
ಬೆಂಗಳೂರು, (ನವೆಂಬರ್ 27): ಬೆಂಗಳೂರು ಜಲಮಂಡಳಿ (BWSSB) ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ್ದು, ನೀರಿನ ಬಾಕಿ ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ದಂಡ , ಬಡ್ಡಿ ಮತ್ತು ಇತರ ಶುಲ್ಕಗಳಲ್ಲಿ ಶೇ.100 ರಷ್ಟು ರಿಯಾಯಿತಿ ನೀಡಲು ಸಚಿವ ಸಂಪುಟ (Karnataka cabinet) ನಿರ್ಧರಿಸಿದೆ. ಗೃಹ ಬಳಕೆಯ ಗ್ರಾಹಕರು, ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಇತರ ಶಾಸನಬದ್ಧ ಸಂಸ್ಥೆಗಳು ಬಾಕಿ ಮೊತ್ತವನ್ನು ಕಟ್ಟಿ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗ್ರಾಹಕರು ನೀರಿನ ಬಾಕಿ ಅಸಲು ಮೊತ್ತವನ್ನು ಏಕ ಕಾಲದಲ್ಲಿ ಪಾವತಿಸಿದರೆ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇಕಡಾ 100%ರಷ್ಟು ಮನ್ನಾ ಮಾಡುವ “ಏಕಕಾಲಿಕ ತೀರುವಳಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇಂದು (ನವೆಂಬರ್ 27) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಂಪುಟ ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್, ಒಟ್ಟು 701 ಕೋಟಿ ರೂಪಾಯಿ ಪಾವತಿ ಬಾಕಿ ಇದೆ. ಈ ಪೈಕಿ 431 ಕೋಟಿ ರೂ. ಅಸಲು ಹಾಗೂ ಬಡ್ಡಿ ಮೊತ್ತ 262 ಕೋಟಿ ರೂ. ಇದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಜಲ ಮಂಡಳಿ ತನ್ನ ಬಾಕಿ ಮೊತ್ತವನ್ನು ವಸೂಲಿ ಮಾಡಲು ‘ಒನ್-ಟೈಮ್ ಸೆಟಲ್ಮೆಂಟ್’ (ಒಂದು ಬಾರಿ ಇತ್ಯರ್ಥ) ಯೋಜನೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಕ್ರಮದಿಂದಾಗಿ ಲಕ್ಷಾಂತರ ಗ್ರಾಹಕರಿಗೆ ಅನುಕೂಲವಾಗಲಿದ್ದು, ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೂ ಇದು ಅನ್ವಯವಾಗುತ್ತದೆ. ಇದರಿಂದ ಜಲಮಂಡಳಿಗೆ ಬರಬೇಕಾದ 701ಕೋಟಿ ರೂಪಾಯಿಗೂ ಅಧಿಕ ಬಾಕಿ ಮೊತ್ತವನ್ನು ಶೀಘ್ರವಾಗಿ ಸಂಗ್ರಹಿಸಿ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
Published On - 7:31 pm, Thu, 27 November 25