Karnataka Latest News Live Updates: ರಾಜ್ಯದಲ್ಲಿ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ತರಕಾರಿ, ಹೋಟೆಲ್ ಊಟ, ಮದ್ಯ ಹೀಗೆ ಎಲ್ಲವೂ ಬೆಲೆ ಏರಿಕೆಯಾಘಿದ್ದು ಜನರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 1ಕ್ಕೆ ಜಾರಿಯಾಗಬೇಕಿದ್ದ ಅನ್ನ ಭಾಗ್ಯ ಯೋಜನೆ ಜಾರಿಗೆ ಅಕ್ಕಿ ಸಮಸ್ಯೆ ಎದುರಾಗಿದೆ. ಜೊತೆಗೆ ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಮತ್ತು ವಿಪಕ್ಷ ಬಿಜೆಪಿ (BJP) ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಸದ್ಯ ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ನೀಡಲು ಬಿಜೆಪಿ ಮನೆ ಮನೆ ಅಭಿಯಾನ ಆರಂಭಿಸಿದೆ. ಮತ್ತೊಂದೆಡೆ ಬಹುನಿರೀಕ್ಷಿತ ಯೋಜನೆಗಳಾದ ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆ ಜಾರಿಯ ಬಗ್ಗೆ, ಸಿಎಂ ಸಿದ್ದರಾಮಯ್ಯ ನಿನ್ನೆ ಹಾಸನದಲ್ಲಿ ಮಾಹಿತಿ ನೀಡಿದ್ರು. ಜುಲೈ 1ನೇ ತಾರೀಖಿನಿಂದ ಗೃಹಜ್ಯೋತಿ ಯೋಜನೆ ಜಾರಿಯಾಗಲಿದೆ. ಆಗಸ್ಟ್ 15ರ ಬಳಿಕ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತರಲಿದ್ದೇವೆ ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 2ರವರೆಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಜುಲೈ 3ರಂದು ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿದ್ದು, ರಾಜಭವನದಲ್ಲಿ ಬುಡಕಟ್ಟು ಜನಾಂಗದವರ ಜತೆ ರಾಷ್ಟ್ರಪತಿ ಸಂವಾದ ಮಾಡಲಿದ್ದಾರೆ. ಮೈಸೂರು, ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳ ಬುಡಕಟ್ಟು ಜನಾಂಗದವರೊಂದಿಗೆ ರಾಷ್ಟ್ರಪತಿ ಸಂವಾದ ನಡೆಸಲಿದ್ದಾರೆ.
ರಾಜ್ಯ – ರಾಜಾಧಾನಿಗೆ ಇಂದಿನದ ಐದು ದಿನಕ್ಕೆ ಮಳೆ ಅಲರ್ಟ್ ನೀಡಲಾಗಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿಗೆ ಇಂದಿನಿಂದ ನಾಲ್ಕು ದಿನಗಳ ಮಳೆಯಾಗಲಿದೆ.
ಸದ್ಯದಲ್ಲೇ ವರಿಷ್ಠರು ವಿಪಕ್ಷ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂದು ಬೆಂಗಳೂರಿನಲ್ಲಿ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ವಿಪಕ್ಷ ನಾಯಕ ಸ್ಥಾನದ ಮಹತ್ವ ಕೂಡ ವರಿಷ್ಠರಿಗೆ ತಿಳಿದಿದೆ. ಸದ್ಯದಲ್ಲೇ ಸೂಕ್ತ ನಾಯಕನನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ.
ನಾಳೆ ಬಕ್ರೀದ್ ಹಬ್ಬ ಪ್ರಯುಕ್ತ ಮುಸ್ಲಿಂ ಬಾಂದವರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಹಿನ್ನಲೆ ಸಂಚಾರ ಬದಲಾವಣೆ ಮಾಡಲಾಗಿದೆ. ಸುಗಮ ಸಂಚಾರಕ್ಕಾಗಿ ಸಂಚಾರ ಮಾರ್ಪಾಟು ಮಾಡಿದ್ದು, ಬೆಳಗ್ಗೆ 8 ರಿಂದ 11:30 ರ ವರೆಗೆ ಸಂಚಾರ ಮಾರ್ಪಾಡು ಮಾಡಲಾಗಿದೆ.
ದೆಹಲಿ: ಯಾರನ್ನೂ ಕೇಳದೆ ಸಿದ್ದರಾಮಯ್ಯ ಅಕ್ಕಿ ಘೋಷಣೆ ಮಾಡಿದ್ದಾರೆ. ಸುಳ್ಳು ಹೇಳುವುದಕ್ಕೂ ಮಿತಿ ಇರಬೇಕು ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ನೈಸರ್ಗಿಕ ವಿಕೋಪ, ತುರ್ತು ಪರಿಸ್ಥಿತಿಯಲ್ಲಿ ಅಕ್ಕಿ ಕೊಡಬೇಕು. ಕೇಂದ್ರದ ಬಳಿ ಅಕ್ಕಿ ಇದ್ದರೆ ಕೊಡುತ್ತಿದ್ದೆವು ಎಂದಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಿದ್ದೀರಿ. ರಾಜ್ಯದ ಜನರಿಗೆ ನೀವು ಮೋಸ ಮಾಡಿದ್ದೀರಿ. ಅಕ್ಕಿ ಅಂತಾ ಹೇಳಿ ನಂತರ ಆಹಾರ ಧಾನ್ಯ ಕೊಡುತ್ತೇವೆಂದು ಹೇಳಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ 60 ರೂಪಾಯಿ ಇದೆ. ನೀವು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಕೊಡುವುದಾಗಿ ಹೇಳಿದ್ದೀರಿ. ಹಾಗಾದರೆ ನೀವು ಎರಡೂವರೆ ಕೆಜಿ ಅಕ್ಕಿಗೆ ಹಣ ನೀಡುತ್ತಿದ್ದೀರಿ. ಕೇಂದ್ರ ಸರ್ಕಾರ ಪಡಿತರದಾರರಿಗೆ 5 ಕೆಜಿ ಅಕ್ಕಿ ಕೊಡುತ್ತಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀವು 5+5 ಎಂದು ಹೇಳಿದ್ರಾ? 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೀರಿ, ಈಗ ಕೊಡಿ ಎಂದಿದ್ದಾರೆ.
ಅಕ್ಕಿ ಬದಲು ಹಣ ಕೊಡುವ ನಿರ್ಧಾರವನ್ನು ಸ್ವಾಗತ ಮಾಡ್ತೇನೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ಸರ್ಕಾರ ಹಣ ನೀಡುವುದರಿಂದ ರಾಜ್ಯದ ಜನರೂ ಖುಷಿಯಾಗ್ತಾರೆ. ಬ್ಯಾಂಕ್ ಖಾತೆಗೆ ಹಣ ಹಾಕಿದ್ರೆ ಬೇಕಾದ್ದನ್ನು ತೆಗೆದುಕೊಳ್ಳಬಹುದು. ಬಿಜೆಪಿ ನಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಎರಡು ರೀತಿ ಲಾಭ ಆಗುತ್ತೆ ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದು, ನಾಳೆ ಕೇಂದ್ರದ ವಿವಿಧ ಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೇಂದ್ರದ ಜಲಸಂಪನ್ಮೂಲ ಮಂತ್ರಿಗಳನ್ನ ಭೇಟಿ ಮಾಡ್ತಿದ್ದೇನೆ. ಯಾವುದೋ ಟ್ರಿಬ್ಯುನಲ್ ಮಾಡೋಕೆ ಹೊರಟಿದ್ದಾರೆ. ಅದು ನಮ್ಮ ರಾಜ್ಯಕ್ಕೆ ಮಾರಕ ಆಗುತ್ತೆ. ಹೀಗಾಗಿ ಕೇಂದ್ರದ ಮಂತ್ರಿಗಳನ್ನ ಭೇಟಿ ಮಾಡಬೇಕಿದೆ ಎಂದಿದ್ದಾರೆ.
ಹಣ ಹಾಕುವ ಡೋಂಗಿ ರಾಜಕಾರಣ ಸರಿಯಲ್ಲ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ವಾಗ್ದಾಳಿ ಮಾಡಿದ್ದಾರೆ. ಸರ್ಕಾರಕ್ಕೆ ಅಕ್ಕಿ ಕೊಡಲಾಗದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಚುನಾವಣಾ ಪೂರ್ವದಲ್ಲಿ ತಲಾ 10 ಕೆಜಿ ಅಕ್ಕಿ ಕೊಡ್ತೇವೆ ಎಂದಿದ್ದರು. ಕೇಂದ್ರ ಸರ್ಕಾರದ್ದು ಸೇರಿದಂತೆ ಒಟ್ಟು 15 ಕೆಜಿ ಅಕ್ಕಿ ಕೊಡಬೇಕಿತ್ತು. ಈಗ ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ಹಾಕಲು ಹೊರಟಿದೆ. ಹಣ ಏನು ತಿನ್ನಲು ಆಗುತ್ತಾ ಅಂತಾ ಎಂದಿದ್ದಾರೆ.
ನೈತಿಕತೆ ಇಲ್ಲದ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ಸಿದ್ದರಾಮಯ್ಯ ಬಡವರಿಗೆ ಮೋಸ ಮಾಡಿದ್ದಾರೆ. ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಈಗ ಜನಕ್ಕೆ ಮೋಸ ಮಾಡಿದ್ದೀರಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಕಿಡಿಕಾರಿದ್ದಾರೆ. ಹಣ ತಿನ್ನಲು ಆಗಲ್ಲ ಅಕ್ಕಿ ಕೊಡುತ್ತೇವೆ ಎಂದಿದ್ದರು. ಈಗ ಕೊಡಪ್ಪ ಅಕ್ಕಿನಾ. ನಾವು ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದರು.
5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಜನರಿಗೆ ನೀಡಲು ನಿರ್ಧಾರ ಮಾಡಲಾಗಿದೆ. BPL ಕಾರ್ಡ್ನಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ಮಾಸಿಕ 170 ರೂ. ನೀಡಲಾಗುತ್ತೆ. ಜುಲೈ 1ರಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಅಕ್ಕಿ ಸಿಗುವವರೆಗೆ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ನೀಡುತ್ತೇವೆ ಎಂದು ಹೇಳಿದರು.
ಸುಧೀರ್ಘ ಚರ್ಚೆ ಮಾಡುವ ಕೆಲವು ವಿಷಯಗಳಿದ್ದವು. ಒಟ್ಟು 15 ವಿಷಯಗಳನ್ನು ಚರ್ಚೆ ಮಾಡಿ, ನಿರ್ಣಯ ಕೈಗೊಂಡಿದ್ದೇವೆ. ನಾಲ್ಕು ವಿಷಯಗಳು ಲೋಕಾಯುಕ್ತಕ್ಕೆ ಸಂಬಂಧಪಟ್ಟಿದ್ದು. ಎರಡು ಅಪರ ನಿಬಂಧಕರು ಗುತ್ತಿಗೆ ಮೇಲೆ ನೇಮಕ ಆಗಿದ್ದರು. ಇವರ ಸೇವೆ ಒಂದು ವರ್ಷ ಗುತ್ತಿಗೆ ಆಧಾರದ ಮೇಲೆ ಮುಂದುವರಿಕೆಗೆ ಕ್ಯಾಬಿನೇಟ್ ಅನುಮೋದನೆ ನೀಡಿದೆ.
5 ಕೆಜಿ ಅಕ್ಕಿ ಬದಲು ಜನರಿಗೆ ಹಣ ನೀಡಲು ಸಂಪುಟ ಸಭೆ ನಿರ್ಧಾರ ಮಾಡಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಬೆಂಗಳೂರು: ಗೃಹಲಕ್ಷ್ಮಿ ಆ್ಯಪ್ ಬಿಡುಗಡೆಗೂ ಮುನ್ನವೇ ವೈರಲ್ ಆಗುತ್ತಿವೆ ನಕಲಿ ಆ್ಯಪ್ಗಳು. ಹೌದು ಪ್ಲೇಸ್ಟೋರ್ನಲ್ಲಿ ಗೃಹಲಕ್ಷ್ಮೀ ಹೆಸರಿನಲ್ಲಿ ಮೂರು ನಕಲಿ ಌಪ್ಗಳ ಓಪನ್ ಆಗಿವೆ. ಈಗಾಗಲೇ ಗೃಹಲಕ್ಷ್ಮಿಗೆ ಪ್ರತ್ಯೇಕ ಆ್ಯಪ್ ಬಿಡುಗಡೆ ಮಾಡುವುದುದಾಗಿ ಸಚಿವ ಲಕ್ಷ್ಮಿ ಹೆಬ್ಬಳ್ಕಾರ್ ಹೇಳಿದ್ದರು. ಅದರ ಬೆನ್ನಲ್ಲೆ ಇದೀಗ ಎರಡು ಫೇಕ್ ಆ್ಯಪ್ ಗಳು ಒಪನ್ ಆಗಿವೆ.
ಬೆಂಗಳೂರು: ಸ್ತ್ರಿ ಶಕ್ತಿ ಸಂಘದ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಸಿಎಂ ನಿವಾಸದ ಬಳಿ ಸ್ತ್ರೀ ಶಕ್ತಿ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಚುನಾವಣಾ ಸಮಯದಲ್ಲಿ ಸ್ತ್ರೀ ಶಕ್ತಿ ಸಂಘದ ಸಾಲ ಮನ್ನಾದ ಭರವಸೆ ನೀಡಿದ್ರಿ, ಅದರಂತೆ ಈಗ ಸಾಲ ಮನ್ನಾ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. ಸಿಎಂ ಬರುವವರೆಗೂ ನಾವು ಇಲ್ಲಿಂದ ಕದಲೋದಿಲ್ಲ ಎಂದು ಸಿಎಂ ನಿವಾಸ ಕುಮಾರಕೃಪ ರಸ್ತೆಯಲ್ಲೇ ಕುಳಿತುಕೊಂಡಿದ್ದಾರೆ.
ವಿಜಯಪುರ ಬಸ್ ನಿಲ್ದಾಣದ ಬಳಿ ಎಬಿವಿಪಿ ಸಂಘಟನೆ ಹಾಗೂ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ವೇಳೆ ಬಸ್ ನಿಲ್ದಾಣದಲ್ಲಿ ನುಗ್ಗಲು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಯತ್ನಿಸಿದ್ದಾರೆ. ರಾಜ್ಯದಲ್ಲಿ ಶಕ್ತಿ ಯೋಜನೆಯ ಎಫೆಕ್ಟ್ ನಿಂದ ಸರಿಯಾದ ಸಮಯಕ್ಕೆ ಬಸ್ ಗಳು ಬರುತ್ತಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಬರಲು ವಿಳಂಬವಾಗುತ್ತಿದೆ. ತರಗತಿಗಳು ತಪ್ಪುತ್ತಿವೆ ಎಂದು ಪ್ರತಿಭಟನಾಕಾರರ ಆಕ್ರೋಶ ಹೊರ ಹಾಕಿದ್ದಾರೆ.
ಹಂತ ಹಂತವಾಗಿ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡ್ತಿದೆ. ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಇವರ ತಲೆಯಲ್ಲಿ ಸಗಣಿ ಇದೆಯೋ ಏನೋ ನನಗೆ ಅರ್ಥ ಆಗ್ತಿಲ್ಲ ಎಂದು ಶಿವಮೊಗ್ಗ ನಗರದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿಯವರು 2 ಕೋಟಿ ಉದ್ಯೋಗ ಕೊಡ್ತೀವಿ ಅಂದ್ರು ಕೊಟ್ರಾ ಬಿಜೆಪಿಯವರು 5 ಗ್ಯಾರಂಟಿಗಳ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಜನವರಿವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದು. ಬಿಜೆಪಿ ಹಗರಣ ಬಗ್ಗೆ ತನಿಖೆ ಮಾಡಲು ನಾನು ಒತ್ತಾಯ ಮಾಡ್ತೇನೆ. ಬಿಜೆಪಿ ಹಗರಣದ ದುಡ್ಡಲ್ಲೇ ನಾನು ತೀರ್ಥಹಳ್ಳಿಯಲ್ಲಿ ಸೋತಿದ್ದೇನೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ 70 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದರು.
ಹೊಂದಾಣಿಕೆ ರಾಜಕಾರಣ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಬಹಿರಂಗ ಹೇಳಿಕೆಯಿಂದ ನಮ್ಮ ಮನಸ್ಸಿಗೆ ನೋವಾಗಿದೆ ಎಂದು ಶಿವಮೊಗ್ಗದಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಬೇಸರ ಹೊರ ಹಾಕಿದ್ದಾರೆ. ನಾಯಕರು ಕಾರ್ಯಕರ್ತರಿಗೆ ನೋವು ಆಗದಂತೆ ನೋಡಿಕೊಳ್ಳಬೇಕು. ವಿಧಾನಸಭೆ ಚುನಾವಣೆ ಫಲಿತಾಂಶ ಕೆಟ್ಟ ಕನಸು. ಮುಂದಿನ ಚುನಾವಣೆ ಗೆಲುವಿನತ್ತ ನಾವೆಲ್ಲರೂ ಗಮನಹರಿಸಬೇಕು ಎಂದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ವರ್ಗಾವಣೆಯಾಗಿದ್ದು ನೂತನ ಜಿಲ್ಲಾಧಿಕಾರಿಯಾಗಿ ಮೀನಾ ನಾಗರಾಜ್ ನೇಮಕಗೊಂಡಿದ್ದಾರೆ.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಹಿನ್ನೆಲೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಯಾದಗಿರಿಯ ಗುರುಮಠಕಲ್ ತಾಲೂಕಿನ ಹಿಮ್ಲಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಬೇಧಿಯಿಂದ 54 ಜನ ಅಸ್ವಸ್ಥಗೊಂಡಿದ್ದಾರೆ. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವವರನ್ನ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ ವೇ ವಾಹನ ಸವಾರರಿಗೆ ಮತ್ತೊಂದು ಶಾಕ್. ಜುಲೈ 1ರಿಂದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯ ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹ ಆರಂಭವಾಗಲಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸಂಚರಿಸುವವರಿಗೆ ಮತ್ತೊಂದು ಟೋಲ್ ಬಿಸಿ, ಜುಲೈ 1ರಿಂದ ಆರಂಭ, ಯಾವ ವಾಹನಕ್ಕೆ ಎಷ್ಟು ಹಣ? ಇಲ್ಲಿದೆ ವಿವರ#BengaluruMysuru #Expressway #tollplaza #mandya @mepratap https://t.co/lCON0xrHak
— TV9 Kannada (@tv9kannada) June 28, 2023
ಚಾಮರಾಜನಗರ: ಹೊಲದ ಗುಡಿಸಲಿನಲ್ಲಿ ಮಲಗಿದ್ದ ರೈತನ ಮೇಲೆ ಚಿರತೆ ದಾಳಿ ನಡೆಸಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ಕಂಚಗಳ್ಳಿಯಲ್ಲಿ ಜೋಳದ ಫಸಲು ಕಾವಲು ಕಾಯುತ್ತಿದ್ದ ರೈತ ನಂಜಪ್ಪ ರಗ್ಗು ಹೊದ್ದು ಮಲಗಿದ್ದ ವೇಳೆ ಚಿರತೆ ದಾಳಿ ಮಾಡಿದೆ. ನಂಜಪ್ಪನ ತೋಳು ಪರಚಿದೆ. ತಕ್ಷಣ ರಗ್ಗು ಬೀಸಾಡುತ್ತಿದ್ದಂತೆ ಓಡಿ ಹೋಗಿದೆ. ರೈತ ನಂಜಪ್ಪನಿಗೆ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸರಣಿ ಟ್ವೀಟ್ ಮೂಲಕ ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ.
ಪಂಚಗ್ಯಾರಂಟಿಗಳ @INCKarnataka ಸರಕಾರ, ಈಗ 6ನೇ ಗ್ಯಾರಂಟಿಯನ್ನೂ ಖಾತ್ರಿಗೊಳಿಸಿದೆ.
ಅದು; ʼಕಾಸಿಗಾಗಿ ಪೋಸ್ಟಿಂಗ್!!ʼ
ಅಧಿಕಾರಕ್ಕೆ ಬಂದು ತಿಂಗಳು ಮುಗಿಯುತ್ತಿದ್ದಂತೆಯೇ ವರ್ಗಾವಣೆ ದಂಧೆಯ ಕೊಚ್ಚೆಯಲ್ಲಿ ಈ ಸರಕಾರ ಎಗ್ಗಿಲ್ಲದೆ ಉರುಳಾಡುತ್ತಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. 1/4#CashForPostinghttps://t.co/DWNsAw8Uwh— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 28, 2023
ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಅನ್ನಭಾಗ್ಯ ಯೋಜನೆ ಸೇರಿದಂತೆ ನಾಲ್ಕು ಯೋಜನೆಗಳ ಜಾರಿ ಸಂಬಂಧ ಗಂಭೀರ ಸಮಾಲೋಚನೆ ನಡೆಸಲಾಗುತ್ತೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದಲ್ಲಿ ಆಡು ನುಂಗಲು ಸಾಧ್ಯವಾಗದೇ ಆಡನ್ನು ಬಿಟ್ಟು ಹೆಬ್ಭಾವು ತೆರಳಿದ ಘಟನೆ ನಡೆದಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಭಾರೀ ಗಾತ್ರದ ಹೆಬ್ಬಾವು ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಆಡೊಂದನ್ನು ಬೇಟೆಯಾಡಿದ್ದು ಹಿಡಿದ ಆಡನ್ನು ನುಂಗಲು ಸುಮಾರು ಒಂದು ತಾಸು ಸೆಣಸಾಡಿ ವಿಫಲವಾಗಿ ನುಂಗಲು ಸಾಧ್ಯವಾಗದೆ ತೆರಳಿದೆ. ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ.
ಎರಡನೇ ಭಾರಿಗೆ ಸಿಎಂ ಆಗಿದ್ದಕ್ಕೆ ಪತ್ರ ಬರೆದು ಅಭಿನಂದಿಸಿದ್ದ 8 ನೇ ತರಗತಿ ವಿದ್ಯಾರ್ಥಿನಿಗೆ ಸಿಎಂ ಸಿದ್ದರಾಮಯ್ಯ ಮರಳಿ ಪತ್ರ ಬರೆದು ಉತ್ತರಿಸಿದ್ದಾರೆ. ಅನ್ನಭಾಗ್ಯ, ಶೂ ಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯದಂತ ಅನೇಕ ಕಾರ್ಯಕ್ರಮ ನೀಡಿದ್ದೀರಿ. ನೀವು ಬಡವರು, ದೀನ ದಲಿತರ ಪರವಾಗಿರೋ ನಾಯಕ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ಬರೆದಿದ್ದರು. ಇದಕ್ಕೆ ಸಿಎಂ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
ಈ ಬಾರಿ ಮುಂಗಾರು ಜುಲೈ ಮೊದಲ ವಾರದಲ್ಲೇ ಕರ್ನಾಟಕಕ್ಕೆ ಆಗಮಿಸಬೇಕಿತ್ತು. ಆದ್ರೆ, ಮಳೆ ಈ ಬಾರಿ ನಿಗದಿತ ಸಮಯಕ್ಕೆ ಬಂದಿಲ್ಲ. ಹೀಗಾಗಿ ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ರೈತರು ಪ್ರತಿ ಬಾರಿ ಜೂನ್ ಆರಂಭದಲ್ಲೇ ಎಲ್ಲಾ ಬೆಳೆಗಳು ಹಾಗೂ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದರು. ಈ ಬಾರಿ ಮುಂಗಾರು ಕೈ ಕೊಟ್ಟ ಕಾರಣ ಮಾರಾಟ ಸ್ವಲ್ಪ ತಡ ಮಾಡುತ್ತಿದ್ದಾರೆ.
ಏಕಾಏಕಿ ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಿದ್ದೇಕೆ? ಇಲ್ಲಿದೆ ಅಸಲಿ ಕಾರಣಗಳು#vegetable #GroceryStore #Prices #Karnataka @BJP4Karnataka @INCKarnataka @CMofKarnataka https://t.co/j8auImhq5X
— TV9 Kannada (@tv9kannada) June 28, 2023
ಕೇದಾರನಾಥದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಪುಂಡರು ಉದ್ಧಟತನ ಮೆರೆದಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ ಯುವಕರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ. ಕೇದಾರನಾಥ ಪ್ರವಾಸ ಕೈಗೊಂಡಿದ್ದ ಐವರು ಯುವಕರು ಭಗವಾ ಧ್ವಜ ಹಿಡಿದು ಘೋಷಣೆ ಕೂಗಿರುವ ವಿಡಿಯೋ ಎಂಇಎಸ್ ಯುವ ಘಟಕದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆದಿದೆ. ಬಾಗಲಕೋಟೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಅವರ ವಿದ್ಯಾಗಿರಿಯ ಅಕ್ಕಿಮರಡಿ ಲೇಔಟ್ನಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿದ್ಯಾಗಿರಿಯ 18ನೇ ಕ್ರಾಸ್ನಲ್ಲಿರುವ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರು ಮನೆಯಲ್ಲೂ ಪರಿಶೀಲನೆ ನಡೆದಿದೆ.
ಉಪ್ಪಾರಪೇಟೆ ಬಳಿ ಇರುವ ಬಿಬಿಎಂಪಿ ಕಚೇರಿ ಬಳಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಡಾ. ಸುಮನ್ ಪನ್ನೇಕರಚ ಅವರ ಕಾರಿನಲ್ಲಿದ್ದ ಡಿಎಸ್ಸಿ ಕೀ ಕಳ್ಳತನವಾಗಿದೆ. ಇ- ತಂತ್ರಾಂಶದ ಸಹಿಗೆ ಬಳಸುವ ಡಿಎಸ್ ಸಿ ಕೀ ಕಳ್ಳತನವಾಗಿದೆ. ಡಿಸಿಪಿ ಡಾ. ಸುಮನ್ ಪನ್ನೇಕರ್ ಖಾಸಗಿ ಕಾರಿನಲ್ಲಿ ಬಿಬಿಎಂಪಿ ಕಚೇರಿ ಬಳಿ ಬಂದಿದ್ದರು. ಕೀಯನ್ನ ಕಾರಿನ ಸೀಟ್ ಮೇಲೆ ಬಿಟ್ಟಿದ್ದರು. ಕಾರು ಲಾಕ್ ಮಾಡುವುದನ್ನ ಮರೆತು ಕಚೇರಿಗೆ ತೆರಳಿದ್ದಾರೆ. ಈ ವೇಳೆ ಚಾಲಾಕಿ ಕಳ್ಳರು ಕೀ ಕಳ್ಳತನ ಮಾಡಿದ್ದಾರೆ. ಡಿಎಸ್ ಸಿ ಕೀ ಮರೆತು ಬಂದಿರುವುದು ನೆನಪಾಗಿ ಕಾರಿನ ಬಳಿ ಬಂದಾಗ ಕಳ್ಳತನ ಕೃತ್ಯ ಬಯಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಮತ್ತೆ ಅಕ್ಕಿ ಹಗ್ಗ ಜಗ್ಗಾಟ ಮುಂದುವರಿದಿದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂಬ
ರಾಜ್ಯ ಸರ್ಕಾರದ ಆರೋಪಕ್ಕೆ ವಿಪಕ್ಷ ಬಿಜೆಪಿ ಕೌಂಟರ್ ಕೊಡಲು ಮುಂದಾಗಿದ್ದು ರಾಜ್ಯ ಸರ್ಕಾರದ ಆರೋಪಕ್ಕೆ ಒಂದು ವಾರದ ಕ್ಯಾಂಪೇನ್ ಕೈಗತ್ತಿಕೊಂಡಿದೆ. ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿರುವ ವಿಚಾರದ ಬಗ್ಗೆ ಮನೆ ಮನೆ ಸಂಪರ್ಕ ಅಭಿಯಾನ ಮಾಡುತ್ತಿದೆ. ಮನೆ ಮನೆಗೆ ಹೋಗಿ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿರುವ ಬಗ್ಗೆ ಹೇಳಲು ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಇಂದಿನಿಂದ (ಜೂನ್ 28) ಈ ಅಭಿಯಾನ ಆರಂಭವಾಗಲಿದೆ.
Published On - 7:25 am, Wed, 28 June 23