ಬಾಗಲಕೋಟೆ: ಕುಸಿದ ಬಿಳಿಜೋಳದ ಬೆಲೆ, ರೈತರು ಕಂಗಾಲು
ಉತ್ತರ ಕರ್ನಾಟಕದ ಜನರಿಗೆ ರೊಟ್ಟಿ ಊಟ ಅಂದರೆ ಪಂಚಪ್ರಾಣ. ರೊಟ್ಟಿ ಇಲ್ಲದೆ ಉತ್ತರ ಕರ್ನಾಟಕದ ಜನರ ಊಟ ಸಂಪೂರ್ಣವಾಗುವುದಿಲ್ಲ. ಆದ್ದರಿಂದ ಬಿಳಿಜೋಳವನ್ನು ಈ ಭಾಗರ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಈ ವರ್ಷ ಬಿಳಿ ಜೋಳದ ಬೆಲೆ ಪಾತಾಳಕ್ಕೆ ಕುಸಿದಿದೆ. ಕ್ವಿಂಟಲ್ಗೆ ಈ ಹಿಂದೆ 6-7 ಸಾವಿರ ರೂ. ಇರುತ್ತಿದ್ದ ಬೆಲೆ, ಈಗ ದಿಢೀರ್ನೆ ಕುಸಿದಿದೆ. ಇದರಿಂದ ರೈತರಿಗೆ ಹಾಕಿದ ಬಂಡವಾಳವೂ ಬಾರದಂತಾಗಿದೆ. ಕೆಲ ರೈತರು ಬಂದಷ್ಟು ಬರಲಿ ಅಂತ ಮಾರಾಟ ಮಾಡಿದರೆ, ಎಷ್ಟೋ ರೈತರು ಬೆಲೆ ನಿರೀಕ್ಷೆಯಲ್ಲಿ ಮಾರಾಟ ಮಾಡದೆ ನೂರಾರು ಕ್ವಿಂಟಲ್ ಬಿಳಿಜೋಳವನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದಾರೆ.

ಬಾಗಲಕೋಟೆ, ಮಾರ್ಚ್ 24: ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ಬಿಳಿಜೋಳ (White Maize) ಪ್ರಮುಖ ಬೆಳೆಯಾಗಿದೆ. ಆದರೆ, ಬಿಳಿಜೋಳ ಬೆಲೆ ಈಗ ದಿಢೀರ್ ಪಾತಾಳಕ್ಕೆ ಕುಸಿದಿದ್ದು ರೈತರ ಮುಖ ಕಪ್ಪಾಗಿದೆ. 70 ಕೆಜಿ ಪ್ಯಾಕೆಟ್ ಗೆ 1800ರಿಂದ 2500 ರೂ ಇದ್ರೆ ಕ್ವಿಂಟಲ್ ಬಿಳಿಜೋಳಕ್ಕೆ 2500 ಹೆಚ್ಚೆಂದರೆ 3 ಸಾವಿರ ಬೆಲೆ ಇದೆ. ಮೇಲಾಗಿ ಮಾರುಕಟ್ಟೆಗೆ ಬರುವ ಜೋಳದ ಪ್ರಮಾಣ ಕೂಡ ಕಡಿಮೆಯಾಗಿದೆ. ಬೆಲೆ ಇಳಿಕೆಯಿಂದ ರೈತರು ಜೋಳ ಬದಲಿಗೆ ಕಡಲೆ ಕಡೆ ಹೆಚ್ಚು ಗಮನ ಹರಿಸಿದ್ದು, ಮಾರುಕಟ್ಟೆಯಲ್ಲಿ ಜೋಳದ ವ್ಯಾಪಾಸ್ಥರಿಗೂ ಹೆಚ್ಚು ಜೋಳ ಸಿಗುತ್ತಿಲ್ಲ. ಜೊತೆಗೆ ಉತ್ತಮ ಗುಣಮಟ್ಟದ ಜೋಳ ಸಿಗುತ್ತಿಲ್ಲವಂತೆ. ಇದರಿಂದ ನಮಗೂ ಹೆಚ್ಚು ಲಾಭಾಂಶ ಸಿಗುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿ ವರ್ಷ ಹಿಂಗಾರಿನಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬೆಳೆಯತ್ತಿದ್ದರು. 2-3 ವರ್ಷದ ಹಿಂದೆ ಬಿಳಿಜೋಳಕ್ಕೆ ಒಂದು ಕ್ವಿಂಟಲ್ಗೆ 7-8 ಸಾವಿರ ರೂ. ಬೆಲೆ ಸಿಗುತ್ತಿತ್ತು. ಆದರೆ, ಈಗ ಕ್ವಿಂಟಲ್ಗೆ 2500 ರಿಂದ 3000 ಕ್ಕೆ ಬೆಲೆ ಇಳಿಕೆಯಾಗಿದೆ. ಈ ಮಧ್ಯೆ ಬೆಲೆ ಮೇಲಿಂದ ಮೇಲೆ ಇಳಿಕೆಯಾಗುತ್ತಿರುವುದರಿಂದ ರೈತರು ಬಿಳಿಜೋಳ ಬಿತ್ತನೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಬಿಳಿಜೋಳ ಬೆಳೆಯುವ ಪ್ರದೇಶ 70 ಸಾವಿರ ಹೆಕ್ಟೇರ್ಗೆ ಇಳಿಕೆಯಾಗಿದೆ. ಬೆಲೆ ಇಳಿಕೆ ಬಿಳಿ ಜೋಳದಿಂದ ರೈತರು ವಿಮುಖವಾಗುವಂತೆ ಮಾಡಿದೆ.
ಬಿಳಿ ಜೋಳವನ್ನು ಬೆಳೆಯಲು ಎಕರೆಗೆ 15ರಿಂದ 20 ಸಾವಿರ ರೂ. ಖರ್ಚು ಮಾಡುತ್ತಾರೆ. ಎಕರೆಗೆ ಬಿಳಿಜೋಳ 3-4 ಕ್ವಿಂಟಲ್ ಬೆಳೆಯಬಹುದು. ಆದರೆ ಈ ಬೆಲೆಯಲ್ಲಿ ಹಾಕಿದ ಬಂಡವಾಳ ಕೂಡ ಬಾರದಂತಾಗಿದೆ. ಆದರೂ ಕೆಲ ರೈತರು ಬಂದಷ್ಟು ಬರಲಿ ಅಂತ ಮಾರಾಟ ಮಾಡಿದರೆ ಕೆಲ ರೈತರು ಮನೆಯಲ್ಲಿ ಜೋಳ ಇಟ್ಟುಕೊಂಡು ಕೂತಿದ್ದಾರೆ.
ಇದನ್ನೂ ನೋಡಿ: ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆಯ ಬಸಪ್ಪ ಯಳ್ಳಿಗುತ್ತಿ ಎಂಬ ರೈತರು ಎಂಬುವರು ಬಂಡವಾಳದ ತಕ್ಕ ಬೆಲೆ ಸಿಗದ ಕಾರಣ ಮನೆಯಲ್ಲಿ ಬರೊಬ್ಬರಿ 150 ಕ್ವಿಂಟಲ್ ಬಿಳಿಜೋಳ ಇಟ್ಟುಕೊಂಡು ಕೂತಿದ್ದಾರೆ. ಒಳ್ಳೆಯ ಬೆಲೆ ಬರಬಹುದೆಂಬ ನಿರೀಕ್ಷೆ ಒಂದು ಕಡೆಯಾದರೇ, ಜೋಳಕ್ಕೆ ನುಸಿ ಹತ್ತುವ ಚಿಂತೆ ಕೂಡ ಶುರುವಾಗಿದೆ. ಸರ್ಕಾರ 3421 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ ಆದರೆ, ಕೇವಲ ಘೋಷಣೆ ಮಾಡಿದರೆ ಏನು ಬಂತು ಆದಷ್ಟು ಬೇಗ ಖರೀದಿ ಕೆಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಬಿಳಿಜೋಳ ಬೆಲೆ ಇಳಿಕೆ ರೈತರನ್ನು ಚಿಂತೆಗೀಡು ಮಾಡಿದ್ದು, ಬೆಲೆ ಇಳಿಕೆಯಿಂದ ಬಿಳಿಜೋಳ ಬಿತ್ತನೆ ಪ್ರಮಾಣವೇ ಕಡಿಮೆಯಾಗುತ್ತಿರುವುದು ವಿಪರ್ಯಾಸವಾಗಿದೆ.