ಸಿಎಂ ಸಿದ್ದರಾಮಯ್ಯ(Siddaramaiah) ಸಿಎಂ ಆದ ಬಳಿಕ ಮೊದಲ ಬಾರಿ ಮಂಡ್ಯ(Mandya) ಜಿಲ್ಲೆಗೆ ಇಂದು ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಬೆಂಗಳೂರಿಂದ ರಸ್ತೆ ಮಾರ್ಗವಾಗಿ ತೆರಳುವ ಸಿಎಂ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವೀಕ್ಷಿಸಲಿದ್ದಾರೆ(Bengaluru Mysuru Expressway). ಅಪಘಾತ ಹೆಚ್ಚಾದ ಹಿನ್ನೆಲೆ 360 ಡಿಗ್ರಿ ಕ್ಯಾಮರಾ ವೀಕ್ಷಿಸಲಿದ್ದಾರೆ. ಬಳಿಕ ಮೈಸೂರಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಇಂದು ಬಿಜೆಪಿ ಹಾಗೂ ಕೆಲ ಸಂಘಟನೆಗಳು ರಾಜ್ಯದ ಅನೇಕ ಕಡೆ ಪ್ರತಿಭಟನೆ ಹಮ್ಮಿಕೊಂಡಿವೆ. ಮಣಿಪುರದ(manipur Violence) ಕೃತ್ಯ ವಿರೋಧಿಸಿ ಪ್ರತಿಭಟನೆ ನಡೆಸಲಿವೆ. ಬೆಂಗಳೂರು ನಗರದಲ್ಲಿ ಇಂದು ಮೊಹರಂ(Muharram) ಹಬ್ಬ ಆಚರಣೆ ಹಿನ್ನೆಲೆ ಮಧ್ಯಾಹ್ನ 1ರಿಂದ ಸಂಜೆ 4.30ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಬ್ರಿಗೇಡ್ ರಸ್ತೆಯ ಮೂಲಕ ಹೊಸೂರು ರಸ್ತೆಯ ಕಡೆಗೆ ವೆಲ್ಲಾರಾ ಜಂಕ್ಷನ್ ಮುಖಾಂತರ ತೆರಳುವ ವಾಹನ ಸವಾರರು ರಸ್ತೆ ಬದಲಾಯಿಸಿಕೊಳ್ಳಬೇಕಿದೆ. ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು ಅನೇಕ ಕಡೆ ಭರ್ಜರಿ ಮಳೆಯಾಗುತ್ತಿದೆ. ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಯಾದಗಿರಿ: ಉಡುಪಿ ಹಿಂದು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ ಸಂಬಂಧ ವಿಡಿಯೋ ಇದ್ದರೆ ತೋರಿಸಿ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದರು. ಇವರ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ MLC ಎನ್.ರವಿಕುಮಾರ್, ಪ್ರಿಯಾಂಕಾ ಖರ್ಗೆ ಅವರು ಬಹಳ ಬುದ್ದಿವಂತರು. ಅವರಿಗೆ ಪ್ರೂಫ್ ಏನ್ ಇದೆ ಅಂತ ನಾನು ಹೇಳುತ್ತೇನೆ. ಕಳೆದ ಒಂದು ವರ್ಷದಿಂದ ನಡೀತಾಯಿದೆ ಅಂತ ವಿದ್ಯಾರ್ಥಿನಿಯರು ಹೇಳಿದ್ದಾರೆ. ಹೌದು ನಾವು ರೆಕಾರ್ಡ್ ಮಾಡುತ್ತಾ ಇದ್ದೆವು ವಿದ್ಯಾರ್ಥಿನಿಯರು ಪತ್ರ ಬರೆದಿದ್ದಾರೆ. ತಪ್ಪಾಗಿದೆ ಅಂತ ವಿದ್ಯಾರ್ಥಿಗಳು ಕಾಲೇಜ್ ಮ್ಯಾನೆಜ್ಮೆಂಟಟ್ಗೆ ಪತ್ರ ಬರೆದಿದ್ದಾರೆ. ಇದಕ್ಕಿಂತ ದೊಡ್ಡ ಪ್ರೂಫ್ ಬೇಕಾ ಎಂದು ಪ್ರಶ್ನಿಸಿದರು. ಅದೇ ಹಿಂದೂ ವಿದ್ಯಾರ್ಥಿನಿಯರು ಮೂರು ಜನ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಿಡಿಯೋ ಮಾಡಿದರೆ ನೀವು ಏನ್ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇಷ್ಟೊಂದು ತುಷ್ಠೀಕರಣ, ಓಲೈಕೆ, ಮತ ಬ್ಯಾಂಕ್ ರಾಜಕಾರಣ ಮಾಡೋದಾ? ಮಹಿಳೆಯರ ಸುರಕ್ಷತೆ ಬಲಿ ಕೊಟ್ಟು ರಾಜಕಾರಣ ಮಾಡೋದಾದರೆ ನಿಮ್ಮ ರಾಜಕಾರಣ ರಾಜ್ಯಕ್ಕೆ ಅವಶ್ಯಕತೆಯಿಲ್ಲ ಎಂದರು.
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವ ಡಾ.ಕೆ.ಸುಧಾಕರ್ ಬೆಂಬಲಿಗರ ನಡುವೆ ಜಟಾಪಟಿ ನಡೆಯುತ್ತಿದೆ. ನಿನ್ನೆ ನಡೆದ ಪ್ರತಿಭಟನೆ ವೇಳೆ ಪ್ರದೀಪ್ ಈಶ್ವರ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಬಲಿಗರು ಇಂದು ಸುಧಾಕರ್ ಬೆಂಬಲಿಗರಾದ ಮುನಿರಾಜು, ರಾಘವೇಂದ್ರ ಸೇರಿ ಹಲವರ ವಿರುದ್ಧ ದೂರು ನೀಡಿದ್ದಾರೆ. ಅದರಂತೆ ಗ್ರಾಮಾಂತರ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 143, 504, 505(1), (ಸಿ), 149 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗದಗ: ಮತದಾರರಿಗೆ ಉಚಿತ ಗ್ಯಾರಂಟಿ ಆಮಿಷ ಒಡ್ಡಿದ ಪ್ರಕರಣ ಸಂಬಂಧ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಹೆಚ್ಕೆ ಪಾಟೀಲ್, ಸಿದ್ದರಾಮಯ್ಯ ಅವರಿಗೆ ನೋಟಿಸ್ ಕೊಟ್ಟಿಲ್ಲ. ಗ್ಯಾರೆಂಟಿ, ವಚನ, ಮಾತುಕೋಡುವುದು ಚುನಾವಣೆಯಲ್ಲಿ ವಿಶೇಷವಾದದ್ದು. ಪ್ರಸ್ತುತ ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನ ಮೇಲೆ, ಹಣ ಪೋಲು ಮಾಡುವುದರ ಬಗ್ಗೆ ಗಂಭೀರವಾದ ಆಲೋಚನೆ ಮಾಡಬೇಕು. ಅವುಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಬೆಂಗಳೂರು: 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಹೇಳಿದರು. ಗ್ರಾಮ ಪಂಚಾಯತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಮೂರು ಕ್ಷೇತ್ರಗಳ ಬಿಜೆಪಿ ಮುಖಂಡರಿಗೆ ಸಿದ್ಧತೆ ಬಗ್ಗೆ ಈಗಾಗಲೇ ಬಿಜೆಪಿ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು: ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಚಾರವಾಗಿ ಮಾಧ್ಯಮದವರು ಪ್ರಶ್ನಿಸಿದಾಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಈ ಹಿಂದೆ ಇವರು ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಹೈಕಮಾಂಡ್ ವೀಕ್ಷಕನಾಗಿ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದರು. ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳ ಚುನಾವಣಾ ಸಿದ್ಧತೆ ಸಂಬಂಧ ಬೆಂಗಳೂರಿಗೆ ಆಗಮಿಸಿದ್ದ ವಿನೋದ್ ತಾವಡೆ, ರಾಜ್ಯ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಸಿದ್ಧತಾ ಸಭೆ ನಡೆಸಿದರು.
ಚಿಕ್ಕೋಡಿ: ಅರ್ಜಿ ಸಲ್ಲಿಕೆಗೆ ಹಣ ವಸೂಲಿ ಪ್ರಶ್ನಿಸಿದ್ದಕ್ಕೆ ಆವಾಜ್ ಹಾಕಿದ ಪ್ರಕರಣ ಸಂಬಂಧ ಗ್ರಾಮ ಒನ್ ಸಿಬ್ಬಂದಿ ಲಾಗಿನ್ ಐಡಿ ಬ್ಲಾಕ್ ಮಾಡಿ ಕಚೇರಿಯನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ಜಿಲ್ಲಾಡಳಿತದ ನಿರ್ದೇಶನದಂತೆ ಈ ಕ್ರಮ ಕೈಗೊಂಡಿದ್ದಾಗಿ ಅಥಣಿಯಲ್ಲಿ ತಹಶಿಲ್ದಾರ್ ಬಿ.ಎಸ್.ಖಡಕಬಾವಿ ಹೇಳಿದ್ದಾರೆ. ನಿನ್ನೆ ಸಂಜೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂಬ ಮಾಹಿತಿ ಬಂದಿತ್ತು. ಡಿಸಿ ಸೂಚನೆ ಮೇರೆಗೆ ನಾನು, ರೆವಿನ್ಯೂ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಜಿಲ್ಲಾಡಳಿತ ನಿರ್ದೇಶನದಂತೆ ಕ್ರಮ ಕೈಗೊಂಡಿದ್ದೇವೆ. ಅಥಣಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತಿದೆ ಎಂದರು.
ವಿಜಯಪುರ ಜಿಲ್ಲೆಯಲ್ಲಿ ಮೊಹರಂ ಹಬ್ಬ ಆಚರಿಸಲಾಗುತ್ತಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಇಂದು ನಸುಕಿನ ಜಾವ ಗ್ರಾಮದ ಅಲಾಯಿ ದೇವರ ಎದುರುಗೆ ಹಾಕಿದ ಕೆಂಡದ ಮೇಲೆ ಯಲ್ಲಾಲಿಂಗ ಹಿರೇಹಾಳ ಎಂಬ ವ್ಯಕ್ತಿ ಕಂಬಳಿ ಹಾಸಿ ಕುಳಿತಿದ್ದಾರೆ. ಕೆಲ ಕ್ಷಣ ಕೆಂಡದ ಮೇಲೆ ಕಂಬಳಿ ಹಾಸಿ ಕುಳಿತು ಭಕ್ತಿ ಸಮರ್ಪನೆ ಮಾಡಿದ್ದಾರೆ. ಬಳಿಕ ಬರಿಗೈಯ್ಯಲ್ಲಿ ಕೆಂಡ ತುಂಬಿ ಕೆಂಡದಾರತಿ ಮಾಡಿದ್ದಾರೆ. ಯಲ್ಲಾಲಿಂಗನ ಭಕ್ತಿ ಪಾರಾಕಾಷ್ಟೆಗೆ ಗ್ರಾಮದ ಜನರು ಆಶ್ಚರ್ಯ ವ್ಯಕ್ತಪಡಿಸಿದರು. ಬೆಂಕಿ ಮೇಲೆ ಕುಳಿತರೂ ಕೈಯ್ಯಿಂದ ಬೆಂಕಿ ತುಂಬಿದರೂ ಯಲ್ಲಾಲಿಂಗನಿಗೆ ಯಾವುದೇ ಸುಟ್ಟ ಗಾಯವಾಗಿಲ್ಲ. ಇದು ಅಲಾಯಿ ದೇವರ ಪವಾಡವೆಂದು ಜನರ ನಂಬಿಕೆ.
ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭಾಗಿಯಾಗಿದ್ದಾರೆ. ಹಾಗಾಗಿ ಈ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಪೊಲೀಸರು ಮೊಬೈಲ್ ವಶಪಡಿಸಿಕೊಳ್ಳುವ ಪ್ರಯತ್ನ ಏಕೆ ಮಾಡಿಲ್ಲ. ಈ ಘಟನೆಯನ್ನು ಖಂಡಿಸಿ ನಮ್ಮ ಕಾರ್ಯಕರ್ತೆ ಟ್ವೀಟ್ ಮಾಡಿದ್ರು. ಆಕೆಯನ್ನು ಉಗ್ರಗಾಮಿಯ ರೀತಿಯಲ್ಲಿ ಕರೆದುಕೊಂಡು ಹೋಗಿದ್ದರು. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ತುಮಕೂರಿನಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಬಿ.ಸಿ.ನಾಗೇಶ್ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಮಣಿಪುರ ಹೊತ್ತಿ ಉರಿಯುತ್ತಿದೆ, ಅದರ ಬಗ್ಗೆ ಯಾರೂ ಮಾತನಾಡ್ತಿಲ್ಲ. ಅಲ್ಲಿ ಮಹಿಳೆಯರ ಮೇಲೆ ರೇಪ್ ಆಗಿದೆ, ಇಲ್ಲಿ ಕ್ಯಾಮರಾ ಅಂತಿದ್ದೀರಾ. ಕಾಂಗ್ರೆಸ್, ಬಿಜೆಪಿಯವರು ನಮ್ಮನ್ನು ತೋರಿಸಿ ವೋಟ್ ಪಡೆದರು. ಎರಡೂ ಪಕ್ಷಗಳು ಜೆಡಿಎಸ್ ಕಡೆ ಬೆರಳು ಮಾಡಿ ವೋಟ್ ಪಡೆದವು. ಭಯೋತ್ಪಾದನೆ ಶುರುವಾಗ್ತಿದೆ ಅನ್ನೋದು ಅವರಿಗೆ ಚುನಾವಣೆ ವಿಷಯ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ JDS ರಾಜ್ಯಾಧ್ಯಕ್ಷ ಇಬ್ರಾಹಿಂ ಕಿಡಿಕಾರಿದರು.
ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದವರ ಮನೆ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಕಲ್ಲುಗುಡ್ಡದಹಳ್ಳಿ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದು ಸ್ಫೋಟಕಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಕಲ್ಲುಗುಡ್ಡದಹಳ್ಳಿಯ ಶಂಕರ್(30), ಕುಮಾರ್(21), ದಾಸೇನಹಳ್ಳಿಯ ಶ್ರೀನಿವಾಸ್(40)ನನ್ನು ಬಂಧಿಸಿದ್ದಾರೆ. ಸಲ್ಫರ್ ಪೌಡರ್, ಪೋಟ್ಯಾಶಿಯಂ ನೈಟ್ರೇಟ್ ಸೇರಿ ಹಲವು ವಸ್ತು ಜಪ್ತಿ ಮಾಡಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರಿ ಇಳಿಕೆಯಾಗಿದೆ. ಮೈಸೂರು ಜಿಲ್ಲೆ H.D.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ನೀರಿನ ಒಳಹರಿವು 3,970 ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಕಬಿನಿ ಜಲಾಶಯದಿಂದ 2,500 ಕ್ಯೂಸೆಕ್ ನೀರು ಹೊರಹರಿವು ಇದೆ. ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 82.87 ಅಡಿ. ಕಬಿನಿ ಡ್ಯಾಂ 19.52 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.
ಬಿಜೆಪಿ ಪತ್ರದಲ್ಲಿ ಹೆಚ್ಡಿ ಕುಮಾರಸ್ವಾಮಿ ಸಹಿ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರತಿಕ್ರಿಯೆ ನೀಡಿದ್ದಾರೆ. ಪರಸ್ಪರವಾಗಿ ವಿರೋಧ ಪಕ್ಷವಾಗಿ ಕೆಲಸ ಮಾಡಿದ್ದಾರೆ ಅಷ್ಟೇ. ಜನತಾದಳ ಮಣ್ಣಿನ ಪಕ್ಷ, ನಾವು ಏನಾದ್ರೂ ಮಾಡಿದ್ರೆ ಹೇಳ್ತೀರಾ. ಮಮತಾ, ನಿತೀಶ್ ಇಬ್ಬರೂ ಬಿಜೆಪಿ ಜೊತೆಗೆ ಹೋಗಿ ಬಂದವರೇ ಎಂದರು.
ಮೈಸೂರು ಜಿಲ್ಲೆಯಲ್ಲಿ 207.2 ಮಿಲಿಮೀಟರ್ ಮಳೆಯಾಗಿದೆ. ಜೂ.1ರಿಂದ ಜು.27ರವರೆಗಿನ ಅವಧಿಯಲ್ಲಿ 165.5 ಮಿ.ಮೀ ಮಳೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 17.61 ಮಿಲಿ ಮೀಟರ್ ಮಳೆ ಕೊರತೆ ಆಗಿದೆ. ಮಾರ್ಚ್‌ನಿಂದ ಇದುವರೆಗೆ ಜಿಲ್ಲೆಯಲ್ಲಿ 378 ಮಿ.ಮೀ ಮಳೆ ಆಗಿದೆ. ಶೇ.7.19ರಷ್ಟು ಮಳೆ ಕೊರತೆ ಆಗಿದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ವೀಕ್ಷಿಸಿದರು. ಹೈವೇಯಲ್ಲಿ ಅಪಘಾತ ತಡೆಗೆ ಹೈವೇಯ ಎರಡು ಕಡೆ ANPR ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಉಮ್ಮಡಿಹಳ್ಳಿ ಬಳಿ ಪ್ರಾಯೋಗಿಕವಾಗಿ ANPR ಕ್ಯಾಮರಾ ಅಳವಡಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಎಎನ್ಪಿಆರ್ ಕ್ಯಾಮರಾ ಪರಿಶೀಲನೆ ಮಾಡಿದರು.
ಸಿದ್ದರಾಮಯ್ಯ ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಒಳ ಮೀಸಲಾತಿ ಜಾರಿಗೊಳಿಸಲು ಸಿದ್ದರಾಮಯ್ಯ ಮುಂದಾಗುತ್ತಿಲ್ಲ. ಚುನಾವಣೆ ಮೊದಲು ಒಳ ಮೀಸಲಾತಿ ಜಾರಿ ಮಾಡ್ತೇವೆ ಅಂದಿದ್ದರು. ಈಗ ಒಳ ಮೀಸಲಾತಿ ಮಾಡಲ್ಲ, ಹಿಂದೆಯೂ ಮಾಡಿಲ್ಲ ಎನ್ನುತ್ತಿದ್ದಾರೆ. ಸಂಸತ್ನಲ್ಲಿ ಚರ್ಚೆ ವೇಳೆ ಒಬ್ಬ ಸಚಿವನಾಗಿ ನಾನು ಉತ್ತರ ಕೊಟ್ಟಿದ್ದೇನೆ. ಆರ್ಟಿಕಲ್ 341 ಏನು ಹೇಳುತ್ತೆ ಅದನ್ನು ಸದನದಲ್ಲಿ ಹೇಳಿದ್ದೇನೆ. ನಿಮಗೆ ನಿಜವಾಗಿ ಬದ್ಧತೆ, ಎದೆಗಾರಿಕೆ ಇದ್ದರೆ ವಿಶೇಷ ಅಧಿವೇಶನ ಕರೆಯಿರಿ. ವಿಶೇಷ ಅಧಿವೇಶನ ಕರೆದು ಒಳ ಮೀಸಲಾತಿ ಬಗ್ಗೆ ನಿರ್ಣಯ ಮಾಡಿ. I.N.D.I.A ಸದಸ್ಯರು ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗದ ನಾಯಕರಾಗಿ ಅವರ ಜೊತೆ ನೀವು ಚರ್ಚೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ನಡೆಸುವ ವಿಚಾರಕ್ಕೆ ಸಂಬಂಧಿಸಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿ ಅದ್ಧೂರಿಯಾಗಿ ದಸರಾ ಮಹೋತ್ಸವ ಆಚರಿಸಲು ಚಿಂತನೆ ನಡೆದಿದೆ. ಈ ಹಿಂದೆ ಕೊವಿಡ್ನಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ರಾಜ್ಯ ಸುಭಿಕ್ಷವಾಗಿದೆ, ಹೊಸ ಸರ್ಕಾರ ಬಂದಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಮೈಸೂರು ಸಂಸ್ಕೃತಿ, ರಾಜಪರಂಪರೆ ಉಳಿಸಿಕೊಂಡು ದಸರಾ ಆಚರಣೆ ಮಾಡಲಾಗುತ್ತೆ. ದಸರಾ ಉನ್ನತಮಟ್ಟ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಯಾದ್ಯಂತ ಮಳೆ ಹಿನ್ನಲೆ ಗ್ರಾಮದಲ್ಲಿ ಮಳೆ ನೀರು ಆವರಿಸಿಕೊಂಡಿದೆ. ವಡಗೇರ ತಾಲೂಕಿನ ಬಿರನಾಳ ಗ್ರಾಮದಲ್ಲಿ ತಗ್ಗು ಪ್ರದೇಶದ ಬಡವಾಣೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನಿಂತರು ಮಳೆ ನೀರು ಮಾತ್ರ ಇದ್ದಲೇ ಇದೆ. ಇದರಿಂದ ಗ್ರಾಮಸ್ಥರು ಓಡಾಡೋಕೆ ಕಷ್ಟಪಡುವಂತಾಗಿದೆ. ಕಳೆದ ಮೂರು ದಿನಗಳಿಂದ ಮಳೆ ನೀರು ನಿಂತಿದೆ.
ತುಮಕೂರಿನ ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕಿ ಶಕುಂತಲಾ ನಟರಾಜ್ ಬಂಧಿಸಿ ಬಿಡುಗಡೆ ಹಿನ್ನೆಲೆ ತುಮಕೂರಿನಲ್ಲಿ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಘಟಕ ಪ್ರತಿಭಟನೆ ಹಮ್ಮಿಕೊಂಡಿದೆ. ತುಮಕೂರಿನ ಡಿಸಿ ಕಚೇರಿ ಬಳಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಘೋಷಣೆ ಕೂಗಲಾಗುತ್ತಿದೆ. ಗೃಹ ಮಂತ್ರಿ ಪರಮೇಶ್ವರ್ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿಸಿ ನಾಗೇಶ್ ಹಾಗೂ ಶಾಸಕ ಜಿಬಿ ಜ್ಯೋತಿ ಗಣೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಮಹಿಳಾ ಬಿಜೆಪಿ ಕಾರ್ಯಕರ್ತೆಯರು ಭಾಗಿಯಾಗಿದ್ದಾರೆ.
ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲಿನ ಬೋಗಿ ಹತ್ತುವಾಗ ಆಯತಪ್ಪಿ ಬೀಳುತ್ತಿದ್ದ ವೃದ್ಧನ ರಕ್ಷಣೆ ಮಾಡಲಾಗಿದೆ. ಆಯತಪ್ಪಿ ಬೀಳ್ತಿದ್ದ ಶಂಕರ್ ಬಾಬು(70)ರನ್ನು ಸಿಬ್ಬಂದಿ ರಕ್ಷಿಸಿದ್ದಾರೆ. ಗುರುವಾರ ಸಂಜೆ 6.15ಕ್ಕೆ ತೆರಳ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲಿನ ಎಸ್-6 ಕೋಚ್‌ಗೆ ಹತ್ತಲು ಪ್ರಯತ್ನಿಸಿದ್ದ ಶಂಕರ್ ಬಾಬುರನ್ನು ಆರ್‌ಪಿಎಫ್ ಸಿಬ್ಬಂದಿ ಪ್ರಕಾಶ್ ರಕ್ಷಿಸಿದ್ದಾರೆ. ಈ ಘಟನೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಧಾರವಾಡ: ನವಲಗುಂದ ಪಟ್ಟಣದ ಅಣ್ಣಿಗೇರಿ ರಸ್ತೆಯಲ್ಲಿ ರೀಲ್ಸ್ ಮಾಡುವಾಗ ಬೈಕ್ನಿಂದ ಬಿದ್ದು ಗದಗ ಜಿಲ್ಲೆ ನರಗುಂದ ಪಟ್ಟಣದ ನಿವಾಸಿ ಸಮೀರ್ಗೆ ಗಂಭೀರ ಗಾಯಗಳಾಗಿವೆ. ಬೈಕ್ ಮೇಲೆ ಎದ್ದು ನಿಂತು ಯುವಕ ರೀಲ್ಸ್ ಮಾಡುತ್ತಿದ್ದ. ಈ ವೇಳೆ ಘಟನೆ ನಡೆದಿದೆ. ಗಾಯಾಳು ಸಮೀರ್ಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆಗಾಲ ಶುರುವಾಗುತ್ತಿದ್ದಂತೆ ನೊಣಗಳ ಹಾವಳಿ ಹೆಚ್ಚಾಗಿದೆ. ದಾವಣಗೆರೆಯ ಹಲವು ಗ್ರಾಮಗಳ ಸುತ್ತಲಿನ ಕೋಳಿ ಫಾರ್ಮ್ಗಳ ಪರಿಣಾಮ ಗ್ರಾಮಗಳಲ್ಲಿ ನೊಣಗಳ ಹಾವಳಿ ಹೆಚ್ಚಾಗಿದೆ. ಅಡಿಗೆ ಮನೆ, ದನದ ಕೊಟ್ಟಿಗೆ ಸೇರಿದಂತೆ ಇಡೀ ಮನೆಗಳಲ್ಲಿ ನೊಣಗಳ ಕಾಟ ಹೆಚ್ಚಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳು, ಹುಣಸೆಕಟ್ಟೆ ಹಾಗೂ ಮಂಡಲೂರ ಗ್ರಾಮಗಳಲ್ಲಿ ನೊಣಗಳು ಹೆಚ್ಚಾಗಿವೆ. ನೊಣಗಳ ಕಾಟಕ್ಕೆ ಬೇಸತ್ತ ಜನ ಕೋಳಿ ಫಾರ್ಮಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದಾರೆ.
ಶಿವಮೊಗ್ಗದ ಮಲ್ಲಿಕಾರ್ಜುನ ನಗರದಲ್ಲಿ ವಿದ್ಯುತ್ ತಂತಿ ತಗುಲಿ ಕುರಿಗಾಯಿ ಮೃತಪಟ್ಟಿದ್ದಾರೆ. ಗಿರೀಶ್ (27) ಮೃತ ದುರ್ದೈವಿ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಭಾರಿ ಮಳೆಗೆ ಮುಳ್ಳಯ್ಯನಗಿರಿಗೆ ತೆರಳುವ ರಸ್ತೆಯ ಮೊದಲ ತಿರುವಿನಲ್ಲಿ ಮತ್ತೆ ಗುಡ್ಡ ಕುಸಿದಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಗುಡ್ಡ ಕುಸಿಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ
ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಹೋಗುವವರಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.
ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಿರಾ ಕ್ಷೇತ್ರದ ಶಾಸಕ ಟಿ.ಬಿ. ಜಯಚಂದ್ರ, ಅದ್ಧೂರಿ ಹುಟ್ಟು ಹಬ್ಬ ಆಚರಣೆ ಮಾಡದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ನಾನು ದೇವರ ಸನ್ನಿಧಿಗೆ ತೆರಳುತಿದ್ದೇನೆ. ಯಾರಿಗೂ ಸಿಗೋದಿಲ್ಲ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಾವುದೇ ರೀತಿ ಆಚರಣೆ ಮಾಡಬೇಡಿ. ಆಗಸ್ಟ್ 7 ರಂದು ಬೃಹತ್ ಉದ್ಯೋಗ ಮೇಳ ಮಾಡಿ ನಿರುದ್ಯೋಗಿಗಳಿಗೆ ನೆರವಾಗೋಣ. ನಿಮ್ಮ ಆಶೀರ್ವಾದಿಂದ ನಾನು ಶಾಸಕನಾಗಿದ್ದೇನೆ ಮತ್ತು ದೆಹಲಿಯ ವಿಶೇಷ ಪ್ರತಿನಿಧಿಯಾಗಿದ್ದೇನೆ. ಸಂಪುಟ ದರ್ಜೆ ಸ್ಥಾನಮಾನ ಸಿಕ್ಕಿದೆ ಇಷ್ಟೇ ಸಾಕು ನನಗೇ. ನನ್ನ ಹುಟ್ಟುಹಬ್ಬಕ್ಕೆ ಯಾವುದೇ ಹಾರ, ತುರಾಯಿ, ಬ್ಯಾನರ್, ಪ್ಲೆಕ್ಸ್ ನ ವಿಜೃಂಭಣೆ ಬೇಡ. ನಿಮ್ಮ ಆಶೀರ್ವಾದ ಸಾಕು, ಸಿರಾ ತಾಲ್ಲೂಕನ್ನು ಅಭಿವೃದ್ಧಿಯತ್ತ ಕೊಂಡೋಯ್ಯುವ ಕೆಲಸ ಮಾಡೋಣ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಉಡುಪಿ ಖಾಸಗಿ ಕಾಲೇಜಿನ ವಿಡಿಯೋ ವಿವಾದ ಪ್ರಕರಣ ಸಂಬಂಧ ಹೊಸ ತನಿಖಾ ತಂಡ ರಚಿಸಿ ತನಿಖೆ ಮಾಡುವ ಸಾಧ್ಯತೆ ಇದೆಯಂತೆ. ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಹೊಸ ತಂಡ ರಚನೆಗೆ ಪೊಲೀಸ್ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸದ್ಯ ಇರುವ ತನಿಖಾ ತಂಡ, ತನಿಖಾಧಿಕಾರಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಹೊಸ ತನಿಖಾ ತಂಡ ರಚಿಸುವಂತೆ ಆಗ್ರಹ ಕೇಳಿ ಬಂರುತ್ತಿದೆ. ಜಾಮೀನು ಮಂಜೂರಾದರು ಪೊಲೀಸರ ತನಿಖೆ ಇನ್ನು ಶುರುವಾಗಿಲ್ಲ.
ತಾಯಿಯಿಂದ ದೂರಾದ ಕೋತಿ ಮರಿಗೆ ಪ್ರಾಣಿ ಪ್ರಿಯರೊಬ್ಬರು ಆಶ್ರಯ ನೀಡಿದ್ದಾರೆ. ಕೋಲಾರದ ಗಾಂಧಿನಗರ ನಿವಾಸಿ ಜೀವ ಆನಂದ್ ಎಂಬುವವರು ಕೋತಿ ಮರಿಗೆ ಆಸರೆ ಆಗಿದ್ದಾರೆ. ತಾಯಿಯಿಂದ ದೂರಾಗಿ ಅನಾಥವಾಗಿದ್ದ ಪುಟ್ಟ ಕೋತಿ ಮರಿಯನ್ನು ಮನೆಗೆ ತಂದು ಸಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ತಮ್ಮ ಮನೆಯಲ್ಲಿ ಕೋತಿ ಮರಿಯ ಹಾರೈಕೆ ಮಾಡುತ್ತಿದ್ದು ರಾಮು ಎಂದು ಹೆಸರಿಟ್ಟಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು ಮಾರ್ಕಂಡೇಯ ನದಿ ನೀರು ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮ ಸುತ್ತುವರೆದಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗ್ರಾಮದ ಹೊರ ವಲಯದ ಮನೆಗಳ ಹಿತ್ತಲಿಗೆ ನೀರು ನುಗ್ಗಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು, ಭತ್ತ ಜಲಾವೃತಗೊಳ್ಳುವ ಆತಂಕ ಎದುರಾಗಿದೆ.
ಮೈಸೂರು ಮೂಲದ 35 ಜನರು ಆಂಧ್ರದ ತಿರುಪತಿಗೆ ತೆರಳಿದ್ದರು. ತಿರುಪತಿಯಿಂದ ವಾಪಸ್ ರೈಲಿನಲ್ಲಿ ಬರುವಾಗ ಸೀಟ್ ವಿಚಾರಕ್ಕೆ ಗಲಾಟೆಯಾಗಿದ್ದು ರಾಜ್ಯದ ಪ್ರಯಾಣಿಕರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಹಾಗೂ ವಿಜಯಪುರ ಪಟ್ಟಣದಲ್ಲಿ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಲು ಜನರಿಂದ ಸುಲಿಗೆ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಬರುವವರಿಂದ ನೂರರಿಂದ ಮುನ್ನೂರು ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿಸಲ್ಲಿಸಲು ಸಿಬ್ಬಂದಿ ಹಣ ಪಡೆಯುತ್ತಿದ್ದಾರೆ. ಕೂಲಿ ಮಾಡಿ ಬಂದ ಹಣದಿಂದ ಗೃಹಲಕ್ಷ್ಮೀ ಯೋಜನೆಗೆ ಹಣ ನೀಡಿ ಜನ ಅರ್ಜಿ ಹಾಕ್ತಿದ್ದಾರೆ. ಹಣ ಪಡೆಯದಂತೆ ಸರ್ಕಾರ ಆದೇಶ ಮಾಡಿದ್ರು ಲೂಟಿ ಮಾಡುವುದು ನಿಂತಿಲ್ಲ. ಪ್ರತಿನಿತ್ಯ ನೂರಾರು ಜನರಿಂದ ಸಾವಿರಾರು ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.
ಕೊಪ್ಪಳ ತಾಲೂಕಿನ ಕವಲೂರು ಗ್ರಾಮದಲ್ಲಿ ಕತ್ತಲ್ ರಾತ್ರಿ ಹಿನ್ನೆಲೆ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಪವಾಡ ನಡೆದಿದೆ. ಅಲೈ ದೇವರಿಗೆ ಆಂಜನೇಯ ಹೂ ನೀಡಿ ಆರ್ಶಿವಾದ ಮಾಡಿದ್ದಾನೆ. ದೇವರುಗಳ ಸೌಹಾರ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ಗ್ರಾಮದ ಹಜಿಮ್ ಸಾಬ್ ಎನ್ನುವ ವ್ಯಕ್ತಿಯಿಂದ ಸವಾರಿ ನಡೆಯುತ್ತೆ. ಹಜಿಮ್ ಸಾಬ್ ಮುಸ್ಲಿಂ ಆದ್ರು ಆಂಜನೇಯ ಅಪ್ಪಟ ಭಕ್ತ. ಸದ್ಯ ಆಂಜನೇಯ ಹೂ ನೀಡುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಯತೀಂದ್ರ ಸಿದ್ದರಾಮಯ್ಯ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದ ಡಾ.ಯತೀಂದ್ರ ವರುಣ ಕ್ಷೇತ್ರದ ತುಂಬಲ ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಪರವಾಗಿ ಭಾಗಿಯಾಗಿದ್ದಾರೆ. ತುಂಬಲ ಗ್ರಾಮದಲ್ಲಿ ನೂತನ ಹಾಲಿನ ಡೈರಿ ಮೇಲ್ಚಾವಣಿ, ಕೆಂಪಯ್ಯನಹುಂಡಿ ಗ್ರಾಮದಲ್ಲಿ ನೂತನ ಸಂಜೀವಿನಿ ಕಟ್ಟಡ ಉದ್ಘಾಟನೆ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗಿಡ್ಡಾಪುರ ಬಳಿ ಖಾಸಗಿ ಬಸ್ ಪಲ್ಟಿಯಾಗಿ 10 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿದೆ. ನಾಯಕನಹಟ್ಟಿಯಿಂದ ಗರಣಿ ಕ್ರಾಸ್ ಕಡೆ ಹೋಗುತ್ತಿದ್ದ ಬಸ್, ಎದುರುಗಡೆ ಬಂದ ಬೈಕ್ ಗೆ ಡಿಕ್ಕಿ ತಪ್ಪಿಸಲು ಹೋಗಿ ಪಲ್ಟಿಯಾಗಿದೆ. ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ವಿದ್ಯುತ್ ತಂತಿ ಮೇಲೆ ಹಾವು ಕಾಣಿಸಿಕೊಂಡಿದೆ. ಕೆರೆ ಹಾವೊಂದು ವಿದ್ಯುತ್ ತಂತಿಗೆ ಸುತ್ತಿಕೊಂಡು ಕೆಳಗಿಳಿಯಲು ಪರದಾಡಿದೆ. ವಿದ್ಯುತ್ ಕಂಬಕ್ಕೆ ಸುತ್ತಿಕೊಂಡಿದ್ದ ಬಳ್ಳಿ ಮೂಲಕ ತಂತಿ ಮೇಲೆ ಸಾಗಿ ಬಂದ ಕೆರೆಹಾವು ನಂತರ ಕೆಳಗಿಳಿಯಲಾಗದೆ ತಂತಿಗೆ ಸುತ್ತಿಕೊಂಡಿದೆ. ವಿದ್ಯುತ್ ತಂತಿ ಮೇಲೆ ನಿಧಾನವಾಗಿ ಸಾಗಿ ಕೆಳಗಿಳಿಯಲು ಯತ್ನಿಸಿದೆ. ಕೆರೆ ಹಾವು ವಿದ್ಯುತ್ ತಂತಿ ಮೇಲೆ ಓಡಾಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರುಸ್ತಂಪುರ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಮೊಹರಂ ಹಬ್ಬ ಆಚರಣೆ ಮಾಡ್ತಿದ್ದಾರೆ. ಮೊಹರಂ ಅಂಗವಾಗಿ ಗ್ರಾಮದಲ್ಲಿ ಪೀರ್ ಗಳ ಮೆರವಣಿಗೆ ಮಾಡಲಾಗಿದೆ. ಕಳೆದ ರಾತ್ರಿ ದೀಪಗಳನ್ನು ಹಚ್ಚಿ ಸಂದಲ್ ಆಚರಿಸಿ ಹಿಂದೂ ಮುಸ್ಲಿಂ ಸೇರಿಕೊಂಡು ಹಬ್ಬ ಆಚರಣೆ ಮಾಡ್ತಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದಲ್ಲಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ರೌಡಿ ರಾಜಕಾರಣ ಬೆಳೆಸುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಕ್ಷೇತ್ರ ಶಾಂತಿಯುತವಾಗಿತ್ತು. ಕ್ಷೇತ್ರದ ಬಿಜೆಪಿ ಮುಖಂಡರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದೌರ್ಜನ್ಯ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರು ಕ್ಷೇತ್ರದಲ್ಲಿ ಗುಂಡಾಗಿರಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಹೂವುಗಳು ಹಾಳಾಗಿವೆ. ನಿರಂತರ ಮಳೆಗೆ ತೋಟದಲ್ಲೇ ಹೂವುಗಳು ಕೊಳೆಯುತ್ತಿವೆ. ನಾಗರ ಪಂಚಮಿ ಹಬ್ಬ, ಶ್ರಾವಣ ಮಾಸದಲ್ಲಿ ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ಹೂವು ಬೆಳೆಗಾರರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ದಾಂಧಲೆ ಮುಂದುವರೆದಿದೆ. ಕಾಡಾನೆಗಳು ಬೈದುವಳ್ಳಿ ಗ್ರಾಮದ ರಮೇಶ್ ಎಂಬುವವರ ಒಂದೂವರೆ ಎಕರೆ ಕಾಫಿ ತೋಟ ನಾಶ ಮಾಡಿವೆ. ತೋಟದಲ್ಲಿದ್ದ ಕಾಫಿ ,ಮೆಣಸು, ಬಾಳೆ, ಅಡಿಕೆ ನಾಶವಾಗಿದೆ.
ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಶಂಕಿತರ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಶಂಕಿತರ ಬಳಿ ಪ್ರಮಾಣ ಮಾಡಿಸಿದ್ದ ಆರೋಪಿಗಳಾದ ನಜೀರ್, ಜುನೈದ್, ಗ್ರೆನೇಡ್, ಪಿಸ್ತೂಲ್ ಬಗ್ಗೆ ಯಾರಿಗೂ ಹೇಳದಂತೆ ಶಂಕಿತರಿಂದ ಪ್ರಮಾಣ ಮಾಡಿಸಿಕೊಂಡಿದ್ದರಂತೆ. ಡೆಲಿವರಿ ಬಾಯ್ ನೀಡುವ ಪಾರ್ಸೆಲ್ ಓಪನ್ ಮಾಡಬಾರದು. ಏನೇ ಕೆಲಸ ಮಾಡಿದರೂ ಯಾರಿಗೂ ಹೇಳದಂತೆ ಪ್ರಮಾಣ ಮಾಡಿಸಿಕೊಂಡಿದ್ದರಂತೆ.
ಬೆಂಗಳೂರು ನಗರದಲ್ಲಿ ಇಂದು ಮೊಹರಂ ಹಬ್ಬ ಆಚರಣೆ ಹಿನ್ನೆಲೆ ಮಧ್ಯಾಹ್ನ 1ರಿಂದ ಸಂಜೆ 4.30ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ. ಬ್ರಿಗೇಡ್ ರಸ್ತೆಯ ಮೂಲಕ ಹೊಸೂರು ರಸ್ತೆಯ ಕಡೆಗೆ, ವೆಲ್ಲಾರಾ ಜಂಕ್ಷನ್ ಮುಖಾಂತರ ತೆರಳುವ ವಾಹನ ಸವಾರರು ರಿಚ್ಮಂಡ್ ರಸ್ತೆಯ ಮೂಲಕ ರೀನಿಯಸ್ ಕ್ರಾಸ್, ನಂಜಪ್ಪ ಸರ್ಕಲ್, ಲಾಂಗ್ ಫೋರ್ಡ್ ರಸ್ತೆ, ಸಿಎಂಪಿ ಜಂಕ್ಷನ್ ಮೂಲಕ ಸಂಚರಿಸಬೇಕು. ಹೊಸೂರು ರಸ್ತೆಯ ಆಡುಗೋಡಿ ಕಡೆಯಿಂದ ಬರುವ ಸವಾರರು ಬರ್ಲ ಸ್ಟ್ರೀಟ್, ಲಾಂಗ್ ಫೋರ್ಡ್ ರಸ್ತೆ, ನಂಜಪ್ಪ ಸರ್ಕಲ್, ರೀನಿಯಸ್ ಸ್ಟ್ರೀಟ್ ಮೂಲಕ ರಿಚ್ಮಂಡ್ ರಸ್ತೆಗೆ ಬಂದು ಸಂಚರಿಸಲು ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಎಕ್ಸ್‌ಪ್ರೆಸ್ ಹೈವೇ ಪರಿಶೀಲಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಬೆಂಗಳೂರಿಂದ ರಸ್ತೆ ಮಾರ್ಗವಾಗಿ ತೆರಳಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ವೀಕ್ಷಿಸಲಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿ ಮಂಡ್ಯ ಜಿಲ್ಲೆಗೆ ಇಂದು ಭೇಟಿ ನೀಡಲಿದ್ದಾರೆ. ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಹೆದ್ದಾರಿ ವೀಕ್ಷಣೆ ಮಾಡಿ ಬಳಿಕ ಮೈಸೂರಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
Published On - 8:04 am, Sat, 29 July 23