Karnataka Rains: ರಾಜ್ಯದಲ್ಲಿ ಮುಂಗಾರು(Monsoon) ಮಳೆ ಚುರುಕುಗೊಂಡಿದೆ. ಮಳೆ ಅಬ್ಬರಕ್ಕೆ ಅನೇಕ ಜಿಲ್ಲೆಗಳು ತತ್ತರಿಸಿದ್ದು ಡ್ಯಾಂಗಳು ತುಂಬಿ ಹರಿಯುತ್ತಿವೆ. ರಸ್ತೆಗಳು, ಸೇತುವೆಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ(Karnataka Flood). ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಟ್ರಕ್ಕಿಂಗ್ಗೆ ನಿಷೇಧ ಹೇರಲಾಗಿದೆ. ಪ್ರವಾಹ ಭೀತಿ ಇರುವ ಜಿಲ್ಲೆಗಳಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಕೆರೆ, ನದಿ, ಸಮುದ್ರತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಮುನ್ನೆಚ್ಚರಿಕೆ ವಹಿಸಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಡಿಸಿಗಳು ಮನವಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 4 ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ, ಮೂಡಲಗಿ, ಸವದತ್ತಿ, ಯರಗಟ್ಟಿ, ನಿಪ್ಪಾಣಿ ತಾಲೂಕಿನ ಶಾಲೆಗಳಿಗೂ ರಜೆ ನೀಡಲಾಗಿದೆ. ಇಂದು ಸಂಜೆ 4ಗಂಟೆಗೆ ಸಿಎಂ ಮಳೆ ಸಂಬಂಧ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ. ಬಳಿಕ ಮುಂದಿನ ಕ್ರಮದ ಬಗ್ಗೆ ತಿಳಿಸಲಿದ್ದಾರೆ. ಮಳೆ ಸೇರಿದಂತೆ ರಾಜ್ಯದಲ್ಲಿಂದಾಗುವ ಲೇಟೆಸ್ಟ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ರಾಜ್ಯದಲ್ಲಿ ಮಳೆರಾಯ ನಿರಂತರವಾಗಿ ಅಬ್ಬರಿಸುತ್ತಿದ್ದಾನೆ. ಇದರಿಂದ ಜೀವನದಿಗಳಿಗೆ ಜೀವ ಕಳೆ ಬಂದಿದ್ದು, ಉಕ್ಕಿ ಹರಿಯುತ್ತಿವೆ. ಜೊತೆಗೆ ಕೆಲವು ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸೇತುವೆಗಳು ಸಹ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿವೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಳೆ ಮುಂದುವರೆಯಲಿದ್ದು, ಹಾಗಾಗಿ ವಿಜಯನಗರ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ರಾಯಚೂರು, ಹಾಸನ ಜಿಲ್ಲೆಗಳಲ್ಲಿ ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆಯಲಿರುವ ಕಂದಾಯ ದಿನಾಚರಣೆ ಮತ್ತು ಕಾರ್ಯಾಗಾರಕ್ಕೆ ಹಾಜರಾಗಲು ಜುಲೈ 27ರಂದು ಕಂದಾಯ ಇಲಾಖೆ ನೌಕರರಿಗೆ ಸಾಂದರ್ಭಿಕ ರಜೆ ನೀಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ ಜಿಲ್ಲೆಗಳನ್ನು ಹೊರತುಪಡಿಸಿ ರಜೆ ಮಂಜೂರು ಮಾಡಲಾಗಿದೆ.
ಕೆಆರ್ಎಸ್ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 106.50 ಅಡಿಗೆ ಏರಿಕೆ ಆಗಿದೆ. ಕೆಆರ್ಎಸ್ ಜಲಾಶಯಕ್ಕೆ 40,917 ಕ್ಯೂಸೆಕ್ ನೀರು ಒಳಹರಿವಿದ್ದು, ಕೆಆರ್ಎಸ್ ಜಲಾಶಯದಿಂದ 5,238 ಕ್ಯೂಸೆಕ್ ನೀರು ಹೊರಹರಿವಿದೆ.
ಸಿಎಂ ಸಿದ್ಧರಾಮಯ್ಯ ಮಳೆಹಾನಿ ಬಗ್ಗೆ ವಿಸಿ ಮೂಲಕ ಸಭೆ ನಡೆಸಿ ಚರ್ಚಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ರೈತರ ಜೀವಹಾನಿಯ ಬಗ್ಗೆ ವಿಶೇಷವಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯಾದ್ಯಂತ ರೈತರ ಆತ್ಮಹತ್ಯೆಗಳು ಆಗದಂತೆ ತಡೆಗಟ್ಟವುದು ನಮ್ಮ ಉದ್ದೇಶ ಎಂದು ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ ಲಾಡ್ ಹೇಳಿದರು.
ವಿಜಯನಗರ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ ವಿಜಯನಗರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಆದೇಶ ಹೊರಡಿಸಿದರು. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಹರಪನಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
21 ಜಿಲ್ಲೆಗಳಲ್ಲಿ ವಾಡಿಕೆ ಮಳೆ ಆಗಿದ್ದು, 6 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಜೂ. 1ರಿಂದ ಈವರೆಗೆ 38 ಜನ ಮೃತಪಟ್ಟಿದ್ದು, 38 ಜನ ಗಾಯಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಮಳೆ ಹಾನಿ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫ್‌ರೆನ್ಸ್ ಸಭೆ ನಂತರ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಂದ 57 ಮನೆ ಸಂಪೂರ್ಣವಾಗಿ ಹಾನಿಯಾಗಿದ್ದು, 2,682 ಮನೆಗಳು ಭಾಗಶಃ ಹಾನಿ ಆಗಿವೆ. 105 ಜಾನುವಾರು ಸಾವನ್ನಪ್ಪಿವೆ ಎಂದರು.
ಮಳೆ ಹಾನಿ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್: ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು
ಗಲಭೆಕೋರರ ವಿರುದ್ಧದ ಕೇಸ್ ಹಿಂಪಡೆದರೆ ತೀವ್ರ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಬಂಧಿತರ ಬಿಡುಗಡೆಗೆ ಕೋರಿರುವುದನ್ನು ಸರ್ಕಾರ ಪರಿಗಣಿಸಬಾರದು. ನ್ಯಾಯಾಲಯದಲ್ಲಿರುವ ಪ್ರಕರಣ ರದ್ದು ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರನ್ನು ಆಪ್ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇಂದು ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಭೇಟಿ ಮಾಡಿದರು. ಕೆಲ ಹೊತ್ತು ಚರ್ಚೆ ಮಾಡಿದರು.
ರಾಯಚೂರು: ಮಳೆ ಹಾನಿ ವಿಚಾರವಾಗಿ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಿದ್ಧರಾಮಯ್ಯ ಸಭೆ ಮಾಡಿದ್ದು, ವಿಡಿಯೋ ಕಾನ್ಫರೆನ್ಸ್ ನಲ್ಲಿ ರಾಯಚೂರು ಡಿಸಿ ಚಂದ್ರಶೇಖರ್ ನಾಯಕ್ ಭಾಗಿಯಾಗಿದ್ದಾರೆ. ನಗರದ ಡಿಸಿ ಕಚೇರಿಯಲ್ಲಿ ವಿಡಿಯೋ ಕಾನ್ಫರನ್ಸ್ ನಡೆಯುತ್ತಿದೆ. ಡಿಸಿ ಜೊತೆಗೆ ಸಿಇಓ ಶಶಿಧರ್ ಕುರೇರ, ಸೇರಿ ಇನ್ನಿತರ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಮಳೆ ಹಾನಿ ಕುರಿತು ಗೃಹಕಚೇರಿ ಕೃಷ್ಣಾದಿಂದ ಸಿಎಂ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್ ಆರಂಭವಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಪರಮೇಶ್ವರ್, ಕೃಷ್ಣಭೈರೇಗೌಡ, ಚಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಜಿಲ್ಲೆಯ ಕಾಪು ತಾಲೂಕಿನ ಪಡುಬಿದಿರೆ ಸಮೀಪದ ಪಾದೆಬೆಟ್ಟು ಪ್ರದೇಶದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ನಿರಂತರ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸಂಬಂಧ ತನ್ವೀರ್ ಸೇಠ್ ಪತ್ರ ವಿಚಾರವಾಗಿ ಬೆಂಗಳೂರಿನಲ್ಲಿ ಬಿಜೆಪಿ MLC ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದು, ಗೃಹಸಚಿವ ಪರಮೇಶ್ವರ್ ನಡೆ ಆಶ್ಚರ್ಯ ಮತ್ತು ದಿಗ್ಭ್ರಮೆ ಉಂಟು ಮಾಡಿದೆ. ಗೃಹ ಮಂತ್ರಿಗಳೇ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸರ್ಕಾರ ಯಾವ ಮಟ್ಟದ ಕೆಲಸಕ್ಕೆ ಕೈಹಾಕಿದೆ ಅಂತಾ ಆಶ್ಚರ್ಯ ಆಗುತ್ತಿದೆ ಎಂದರು.
ಸರ್ವಜ್ಞ ನಗರ ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆ ಐಟಿಸಿ ರಸ್ತೆ ಫ್ಲೈ ಓವರ್ ವಿಸ್ತಿರ್ಣ ಹಾಗೂ ಎರಡು ಜಾಗದಲ್ಲಿ ಪಾರ್ಕ್ ಮಾಡಲು ಸಾರ್ವಜನಿಕರ ಮನವಿ ಮಾಡಿದ್ದಾರೆ ಎಂದು ಸಿಟಿ ರೌಂಡ್ಸ್ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಸಾರ್ವಜನಿಕರು ಮನವಿ ಮಾಡಿದ್ದರು ಈ ಹಿಂದೆ ಇದ್ದ ಸರ್ಕಾರ ಮಾಡಿಲ್ಲ. ಜನರು ಪ್ರಸ್ತಾವನೆ ಇಟ್ಟಿದ್ದಾರೆ ಎಂದರು.
ಶಿವಮೊಗ್ಗ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದ ಹಿನ್ನೆಲೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ಸಭೆ ಮಾಡಿದರು. ಬಳಿಕ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಹೊಸಮನೆ, ನ್ಯೂಮಂಡ್ಲಿ ಕ್ರಾಸ್, ಸವಾರ್ ಲೈನ್ ರಸ್ತೆ, ಹೊಸಮನೆಯಲ್ಲಿ ರಾಜಕಾಲುವೆ, ನೀರು ನುಗ್ಗಿರುವ ಸ್ಥಳ ಪರಿಶೀಲಿಸಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣವನ್ನು ಎನ್ಐಎ ತೆಗೆದುಕೊಂಡಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರಕರಣದಲ್ಲಿ ಪಿಎಫ್ಐ, ಎಸ್ಡಿಪಿಐ ಕೈವಾಡ ಬಗ್ಗೆ ಪುರಾವೆಗಳಿವೆ. ಎನ್ಐಎ ತನಿಖೆ ನಡೆಸುತ್ತಿರುವ ಪ್ರಕರಣ ಹೇಗೆ ಹಿಂಪಡೆಯುತ್ತಾರೆ. ನಾವು ಅಧಿಕಾರದಲ್ಲಿದ್ದಾಗಲೂ ವಾಪಸ್ ಪಡೆಯುವಂತೆ ಒತ್ತಡ ಇತ್ತು. ನಾವು ಸಾಕ್ಷಿಸಮೇತ ಹಿಡಿದುಕೊಂಡು ಅವರನ್ನು ಅರೆಸ್ಟ್ ಮಾಡಿದ್ದೆವು ಎಂದಿದ್ದಾರೆ.
ಶಿವಮೊಗ್ಗ: ತಾಲ್ಲೂಕಿನ ಜೀವನಾಡಿಗಳಾದ ಅಂಜನಾಪುರ ಡ್ಯಾಮ್ ತುಂಬಿದ ಹಿನ್ನಲೆ ಶಿಕಾರಿಪುರ ಬಿಜೆಪಿ ಶಾಸಕ ವಿಜಯೇಂದ್ರ ಮತ್ತು ಕುಟುಂಬಸ್ಥರಿಂದ ಇಂದು ಬಾಗಿನ ಸಮರ್ಪಣೆ ಮಾಡಲಾಯಿತು.
ವಿಜಯಪುರ: ಕುಡಿಯುವ ನೀರಿನ ವಿಚಾರವಾಗಿ ಅಧಿಕಾರಿಗಳ ಜೊತೆ ಸಚಿವ ಎಂಬಿ ಪಾಟೀಲ್ ಸಭೆ ನಡೆಸಿದರು. ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆದಿದ್ದು, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
ಮಳೆಯಿಂದ ಹಾವೇರಿ ತಹಶೀಲ್ದಾರ್ ಕಚೇರಿ ಸೋರಿಕೆ ಹಿನ್ನೆಲೆ ಹಾವೇರಿ ತಾಲೂಕು ಕಚೇರಿಗೆ ಡಿಸಿ ರಘುನಂದ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯಕ್ಕೆ ಕಚೇರಿ ಮೇಲೆ ತಗಡಿನ ಶೀಟ್ ಹಾಕುವಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ-ಗೋವಾ ಗಡಿಯ ಕ್ಯಾಸಲರಾಕ್ ಬಳಿ ಹಳಿ ಮೇಲೆ ಗುಡ್ಡ ಕುಸಿದಿದ್ದರಿಂದ ನಿನ್ನೆಯಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆ ನೈಋತ್ಯ ರೈಲ್ವೆ ಇಲಾಖೆ ನಾಲ್ಕು ಮಾರ್ಗಗಳಲ್ಲಿ ಮಾರ್ಗ ಬದಲಾವಣೆ ಮಾಡಿದೆ. ಯಶವಂತಪುರ-ವಾಸ್ಕೋಡಿಗಾಮ ರೈಲು ಸಂಖ್ಯೆ 17309, ವಾಸ್ಕೋಡಿಗಾಮ-ಯಶವಂತಪುರ ರೈಲು ಸಂಖ್ಯೆ 17310 ಸಂಚಾರ ರದ್ದು ಮಾಡಿದೆ.
ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್ ಗೆ ಮಹಿಳೆ ಅವಾಜ್ ಹಾಕಿದ್ದಾರೆ. ಬಿಎಂಟಿಸಿ ಬಸ್ ನಲ್ಲಿ ಪ್ರಯಾಣದ ವೇಳೆ ಮಹಿಳೆ ಕಿರಿಕ್ ಮಾಡಿಕೊಂಡಿದ್ದಾರೆ. ಕಾಸು ಕೊಟ್ಟು ಟಿಕೆಟ್ ತೆಗೆದುಕೊಳ್ಳದೇ ಕಿರಿಕ್ ಮಾಡಿದ್ದಾರೆ. ನಾನು ಸೆಂಟ್ರಲ್ ಗವರ್ನಮೆಂಟ್ ಸಿಬ್ಬಂದಿ ಐಡಿ ಕಾರ್ಡ್ ಇದೆ ನನ್ನ ಬಳಿ ದುಡ್ಡು ಕೊಡಲ್ಲ. ಏನ್ ಮಾಡ್ಕೊತಿಯೋ ಮಾಡ್ಕೊ ಎಂದು ಕಂಡಕ್ಟರ್ ಗೆ ಅವಾಜ್ ಹಾಕಿದ್ದಾರಂತೆ. ಕೇಂದ್ರ ಸರ್ಕಾರದ ಐಡಿ ಏನಿದೆ ತೋರಿಸಿ ಎಂದರೂ ತೋರಿಸದೆ ಮಹಿಳೆ ಕಿರಿಕ್ ಮಾಡಿದ್ದಾರೆ. ಬಾಯಿಗೆ ಬಂದ ಹಾಗೆ ಅವಾಚ್ಯ ಪದಗಳಿಂದ ಕಂಡಕ್ಟರ್ ನಿಂದಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನಿರಂತರ ಧಾರಾಕಾರ ಮಳೆ ಹಿನ್ನೆಲೆ ನಿರಂತರ ಮಳೆಯಿಂದ ತಹಶೀಲ್ದಾರ್ ಕಚೇರಿ ಸೋರುತ್ತಿದೆ. ಕಚೇರಿಯಲ್ಲಿ ಟಾರ್ಪಲ್ ಕಟ್ಟಿ ಸಿಬ್ಬಂದಿ ದಾಖಲೆ ರಕ್ಷಿಸುತ್ತಿದ್ದಾರೆ. ಭೂದಾಖಲೆ ಕಚೇರಿ, ಸರ್ವೆ ಇಲಾಖೆ ಕೊಠಡಿಯಲ್ಲಿ ಸೋರಿಕೆಯಾಗುತ್ತಿದೆ. ಬಕೆಟ್ ಇಟ್ಟು ನೀರು ಹೊರಹಾಕುತ್ತಿದ್ದಾರೆ. ಕಚೇರಿಯಲ್ಲಿರುವ ಹಳೆ ದಾಖಲೆ ರಕ್ಷಣೆಗಾಗಿ ಸಿಬ್ಬಂದಿ ಪರದಾಡುತ್ತಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಚುಂಚನಕಟ್ಟೆ ಜಲಪಾತ ವೈಭವ ಹೆಚ್ಚಿಸಿಕೊಂಡಿದೆ. ಹಾರಾಂಗಿ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ ಚುಂಚನಕಟ್ಟೆ ಜಲಪಾತ ಮೈದುಂಬಿ ಹರಿಯುತ್ತಿದೆ. ಕಳೆದ ಕೆಲ ದಿನಗಳಿಂದ ನೀರಿಲ್ಲದೆ ಖಾಲಿ ಖಾಲಿಯಾಗಿದ್ದ ಜಲಪಾತ ಕೊಡಗಿನಲ್ಲಿ ಉತ್ತಮ ಮಳೆ ಹಾಗೂ ಹಾರಾಂಗಿ ಡ್ಯಾಂನಿಂದ 20 ಸಾವಿರ ನೀರು ಬಿಟ್ಟ ಹಿನ್ನೆಲೆ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಬಳಿ ಆಂಬುಲೆನ್ಸ್ನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ವತ್ರೆಗೆ ಹೆರಿಗೆಗೆ ಕರೆತರುವ ವೇಳೆ ಆಂಬುಲೆನ್ಸ್ನಲ್ಲಿ ಹೆರಿಗೆಯಾಗಿದೆ. ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದ ರೂಪ ಮಗುವಿಗೆ ಜನ್ಮ ನೀಡಿದ ಮಹಿಳೆ. ಇಂದು ಬೆಳಗ್ಗೆ 04:30 ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕಾಣಿಸಿಕೊಂಡಿದ್ದ ಮೂಲಕ ಆಸ್ವತ್ರೆಗೆ ಕರೆತರುತ್ತಿದ್ದ ವೇಳೆ ಮಗುವಿಗೆ ಮಹಿಳೆ ಜನ್ಮ ನೀಡಿದ್ದಾರೆ.
ಮಹಾದೇವಪುರದ ಅಂಬಲಿಪುರ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿದೆ. ಕಳೆದ ಒಂದು ವಾರದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮೀನುಗಳು ಸಾವನ್ನಪಿದೆ. ಕೆರೆಯಲ್ಲಿ ಒಟ್ಟು ಅಂದಾಜು ಐವತ್ತು ಸಾವಿರ ಮೀನುಗಳಿದ್ದು ಅದರಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತು ಹೋಗಿದೆ. ಕೆರೆಗೆ ಕಪ್ಪು ಬಣ್ಣದ ಕೊಳಚೆ ನೀರು ಸೇರುತ್ತಿರುವುದೆ ಇದಕ್ಕೆ ಕಾರಣ ಎನ್ನಲಾಗಿದೆ.
ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆಯಲ್ಲಿ ಮುಳುಗಿದ್ದ ಕುಟುಂಬಸ್ಥರಿಂದ ಬಾಣಂತಿ, ಮಗುವನ್ನ ಊರ ಹೊರಗಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿಪರೀತ ಶೀತದಿಂದ ಬಳಲಿ ಮಗು ಮೃತಪಟ್ಟಿದೆ.
ತುಮಕೂರಿನಲ್ಲಿ ಮೌಢ್ಯಕ್ಕೆ 1 ತಿಂಗಳ ಹಸುಗೂಸು ಬಲಿ, ಮೌಢ್ಯಕ್ಕೆ ಕೊನೆಯೆಂದು?#TumakuruNews #superstition #tumkur #babydeathhttps://t.co/YLSKyVsyLO
— TV9 Kannada (@tv9kannada) July 26, 2023
ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇರುವುದು ಸಾಬೀತಾಗಿದೆ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. 30 ಶಾಸಕರು, 20 ಸಚಿವರ ಹೆಸರು ಪತ್ರದಲ್ಲಿ ಉಲ್ಲೇಖವಾಗಿದೆ. ಎಲ್ಲದಕ್ಕೂ ಏಜೆಂಟ್ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ವೈರಲ್ ಆಗುತ್ತಿರುವ ಪತ್ರ ನಕಲಿ ಅಂತಾ ಕಾಂಗ್ರೆಸ್ ಹೇಳ್ತಿದೆ. ಬಿ.ಕೆ.ಹರಿಪ್ರಸಾದ್ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬೇಡಿ ಎಂದರು.
ಪತ್ನಿಯ ಹತ್ಯೆಗೈದು ಪತಿ ಹೈಡ್ರಾಮ ಮಾಡಿದ್ದಾನೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಅಸಲಿ ಸಂಗತಿ ಬಯಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ ಆರ್ ಬಿಆರ್ ಲೇಔಟಲ್ಲಿ ಘಟನೆ ನಡೆದಿದೆ. ಕೆಂಚಮ್ಮ (19) ಕೊಲೆಯಾದವರು. ಕಳೆದ ಆರು ತಿಂಗಳ ಹಿಂದೆ ಸಿದ್ದಪ್ಪ ಬಸವರಾಜ್ ಬೆನ್ನೂರು ಜೊತೆ ಕೆಂಚಮ್ಮ ಮದುವೆಯಾಗಿತ್ತು. ಮದುವೆಯಾದಗಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ತಡರಾತ್ರಿ 2 ಗಂಟೆಗೆ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿ ನೇಣು ಬೀಗಿದು ಪತಿ ಹೈಡ್ರಾಮ ಮಾಡಿದ್ದಾನೆ. ಕೆಂಚಮ್ಮ ನೇಣುಬಿಗಿದುಕೊಂಡಿದ್ದಾಳೆ ಎಂದು ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಸದ್ಯ ಪೊಲೀಸರ ಪರಿಶೀಲನೆ ವೇಳೆ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು ಸಿದ್ದಪ್ಪನನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯಲ್ಲಿ ಮಳೆಯಿಂದ ತೀವ್ರವಾದ ಹಾನಿಯಾಗಿಲ್ಲ. ಮಳೆ ಹಾನಿ ಸಂಬಂಧ ಸಿಎಂ ಇಂದು ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಪಠ್ಯ ಓದಲಿ. ನಂತರ ಪ್ರತಿಭಟನೆ ಮಾಡಲಿ. ಅವರು ಮುದ್ರಿಸಿರುವ ಕರ ಪತ್ರದಲ್ಲೇ ಸತ್ಯಾಂಶ ಇದೆ. ಅವರ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಅವರಿಗೆ ಪ್ರತಿಭಟನೆ ಮಾಡುದೇ ಬೇರೇನು ಕೆಲಸವಿಲ್ಲ. ಅವರಷ್ಟು ದಡ್ಡರನ್ನು ನಾನು ನೋಡಿಲ್ಲ. ಮೊದಲು ಅವರು ಪುಸ್ತಕ ಓದಲಿ ಎಂದರು.
ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯಲ್ಲಿ ಒಂದೇ ವಾರದಲ್ಲಿ 87 ಮನೆಗಳಿಗೆ ಹಾನಿ ಸಂಭವಿಸಿದೆ. 4 ಮನೆಗಳು ಭಾರಿ ಮಳೆಗೆ ಸಂಪೂರ್ಣವಾಗಿ ಧರೆಗುರುಳಿವೆ. ಖಾನಾಪುರ ತಾಲೂಕಿನಲ್ಲೇ ಮಳೆಯಿಂದ 40 ಮನೆಗಳಿಗೆ ಹಾನಿಯಾಗಿದೆ. ನಿನ್ನೆ ಒಂದೇ ದಿನ ಖಾನಾಪುರ ತಾಲೂಕಿನಲ್ಲಿ 24 ಮನೆಗಳಿಗೆ ಹಾನಿಯಾಗಿದೆ.
ಜುಲೈ 31ರಿಂದ ಮಳೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡುವೆ. ರಾಜ್ಯದ ಹಲವೆಡೆ ಮಳೆಯಾಗಿ ಡ್ಯಾಂಗಳು ತುಂಬಿ ಹರಿಯುತ್ತಿವೆ. ಆಲಮಟ್ಟಿ, ಕೆಆರ್ಎಸ್, ಕಬಿನಿ, ಹಾರಂಗಿ ಡ್ಯಾಂಗಳಿಗೆ ನೀರು ಬಂದಿದೆ. ರಾಜ್ಯದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ ಎಂದರು.
ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಬಿಜೆಪಿಯಿಂದ ಹೊರಬಂದೆ ಎಂದು ಕೊಪ್ಪಳದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ರಾಜ್ಯದಲ್ಲಿ ಇಂದು ಭಾರತೀಯ ಜನತಾ ಪಕ್ಷದ ಸ್ಥಿತಿ ಏನಾಗಿದೆ? ಬಿಜೆಪಿಗೆ ಓರ್ವ ವಿಪಕ್ಷ ನಾಯಕರನ್ನು ನೇಮಿಸಲು ಆಗ್ತಿಲ್ಲ. ವಿಧಾನಸಭೆ ಚುನಾವಣೆಯಲ್ಲಿ 66 ಸ್ಥಾನಗಳಿಗೆ ಕುಸಿದಿದ್ದಾರೆ. ರಾಜ್ಯಾಧ್ಯಕ್ಷರ ಅವಧಿ ಮುಗಿದಿದ್ರು ಇನ್ನೂ ನೇಮಕ ಮಾಡ್ತಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಲೀಡರ್ಗಳೇ ಸಿಗ್ತಿಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು. ಯಾವ ಪಕ್ಷದಲ್ಲಿಯೂ ಸಿದ್ಧಾಂತ, ನೈತಿಕತೆ ಎಂಬುದು ಉಳಿದಿಲ್ಲ. ಬಿಜೆಪಿಯವರು ರೌಡಿಶೀಟರ್ಗಳನ್ನು ಎಲೆಕ್ಷನ್ಗೆ ನಿಲ್ಲಿಸುತ್ತಾರೆ. ಆ ಪಕ್ಷದಲ್ಲಿ ಏನ್ ನೈತಿಕತೆ ಉಳಿದಿದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಐದು ವರ್ಷಗಳ ಕಾಲ ನಮ್ಮ ಸರಕಾರವನ್ನ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಬೀದರ್ನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿಕೆ ನೀಡಿದ್ದಾರೆ. ಇಲ್ಲಿದ್ದೆ ಅವರು ಏನು ಮಾಡೋಕೆ ಆಗಿಲ್ಲ ಸಿಂಗಾಪುರದಲ್ಲಿ ಕುಳಿತು ಏನು ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇಂತಹ ರಾಜಕಾರಣವನ್ನ ನಾವು ಬಹಳಷ್ಟು ನೋಡಿದ್ದೇವೆ ಕಂಡಿದ್ದೇವೆ. ನಮ್ಮ ಸರಕಾರ ಹೋಗುವ ವೇಗನೋಡಿ ವಿರೋಧ ಪಕ್ಷಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಚುನಾವಣೆ ಸಮಯದಲ್ಲಿ ಕೊಟ್ಟ ಐದು ಭರವಸೆ ಈಡೇಸಿದ್ದೇವೆ ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಭಯ ಅವನ್ನ ಕಾಡುತ್ತಿದೆ. ಹೀಗಾಗಿ ನಾವು ಓಡುವ ಸ್ಫೀಡ್ ಕಡಿಮೆ ಮಾಡಬೇಕೆಂದು ವಿರೋಧ ಪಕ್ಷದವರು ಕುತಂತ್ರ ಮಾಡುತ್ತಿದ್ದಾರೆ ಎಂದರು.
ಕೋಲಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಡಿಜಿಟಲ್ ನರ್ವ್ ಸೆಂಟರ್ ವೀಕ್ಷಿಸಿದ್ದಾರೆ. ಟಾಟಾ ಪ್ರೈಮರಿ ಮತ್ತು ಸೆಕೆಂಡರಿ ಹೆಲ್ತ್ ಕೇರ್ ಟ್ರಾನ್ಸ್ ಫಾರ್ ಮೆಷಿನ್ ಕೇಂದ್ರಕ್ಕೆ ಭೇಟಿ ನೀಡಿದ್ದು ಸಚಿವರಿಗೆ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಸಾಥ್ ನೀಡಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರು ಭಾಗವಹಿಸಲಿದ್ದಾರೆ.
ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆಯಿಂದ ಕಳೆದ ಮೂರು ದಿನಗಳಲ್ಲಿ 44 ಮನೆಗಳಿಗೆ ಹಾನಿಯಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆ. ನಿರಂತರ ಮಳೆಯಿಂದ ನೆನೆದಿರುವ ಮಣ್ಣಿನ ಮನೆಗಳ ಗೋಡೆ ಕುಸಿತ.
ಧಾರಾಕಾರ ಮಳೆಗೆ ಚಿಕ್ಕಮಗಳೂರಿನಲ್ಲಿ ಮೂರನೇ ಬಲಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಹೊಸಸಿದ್ರಳ್ಳಿ ಬಳಿಯ ತಾಯಿ ಹಳ್ಳದಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ. ಹೊಸ ಸಿದ್ರಳ್ಳಿ ಗ್ರಾಮದ ರಾಮಮ್ಮ(65) ಶವ ಪತ್ತೆಯಾಗಿದೆ. ಮುಳುಗಡೆಯಾದ ಅಡಿಕೆ ತೋಟ ನೋಡಲು ತೆರಳಿದ್ದ ರಾಮಮ್ಮ ಕಾಲು ಜಾರಿ ತಾಯಿಹಳ್ಳಕ್ಕೆ ಬಿದ್ದಿದ್ದರು. ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ ರಾಮಮ್ಮ ಶವ ಪತ್ತೆಯಾಗಿದೆ.
ಶಿವಮೊಗ್ಗದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ದಿಢೀರ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭೆ ಆರಂಭಿಸುತ್ತಿದ್ದಂತೆ ಜಿ.ಪಂ. ಸಭಾಂಗಣಕ್ಕೆ ಪ್ರತಿಭಟನಾಕಾರರು ನುಗ್ಗಿದ್ದು ಕಪ್ಪು ಬಟ್ಟೆ ಪ್ರದರ್ಶಿಸಿ ಧಿಕ್ಕಾರ ಕೂಗಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಖಂಡಿಸಿ, ಹೆಡ್ಗೆವಾರ್, ಸಾವರ್ಕರ್ ಪಠ್ಯ ಕೈಬಿಟ್ಟಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಮಧುಬಂಗಾರಪ್ಪ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರದಲ್ಲಿ ವೃದ್ಧನೋರ್ವ ಶಾಸಕ ಪ್ರದೀಪ್ ಈಶ್ವರ್ ಬಳಿ ಕಣ್ಣೀರು ಹಾಕಿ ಗೋಳಾಡಿದ್ದಾರೆ. ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಅಂಗವಾಗಿ ಮನೆ ಮನೆಗೆ ಭೇಟಿ ನೀಡಿದಾಗ ಜಮೀನು ಸಮಸ್ಯೆ ಬಗೆಯರಿಸುವಂತೆ ಶಾಸಕ ಪ್ರದೀಪ್ ಈಶ್ವರ್ ಅವರ ಬಳಿ ವೃದ್ಧ ಕಣ್ಣೀರಿಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ರಾಷ್ಟ್ರೀಯ ಹೆದ್ದಾರಿ 66 ಉದ್ದಕ್ಕೂ ಜಲಪಾತಗಳು ನಿರ್ಮಾಣವಾಗಿವೆ. ಗುಡ್ಡದ ತುದಿಗಳಿಂದ ನೀರು ಹರಿದು ಬರುತ್ತಿದೆ. ಹೆದ್ದಾರಿ ಜಲಧಾರೆಗಳಲ್ಲಿ ಪ್ರವಾಸಿಗರ ಮೋಜು ಮಸ್ತಿ ಹೆಚ್ಚಾಗಿದೆ. ಕಾರವಾರ ತಾಲೂಕಿನ ಬಿಣಗ ಗುಡ್ಡದ ಬಳಿ ಜಲಧಾರೆ ಹರಿಯುತ್ತಿದೆ. ಸವಾರರು ವಾಹನಗಳನ್ನ ನಿಲ್ಲಿಸಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೈಕಮಾಂಡ್ ಭೇಟಿಗಾಗಿ ನವದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿಗೆ ಸಮಯ ಕೇಳಿದ್ದಾರೆ. ರಾಜ್ಯ ರಾಜಕೀಯದ ವಿಚಾರ ಚರ್ಚೆ ನಡೆಸಲು ವರಿಷ್ಠರ ಭೇಟಿ ಮಾಡಲಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದರಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. 1 ವಾರದಿಂದ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಮದ್ದೂರು ಹಾಗೂ ಮಳವಳ್ಳಿ ತಾಲೂಕಿನಲ್ಲಿ ಅಪಾರ ಬೆಳೆ ನಾಶವಾಗಿದೆ. ಕಾಡಾನೆಗಳಿಂದ ಕಟಾವಿಗೆ ಬಂದಿದ್ದ ಕಬ್ಬು, ತೆಂಗಿನ ಮರ ನಾಶವಾಗಿದೆ. ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಅರಣ್ಯ ಸಿಬ್ಬಂದಿ ಹರಸಾಹಸಪಡುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಧಾರಾಕಾರ ಮಳೆ ಹಿನ್ನೆಲೆ ವರದಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ತೇಲಿ ಬಂದಿದೆ. ನದಿಯಲ್ಲಿ ಅಪರಿಚಿತ ಶವ ನೋಡಿ ಗ್ರಾಮಸ್ಥರು ಗಾಬರಿಗೊಂಡಿದ್ದಾರೆ.
ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ವೀರಶೈವ ಲಿಂಗಾಯತ ಸಮಾಜ. ಶಿವಮೊಗ್ಗದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಇಂದು ಬೃಹತ್ ಸಭೆ ಹಮ್ಮಿಕೊಳ್ಳಲಾಗಿದೆ. ಮಠಾಧೀಶರು, ಸಮಾಜದ ಮುಖಂಡರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಸಭೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಗೆ ಸೇರ್ಪಡೆಗೆ ಆಗ್ರಹಿಸಲಿದ್ದಾರೆ. ಸಭೆ ಖಂಡಿಸಿ ಪ್ರತಿಭಟಿಸುವುದಾಗಿ ಬೇಡ ಜಂಗಮ ಸಮಾಜ ಹೇಳಿಕೆ ನೀಡಿದ್ದು ಸಭೆ ನಡೆಯುವ ಸ್ಥಳದ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಡಿಜೆಹಳ್ಳಿ, ಕೆಜಿಹಳ್ಳಿ , ಶಿವಮೊಗ್ಗ, ಹುಬ್ಬಳ್ಳಿ ಮತ್ತು ಇತರೆ ಕಡೆ ನಡೆದ ಪ್ರತಿಭಟನೆ, ಗಲಭೆ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಡಾ.ಪರಮೇಶ್ವರ್ಗೆ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದಾರೆ. ಪ್ರಕರಣಗಳಲ್ಲಿ ಅಮಾಯಕ ಯುವಕರು ಹಾಗೂ ವಿದ್ಯಾರ್ಥಿಗಳ ಬಂಧನವಾಗಿದೆ. ಸುಳ್ಳು ಮೊಕದ್ದಮೆಗಳಲ್ಲಿ ಯುವಕರು, ವಿದ್ಯಾರ್ಥಿಗಳು ಬಂಧಿತರಾಗಿದ್ದಾರೆ. ಕೇಸ್ ಮರು ಪರಿಶೀಲಿಸಿ, ನಿಯಮಾನುಸಾರ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನ ಅಪಾಯದ ಸ್ಥಳದಲ್ಲಿ ಪ್ರವಾಸಿಗರು ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಸ್ವಲ್ಪ ಜಾರಿದರೂ ದೊಡ್ಡಮಟ್ಟದ ಅಪಾಯ ಸಂಭವಿಸೋದು ಗ್ಯಾರಂಟಿ. ಬಂಡೆ ಮೇಲೆ ಹತ್ತಿ ಪ್ರವಾಸಿಗರು ಸೆಲ್ಫಿಗೆ ಫೋಸ್ ಕೊಡ್ತಿದ್ದಾರೆ. ಈಗಾಗಲೇ ಬಿದ್ದು ಪ್ರಾಣ ಕಳೆದುಕೊಂಡ ಸ್ಥಳದಲ್ಲೇ ಮೋಜು ಮಸ್ತಿ ಮಾಡ್ತಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಎಚ್ಚರಿಕೆ ನಡುವೆಯೂ ಪ್ರವಾಸಿಗರ ಹುಚ್ಚಾಟ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ VISL ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕಾರ್ಮಿಕರು ಚಿರತೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಕಾರ್ಖಾನೆಯ ಸುತ್ತ ಮುತ್ತಲಿನ ವಾಸಿಗಳಲ್ಲಿ ಆತಂಕ ಉಂಟಾಗಿದೆ. ಕಾರ್ಖಾನೆ ವತಿಯಿಂದ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ. ರಾತ್ರಿ ವೇಳೆ ಕಾರ್ಮಿಕರು ಒಬ್ಬರೆ ಓಡಾಡದಂತೆ ಸೂಚಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗ ಭೂಕುಸಿತವಾಗಿದೆ. ಸರ್ಕಾರಿ ಶಾಲಾ ಕಟ್ಟಡದ ಮೇಲೆ ಮಣ್ಣು ಕುಸಿಯುವ ಭೀತಿ ಎದುರಾಗಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನೆಲೆ ಕೃಷ್ಣಾ ಉಪನದಿ ಧೂದ್‌ಗಂಗಾ ನದಿ ನೀರಿನ ಒಳಹರಿವು ಹೆಚ್ಚಳವಾಗಿದೆ. ದೂಧ್‌ಗಂಗಾ ನದಿ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣ ಬಳಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಮುಳುಗಡೆ ಹಂತ ತಲುಪಿದ ಸದಲಗಾ ಬೋರಗಾಂವ ಕೆಳಹಂತದ ಸೇತುವೆ, ರಸ್ತೆ ಬದಿಯಲ್ಲಿರುವ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಕ್ಯಾಸಲರಾಕ್ ಸಮೀಪದ ಕರಂಜೋಲ್ ಬಳಿ ಭೂಕುಸಿತವಾಗಿದೆ. ಹುಬ್ಬಳ್ಳಿ-ಗೋವಾ ಮಾರ್ಗದ ರೈಲು ಸಂಚಾರ ತಾತ್ಕಾಲಿಕ ಸ್ಥಗಿತಗೊಂಡಿದೆ. ರೈಲ್ವೆ ಸಿಬ್ಬಂದಿ, ಕಾರ್ಮಿಕರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ ಹಿನ್ನೆಲೆ ಮುಳ್ಳಯ್ಯನಗಿರಿ ಮಾರ್ಗದ ರಸ್ತೆಗೆ ಮತ್ತೆ ಗುಡ್ಡ ಕುಸಿದಿದೆ. ಕುಸಿದ ಸ್ಥಳದಲ್ಲಿ ಮತ್ತೆ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಪ್ರವಾಸಿಗರಿಗೆ ಮುಳ್ಳಯ್ಯನಗಿರಿಗೆ ನಿರ್ಬಂಧ ಹೇರಲಾಗಿದೆ. ಮುಳ್ಳಯ್ಯನಗಿರಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಕಾಫಿನಾಡಿನಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವರುಣನ ಆರ್ಭಟ ಜೋರಾಗಿದ್ದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ. ಶೃಂಗೇರಿ, ಕೊಪ್ಪ,ಕಳಸ, ಮೂಡಿಗೆರೆ, ಎನ್ ಆರ್ ಪುರದಲ್ಲಿ ಮಳೆಯಾಗುತ್ತಿದೆ. ಭಾರಿ ಮಳೆಗೆ ನದಿಗಳು ತುಂಬಿ ಹರಿಯುತ್ತಿವೆ. ಹೇಮಾವತಿ, ತುಂಗಾ, ಭದ್ರಾ ನದಿಗಳ ಒಳ ಹರಿವಿನಲ್ಲಿ ಬಾರಿ ಹೆಚ್ಚಳವಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಮಳೆಗೆ ಮನೆ ಗೋಡೆ ಕುಸಿದು ವೃದ್ಧೆ ಮೃತಪಟ್ಟಿದ್ದಾರೆ. ಗೌರಮ್ಮ(62) ಮೃತರು. ಗಾಯಾಳು ಪತಿ ನಟರಾಜ್ಗೆ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿನ್ನೆ ರಾತ್ರಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಮನೆ ಗೋಡೆ ಕುಸಿದಿದೆ. ಮನೆ ಗೋಡೆ ಕುಸಿದು ಗೌರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿಗೆ ಗಂಭೀರ ಗಾಯಗಳಾಗಿದ್ದವು.
ಸಕಲೇಶಪುರ, ಆಲೂರು, ಹಾಸನ ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ಇಂದು ಯಾವುದೇ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಇಲ್ಲ. ಕಳೆದ ಎರಡು ದಿನಗಳಿಂದ ಐದು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು. ಮಳೆ ಅಧಿಕವಾಗಿ ಶಾಲೆಗಳಿಗೆ ತೆರಳಲು ಸಾಧ್ಯವಾಗದ ಕಡೆಗಳಲ್ಲಿ ರಜೆ ನೀಡಲು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಬಿಇಓಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಭಾರೀ ಮಳೆ ಹಿನ್ನೆಲೆ ಅತಿವೃಷ್ಟಿ ಮತ್ತು ಪ್ರವಾಹದ ಮುನ್ಸೂಚನೆ ಇರುವ ಜಿಲ್ಲೆಗಳ ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ನೀಡಿ ಆದೇಶ ಹೊರಡಿಸಿದ್ದಾರೆ.
Published On - 8:04 am, Wed, 26 July 23