ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: 7 ತಿಂಗಳಾದ್ರೂ ಕಿಕ್ ಕೊಡದ ಎಣ್ಣೆ, ಕಾರಣವೇನು?
ರಾಜ್ಯ ಸರ್ಕಾರ ಹೆಚ್ಚಿನ ಆದಾಯದ ಮೂಲ ಹೊಂದಿರುವ ಇಲಾಖೆಗಳ ಪೈಕಿ ಅಬಕಾರಿ ಇಲಾಖೆ ಸಹ ಒಂದಾಗಿದೆ. ಸರ್ಕಾರ ಖಜಾನೆಗೆ ಶೇ.20ರಷ್ಟು ಆದಾಯ ನೀಡುವುದೇ ಈ ಅಬಕಾರಿ ಇಲಾಖೆ. ಆದ್ರೆ, ಇದೀಗ ಆದಾಯದಲ್ಲಿ ಕುಂಠಿತವಾಗಿದೆ. ಹೌದು...2024ನೇ ಸಾಲಿಗೆ ಹೋಲಿಸಿದರೆ ಕಳೆದ ಏಳು ತಿಂಗಳಲ್ಲಿ ರಾಜ್ಯದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಬೆಂಗಳೂರು, (ನವೆಂಬರ್ 26): ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅದರಲ್ಲೂ ಬಿಯರ್ ಮಾರಾಟವಂತೂ ಪಾತಾಳಕ್ಕೆ ಕುಸಿದಿದೆ. 2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ವಿಸ್ಕಿ, ಬ್ರಾಂದಿ, ರಮ್, ಜಿನ್ ಸೇರಿ 407.40 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ಗೆ 8.64 ಲೀಟರ್) ಐಎಂಎಲ್ ಮದ್ಯ ಮಾರಾಟವಾಗಿದ್ದರೆ, ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ 403.04 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿ 4.36 ಲಕ್ಷ ಬಾಕ್ಸ್ ಕೊರತೆ ಕಂಡುಬಂದಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲವಾದ ಅಬಕಾರಿ ಇಲಾಖೆಯಿಂದ ನಿರೀಕ್ಷೆಯಂತೆ ಆದಾಯ ಸಂಗ್ರಹ ಕೂಡ ಆಗುತ್ತಿಲ್ಲ. ಹೀಗಾಗಿ ಸರ್ಕಾರವೇ ಕಂಗಾಲಾಗಿದೆ.
ಕಳೆದ 7 ತಿಂಗಳ ಅಂಕಿಅಂಶಗಳಂತೆ ಬಿಯರ್ ಹಾಗೂ IML ಮಾರಾಟ ಫುಲ್ ಡಲ್ ಆಗಿದೆ. 2024ರಲ್ಲಿ 279 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, 2025ರಲ್ಲಿ ಕೇವಲ 228 ಲಕ್ಷ ಬಾಕ್ಸ್‌ಗಳಷ್ಟೇ ಮಾರಾಟವಾಗಿವೆ. ಅಂದರೆ ಬರೋಬ್ಬರಿ 51 ಲಕ್ಷ ಬಾಕ್ಸ್‌ಗಳಷ್ಟು ಬಿಯರ್ ಮಾರಾಟ ಕುಸಿತವಾಗಿವೆ. ಇದೇ ರೀತಿ ವಿಸ್ಕಿ, ಬ್ರಾಂದಿ, ರಮ್, ಜಿನ್ ಸೇರಿ ಎಲ್ಲಾ ಇಂಡಿಯನ್ ಮೇಡ್ ಲಿಕ್ಕರ್ ಮಾರಾಟದಲ್ಲೂ ಇಳಿಕೆ ಕಂಡುಬಂದಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: ಕಾರಣ ಏನು ಗೊತ್ತೇ?
2024ರ ನವೆಂಬರ್ ಅವಧಿಯವರೆಗೆ 407 ಲಕ್ಷ ಬಾಕ್ಸ್ ಐಎಮ್ಎಲ್ ಮಾರಾಟ ಆಗಿದ್ರೆ ಈ ವರ್ಷ 403 ಲಕ್ಷ ಬಾಕ್ಸ್‌ಗಳಿಗೆ ಇಳಿದಿದೆ. ಅಂದರೆ 4.36 ಲಕ್ಷ ಬಾಕ್ಸ್‌ಗಳ ಮಾರಾಟ ಕುಸಿದಿದೆ. ಎಣ್ಣೆ ಮಾರಾಟ ಕುಸಿತದಿಂದ ಅಬಕಾರಿ ಇಲಾಖೆ ತಲೆ ಕೆಡಿಸಿಕೊಂಡಿದೆ. ಸರ್ಕಾರ ಅವಾಗವಾಗ ಮದ್ಯದ ಬೆಲೆ ಏರಿಸುವುದರಿಂದ ಮದ್ಯಪ್ರಿಯರು ಪರ್ಯಾಯ ಮಾರ್ಗ ಹುಡುಕಿಕೊಂಡ್ರಾ ಅನ್ನೋ ಪ್ರಶ್ನೆಯೂ ಎದುರಾಗಿದೆ. ಅಲ್ಲದೇ ಗಾಂಜಾ-ಅಫೀಮು ಹಾವಳಿಯಿಂದ ಮದ್ಯ ಮಾರಾಟ ಕುಸಿದಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೂರ್ನಾಲ್ಕು ಬಾರಿ ಮದ್ಯದ ದರ ಏರಿಕೆ ಮಾಡಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳಿಗಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡುವ ಸಲುವಾಗಿ ಬೆಲೆ ಏರಿಕೆ ಮಾಡಿತ್ತು. ಇದರಿಂದ 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು 35,530 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. ಅದರ ಹಿಂದಿನ ಸಾಲಿನಲ್ಲಿ 34,629 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು 2025-26ನೇ ಸಾಲಿನಲ್ಲಿ 40,000 ಕೋಟಿ ರೂಪಾಯಿ ಆದಾಯದ ಗುರಿಯನ್ನು ಅಬಕಾರಿ ಇಲಾಖೆ ನೀಡಲಾಗಿದೆ. ಆದ್ರೆ, ಕಳೆದ ಏಳು ತಿಂಗಳಿನಿಂದ ಮದ್ಯ ಮಾರಾಟದಲ್ಲಿ ಭಾರಿ ಕುಸಿತಕಂಡಿದೆ. ಇದರಿಂದ ಈ ವರ್ಷದ ಗುರಿ ತಲುಪುವುದು ಕಷ್ಟವಾಗಿದೆ.
ವರ್ಷದಿಂದ ವರ್ಷಕ್ಕೆ ಐಎಂಎಲ್ ಮದ್ಯ ಮಾರಾಟ ಕುಸಿತ
3 ವರ್ಷದ ಅಂಕಿ ಅಂಶ ನೋಡಿದರೆ, ವರ್ಷದಿಂದ ವರ್ಷಕ್ಕೆ ಐಎಂಎಲ್ ಮದ್ಯ ಮಾರಾಟ ಕಡಿಮೆ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂರ್ನಾಲ್ಕು ಬಾರಿ ಮದ್ಯದ ಮೇಲೆ ದರ ಏರಿಕೆ ಮಾಡಿರುವುದು ಎನ್ನುತ್ತಿದ್ದಾರೆ ಮದ್ಯ ಮಾರಾಟಗಾರರು.
ಈ ವರ್ಷ 51 ಲಕ್ಷ ಬಾಕ್ಸ್ ಬಿಯರ್ ಮಾರಾಟ ಕಡಿಮೆ ಆಗಿದೆ. 2024ರಲ್ಲಿ 278.79 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 7.80 ಲೀಟರ್) ಬಿಯರ್ ಮಾರಾಟವಾಗಿತ್ತು. 2025ರಲ್ಲಿ ಇದು 227.62 ಲಕ್ಷ ಬಾಕ್ಸ್ ಗೆ ಕುಸಿದಿದೆ. ಅಂದರೆ ಬರೋಬ್ಬರಿ 51.17 ಲಕ್ಷ ಬಾಕ್ಸ್ ಬಿಯರ್ ಮಾರಾಟ ಕಡಿಮೆಯಾಗಿದೆ.
2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ವಿಸ್ಕಿ, ಬ್ರಾಂದಿ, ರಮ್, ಜಿನ್ ಸೇರಿ 407.40 ಲಕ್ಷ ಬಾಕ್ಸ್ (ಒಂದು ಬಾಕ್ ಗೆ 8.64 ಲೀಟರ್) ಐಎಂಎಲ್ ಮದ್ಯ ಮಾರಾಟವಾಗಿದ್ದರೆ, ಈ ವರ್ಷ 403.04 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದೆ. ಇದರೊಂದಿಗೆ 4.36 ಲಕ್ಷ ಬಾಕ್ಸ್ ವ್ಯಾಪಾರ ಕಡಿಮೆ ಆಗಿದೆ. 2023ರಲ್ಲಿ ಈ ಪ್ರಮಾಣ 410.78 ಲಕ್ಷ ಬಾಕ್ಸ್ ಮಾರಾಟವಾಗಿತ್ತು.
ಒಟ್ಟಿನಲ್ಲಿ ಈ ಹಿಂದೆಗೆ ಹೋಲಿಕೆ ಮಾಡಿದ್ರೆ ಈ ವರ್ಷ 30% ರಷ್ಟು ಮದ್ಯ ಮಾರಾಟ ಕುಸಿತವಾಗಿದೆ ಎಂದು ತಿಳಿದುಬಂದಿದೆ.



