ಕೋಳಿ, ಸಿಗರೇಟು, ಹೆಂಡವೇ ನೈವೇದ್ಯ! ಕಾರವಾರ ಕಾಳಿ ನದಿ ತಟದಲ್ಲಿ ಆಫ್ರಿಕಾದ ಖಾಪ್ರಿ ದೈವ, ಹಿನ್ನೆಲೆಯೇ ರೋಚಕ
ದೇವರು, ದೈವಗಳಿಗೆ ಹೂವು, ಹಣ್ಣು ಕಾಯಿ ಅರ್ಪಿಸುವುದು ಸಾಮಾನ್ಯ. ಆದರೆ, ಇಲ್ಲೊಂದು ದೈವಕ್ಕೆ ಬೀಡಿ, ಸಿಗರೇಟು ಹಾಗೂ ಹೆಂಡವೇ ನೈವೇದ್ಯ! ಇವುಗಳನ್ನೇ ಅರ್ಪಣೆ ಮಾಡಿ ಭಕ್ತರು ಹರಕೆ ಕಟ್ಟಿಕೊಳ್ಳುತ್ತಾರೆ. ಹಿಂದು,ಕ್ರಿಶ್ಚಿಯನ್, ಮುಸ್ಲಿಂ ಎನ್ನದೆ ಎಲ್ಲಾ ಜನಾಂಗದ ಭಕ್ತರು ಈ ದೈವದ ದರ್ಶನ ಮಾಡುತ್ತಾರೆ. ಸರ್ವ ಧರ್ಮದ ಸಮನ್ವಯ ಕಾಪಾಡುವ ಈ ವಿಶೇಷ ದೈವದ ಬಗ್ಗೆ ಇಲ್ಲಿದೆ ಆಸಕ್ತಿದಾಯಕ ವಿಚಾರ.

ಕಾರವಾರ, ಮಾರ್ಚ್ 24: ಕೈಯಲ್ಲಿ ಸಿಗರೇಟು, ಮದ್ಯದ ಬಾಟಲ್ ಹಿಡಿದು ದೇವರ ದರ್ಶನಕ್ಕೆ ನಿಂತಿರುವ ಭಕ್ತರು! ಇನ್ನೊಂದೆಡೆ, ಕೋಳಿ ಬಲಿಗಾಗಿ ಅರ್ಘ್ಯ ನೀಡುತ್ತಿರುವ ಅರ್ಚಕರು. ಇಂಥದ್ದೊಂದು ವಿಚಿತ್ರ, ಆದರೂ ನಂಬಲೇಬೇಕಾದ ವಿಶೇಷ ಇರುವುದು ಉತ್ತರ ಕನ್ನಡ ಜಿಲ್ಲೆಯ ಕಾರವಾರ – ಗೋವಾ (Karawar) ಗಡಿಯಲ್ಲಿ. ಇಲ್ಲಿರುವ ದೈವದ ಹೆಸರೇ ‘ಖಾಪ್ರಿ ದೇವ’ (Khapri Deva). ‘ಮದ್ಯ ಪ್ರಿಯ ದೇವ’ ಎಂದೇ ಪ್ರಸಿದ್ಧವಾಗಿರುವ ಈತ ಸರ್ವ ಜನಾಂಗದ ಆರಾಧ್ಯ ದೈವ. ಈ ದೇವಸ್ಥಾನಕ್ಕೆ (Shri Khapri Deva Temple) 500 ವರ್ಷಗಳ ಇತಿಹಾಸವಿದ್ದು ಬ್ರಿಟಿಷರ ಕಾಲದಲ್ಲಿ ಗುಲಾಮನಾಗಿ ಬಂದ ಖಾಪ್ರಿ ಎಂಬ ವಿದೇಶಿ ಪ್ರಜೆ ಕಾರವಾರದ ಕಾಳಿ ನದಿ ಸಂಗಮದಲ್ಲಿ ನೆಲೆ ನಿಂತು ದೈವತ್ವಕ್ಕೇರಿದ್ದಾನೆ ಎಂಬ ಪ್ರತೀತಿ ಇದೆ.
ಖಾಪ್ರಿ ಹಿನ್ನೆಲೆಯೇನು?
ಮೂಲತಹಾ ಕ್ರಿಶ್ಚಿಯನ್ ಆಗಿದ್ದರೂ ಎಲ್ಲಾ ಧರ್ಮಗಳ ಆಶಯವನ್ನು ಖಾಪ್ರಿ ಮೈಗೂಡಿಸಿಕೊಂಡಿದ್ದನಂತೆ. ಕಾಳಿ ನದಿ ಸಂಗಮದಲ್ಲಿ ಈತ ಬಡವರಿಗೆ ಸಹಾಯ ಮಾಡುತ್ತಾ, ಯೋಗ-ಧ್ಯಾನವನ್ನು ಮಾಡುತ್ತಾ ಇದ್ದನಂತೆ. ಇದಲ್ಲದೇ, ಈತ ಮದ್ಯಕುಡಿಯುವುದರ ಜೊತೆ ಸಿಗರೇಟು ಸಹ ಸೇದುತಿದ್ದ ಎಂಬ ಪ್ರತೀತಿ ಇದೆ.

ಖಾಪ್ರಿ ದೇವನಿಗೆ ಮದ್ಯದ ಬಾಟಲ್ ಅರ್ಪಿಸುತ್ತಿರುವ ಭಕ್ತರು
ಇಷ್ಟಾರ್ಥ ನೆರವೇರಿಸುವ ಈತನನ್ನು ಕಂಡು ಆಶಿರ್ವಾದ ಬೇಡುವ ಜನ ಮದ್ಯ, ಸಿಗರೇಟು ನೀಡುತಿದ್ದರು. ಒಂದು ದಿನ ಈತ ಮೃತಪಟ್ಟಿದ್ದು, ನಂತರ ಇದೇ ಭಾಗದ ಓರ್ವನ ಕನಸಿನಲ್ಲಿ ಬಂದು ತನಗೊಂದು ಆಲಯ ಕಟ್ಟಬೇಕು. ಅಲ್ಲಿ ನಾನು ನೆಲಸುತ್ತೇನೆ ಎಂದಿದ್ದನಂತೆ. ಹೀಗಾಗಿ ಆತ ಇದ್ದ ಕಾಳಿ ಸಂಗಮದಲ್ಲೇ ಆಲಯ ನಿರ್ಮಾಣ ಮಾಡಲಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಖಾಪ್ರಿ ದೇವನಿಗೆ ಕೋಳಿ ನೀಡುತ್ತಿರುವ ಭಕ್ತರು
ಯಾವುದೇ ಸಮಸ್ಯೆ ಇದ್ದರೂ ಹರಕೆ ಕಟ್ಟಿಕೊಳ್ಳುವ ಜನರು ಇಲ್ಲಿಗೆ ಬಂದು ಮದ್ಯ, ಸಿಗರೇಟು, ಕೋಳಿ ಹರಕೆ ಹೇಳಿಕೊಂಡು, ಹರಕೆ ತೀರಿದ ನಂತರ ಖಾಪ್ರಿ ದೇವನಿಗೆ ಸಮರ್ಪಿಸುತ್ತಾರೆ.
ದೇಗುಲದ ಮುಂಭಾಗ ದೀಪವಿಲ್ಲ, ಕ್ಯಾಂಡಲ್!
ಖಾಪ್ರಿ ಮೂಲತಃ ಕ್ರಿಶ್ಚಿಯನ್ ಆದ್ದರಿಂದ ದೇವಸ್ಥಾನದ ಮುಂಭಾಗ ಕ್ಯಾಂಡಲ್ ಬೆಳಗಿಸುತ್ತಾರೆ. ಇದಲ್ಲದೇ ಕೋಳಿ, ಕುರಿಯನ್ನು ಸಹ ನೀಡುತ್ತಾರೆ. ಗೋವಾ, ಮಹಾರಾಷ್ಟ್ರದಿಂದ ಕೂಡ ಭಕ್ತರು ಬರುತ್ತಾರೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಎರಡು ದಿನ ನಡೆಯುವ ಜಾತ್ರೆಗೆ ಭಕ್ತರು ಬಂದು ಹರಕೆ ತೀರಿಸುತ್ತಾರೆ.
ಮದ್ಯ ಪ್ರಿಯ ಖಾಪ್ರಿ ದೈವ
ಮದ್ಯ ಪ್ರಿಯ ಎಂದೇ ಪ್ರಸಿದ್ಧಿ ಪಡೆದ ಖಾಪ್ರಿ ಎಂಬ ವ್ಯಕ್ತಿ ದೈವವಾಗಿ ಕಾಳಿ ನದಿ ತೀರದಲ್ಲಿ ಎಲ್ಲಾ ಧರ್ಮದವರಿಂದ ಪೂಜೆಗೈಯಿಸಿಕೊಳ್ಳುತ್ತಿದ್ದಾನೆ. ಗುಲಾಮನಾಗಿ ಭಾರತಕ್ಕೆ ಬಂದ ಈತ ತನ್ನ ಒಳ್ಳೆತನ, ಸೇವಾ ಮನೋಭಾವ ದಿಂದ ಜನರ ಮನಸ್ಸು ಗೆಲ್ಲುವ ಮೂಲಕ ಮೃತನಾದ ನಂತರ ದೈವದ ಸ್ಥಾನಕ್ಕೆ ಏರಿದ್ದು ನಿಜವಾಗಿಯೂ ಅದ್ಬುತ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: ಕರ್ನಾಟಕದಲ್ಲೊಂದು ಹಿರೋಶಿಮಾ-ನಾಗಸಾಕಿ ಪ್ರದೇಶ: ಈ ಜಿಲ್ಲೆಯಲ್ಲಿ ಹುಟ್ಟುವ ಮಕ್ಕಳೆಲ್ಲಾ ಅಂಗವಿಕಲರು
ಹೆದ್ದಾರಿ ಪಕ್ಕದಲ್ಲೇ ಇರುವುದರಿಂದ ರಸ್ತೆಯಲ್ಲಿ ಸಂಚರಿಸುವ ಜನ ಇಲ್ಲಿ ಪೂಜೆ ಸಲ್ಲಿಸಿ ಸಾಗುತ್ತಾರೆ. 42 ವರ್ಷಗಳ ಹಿಂದೆ ಕಾಳಿ ನದಿಗೆ ಅಡ್ಡಲಾಗಿ ಸೇತುವೆ ಕಟ್ಟುವಾಗ ಸುಮಾರು ಜನ ಮೃತರಾಗಿದ್ದರು. ಸುಮಾರು ವರ್ಷಗಳ ಕಾಲ ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಆಗ ಸ್ಥಳಿಯರು ಖಾಪ್ರಿ ದೈವದ ಮೊರೆ ಹೋದಾಗ, ಯಾವುದೇ ಪ್ರಾಣ ಹಾನಿ ಇಲ್ಲದೆ ಸೇತುವೆ ನಿರ್ಮಾಣ ಆಗಿತ್ತು. ಅಷ್ಟೆ ಅಲ್ಲದೆ 2024 ಅಗಸ್ಟ್ 7 ರ ಮಧ್ಯೆ ಸೇತುವೆ ಒಮ್ಮಿಂದೊಮ್ಮೆಲೆ ಕುಸಿದು ಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿ ಆಗಿದ್ದರಿಂದ ನಿತ್ಯ ಸಾವಿರಾರು ಜನ ಸೇತುವೆಯಲ್ಲಿ ಓಡಾಡುತ್ತಿದ್ದರು. ಆಶ್ಚರ್ಯ ಎಂದರೆ ಸೇತುವೆ ಕುಸಿತದಿಂದ ಒಂದೇ ಒಂದು ಪ್ರಾಣ ಹಾನಿ ಸಂಭವಿಸಿಲ್ಲ. ರಾತ್ರಿ ನದಿಯ ಸೇತುವೆಯನ್ನು ಕಾಯುವ ಶಕ್ತಿ ಎಂದು ಇಲ್ಲಿನ ಜನ ನಂಬಿದ್ದು ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಪಾಡುತ್ತಾನೆ ಎಂಬ ನಂಬಿಕೆ ಸ್ಥಳೀಯರದ್ದಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:49 am, Mon, 24 March 25