ಕಾಂಗ್ರೆಸ್ ಸರ್ಕಾರ(Congress Government) ನುಡಿದಂತೆ ಗ್ಯಾರಂಟಿ ಘೋಷಣೆಗಳನೆಲ್ಲಾ ಒಂದೊಂದಾಗಿ ಜಾರಿ ಮಾಡುತ್ತಿದೆ. ಆದ್ರೆ ಮತ್ತೊಂದೆಡೆ ನಂದಿನಿ ಹಾಲಿನ ದರ(Milk Price Hike) ಏರಿಕೆ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ಕಾಂಗ್ರೆಸ್ ನಲ್ಲಿ ಒಂದು ಸ್ಫೋಟದ ಸದ್ದು ಕೇಳಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್(BK Hariprasad) ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿರೋದು ಆಡಳಿತ ಪಕ್ಷದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನು ಕರ್ನಾಟಕ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದೆ(Karnataka Rain). ಬರಡಾಗಿದ್ದ ಡ್ಯಾಂಗಳು ತುಂಬಿ ತುಳುಕುತ್ತಿದ್ದು ಜೀವ ಕಳೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಹಾನಿ ಹಿನ್ನೆಲೆ ಮಳೆ ಹಾನಿ ಪ್ರದೇಶಗಳಿಗೆ ಇಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್(KJ George) ಭೇಟಿ ನೀಡಲಿದ್ದಾರೆ. ಜೊತೆಗೆ ಇಂದಿನ ಕ್ಷಣ ಕ್ಷಣ ಅಪ್ಡೇಟ್ಸ್ಗಾಗಿ ಟಿವಿ9 ಕನ್ನಡ ಡಿಜಿಟಲ್ ಫಾಲೋ ಮಾಡಿ.
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಸಾಗರ ನಗರದ ವರದಾ ರಸ್ತೆಯಲ್ಲಿರುವ ತಾಲೂಕು ಉಪಕಾರಾಗೃಹದ ಕಾಂಪೌಂಡ್ ಕುಸಿದಿದೆ. ಸ್ಥಳಕ್ಕೆ ಸಾಗರ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕುಮಟಾ ತಾಲೂಕಿನ ದೇವಿಮನಿ ಘಾಟ್‌ನ ರಾಗಿಹೊಸಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುಡ್ಡ ಕುಸಿದೆ. ಗುಡ್ಡ ಕುಸಿದು ಮಣ್ಣಿನಲ್ಲಿ ಬಸ್ ಸಿಲುಕಿದ್ದು, ಪ್ರಯಾಣಿಕರ ಪರದಾಡಿದ್ದಾರೆ. ಕೆಲಕಾಲ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.
ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಪರಿಣಾಮ ಮನೆಗಳಿಗೆ ಬಳ್ಳಾರಿ ನಾಲಾ ನೀರು ನುಗ್ಗಿದೆ. ನಾಲಾ ನೀರು ಸುಗಮವಾಗಿ ಹೋಗಲು ವ್ಯವಸ್ಥೆ ಮಾಡದ ಹಿನ್ನೆಲೆ ಕೇಶವನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರುನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರು ಒಳಹರಿವು ಮತ್ತು 5 ಸಾವಿರ ಕ್ಯೂಸೆಕ್ ನೀರು ಹೊರಹರಿವು ಹಿನ್ನೆಲೆ ಕಾವೇರಿ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಜುಲೈ 27ರಂದು ಸಂಜೆ 6.30ಕ್ಕೆ ಬೆಂಗಳೂರಿನ ಅರಮನೆ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿ ಆಗಿದೆ. ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ನದಿಗಳು ಉಕ್ಕಿ ಹರಿಯುತ್ತಿವೆ. ಮುನ್ನೆಚ್ಚರಿಕೆ ವಹಿಸಲು ನದಿಪಾತ್ರದ ಜನರಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮನವಿ ಮಾಡಿದ್ದಾರೆ. ಇನ್ನೂ ಮೂರು ದಿನಗಳ ಕಾಲ ನಿರಂತರವಾಗಿ ಮಳೆಯಾಗಲಿದೆ. ನದಿ ಹಾಗೂ ಹಳ್ಳದ ಕಡೆಗೆ ದನ ಕರುಗಳನ್ನು ಬಿಡದಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಎಡಬಿಡದೆ ಮಳೆ ಸುರಿಯುತ್ತಿದೆ. ಮಳೆಗೆ ಈಗಾಗಲೇ ತುಂಗಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ನದಿಗೆ 48 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದ ಹಿನ್ನೆಲೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಡಿಡಿಪಿಐ ಪರಮೇಶ್ವರಪ್ಪ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಪ್ರಾಧಿಕಾರದ ನೂತನ ಬಸ್‌ನಲ್ಲಿ ಮಹಿಳೆಯರಿಗಿಲ್ಲ ಉಚಿತ ಪ್ರಯಾಣವಿಲ್ಲ ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳು ತುಂಬಿ ತುಳುಕುತ್ತಿವೆ. ಪ್ರಾಧಿಕಾರದ ಬಸ್‌ಗಳಲ್ಲಿ ಮಹಿಳೆಯರು ಹಣ ನೀಡಿ ಪ್ರಯಾಣಿಸಬೇಕು. 4 ಬಸ್‌ಗಳಿಗೂ ಹುಲಿವಾಹನ, ಚಿನ್ನದತೇರು, ಬೆಳ್ಳಿತೇರು, ಬಸವವಾಹನ ಎಂಬ ಹೆಸರು ಇಡಲಾಗಿದೆ. ಸುಸಜ್ಜಿತ ಬಸ್‌ಗಳಲ್ಲಿ ನಾಲ್ಕು ಪ್ರತ್ಯೇಕ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಪ್ರಾಧಿಕಾರದ ನೂತನ 4 ಬಸ್‌ಗಳಿಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಚಾಲನೆ ನೀಡಿದ್ದಾರೆ. ನಿತ್ಯ ಬೆಂಗಳೂರಿಂದ ಮಹದೇಶ್ವರ ಬೆಟ್ಟಕ್ಕೆ ಬಸ್‌ಗಳು ಸಂಚರಿಸಲಿವೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ ಹಿನ್ನಲೆ ಜಿಲ್ಲೆಯಾದ್ಯಂತ ಶಾಲಾ – ಕಾಲೇಜುಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ್ ಕವಲಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದ ಹಿನ್ನೆಲೆ ನಾಳೆ ಕೊಡಗು ಜಿಲ್ಲೆಯ ಅಂಗನವಾಡಿ ಸೇರಿದಂತೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿಯೂ ಧಾರಾಕಾರ ಮಳೆ ಆಗುತ್ತಿದೆ. ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದೆ. ಘಟಪ್ರಭಾ ದಲ್ಲಿ 30 ಸಾವಿರ, ಮಲಪ್ರಭಾದಲ್ಲಿ 13.5 ಸಾವಿರ ಕ್ಯೂಸೆಕ್ ಒಳಹರಿವಿದ್ದು, ದೂಧ್‌ಗಂಗಾ ನದಿಗೆ 9.5 ಸಾವಿರ, ವೇದಗಂಗಾ ನದಿಗೆ 14.5 ಸಾವಿರ ಕ್ಯೂಸೆಕ್ ಒಳಹರಿವಿದೆ ಎಂದು ಡಿಸಿ ನಿತೇಶ್ ಪಾಟೀಲ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕಳೆದ ತಿಂಗಳಷ್ಟೇ ಧರ್ಮಸ್ಥಳ ಬಳಿಯ ನೇತ್ರಾವತಿ ನದಿಯ ಒಡಲು ಬರಿದಾಗಿದ್ದು, ಇಂದು ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. ಭಾರೀ ಮಳೆಗೆ ನೇತ್ರಾವರಿ ಧುಮ್ಮಿಕ್ಕಿ ಹರಿಯುತ್ತಿದ್ದು, ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟ ಮುಳುಗುವ ಹಂತಕ್ಕೆ ತಲುಪಿದೆ. ಇತ್ತ ನೇತ್ರಾವತಿ ನದಿ ತೀರಕ್ಕೆ ತೆರಳದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆ ದನದ ಕೊಟ್ಟಿಗೆ ಗೋಡೆ ಕುಸಿದು ಬಿದ್ದ ಪರಿಣಾಮ ಒಂದು ಎಮ್ಮೆ ಸಾವನ್ನಪ್ಪಿದೆ. ಜಿಲ್ಲೆಯ ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಸಿದ್ದಪ್ಪ ನಾಯ್ಕ ಎಂಬುವವರಿಗೆ ಎಮ್ಮೆ ಸೇರಿದೆ.
ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಯಡೂರು ಗ್ರಾಮದ ಬಳಿ ಕೃಷ್ಣಾ ನದಿಗೆ 1 ಲಕ್ಷ ಕ್ಯೂಸೆಕ್‌ಗೂ ಹೆಚ್ಚು ಒಳಹರಿವು ಉಂಟಾಗಿದೆ. ಹಾಗಾಗಿ ಯಡೂರು ಗ್ರಾಮದಿಂದ ಕಲ್ಲೋಳ ಗ್ರಾಮದವರೆಗೆ ಬೋಟ್‌ನಲ್ಲಿ ತೆರಳಿದ ಡಿಸಿ ನಿತೇಶ್ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡದಿಂದ ವೀಕ್ಷಣೆ ಮಾಡಿದ್ದಾರೆ.
ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಲೋಂಡಾ ಬಳಿ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿತವಾಗಿದೆ. ಸೇತುವೆ ಬಳಿ ರಸ್ತೆಯುದ್ದಕ್ಕೂ ಮಣ್ಣು ಕುಸಿಯುತ್ತಿದ್ದು, ರಸ್ತೆ ಮಧ್ಯೆ ಬಿರುಕು ಉಂಟಾಗಿದೆ.
ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಇದು ಹೈಕಮಾಂಡ್ಗೆ ಬಿಟ್ಟ ವಿಚಾರ, ನಾನು ಭೇಟಿಯಾಗಿ ಮಾತಾಡುತ್ತೇನೆ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಸಮುದಾಯದ ಒಳಪಂಗಡಗಳು ಸೇರಿಕೊಂಡು ಒತ್ತಾಯ ಮಾಡಿದ್ದೇವೆ. ಪ್ರತ್ಯೇಕ ಧರ್ಮದ ಮಾತೇ ಇಲ್ಲ, ಎಲ್ಲರೂ ಒಟ್ಟಾಗಿಯೇ ಇರುತ್ತೇವೆ. ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಳ ಮಾಡಿದ್ದೇವೆ. ಇದರಿಂದ ರೈತರಿಗೆ ಉಪಯೋಗವಾಗುತ್ತದೆ ಎಂದು ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಮಳೆ ಅವಾಂತರದಿಂದಾಗಿ ಶೃಂಗೇರಿ ದೇಗುಲ ಬಳಿಯ ಗಾಂಧಿ ಮೈದಾನ ಸಂಪೂರ್ಣ ಜಲಾವೃತವಾಗಿದೆ. ಅದೇ ರೀತಿಯಾಗಿ ಪ್ಯಾರ್ಲರ್ ರಸ್ತೆ, ಕರುಬಕೇರಿ ರಸ್ತೆಯೂ ಮುಳುಗಡೆಯಾಗಿದ್ದು, ಅಂಗಡಿಗಳಿಗೆ ನದಿ ನೀರು ನುಗ್ಗಿವೆ.
ರಸ್ತೆ ಕುಸಿತವಾದ ಸ್ಥಳಕ್ಕೆ ಸಚಿವ ಕೆ.ಜೆ ಜಾರ್ಜ್ ಭೇಟಿ ನೀಡಿ ಮಳೆಯಿಂದ ಹಾನಿಯಾದ ರಸ್ತೆ ವೀಕ್ಷಣೆ ಮಾಡಿದ್ದಾರೆ. ಶೃಂಗೇರಿ, ಕಳಸ, ಕೊಪ್ಪ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮಂಗಳೂರು: ಭಾರೀ ಮಳೆಗೆ ಮುಳುಗಿದ ಸೇತುವೆಯಲ್ಲಿ ಪಿಕಪ್ ವಾಹನ ಸಿಲುಕಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲದಲ್ಲಿ ಘಟನೆ ಕಂಡುಬಂದಿದೆ. ಕೆದಿಲ ಕಾಂತುಕೋಡಿ ಮುಳುಗು ಸೇತುವೆಯಲ್ಲಿ ಪಿಕಪ್ ವಾಹನ ಸಿಲುಕಿಕೊಂಡಿದ್ದು, ಸ್ಥಳೀಯರಿಂದ ವಾಹನದಲ್ಲಿದ್ದವರ ರಕ್ಷಣೆ ಮಾಡಲಾಗಿದೆ.
ಉಡುಪಿ: ಜಿಲ್ಲೆಯ ಕಾರ್ಕಳ, ಬೈಂದೂರು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಇಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದೊಂದು ಗಂಟೆಯಿಂದ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ.
ಧಾರವಾಡ ಹೊರವಲಯದ ಹಳಿಯಾಳ ರಸ್ತೆಯಲ್ಲಿ ಬೃಹತ್ ಮರ ಉರುಳಿ ಬಿದ್ದಿದ್ದು ಧಾರವಾಡ-ಹಳಿಯಾಳ ಸಂಪರ್ಕ ಕಡಿತಗೊಂಡಿದೆ. ಸಲಕಿನಕೊಪ್ಪ-ಬಾಡ ಗ್ರಾಮದ ಮಧ್ಯದಲ್ಲಿ ಮರ ಬಿದ್ದಿದೆ. ರಸ್ತೆ ಸಂಪರ್ಕ ಬಂದ್ ಹಿನ್ನೆಲೆ ಎರಡೂ ಕಡೆಯ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಅನಂತಕುಮಾರ್ ಹಾದಿಯಲ್ಲಿ ಹೋಗುತ್ತಿದ್ದೇನೆ. ಯಾವುದೇ ಆಕಾಂಕ್ಷೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿಲ್ಲ. ಹಿಂದೆಯೂ ನಾನು ಟಿಕೆಟ್ ಕೇಳಿಲ್ಲ, ಈಗಲೂ ಕೇಳುವುದಿಲ್ಲ. ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ, ಟಿಕೆಟ್ ಕೊಟ್ಟರೆ ನೋಡೋಣ. ಎಲ್ಲದಕ್ಕೂ ಸಮಯ ಉತ್ತರ ಕೊಡುತ್ತೆ. ಪ್ರಧಾನಮಂತ್ರಿ ಮೋದಿ ಭೇಟಿ ಸೌಹಾರ್ದಯುತವಾದದ್ದು. ಚುನಾವಣಾ ಪ್ರಚಾರದ ವೇಳೆ ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು. ಹೀಗಾಗಿ ಪ್ರಧಾನಿ ಮೋದಿ ಭೇಟಿಯಾಗಿದ್ದೆ ಎಂದರು.
‘ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ’ ಎಂಬ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಸಚಿವ ಆರ್.ಬಿ.ತಿಮ್ಮಾಪುರ ತಿರುಗೇಟು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ 136 ಶಾಸಕರ ಬೆಂಬಲ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕಮಾಂಡ್ ಬೆಂಬಲವೂ ಇದೆ. ಹೀಗಾಗಿ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಹೆಚ್ಚು ಬೆಲೆ ಇಲ್ಲ. ಬಿ.ಕೆ.ಹರಿಪ್ರಸಾದ್ ಯಾವ ದೃಷ್ಟಿ ಇಟ್ಟುಕೊಂಡು ಹೇಳಿದ್ದಾರೆ ಗೊತ್ತಿಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಬಿ.ಕೆ.ಹರಿಪ್ರಸಾದ್ ಹೇಳಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಲ್ಲ ಎಂದು ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯದ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ತುಂಗಾ ಜಲಾಶಯದ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ತುಂಗಾ ಡ್ಯಾಂನ 21 ಗೇಟ್ಗಳ ಮೂಲಕ 35,868 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ ಜಲಾವೃತಗೊಂಡಿದೆ.
ಸಿದ್ದರಾಮಯ್ಯ ವಿರುದ್ದ ಬಿಕೆ ಹರಿಪ್ರಸಾದ್ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿ ಬಿಕೆ ಹರಿಪ್ರಸಾದ್ ವಿರುದ್ದ ಹಿಂದುಳಿದ ವರ್ಗಗಳ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಬಿಕೆ ಹರಿಪ್ರಸಾದ್ಗೆ ಸಿದ್ದರಾಮಯ್ಯ ವಿರುದ್ದ ಮಾತನಾಡುವ ಅರ್ಹತೆ ಇಲ್ಲ. ಹರಿಪ್ರಸಾದ್ ರಿಂದ ಕಾಂಗ್ರೆಸ್ ಗೆ ಏನೂ ಕೊಡುಗೆ ಸಿಕ್ಕಿಲ್ಲ. ಕೇವಲ 50 ವರ್ಷಗಳಿಂದ ಹರಿಪ್ರಸಾದ್ ಮಾತ್ರ ಅಧಿಕಾರ ಅನುಭವಿಸುತ್ತ ಬಂದಿದ್ದಾರೆ. ಹಿಂದುಳಿದ ವರ್ಗಗಳ ಹಲವು ನಾಯಕರ ಬೆಳವಣಿಗೆಗೆ ಹರಿಪ್ರಸಾದ್ ಅಡ್ಡಿಯಾಗಿದ್ದಾರೆ. ಹರಿಪ್ರಸಾದ್ ಅಧಿಕಾರ ಅನುಭವಿಸಿದ್ದಾರೆ ಹೊರತು ಕಾಂಗ್ರೆಸ್ಗೆ ಏನು ಕೊಡುಗೆ ನೀಡಿದ್ದಾರೆ? ಸಿದ್ದರಾಮಯ್ಯ ವಿರುದ್ದ ಮಾತನಾಡುತ್ತಿರುವ ಹರಿಪ್ರಸಾದ್ ರನ್ನು ಕಾಂಗ್ರೆಸ್ ನಿಂದಲೇ ಹೊರ ಹಾಕಬೇಕು ಎಂದು ಅಖಿಲ ಭಾರತ ಹ್ಯಾಂಡಲೂಂ ಬೋರ್ಡ್ ಸದಸ್ಯ ಎಲ್ ಆರ್ ಅನಂತ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಮೈಸೂರಿನಲ್ಲಿ ಮಹಿಳೆಯರು ವಿಶೇಷ ಪ್ರಯೋಗ ಮಾಡಿದ್ದಾರೆ. ಮಹಿಳೆಯರು ಸೇರಿಕೊಂಡು ಕುರುಕ್ಷೇತ್ರ ನಾಟಕ ಪ್ರದರ್ಶಿಸಿದ್ದಾರೆ. ಚಿತ್ರನಟಿ ಅಮೃತ ಅಯ್ಯಂಗಾರ್ ಅಶ್ವತ್ಥಾಮನ ತಾಯಿ ಪಾತ್ರದಲ್ಲಿ ನಟಿಸಿದರೆ. ಹಿನ್ನೆಲೆ ಗಾಯಕಿ ಅನನ್ಯ ಭಟ್ ಕರ್ಣನ ತಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ. ನಗರದ ಕಲಾಮಂದಿರದಲ್ಲಿ ಕುರುಕ್ಷೇತ್ರ ನಾಟಕ ನಡೆಯುತ್ತಿದ್ದು ತೇಜಸ್ವಿನಿ ಅನಂತ್ ಕುಮಾರ್ ನಾಟಕ ಉದ್ಘಾಟಿಸಿದರು. ನಾಟಕ ವೀಕ್ಷಣೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕಂಬಾರಗಣವಿ ಸೇತುವೆಗೆ ಸಚಿವ ಸಂತೋಷ್ ಲಾಡ್ ಭೇಟಿ ನೀಡಿದ್ದಾರೆ. ಸೇತುವೆ ಪರಿಶೀಲನೆ ಬಳಿಕ ಮಾತನಾಡಿದ ಅವರು, ಸೇತುವೆ ಸಮಸ್ಯೆ ನಿವಾರಣೆಗೆ 1.5 ಕೋಟಿ ರೂ. ಬಿಡುಗಡೆಯಾಗಿದೆ. ಮಳೆ ಕಡಿಮೆಯಾದ ಕೂಡಲೇ ಸೇತುವೆ ಕಾರ್ಯ ಆರಂಭವಾಗುತ್ತೆ. ಹಲವು ಕಡೆ ರಸ್ತೆ ಸಮಸ್ಯೆ ಇದೆ ಅರಣ್ಯದ ಕ್ಲಿಯರೆನ್ಸ್ ಸಿಗ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಜೊತೆ ಸಭೆ ಮಾಡಿ ಇತ್ಯರ್ಥ ಮಾಡ್ತೇವೆ. ಅಧಿಕಾರಿಗಳಿಗೆ ಮಳೆ ಕಾಮಗಾರಿ ಬಗ್ಗೆ ಹೇಳಿದ್ದೇನೆ. ಮಳೆಯಿಂದ ಮನೆ ಬಿದ್ದವರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ. ಮಳೆ ಕಡಿಮೆ ಆದ ತಕ್ಷಣ ಅಂಗನವಾಡಿ ಸೇರಿ ಎಲ್ಲ ಶಾಲೆಗಳ ದುರಸ್ತಿ ಕಾರ್ಯ ಮಾಡಲಾಗುತ್ತೆ. ಈಗಾಗಲೇ ಈ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಗ್ರಾಮದ ಬಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ. ಗುಬ್ಬಿ ತಾಲೂಕಿನ ಆಡುಗೊಂಡನಹಳ್ಳಿ ನಿವಾಸಿಗಳಾದ ಹರೀಶ್(31), ಯೋಗೀಶ್(36) ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಕೆರೆಯಲ್ಲಿ ಗುಬ್ಬಿ ಠಾಣೆಯ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಗ್ರಾಮದ ನೂರಾರು ಜನರು ಕೆರೆಯ ಬಳಿ ಜಮಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ ಧರ್ಮಸ್ಥಳದ ನೇತ್ರಾವತಿ ನದಿ ಭೋರ್ಗರೆದು ಹರಿಯುತ್ತಿದೆ. ಅಪಾಯದ ಹಿನ್ನಲೆ ನದಿಗಿಳಿಯದಂತೆ ಭಕ್ತರಿಗೆ ಎಚ್ಚರಿಕೆ ನೀಡಲಾಗಿದೆ. ಆದ್ರೆ ಯಾತ್ರಿಗಳು ಎಚ್ಚರಿಕೆಯನ್ನೂ ಲೆಕ್ಕಿಸದೆ ನದಿಗಿಳಿಯುತ್ತಿದ್ದಾರೆ. ನದಿ ನೀರಿನ ಮಟ್ಟ ಏರಿಕೆ ಹಿನ್ನಲೆ ನೇತ್ರಾವತಿ ಸ್ನಾನ ಘಟ್ಟ ಮುಳುಗಡೆಯ ಭೀತಿ ಎದುರಾಗಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಭೂಕುಸಿತ ಉಂಟಾಗಿದೆ. ನಿರ್ಮಾಣ ಹಂತದ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುತ್ತಿದೆ. ಹೆದ್ದಾರಿ ಅಕ್ಕಪಕ್ಕದ ಪ್ರದೇಶದಲ್ಲಿ ಭೂಕುಸಿತದಿಂದ ಆತಂಕ ಹೆಚ್ಚಿದೆ. ದೋಣಿಗಲ್ ಸಮೀಪದ ದರ್ಗಾಬಳಿ ರಸ್ತೆ ಕುಸಿಯುತ್ತಿದೆ. ಮತ್ತಷ್ಟು ಮಳೆ ಹೆಚ್ಚಾದರೆ ರಸ್ತೆ ಸಂಚಾರ ಬಂದ್ ಆಗುವ ಆತಂಕವಿದೆ.
ಗ್ರಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪರಾಜಯ ಹಿನ್ನೆಲೆ ಚಪ್ಪಲಿಯಿಂದ ಹೊಡೆದು ಸದಸ್ಯನ ಮೇಲೆ ಸದಸ್ಯೆ ಹಲ್ಲೆ ಮಾಡಿದ ಘಟನೆ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾ.ಪಂ.ಕಚೇರಿಯಲ್ಲಿ ನಡೆದಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಗ್ರಾ.ಪಂ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸೋತ ಹತಾಶೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಶರ್ಟ್ ಹರಿದು ಸದಸ್ಯೆ ಜಿ.ಎನ್.ಸುಧಾ ಅವರು ಹಲ್ಲೆ ನಡೆಸಿದ್ದಾರೆ. ನನಗೆ ಮತ ಹಾಕಿಲ್ಲ, ಹಾಗಾಗಿ ನಾನು ಸೋತಿದ್ದೇನೆ ಎಂದು ಗ್ರಾ.ಪಂ. ಕಚೇರಿಗೆ ನುಗ್ಗಿ ಸದಸ್ಯ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಸುಧಾ ವಿರುದ್ಧ ಸ್ಪರ್ಧಿಸಿದ್ದ ಛಾಯಾಮಣಿ ಅಧ್ಯಕ್ಷೆಯಾಗಿ ಆಯ್ಕೆ ಆಗಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆ ಮಳೆ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ನೀಡಿದ್ದಾರೆ. ಅಳ್ನಾವರ ತಾಲೂಕಿನ ಭಾಗದಲ್ಲಿ ಹೆಚ್ಚಿನ ಹಾನಿ ಆಗಿದ್ದು ತಾಲೂಕಿನಲ್ಲಿ ಸಂಚಾರ ನಡೆಸಿದ್ದಾರೆ. ಕಂಬಾರಗಣವಿ ಹಳ್ಳದ ಸೇತುವೆ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನೆಲ್ಲೀಬಿಡು ಸೇತುವೆ ಮುಳುಗಡೆಯಾಗಿದೆ. ಕಳಸದಿಂದ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಬಂದ್ ಆಗಿದೆ. ಕಳಸ ದಿಂದ ಕುದುರೆಮುಖ ಮಾರ್ಗವಾಗಿ ಉಡುಪಿ ಜಿಲ್ಲೆಗೆ ಸಂಪರ್ಕಿಸುವ ಸೇತುವೆ ಬಂದ್ ಆಗಿದೆ. ಹೀಗಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರವಾಹದ ಮಟ್ಟ ಮೀರಿ ಜಾಂಬಳೆ ಹೊಳೆ ಹರಿಯುತ್ತಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಬೆಳಗಾವಿ ಜಿಲ್ಲೆ ಖಾನಾಪುರದ ಕಣಕುಂಬಿಯಲ್ಲಿ ದಾಖಲೆ ಮಳೆಯಾಗಿದೆ. ನಿತ್ಯ 200-235 ಮಿಲಿ ಮೀಟರ್ ಮಳೆ ಪ್ರಮಾಣ ದಾಖಲಾಗಿದೆ. ಕಳಸಾ ಮತ್ತು ಬಂಡೂರಿ ನಾಲಾ ತುಂಬಿ ಹರಿಯುತ್ತಿದೆ. ಕಳಸಾ ನಾಲಾ ಕಾಮಗಾರಿ ಅಪೂರ್ಣ ಹಿನ್ನೆಲೆಯಲ್ಲಿ ರಾಜ್ಯದ ಮಲಪ್ರಭಾ ನದಿ ಸೇರಬೇಕಿದ್ದ ಅಪಾರ ನೀರು ವ್ಯರ್ಥವಾಗಿದೆ. ನದಿ ಸೇರಬೇಕಿದ್ದ ನೀರು ಗೋವಾ ಮೂಲಕ ಸಮುದ್ರ ಸೇರಿ ವ್ಯರ್ಥವಾಗಿದೆ. ಅಪೂರ್ಣಗೊಂಡ ಕಾಮಗಾರಿ ಜಾಗದಲ್ಲೇ ನೀರು ಧುಮ್ಮಿಕ್ಕುತ್ತಿದೆ.
ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಘಟ್ಟ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು ನದಿ ಬದಿಗೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆ ನೀಡಲಾಗಿದೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರು ಕುಟುಂಬ ಸಮೇತ ಮಲೇಷಿಯಾ ಪ್ರವಾಸಕ್ಕೆ ತೆರಳಿದ್ದಾರೆ. 1 ವಾರ ಮಲೇಷಿಯಾದಲ್ಲಿ ಪ್ರವಾಸ ಮಾಡಲಿದ್ದಾರೆ.
ಕಲಬುರಗಿ ನಗರದ ದುಬೈ ಕಾಲೋನಿಯಲ್ಲಿ ಮಳೆನೀರು ತುಂಬಿದ್ದ ತಗ್ಗುಗುಂಡಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ತೆಗೆದಿದ್ದ ತಗ್ಗುಗುಂಡಿಗೆ ಬಿದ್ದು ಅಭಿ(11), ಅಜಯ್(12) ಸಾವನ್ನಪ್ಪಿದ್ದಾರೆ. ಮಳೆ ನೀರಿನಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಚೌಕ್ ಪೊಲೀಸರು ಭೇಟಿ ನೀಡಿ ಓರ್ವ ಬಾಲಕನ ಶವ ಪತ್ತೆ ಹಚ್ಚಿದ್ದಾರೆ. ಮತ್ತೊಬ್ಬ ಬಾಲಕನ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ವಾರ್. ತಾವು ‘ಸತ್ಯರಾಮಯ್ಯ’ನವರೇ ಆಗಿದ್ದರೆ, ಸ್ವತಃ ತಾವುಗಳೇ ನೇಮಿಸಿದ್ದ, ತಮ್ಮದೇ ಸರ್ಕಾರದ ಕಾನೂನು ಸಚಿವರೇ ಮುಖ್ಯಸ್ಥರಾಗಿದ್ದ ಸದನ ಸಮಿತಿ ನೀಡಿದ್ದ ನೈಸ್ ಕರ್ಮಕಥೆಯನ್ನು ದಯಮಾಡಿ ಓದಿ. ನೈಸ್ ಅಕ್ರಮ ತನಿಖೆಗೆ ನಾನೇನು ಮಾಡಿದ್ದೆ ಎಂದು ಸಿಎಂ ಕೇಳಿದ್ದಾರೆ. ಈ ಬಾಲಿಶ ಪ್ರಶ್ನೆಗೆ ಗೌರವದಿಂದಲೇ ಉತ್ತರಿಸುವೆ. ನಾನು ಸಿಎಂ ಆಗಿದ್ದಾಗ ನನ್ನ ಜತೆಗಿದ್ದ ಅಡ್ವೋಕೇಟ್ ಜನರಲ್, ಅವರ ಕಾನೂನು ತಂಡ ನೈಸ್ ದೌಲತ್ತಿನ ಹುಟ್ಟಡಗಿಸಿತ್ತು. ಅಧಿಕಾರಿಗಳನ್ನು ಬೆದರಿಸಿದ್ದ ಆ ಕಂಪನಿಗೆ ಬೊಂಬೆ ತೋರಿಸಿದ್ದೆವು ಎಂದು ಟ್ವೀಟ್ ಮೂಲಕ ಸಿಎಂ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ನೈಸ್ ಯೋಜನೆಗೆ ನ್ಯಾಯ ಕೊಡಿ; ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ವಾರ್#Siddaramaiah #HDKumaraswamy #niceroad #niceproject https://t.co/YyFcHTkEQr
— TV9 Kannada (@tv9kannada) July 23, 2023
ವಿದ್ಯುತ್ ಪ್ರವಹಿಸಿ ಕರ್ತವ್ಯನಿರತ ಚೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿದ ಘಟನೆ ಮೈಸೂರು(Mysore) ನಗರದ ಹೂಟಗಳ್ಳಿ ಬಡಾವಣೆಯಲ್ಲಿ ನಡೆದಿದೆ. ಸಹಾಯಕ ಲೈನ್‌ಮ್ಯಾನ್ ಸಂತೋಷ್(26) ಮೃತ ರ್ದುದೈವಿ. ಟ್ರಾನ್ಸ್ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಹರಿದು ಈ ಅವಘಡ ನಡೆದಿದೆ.
ದಿನಸಿ, ತರಕಾರ, ಹಾಲಿನ ದರ ಏರಿಕೆ ನಿರ್ಧಾರದ ಬೆನ್ನಲ್ಲೇ ಹೋಟೆಲ್ ಫುಡ್ ಗಳ ದರವನ್ನ ಏರಿಕೆ ಮಾಡಲು ಹೋಟೆಲ್ ಮಾಲೀಕರು ಸಜ್ಜಾಗಿದ್ದಾರೆ. ಸಧ್ಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಹೋಟೆಲ್ ತಿಂಡಿಗಳ ಬೆಲೆಯನ್ನ ಶೇಕಡಾ 10 ರಷ್ಟು ದರ ಏರಿಕೆ ಮಾಡಲು ಹೊಟೇಲ್ ಮಾಲೀಕರ ಅಸೋಸಿಯೇಷನ್ ನಿರ್ಧರಿಸಿದ್ದು, ಕಾಫಿ- ಟೀ 3. ರೂ ಹಾಗೂ ತಿಂಡಿ ತಿನಿಸುಗಳ ದರ 5 ಹಾಗೂ ಊಟದ ದರ 10 ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದಾರೆ.
ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಆಗುವ ಸಾಧ್ಯತೆ ಹಿನ್ನೆಲೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಪಾಲ್ಘರ್, ಥಾಣೆ, ರಾಯಗಢ, ರತ್ನಗಿರಿ ಜಿಲ್ಲೆ ಹಾಗೂ ಸಿಂಧುದುರ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಹಾನಿ ಹಿನ್ನೆಲೆ ಮಳೆ ಹಾನಿ ಪ್ರದೇಶಗಳಿಗೆ ಇಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಲಿದ್ದಾರೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ ಮಳೆ ಹಾನಿ ಪರಿಶೀಲನೆ ನಡೆಸಿ ಮನೆ ಹಾನಿ, ಶಿಥಿಲವಾದ ಸೇತುವೆ, ಭೂಕುಸಿತ ಪ್ರದೇಶ ವೀಕ್ಷಿಸಲಿದ್ದಾರೆ. ಕಳೆದ ವರ್ಷ ಹಾನಿಯಾಗಿದ್ದ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
Published On - 8:00 am, Sun, 23 July 23