ಬೆಂಗಳೂರು: ಕರ್ನಾಟಕ ಲೋಕಾಯುಕ್ತ ತಿದ್ದುಪಡಿ (2022) ಕಾಯ್ದೆಗೆ (Karnataka Lokayukta Amendment Bill) ಕರ್ನಾಟಕ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಲೋಕಾಯುಕ್ತ ಬಲಪಡಿಸುವ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟದಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದೆ. ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಹೆಚ್ಚುವರಿ (ಅಡಿಷನಲ್) ರಿಜಿಸ್ಟ್ರಾರ್ ನೇಮಕಕ್ಕೂ ಸಚಿವ ಸಂಪುಟ ನಿರ್ಧರಿಸಿತು. ಲೋಕಾಯುಕ್ತ ನ್ಯಾಯಮೂರ್ತಿಗಳ ವೇತನ ಹೆಚ್ಚಿಸಿ, ಹೈಕೋರ್ಟ್ ನ್ಯಾಯಮೂರ್ತಿಗಳ ವೇತನಕ್ಕೆ ಸರಿಸಮಾನವಾದ ವೇತನ ನೀಡಲು ಸಂಪುಟ ಒಪ್ಪಿಗೆ ಸೂಚಿಸಿತು. ಸಂಪುಟ ಸಭೆ ಆರಂಭಕ್ಕೂ ಮುನ್ನ ದಿವಂಗತ ಸಚಿವ ಉಮೇಶ್ ಕತ್ತಿ ಅವರಿಗೆ ಮೌನಾಚರಣೆ ಮೂಲಕ ಸಂಪುಟ ಸಚಿವರು ಸಂತಾಪ ಸೂಚಿಸಿದರು.
ಕರ್ನಾಟಕ ಸರ್ಕಾರವು ಹೊಸದಾಗಿ ಜಾರಿಗೆ ತಂದಿದ್ದ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureu – ACB) ರಚನೆಯನ್ನು ರದ್ದುಪಡಿಸಿ, ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಲೋಕಾಯುಕ್ತ (Karnataka Lokayukta) ಸಂಸ್ಥೆಗೆ ಬಲ ತುಂಬಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬೆಳವಣಿಗೆಗೆ ಹೈಕೋರ್ಟ್ ತೀರ್ಪು ಮುಖ್ಯ ಕಾರಣ. ಎಸಿಬಿ ರಚನೆ ರದ್ದುಪಡಿಸಿ, ಲೋಕಾಯುಕ್ತ ಬಲವರ್ಧನೆಗೆ ಆದೇಶ ಹೊರಬಿದ್ದ ಬೆನ್ನಲ್ಲೇ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮತ್ತೊಂದು ಆದೇಶ ಹೊರಡಿಸಿ, ಸಂಬಂಧಿಸಿದ ಕಡತಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸೂಚಿಸಿದ್ದರು.
ಹೈಕೋರ್ಟ್ ಇತ್ತೀಚಿಗೆ ನೀಡಿದ್ದ ತೀರ್ಪಿನ ಪ್ರಮುಖ ಅಂಶಗಳನ್ನು ಕರ್ನಾಟಕ ಸರ್ಕಾರ ಪಾಲಿಸಿದೆ. ಅದರಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಪಡಿಸಲಾಗಿದೆ. ಲೋಕಾಯುಕ್ತ ಪೊಲೀಸರಿಗೆ ಭ್ರಷ್ಟಾಚಾರ ನಿಗ್ರಹದ ಅಧಿಕಾರ ನೀಡಲಾಗಿದೆ. ಲೊಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣೆಗಳಿಗೆ ಇರುವ ಅಧಿಕಾರವನ್ನು ಕೊಡಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದಲ್ಲಿ ತನಿಖೆ ಬಾಕಿಯಿರುವ ಎಲ್ಲ ಪ್ರಕರಣಗಳು ಹಾಗೂ ಖಾಸಗಿ ದೂರುಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸೂಚಿಸಿದೆ.
Published On - 7:18 pm, Wed, 14 September 22