ಆಂಧ್ರದ ಶ್ರೀಶೈಲದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಸಿಎಂ ಬಸವರಾಜ ಬೊಮ್ಮಾಯಿ
ಕಾಶಿಯಲ್ಲಿ ಕನ್ನಡಿಗರು ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಆಂಧ್ರದ ಶ್ರೀಶೈಲದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದರು.
ಆಂಧ್ರಪ್ರದೇಶ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಶ್ರೀಶೈಲಂ (SriSailam)ಕ್ಕೆ ಯಾತ್ರೆ ಕೈಗೊಳ್ಳುವ ಕನ್ನಡಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದ್ದು, ಇಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಕಂಬಿಮಂಟಪ, ಯಾತ್ರಿ ನಿವಾಸಕ್ಕೆ ಅಡಿಗಲ್ಲು ಹಾಕಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಶ್ರೀಶೈಲಕ್ಕೆ ರಾಜ್ಯದಿಂದ ಭಕ್ತರು ಭೇಟಿ ನೀಡುತ್ತಾರೆ. ಶ್ರೀಶೈಲ ಜಗದ್ಗುರುಗಳ ಆಶೀರ್ವಾದ ಪಡೆಯಲು ಭಕ್ತರು ಇಲ್ಲಿಗೆ ಬರುತ್ತಾರೆ. ಇಂತಹ ಯಾತ್ರಿಗಳಿಗೆ ತಂಗಲು ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪ್ರತಿದಿನ ರಾಜ್ಯದಿಂದ ನೂರಾರು ಜನ ಕಾಶಿ ಯಾತ್ರೆಗೆ ಹೋಗುತ್ತಾರೆ. ರಾಜ್ಯದ ಯಾತ್ರಿಗಳಿಗೆ ಅಲ್ಲಿ ತಂಗಲು ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಕಾಶಿಯಲ್ಲಿ ಕನ್ನಡಿಗರು ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಬೇಕು ಎಂದರು. ಮುಂದುವರೆದು ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಭಾರತ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವುದು ಮುಖ್ಯವಾಗಿದೆ ಎಂದರು. ಇತ್ತೀಚೆಗೆ ಧರ್ಮದ ಹೆಸರಿನಲ್ಲಿ ಬಹಳ ಸಂಘರ್ಷ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಿಎಂ ಬೊಮ್ಮಾಯಿ ಮತ್ತಿತರರು ಆಂಧ್ರಪ್ರದೇಶಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿರುವ ವಿಧಾನಸೌಧ ಮುಂಭಾಗ ನಾಡ ಪ್ರಭು ಕೆಂಪೇಗೌಡ ಮತ್ತು ಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಜನರ ಶಕ್ತಿ ಕೇಂದ್ರವಾಗಿರುವ ವಿಧಾನಸೌದ ಮುಂದೆ ಕನ್ನಡ ನಾಡಿನಲ್ಲಿ ಹುಟ್ಟಿ ಕ್ರಾಂತಿ ಮಾಡಿದ ಇಬ್ಬರು ಮಹಾನ್ ನಾಯಕ ಪ್ರತಿಮೆಗೆ ಶಂಕುಸ್ಥಾಪನೆ ಮಾಡಲಾಗಿದೆ. ವಿಧಾನಸೌಧ ಮುಂಭಾಗ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು.
ಮಹಾನ್ ಪುರುಷರಾದ ಬಸವಣ್ಣನವರು ಸಾಮಾಜಿಕ ಆರ್ಥಕ ಶೈಕ್ಷಣಿಕ ವೈಚಾರಿಕ ಪ್ರಗತಿಯನ್ನ ಮಾಡಿ ಒಂದು ದರ್ಶನ ಕೊಟ್ಟಿರುವ ನಾಡು ಕೊಟ್ಟಿರುವಂತಹ ನಾಯಕರಾಗಿದ್ದಾರೆ ಮತ್ತು ನಾಡಪ್ರಭು ಕೆಂಪೇಗೌಡ ಅವರು ಊರು ಕೇರಿಗಳನ್ನ ಕಟ್ಟಿ ಮಾದರಿಯಾಗಿದ್ದಾರೆ. ಈ ಮಾಹನ್ ವ್ಯಕ್ತಿಗಳ ಮೂರ್ತಿಗಳನ್ನ ವಿಧಾನಸೌಧದ ಮುಂಬಾಗದಲ್ಲಿ ಪ್ರತಿಷ್ಟಾಪನೆ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ. ಒಂದೂವರೆ ಅಥವಾ ಎರಡು ತಿಂಗಳಿನಲ್ಲಿ ಪುತ್ಥಳಿಗಳ ಅನಾವರಣ ಮಾಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:09 pm, Fri, 13 January 23