AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಮಗುವಿಗೆ ಜನ್ಮ ನೀಡಿದ 10 ನೇ ತರಗತಿ ವಿದ್ಯಾರ್ಥಿನಿ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ಕೊಪ್ಪಳದ ಕುಕನೂರು ವಸತಿನಿಲಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಹೆರಿಗೆಯಾದ ಘಟನೆ ರಾಜ್ಯಾದ್ಯಂತ ಆತಂಕ ಮೂಡಿಸಿದೆ. ಕುಕನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಪಾಲಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳ ಸುರಕ್ಷತೆ ಮತ್ತು ವಸತಿನಿಲಯಗಳ ಮೇಲ್ವಿಚಾರಣೆ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿವೆ.

ಕೊಪ್ಪಳ: ಮಗುವಿಗೆ ಜನ್ಮ ನೀಡಿದ 10 ನೇ ತರಗತಿ ವಿದ್ಯಾರ್ಥಿನಿ; ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಮಗುವಿಗೆ ಜನ್ಮ ನೀಡಿದ 10 ನೇ ತರಗತಿ ವಿದ್ಯಾರ್ಥಿನಿ
ಶಿವಕುಮಾರ್ ಪತ್ತಾರ್
| Edited By: |

Updated on: Nov 26, 2025 | 1:20 PM

Share

ಕೊಪ್ಪಳ, ನವೆಂಬರ್ 26: ಭವಿಷ್ಯ ರೂಪಿಸಿಕೊಳ್ಳಬೇಕಾದ 10ನೇ ತರಗತಿಯ ಬಾಲಕಿಯೊಬ್ಬಳು ಹಸುಗೂಸಿಗೆ ಜನ್ಮ ನೀಡಿದ ಘಟನೆ ಕೊಪ್ಪಳದ  (Koppal) ಕುಕನೂರು ತಾಲೂಕಿನ ಶಾಲೆಯ ವಸತಿನಿಲಯದಲ್ಲಿ ನಡೆದಿದೆ. ಕುಕನೂರು ಪೋಲಿಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು,ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಕುಕನೂರು ತಾಲೂಕಿನ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ದಿಢೀರ್ ಹೊಟ್ಟೆನೋವಿನಿಂದ ನರಳಾಡಿದ್ದು, ತಕ್ಷಣವೇ ಆಕೆಯನ್ನು ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆ ಅಪ್ರಾಪ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ.

ಅಪ್ರಾಪ್ತೆಯು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ದಿ ಅವರು ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿ, ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಕುಕನೂರು ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದ್ದು, ಬಾಲಕಿಯ ಈ ಸ್ಥಿತಿಗೆ ಕಾರಣನಾದ ಯುವಕನನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಘಟನೆಯಿಂದಾಗಿ ವಸತಿನಿಲಯದಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಆತಂಕಗಳುಂಟಾಗಿವೆ.

ಇದನ್ನೂ ಓದಿ ಕರ್ನಾಟಕದಲ್ಲಿ ದಿನಕ್ಕೆ 10 ಪೋಕ್ಸೋ ಕೇಸ್ ದಾಖಲು: ಮಕ್ಕಳ ಮೇಲಿನ ಅಪರಾಧ ಕೃತ್ಯಗಳಲ್ಲಿ ಭಾರಿ ಹೆಚ್ಚಳ

ಹಾಸ್ಟೆಲ್ ವಾರ್ಡನ್ ವಿರುದ್ಧ ಪಾಲಕರ ಆಕ್ರೋಶ

ಬಾಲಕಿ 9 ತಿಂಗಳು ಗರ್ಭಿಣಿಯಾಗಿದ್ದರೂ ಅಲ್ಲಿನ ವಾರ್ಡನ್ ಅಥವಾ ಸಿಬ್ಬಂದಿಯ ಗಮನಕ್ಕೆ ಬಾರದೇ ಹೋಗಿದ್ದು ಹೇಗೆ ಎಂದು ಪಾಲಕರು ಮತ್ತು ಗ್ರಾಮಸ್ಥರು ಕಂಗಲಾಗಿದ್ದಾರೆ. ವಸತಿನಿಲಯದ ಸಿಬ್ಬಂದಿಗೆ ಈ ವಿಷಯ ಗೊತ್ತಿದ್ದೂ ಕಣ್ಮುಚ್ಚಿ ಕುಳಿತಿದ್ದರೇ ಎಂಬ ಅನುಮಾನಗಳುಂಟಾಗಿವೆ. ಹೆಣ್ಣುಮಕ್ಕಳ ರಕ್ಷಣೆಗಾಗಿ ಇರುವ ಹಾಸ್ಟೆಲ್‌ನಲ್ಲಿಯೇ ಇಂತಹ ಘಟನೆ ನಡೆದರೆ, ಪೋಷಕರು ಯಾರನ್ನು ನಂಬಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಬೇಕು? ಇದು ಬದಲಾಗಿ ನಿರ್ಲಕ್ಷ್ಯದ ಪರಮಾವಧಿ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.