ಕರ್ನಾಟಕದಲ್ಲಿ ದಿನಕ್ಕೆ 10 ಪೋಕ್ಸೋ ಕೇಸ್ ದಾಖಲು: ಮಕ್ಕಳ ಮೇಲಿನ ಅಪರಾಧ ಕೃತ್ಯಗಳಲ್ಲಿ ಭಾರಿ ಹೆಚ್ಚಳ
ಕರ್ನಾಟಕದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳು ಕಳವಳಕಾರಿಯಾಗಿ ಹೆಚ್ಚುತ್ತಿರುವುದು ತಿಳಿದುಬಂದಿದೆ. ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದು ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ. ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪ್ರಕರಣಗಳಲ್ಲೂ ಏರಿಕೆಯಾಗಿದೆ. ಮತ್ತೊಂದೆಡೆ, ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವುದೂ ಬೆಳಕಿಗೆ ಬಂದಿದೆ.

ಬೆಂಗಳೂರು, ಮಾರ್ಚ್ 24: ಕರ್ನಾಟಕದಲ್ಲಿ ಮಕ್ಕಳ ಮೇಲಿನ ಅಪರಾಧ ಕೃತ್ಯಗಳು (Crime Against Children) ಗಣನೀಯವಾಗಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿದೆ. 2025 ರ ಮೊದಲ ಎರಡು ತಿಂಗಳಲ್ಲಿ ಪ್ರತಿದಿನ ಸರಾಸರಿ 10 ಪೋಕ್ಸೊ (POSCO) ಪ್ರಕರಣಗಳು (ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಒದಗಿಸುವ ಕಾಯ್ದೆ) ದಾಖಲಾಗಿವೆ. 2024 ರಲ್ಲಿ, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು 8,233 ದಾಖಲಾಗಿದ್ದವು ಎಂದು ಪೊಲೀಸ್ ಇಲಾಖೆ (Karnataka Police) ಅಂಕಿಅಂಶಗಳಿಂದ ತಿಳಿದುಬಂದಿದೆ. ಇದು 2023ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. 2023 ರಲ್ಲಿ 7,854 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಶೇ 38.89 ರಷ್ಟು ಏರಿಕೆಯಾಗಿದೆ.
ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ನಾಲ್ಕು ವರ್ಷಗಳಲ್ಲಿ (2021-2024) ದಾಖಲಾದ ಒಟ್ಟು 13,990 ಪ್ರಕರಣಗಳಲ್ಲಿ ಕೇವಲ 353 ರಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿವೆ ಎಂದು ಪೊಲೀಸ್ ಇಲಾಖೆ ಅಂಕಿಅಂಶಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಆತಂಕಕಾರಿ ಸಂಗತಿಯೆಂದರೆ, ಒಟ್ಟು ಪ್ರಕರಣಗಳಲ್ಲಿ ಶೇ 26 ಕ್ಕಿಂತ ಹೆಚ್ಚಿನವುಗಳಲ್ಲಿ ಆರೋಪಿಗಳು (3,662) ಖುಲಾಸೆಗೊಯಾಗಿದ್ದಾರೆ.
202 ಪ್ರಕರಣಗಳನ್ನು ಸುಳ್ಳು ಪ್ರಕರಣಗಳೆಂದು ಹೇಳಲಾಗಿದೆ. 2025 ರಲ್ಲಿಯೂ ಮಕ್ಕಳ ಮೇಲಿನ ಅಪರಾಧ ಕೃತ್ಯಗಳ ಪ್ರವೃತ್ತಿ ಮುಂದುವರೆದಿದ್ದು, ಜನವರಿ ಮತ್ತು ಫೆಬ್ರವರಿಯಲ್ಲಿ ಕ್ರಮವಾಗಿ 348 ಮತ್ತು 264 ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ವರತಿ ತಿಳಿಸಿದೆ.
ಬಾಲ್ಯ ವಿವಾಹ, ಬಾಲಕಾರ್ಮಿಕ ಪ್ರಕರಣಗಳಲ್ಲೂ ಏರಿಕೆ
ಪೊಲೀಸ್ ಅಂಕಿಅಂಶಗಳ ಪ್ರಕಾರ, 2023 ಕ್ಕೆ ಹೋಲಿಸಿದರೆ 2024 ರಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ ಅಪರಾಧಗಳು ಶೇ 7 ಕ್ಕಿಂತಲೂ ಹೆಚ್ಚಾಗಿವೆ. ಜತೆಗೆ, ವರ್ಷದ ಮೊದಲ ಎರಡು ತಿಂಗಳಲ್ಲಿ 23 ಬಾಲ್ಯವಿವಾಹ ಪ್ರಕರಣಗಳು ಮತ್ತು 16 ಬಾಲಕಾರ್ಮಿಕ ಪ್ರಕರಣಗಳು ವರದಿಯಾಗಿವೆ.
ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2024 ರಲ್ಲಿ ಮಕ್ಕಳ ಕಾಯ್ದೆಯಡಿಯಲ್ಲಿ ಪೊಲೀಸರು 105 ಬಾಲಕಾರ್ಮಿಕ ಪ್ರಕರಣಗಳನ್ನು, ಬಾಲನ್ಯಾಯ ಕಾಯ್ದೆಯಡಿಯಲ್ಲಿ 142, ಬಾಲ್ಯವಿವಾಹ ನಿಷೇಧ ಕಾಯ್ದೆಯಡಿಯಲ್ಲಿ 152 ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಳೆದ ವರ್ಷ, ರಾಜ್ಯದಲ್ಲಿ ಮಕ್ಕಳ ಅಪಹರಣ ಸಂಬಂಧ 3,766 ಪ್ರಕರಣಗಳು ವರದಿಯಾಗಿದ್ದವು.
ಇದನ್ನೂ ಓದಿ: ಬೆಂಗಳೂರು: ಇಟ್ಟಿಗೆ, ಮರದ ತುಂಡು ಪಾಲಿಶ್ ಮಾಡಿ ಚಿನ್ನ ಎಂದು ಮಾರಲು ಯತ್ನ, ಬಿಹಾರದ ಮೂವರ ಬಂಧನ
‘ಹೆಚ್ಚುತ್ತಿರುವ ಪ್ರಕರಣಗಳು ಅಪರಾಧ ಕೃತ್ಯಗಳ ಸಂದರ್ಭ ದೂರು ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡುತ್ತಿರುವುದನ್ನು ಸೂಚಿಸುತ್ತವೆ. ಆದರೆ ಅಪರಾಧಿಗಳಿಗೆ ಶಿಕ್ಷೆ ಕಡಿಮೆಯಾಗಿರುವುದು ಕಳವಳಕಾರಿಯಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಹೆಚ್ಚಿನ ಪ್ರಕರಣಗಳು ಕುಟುಂಬದಲ್ಲೇ ನಡೆಯುತ್ತವೆ ಅಥವಾ ಸಂತ್ರಸ್ತರಿಗೆ ಪರಿಚಿತರಿರುವ ಯಾರಾದರೂ ಶಾಮೀಲಾಗಿರುತ್ತಾರೆ’ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತ ವಾಸುದೇವ್ ಶರ್ಮಾ ಅಭಿಪ್ರಾಯಪಟ್ಟಿರುವುದಾಗಿಯೂ ವರದಿ ಉಲ್ಲೇಖಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ