ಮುರುಘಾ ಶ್ರೀ ಪೋಕ್ಸೋ ಕೇಸ್ ಖುಲಾಸೆ; ಶಿವಮೂರ್ತಿ ಶರಣರು ನಿರಾಳ
Shivamurthy Murugha Sharana: ಮುರುಘಾಶ್ರೀ ವಿರುದ್ಧ ದಾಖಲಾಗಿರುವ ಎರಡು ಪೊಕ್ಸೋ ಪ್ರಕರಣಗಳ ಪೈಕಿ ಮೊದಲ ಕೇಸ್ನ ತೀರ್ಪು ಹೊರಬಿದ್ದಿದೆ. ಈ ಬಗ್ಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮುರುಘಾಶ್ರೀಗೆ ಬಿಗ್ ರಿಲೀಫ್ ಕೊಟ್ಟಿದೆ. 2022ರ ಆಗಸ್ಟ್ 26ರಂದು ಮುರುಘಾ ಶ್ರೀ ವಿರುದ್ಧ ಮೊದಲ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಚಿತ್ರದುರ್ಗ, ನವೆಂಬರ್ 26: ಮೊದಲ ಪೋಕ್ಸೋ ಪ್ರಕರಣ ಸಂಬಂಧ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಕೇಸ್ನಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ ಎಂದಿರುವ ಕೋರ್ಟ್, ಪೋಕ್ಸೋ ಕೇಸ್ ಖುಲಾಸೆಗೊಳಿಸಿದೆ. 2ನೇ ಆರೋಪಿ ರಶ್ಮಿ, 4ನೇ ಆರೋಪಿ ಪರಮಶಿವಯ್ಯ ಕೂಡ ನಿರ್ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದ್ದು, ಮುರುಘಾಶ್ರೀ ಪರವಾಗಿ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.
2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾ ಶ್ರೀ ವಿರುದ್ಧ ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು. ಮಠದ ಹಾಸ್ಟೆಲ್ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ದೂರು ನೀಡಿದ್ದರು. ಆಗಸ್ಟ್ 27ರಂದು ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. 2022ರ ಸೆಪ್ಟಂಬರ್ 1ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿಯನ್ನ ಪೊಲೀಸರು ಬಂಧಿಸಿದ್ದರು. ಚಾರ್ಜ್ಶೀಟ್ ವೇಳೆ ಎ3 ಬಸವಾದಿತ್ಯ, ಎ5 ವಕೀಲ ಗಂಗಾಧರಯ್ಯ ಅವರನ್ನು ಕೈಬಿಡಲಾಗಿತ್ತು.
ಇದನ್ನೂ ಓದಿ: ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಗೆ ಮತ್ತೊಂದು ಹೊಸ ಸಂಕಷ್ಟ, ಏನದು?
ಮಠದ ಅಡುಗೆ ಸಹಾಯಕಿ ನೀಡಿದ್ದ ದೂರಿನ ಅನ್ವಯ ಮುರುಘಾ ಶ್ರೀ ವಿರುದ್ಧ 2022ರ ಅಗಸ್ಟ್ 13ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಮಠದ ಹಾಸ್ಟೆಲ್ನಲ್ಲಿದ್ದಮ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರಲ್ಲಿ ಅಡುಗೆ ಸಹಾಯಕಿ ಉಲ್ಲೇಖಿಸಿದ್ದರು. ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ದ ಕೇಸ್ ದಾಖಲಾಗಿತ್ತು.
2023ರ ನವೆಂಬರ್ 8ರಂದು ಹೈಕೋರ್ಟ್ನಿಂದ ಮುರುಘಾ ಶ್ರೀಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು, ನವೆಂಬರ್ 16ರಂದು ಕಾರಾಗ್ರಹದಿಂದ ಬಿಡುಗಡೆಯಾಗಿದ್ದರು. ಆದರೆ 2ನೇ ಪೋಕ್ಸೋ ಕೇಸಲ್ಲಿ ಜಾಮೀನು ಪಡೆಯದ ಹಿನ್ನೆಲೆ ನ.20ರಂದು ಮಧ್ಯಾಹ್ನ ಮುರುಘಾಶ್ರೀ ಮತ್ತೆ ಅರೆಸ್ಟ್ ಆಗಿದ್ದರು. ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹಿನ್ನೆಲೆ ಅರೆಸ್ಟ್ ಮಾಡಲಾಗಿತ್ತಾದರೂ ಸಂಜೆ ವೇಳೆಗೆ ಹೈಕೋರ್ಟ್ ಸೂಚನೆ ಮೇರೆಗೆ ಮುರುಘಾ ಶ್ರೀ ಬಿಡುಗಡೆ ಮಾಡಲಾಗಿತ್ತು.
ಮುರುಘಾಶ್ರೀ ಜಾಮೀನು ರದ್ದತಿ ಕೋರಿ ಸಂತ್ರಸ್ತೆಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಮುಖ್ಯಸಾಕ್ಷ್ಯ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾಶ್ರೀ ಬಂಧನದಲ್ಲಿಡಲು ಕೋರ್ಟ್ ಆದೇಶಿಸಿತ್ತು. ಈ ಹಿನ್ನಲೆ ಮೇ 27, 2024ರಂದು ಕೋರ್ಟ್ ಎದುರು ಮುರುಘಾಶ್ರೀ ಶರಣಾಗಿದ್ದರು. ಈ ವೇಳೆ ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಸಂತ್ರಸ್ತೆಯರಿಬ್ಬರು ಸೇರಿ 13 ಜನರ ಸಾಕ್ಷ್ಯ ವಿಚಾರಣೆ ಅಂತ್ಯ ಹಿನ್ನೆಲೆ ಅ.07, 2024ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:11 pm, Wed, 26 November 25



