ ಬಂದಿರಲಿಲ್ಲ ಎಂದು ಬೆಂಗಳೂರಿನಲ್ಲಿ ಇಂಧನ ಇಲಾಖೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಚುನಾವಣೆ ಮುಗಿದ ನಂತರ ಇಂದಿನ ಸರ್ಕಾರದ ವಿದ್ಯುತ್ ದರ ಏರಿಕೆ ಆದೇಶ ಜಾರಿಗೆ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ. ನಮ್ಮ ಸರ್ಕಾರದ ಬಡವರು, ಮಧ್ಯಮ ವರ್ಗದವರನ್ನು ರಕ್ಷಿಸುತ್ತಿದೆ. ಬಡವರು ಬಿಲ್ ಕಟ್ಟುವುದೇ ಬೇಡ ಎಂದು ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ ಎಂದರು.
ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯ ಚಿಗರಿ ಬಸ್ ಫ್ರೀ ಮಾಡುವಂತೆ ಸರಕಾರಕ್ಕೆ ಒತ್ತಾಯ ಕೇಳಿ ಬಂದಿದೆ. BRTS ಸಾರಿಗೆ ವ್ಯಾಪ್ತಿಯ ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಹವಾನಿಯಂತ್ರಿತ ಚಿಗರಿ ಬಸ್ ಫ್ರೀ ಬಿಡುವಂತೆ BRTS ಎಮ್ ಡಿ ಭರತ್ ಆಗ್ರಹಿಸಿದ್ದಾರೆ. ಸರ್ಕಾರ ಆದೇಶ ಹೊರಡಸಿದಂತೆ ಹವಾನಿಯಂತ್ರಿತ ಬಸ್ ನಲ್ಲಿ ಫ್ರೀ ಇಲ್ಲ. BRTS ಸಾರಿಗೆಯನ್ನು ಶಕ್ತಿ ಸ್ಕೀಮ್ ನಲ್ಲಿ ಅನುಮತಿ ನೀಡಲು ಮನವಿ ಮಾಡಿದ್ದೇವೆ. ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು BRTS ಎಮ್ ಡಿ ಭರತ್ ತಿಳಿಸಿದರು.
ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಸ್ವಂತ ಮನೆ ಇರಲಿ, ಬಾಡಿಗೆ ಮನೆ ಇರಲಿ ಕರಾರುಪತ್ರ ಬೇಕು. 200 ಯೂನಿಟ್ಗಿಂತ ಕಡಿಮೆ ಬಳಕೆದಾರರು 2.16 ಕೋಟಿ ಇದ್ದಾರೆ. ಗೃಹಜ್ಯೋತಿ ಯೋಜನೆ ಲಾಭ ಪಡೆಯಲು ಸೇವಾಸಿಂಧು ಆ್ಯಪ್ನಲ್ಲಿ ಜನ ಅರ್ಜಿ ಹಾಕಬೇಕು. ಜುಲೈ ತಿಂಗಳಿನ ಬಿಲ್ ಆಗಸ್ಟ್ನಲ್ಲಿ ಪಾವತಿ ಮಾಡುವುದು ಬೇಡ. 2 ಲಕ್ಷ ಗ್ರಾಹಕರು ಮಾತ್ರ 200 ಯೂನಿಟ್ಗಿಂತ ಹೆಚ್ಚಾಗಿ ಬಳಕೆ ಮಾಡ್ತಾರೆ. 2 ಕೋಟಿ 14 ಲಕ್ಷ ಗ್ರಾಹಕರಿಗೆ ಈ ಯೋಜನೆ ಲಾಭ ಸಿಗುತ್ತದೆ ಎಂದು ಬೆಂಗಳೂರಿನಲ್ಲಿ ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿ ಒಬ್ಬರಿಗೆ 1 ರೂ. ಕೊಡಬೇಕಾದ್ರೆ ಅಕೌಂಟೆಬಿಲಿಟಿ ಇಟ್ಟುಕೊಳ್ಳಬೇಕು. ಬಡವರಿಗೆ ಗ್ಯಾರಂಟಿ ಯೋಜನೆ ನೀಡಬೇಕೆಂದು ತೀರ್ಮಾನಿಸಿದ್ದೆವು ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಟ್ಯಾಕ್ಸ್ ಕಟ್ಟುವವರು $2 ಸಾವಿರ ಕೊಡಿ ಎಂದು ಕೇಳುವುದಿಲ್ಲ. 2 ಸಾವಿರ ಹಣ ಬೇಡ ಎಂದು ಬಹಳ ಜನ ಪತ್ರ ಬರೆದಿದ್ದಾರೆ. ಪಾಪ ಬಿಜೆಪಿಯವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಕೊಡ್ತೀವಿ ಎಂದಿದ್ದರು. ಮೊದಲು ಬಿಜೆಪಿಯವರು ಎಲ್ಲರ ಖಾತೆ 15 ಲಕ್ಷ ರೂ. ಹಾಕಲಿ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಬೇಡಿ ಎನ್ನಲು ಆಗುತ್ತಾ? ಎಂದರು.
ಚುನಾವಣೆ ವೇಳೆ ಕಾಂಗ್ರೆಸ್ನವರು ಷರತ್ತು ಬಗ್ಗೆ ಹೇಳಿರಲಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಕಂಡಿಷನ್ ಬಗ್ಗೆ ಹೇಳುತ್ತಿದ್ದಾರೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಈ ಯೋಜನೆಗಳು ಸಿಗಲ್ಲ ಅಂತಾ ಜನರಿಗೆ ಈಗ ಅರ್ಥವಾಗುತ್ತಿದೆ. ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಅಂತಿದ್ದಾರೆ. ಸಾರಿಗೆ ನಿಗಮಗಳಿಗೆ ಎಷ್ಟು ನಷ್ಟ ಆಗುತ್ತೆ ಅಂತಾ ಮುಂದೆ ಗೊತ್ತಾಗುತ್ತೆ. ಜನರಿಂದ ವೋಟ್ ಹಾಕಿಸಿಕೊಳ್ಳಲು ಉಚಿತ ಎಂದು ಹೇಳಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಇನ್ಮುಂದೆ ಸಹಾಯ ಕೇಳಿಕೊಂಡು ಯಾರೂ ನನ್ನ ಬಳಿ ಬರಬೇಡಿ ಎಂದು ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಕೊಪ್ಪದಲ್ಲಿ ನಾಗಮಂಗಲ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಸುರೇಶ್ಗೌಡ ಆಕ್ರೋಶದ ಮಾತುಗಳನ್ನಾಡಿದ್ದಾರೆ. ಇನ್ಮುಂದೆ ಯಾವುದೇ ಮದುವೆಗೆ ಬಂದರೂ ಮುಯ್ಯಿ ಕೂಡ ಹಾಕಲ್ಲ. ನಂಬಿದವರಿಂದಲೇ ನನಗೆ ಮೋಸ ಆಗಿದೆ, ನಾನೀಗ ಸೋತಿದ್ದೇನೆ. ಈ ಚುನಾವಣೆ ಸೋಲಿನಿಂದ ಬೇಸರವಾಗಿ ನನ್ನ ಮನಸ್ಸು ಕಲ್ಲಾಗಿದೆ. ವೈಯಕ್ತಿಕ ಕಷ್ಟ ಹೇಳಿಕೊಂಡು ಯಾರು ಕೂಡ ನನ್ನ ಬಳಿ ಬರಬೇಡಿ. ಚುನಾವಣೆ ಸೋತು ಕಷ್ಟದಲ್ಲಿದ್ದೇನೆ, ಆದರೂ ಬಂದು ಸಹಾಯ ಕೇಳ್ತೀರಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಪ್ರವಾಹದ ವೇಳೆ ಹಾನಿಯಾದ ಮನೆ ಹಂಚಿಕೆಯಲ್ಲಿ ಅಕ್ರಮ ಆರೋಪ ಸಂಬಂಧ ‘ಕೈ’ ಶಾಸಕ ಶಾಂತನಗೌಡ ಆರೋಪಕ್ಕೆ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಅತಿವೃಷ್ಟಿಯಿಂದ ಮನೆ ಹಾನಿಯಾದಾಗ ಪ್ರತಿ ಹಳ್ಳಿಗೂ ಭೇಟಿ ನೀಡಿದ್ದೇನೆ. ಮನೆ ಕಳೆದುಕೊಂಡವರಿಗೆ ಪಕ್ಷಾತೀತವಾಗಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಆದರೆ ಹಾಲಿ ಶಾಸಕರು ನನ್ನ ವಿರುದ್ಧ
ಬಿಜೆಪಿಯವರಿಗೆ ಮಾತ್ರ ಮನೆ ಕೊಡಿಸಿದ್ದಾರೆಂದು, ಕಾಂಗ್ರೆಸ್ನವರಿಗೆ ನೀಡಿದ್ದ ಮನೆ ಕ್ಯಾನ್ಸಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ. 500 ಕ್ಕೂ ಹೆಚ್ಚು ಮನೆಗಳು ಬೋಗಸ್ ಆಗಿದ್ದು ಇದರಲ್ಲಿ ನನ್ನ ಹಸ್ತಕ್ಷೇಪ ಇದೇ ಎಂದು ಆರೋಪ ಮಾಡಿದ್ದಾರೆ ಎಂದರು.
ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.ಈ ವೇಳೆ ಹೆಚ್ಡಿ ಕುಮಾರಸ್ವಾಮಿ, ಬಿ.ಎಂ.ಫಾರೂಕ್, ರೋಷನ್ ಬೇಗ್ ಉಪಸ್ಥಿತರಿದ್ದರು.
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿ ಮೊದಲು ಎಲ್ಲಾ ಗೃಹಿಣಿಯರಿಗೆ ₹2 ಸಾವಿರ ಕೊಡ್ತೀವಿ ಎಂದಿದ್ದರು. ಆದರೆ ಈಗ ಗೃಹ ಲಕ್ಷ್ಮೀ ಯೋಜನೆಗೆ ಕಂಡಿಷನ್ ಹಾಕುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ. APL, BPL ಮಹಿಳೆಯರಿಗೆ 2 ಸಾವಿರ ರೂ. ಕೊಡ್ತೀವಿ ಎಂದಿದ್ದರು. ಆದಾಯ ತೆರಿಗೆ ಪಾವತಿಸುತ್ತಿದ್ದರೆ ಹಣ ಸಿಗುವುದಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ನವರು ಮಾತಿಗೆ ತಪ್ಪುತ್ತಿರೋದು ಸರಿಯಲ್ಲ. ಮಹಿಳೆಯರು, ನಾಗರಿಕರ ಪರವಾಗಿ ನಾವು ಹೋರಾಟ ಮಾಡ್ತೇವೆ ಎಂದರು.
ಮಳೆ ವಿಳಂಬದಿಂದ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉದ್ಭವ ಹಿನ್ನೆಲೆ ದ.ಕನ್ನಡ ಜಿಲ್ಲೆಯ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಕೆಲವು ಕಡೆ ರಜೆ ಘೋಷಣೆ ಮಾಡಿದ್ದು ಕೆಲವು ಕಡೆ ಅರ್ಧ ದಿನ ತರಗತಿಗೆ ಸೂಚಿಸಲಾಗಿದೆ. ಕೆಲ ಕಾಲೇಜುಗಳಲ್ಲಿ ಆನ್ಲೈನ್ ತರಗತಿ ನಡೆಸ್ತಿದ್ದಾರೆ. ಮನೆಗಳು, ಕಚೇರಿ ಜತೆಗೆ ಶೈಕ್ಷಣಿಕ ಸಂಸ್ಥೆಗಳಲ್ಲೂ ನೀರಿಗಾಗಿ ಪರದಾಟ ಹೆಚ್ಚಾಗಿದೆ. ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ನೀರಿನ ರೇಶನಿಂಗ್ ಶುರುವಾಗಿದ್ದು ಮಂಗಳೂರು ಉತ್ತರ, ಮಂಗಳೂರು ನಗರ ಭಾಗಕ್ಕೆ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಮಂಗಳೂರು ಉತ್ತರ, ದಕ್ಷಿಣ ವಲಯದ ಶಾಲೆಗಳಿಗೂ ನೀರಿನ ಕೊರತೆ ಉಂಟಾಗಿದೆ. ಸದ್ಯ ಮಂಗಳೂರು ನಗರದ ಹಲವೆಡೆ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
ಪಠ್ಯ ಪುಸ್ತಕ ಪರಿಷ್ಕರಣೆಗೆ ಸರ್ಕಾರ ನಿರ್ಧಾರ ವಿಚಾರಕ್ಕೆ ಸಂಬಂಧಿಸಿ ಆರ್ಎಸ್ಎಸ್ ಸಂಸ್ಥಾಪಕ ಹೆಡಗೇವಾರ್, ಚಕ್ರವರ್ತಿ ಸೂಲಿಬಲೆ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಪಠ್ಯ ಕೈಬಿಟ್ಟಿದ್ದಕ್ಕೆ ಟ್ವೀಟ್ ಮೂಲಕ ಮಾಜಿ ಸಚಿವ ಸುನೀಲ್ ಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದರಾಮಯ್ಯ ಸರ್ಕಾರ ಪಠ್ಯ-ಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಂಚನೆ ಮಾಡ್ತಿದೆ ಎಂದು ನವದೆಹಲಿಯಲ್ಲಿ ಟಿವಿ9ಗೆ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾಋಎ. ಯುದ್ಧಕ್ಕೂ ಸಿದ್ಧ, ಸ್ನೇಹಕ್ಕೂ ಸಿದ್ಧ ಎಂದು ಡಿಕೆಶಿ ಹೇಳಿದ್ದಾರೆ. ಭಾರತ ಜನತಾ ಪಾರ್ಟಿ ಯುದ್ಧಕ್ಕೆ ಸಿದ್ಧವಿದೆ. ಕಾಂಗ್ರೆಸ್ ಸರ್ಕಾರದ ವಂಚನೆ ವಿರುದ್ಧ ಹೋರಾಟ ಮಾಡುತ್ತೇವೆ. ಘೋಷಣೆ ಮಾಡುವಾಗ ಸಿದ್ದರಾಮಯ್ಯ ಟ್ಯಾಕ್ಸ್ ಕಟ್ಟುತ್ತಿರಲಿಲ್ವೇ? ಉಚಿತ ಎಂದು ಹೇಳುವಾಗ ನಿಮಗೆ ಗೊತ್ತಾಗಲಿಲ್ವಾ. ಕಾಂಗ್ರೆಸ್ನ ಕೇಂದ್ರ ನಾಯಕರನ್ನು ಸುಳ್ಳುಗಾರರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ವಂಚಕರ ಪಾರ್ಟಿ, ಸಿದ್ದರಾಮಯ್ಯ ವಂಚಕರ ನಾಯಕ ಎಂದು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಷರತ್ತು ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿ ಇದು ಜನಾಕ್ರೋಶಕ್ಕೆ ಕಾರಣವಾಗಲಿದೆ ಎಂದ ಮೈಸೂರಿನಲ್ಲಿ ಟಿವಿ9ಗೆ ಕೆ.ಆರ್.ಕ್ಷೇತ್ರದ ಶಾಸಕ ಶ್ರೀವತ್ಸ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯ ಸರ್ಕಾರ ಜನರನ್ನು ಗೊಂದಲ ಮಾಡುತ್ತಿದೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಗ್ಯಾರಂಟಿ ಜಾರಿ ಎಂದಿದ್ದರು. ಅಧಿಕಾರಕ್ಕೆ ಬಂದು 20 ದಿನವಾದ್ರೂ ಗ್ಯಾರಂಟಿ ಜಾರಿ ಮಾಡಲು ಆಗಿಲ್ಲ. ಜನರಿಗೆ ತೆರಿಗೆ ಕಟ್ಟದಂತೆ ಪರೋಕ್ಷವಾಗಿ ಪ್ರೇರಣೆ ನೀಡಲಾಗುತ್ತಿದೆ ಎಂದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮತಗಳನ್ನು ಪಡೆದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. 4 ದಿನ 31 ಜಿಲ್ಲೆಗಳ ಪ್ರಮುಖರ ಜೊತೆ ಮಾಜಿ ಸಿಎಂ ಹೆಚ್ಡಿಕೆ ಸಭೆ ನಡೆಸಲಿದ್ದಾರೆ. ಇಂದು ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲಾ ನಾಯಕರ ಜತೆ ಸಭೆ ನಡೆಸಲಿದ್ದಾರೆ. BBMP, ಜಿ.ಪಂ., ತಾ.ಪಂ. ಚುನಾವಣೆ ಸಿದ್ಧತೆ ಬಗ್ಗೆ ಸಭೆಯಲ್ಲಿ ಚರ್ಚೆ ಆಗಲಿದೆ. ಹಾಗೂ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.
ಪಠ್ಯ ಪರಿಷ್ಕರಣೆ ಗೊಂದಲ ಬಗೆಹರಿಸಲು ಸಮಿತಿ ರಚನೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚಿಸಿ ಪಠ್ಯ ಪರಿಷ್ಕರಣೆ ಗೊಂದಲ ನಿವಾರಿಸಲು ಪಠ್ಯ ಪರಿಷ್ಕರಣೆ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಚಲುವರಾಯಸ್ವಾಮಿ ಹೇಳಿಕೆ ವೈರಲ್ ವಿಚಾರಕ್ಕೆ ಸಂಬಂಧಿಸಿ ಟಿವಿ9ಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನಾನು ಗಿಮಿಕ್ ಅಂತಾ ಹೇಳಿಲ್ಲ. ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ನಾವು ಈಡೇರಿಸುತ್ತಿದ್ದೇವೆ. ಬಿಜೆಪಿಯವರಿಗೆ ಜಾಲತಾಣದಲ್ಲಿ ವೈರಲ್ ಮಾಡುವುದೇ ಕೆಲಸ ಆಗಿದೆ. ಬಿಜೆಪಿಗೆ ವೈರಲ್ ಮಾಡೋದು ಬಿಟ್ಟು ಬೇರೆ ಕೆಲಸ ಮಾಡಲು ಹೇಳಿ ಎಂದು ಇಜ್ಜಲಘಟ್ಟ ಗ್ರಾಮದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎಂದು ಜಿ.ಎಸ್.ಬಸವರಾಜು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋವನ್ನು ವೀರಶೈವ ಸಮುದಾಯದ ಕಾರ್ಯಕ್ರಮದಲ್ಲಿ ರೆಕಾರ್ಡ್ ಮಾಡಲಾಗಿದ್ದು ಇದರಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ.ಎಸ್.ಬಸವರಾಜು ಅವರು ಸಮುದಾಯ ಒಗ್ಗಟ್ಟಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ನನ್ನ ಸೀಟ್ ಅನ್ನು ಮಾಜಿ ಸಚಿವ ವಿ.ಸೋಮಣ್ಣಗೆ ಕೊಡುತ್ತಾರೆ. ಚುನಾವಣೆಗೆ ಸ್ಪರ್ಧಿಸಲ್ಲ ಎಂದು ದೆಹಲಿಗೆ ಹೋಗಿದ್ದಾಗ ಹೇಳಿದ್ದೇನೆ ಎಂದಿದ್ದಾರೆ.
ಬೆಂಗಳೂರಿನ ಬೆಸ್ಕಾಂ ಮುಖ್ಯ ಕಚೇರಿಯಲ್ಲಿ ಬೆಳಗ್ಗೆ 11.45ಕ್ಕೆ ಸಚಿವ ಕೆ.ಜೆ.ಜಾರ್ಜ್ ಸುದ್ದಿಗೋಷ್ಠಿ ನಡೆಸಲಿದ್ದು ಉಚಿತ ವಿದ್ಯುತ್ ಯೋಜನೆ ಕುರಿತು ಮಾಹಿತಿ ನೀಡಲಿದ್ದಾರೆ.
Published On - 9:55 am, Wed, 7 June 23