ಪ್ರಧಾನಿ ಮೋದಿ ಸಮಯ ಕೇಳಿದ್ದೇನೆ; ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಇಲ್ಲ- ದಿಲ್ಲಿಯತ್ತ ಸಿಎಂ ಬೊಮ್ಮಾಯಿ

| Updated By: ಆಯೇಷಾ ಬಾನು

Updated on: Nov 10, 2021 | 9:28 AM

ಸಿಎಂ ತವರು ಜಿಲ್ಲೆಯಲ್ಲೇ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಇದು ಸಿಎಂ ಸೇರಿದಂತೆ ರಾಜ್ಯ ನಾಯಕರ ಮೇಲೆ ಹೈಕಮಾಂಡ್ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ದಿಢೀರ್ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಿರೋದು ಭಾರಿ ಕುತೂಹಲ ಕೆರಳಿಸಿದೆ.

ಪ್ರಧಾನಿ ಮೋದಿ ಸಮಯ ಕೇಳಿದ್ದೇನೆ; ಸಂಪುಟ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಇಲ್ಲ- ದಿಲ್ಲಿಯತ್ತ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಬೈಎಲೆಕ್ಷನ್ ರಿಸಲ್ಟ್ ಹೊರಬಿದ್ದಿದ್ದೇ ಬಿದ್ದಿದ್ದು, ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸಂಭವಿಸ್ತಿದೆ. ಅದ್ರಲ್ಲೂ ಬಿಜೆಪಿ ನಾಯಕರು ಬೈಎಲೆಕ್ಷನ್ ಫಲಿತಾಂಶದಿಂದ ಚಿಂತೆಗೀಡಾಗಿದ್ದಾರೆ. ಇಷ್ಟೆಲ್ಲದರ ಮಧ್ಯೆ ಜನರ ವಿಶ್ವಾಸ ಗೆಲ್ಲಲು ಬೃಹತ್ ಯಾತ್ರೆಗೂ ಪ್ಲ್ಯಾನ್ ಆಗಿದೆ. ಆದ್ರೆ ಈ ನಡುವೆ ಸಿಎಂ ಬೊಮ್ಮಾಯಿ ದಿಢೀರ್ ದೆಹಲಿಗೆ ತೆರಳ್ತಿದ್ದಾರೆ.

ಬರೋಬ್ಬರಿ 1 ತಿಂಗಳ ಬಳಿಕ ದೆಹಲಿಗೆ ಸಿಎಂ ದೌಡು
ಸಿಎಂ ತವರು ಜಿಲ್ಲೆಯಲ್ಲೇ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಇದು ಸಿಎಂ ಸೇರಿದಂತೆ ರಾಜ್ಯ ನಾಯಕರ ಮೇಲೆ ಹೈಕಮಾಂಡ್ ಒತ್ತಡ ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ದಿಢೀರ್ ಸಿಎಂ ದೆಹಲಿಗೆ ಪ್ರಯಾಣ ಬೆಳೆಸಿರೋದು ಭಾರಿ ಕುತೂಹಲ ಕೆರಳಿಸಿದೆ. ಇವತ್ತು ಬೆಳಗ್ಗೆ 9.45ಕ್ಕೆ ಕೆಐಎಬಿಯಿಂದ ತೆರಳಲಿರುವ ಸಿಎಂ, ಕೇಂದ್ರ ಸಚಿವರನ್ನ ಭೇಟಿಯಾಗಲಿದ್ದಾರೆ. ಹಾಗೆ ಸಂಜೆ ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಆದ್ರೆ ಬರೋಬ್ಬರಿ 1 ತಿಂಗಳ ಬಳಿಕ ದೆಹಲಿಗೆ ಸಿಎಂ ದೌಡಾಯಿಸಿದ್ದಾರೆ. ಅಧಿಕಾರ ಸ್ವೀಕಾರ ಮಾಡಿ 100 ದಿನಗಳಲ್ಲಿ 2 ನೇ ಬಾರಿ ದೆಹಲಿ ಪ್ರವಾಸ ಬೆಳೆಸಿರುವುದು ಯಾಕೆ ಅನ್ನೋದೆ ಪ್ರಶ್ನೆಯಾಗಿದೆ.

ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿಎಂ
ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ಕೇಳಿದ್ದೇನೆ. ಪ್ರಧಾನಿ ಭೇಟಿಗೆ ಸಮಯ ನೀಡಿದರೆ ಭೇಟಿಯಾಗುವೆ. ದೆಹಲಿ ಪ್ರವಾಸದಲ್ಲಿ ಕೇಂದ್ರ ಸಚಿವರನ್ನ ಭೇಟಿಯಾಗುವೆ. ರಾಜ್ಯದ ಅಭಿವೃದ್ಧಿ ವಿಚಾರ ಸಂಬಂಧ ಸಚಿವರ ಜತೆ ಚರ್ಚೆ ಮಾಡುವೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೂ ಸಮಯ ಕೇಳಿದ್ದೇನೆ. ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆ, ಸಂಪುಟ ವಿಸ್ತರಣೆಯ ಬಗ್ಗೆ ಯಾವುದೇ ಚರ್ಚೆ ಮಾಡಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸದ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೀತಿರುವ ಕುಮಾರ್ ಬಂಗಾರಪ್ಪ ಪುತ್ರಿಯ ವಿವಾಹಕ್ಕೆ ತೆರಳಿರುವ ಸಿಎಂ ಮದುವೆ ಬಳಿಕ ದೆಹಲಿಗೆ ತೆರಳಲಿದ್ದಾರೆ.

ಸಿಎಂಗೆ ‘ಹೈಕಮಾಂಡ್’ ಟೆನ್ಷನ್?
ಸಿಎಂ ದೆಹಲಿ ಪ್ರವಾಸದಲ್ಲಿ ಖಾಸಗಿ ಸುದ್ದಿಸಂಸ್ಥೆಯ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಹಲವು ಕೇಂದ್ರ ಸಚಿವರ ಭೇಟಿ ಮಾಡಲಿದ್ದಾರೆ. ಜೆಪಿ ನಡ್ಡಾರ ಭೇಟಿಗೆ ಕಾಲಾವಕಾಶ ಕೇಳಿದ್ದು ಸಮಯ ನೀಡಿದರೆ ಭೇಟಿಯಾಗಲಿದ್ದಾರೆ. ಇನ್ನು ಪ್ರಮುಖವಾಗಿ ಹಾನಗಲ್ ಕ್ಷೇತ್ರದ ಉಪಚುನಾವಣೆಯ ಸೋಲಿನ ಕುರಿತು ವಿವರಣೆ ಕೇಳುವ ಸಾಧ್ಯತೆ ಇದೆ. ಹಾಗೇ ಬಿಜೆಪಿಯ ಜನಸ್ವರಾಜ್ ಯಾತ್ರೆ ಮತ್ತು ವಿಧಾನ ಪರಿಷತ್ ಚುನಾವಣೆಯ ಮಾತುಕತೆ ನಡೆಸಲಾಗುತ್ತೆ ಎನ್ನಲಾಗ್ತಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ತಯಾರಿ ಬಗ್ಗೆ ‘ಬ್ಲೂ ಪ್ರಿಂಟ್’ ಕೊಡಬೇಕಿದ್ದು, ವಿಪಕ್ಷಗಳ ‘ಬಿಟ್ ಕಾಯಿನ್’ ಬಾಂಬ್ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಹಾಗೇ ಅಕ್ರಮ ಹಣ ವರ್ಗಾವಣೆ ಕೇಸ್ನ ಕುರಿತು ಬಿಜೆಪಿ ಹೈಕಮಾಂಡ್ ಗಂಭೀರ ಪ್ರಶ್ನೆಗಳನ್ನ ಕೇಳುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಸಿಎಂ ಇವತ್ತು ಅಲ್ಲೇ ಉಳಿದುಕೊಳ್ಳಲಿದ್ದಾರೆ. ನಾಳೆಯೂ ಕೆಲ ನಾಯಕರನ್ನ ಭೇಟಿ ಮಾಡುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಬದಲಾವಣೆ, ಸಂಪುಟ ವಿಸ್ತರಣೆ ವಿಷಯಕ್ಕಿಂತಲೂ ಹಾನಗಲ್ ಉಪಚುನಾವಣೆ ಸೋಲು ಹಾಗೂ ಬಿಟ್ ಕಾಯಿನ್ ಪ್ರಕರಣ ಹೆಚ್ಚು ಚರ್ಚೆಯಾಗಲಿದೆ ಎನ್ನಲಾಗ್ತಾ ಇದೆ. ಹೀಗಾಗಿ ಸಿಎಂ ಎಲ್ಲದಕ್ಕೂ ಸಜ್ಜಾಗಿ ಹೈಕಮಾಂಡ್ ಎದುರು ಹೋಗ್ತಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ಚಿತ್ತ ಈಗ ದೆಹಲಿಯ ಹೈಕಮಾಂಡ್ ನಾಯಕರತ್ತ ನೆಟ್ಟಿದೆ.

ವರದಿ: ಶಿವರಾಜ್ ಕುಮಾರ್, ಟಿವಿ9 ಬೆಂಗಳೂರು

ಇದನ್ನೂ ಓದಿ: Temple Tour: ಉಡುಪಿಯಿಂದ ಚಿಕ್ಕಬಳ್ಳಾಪುರಕ್ಕೆ ಬಂದು ನೆಲೆ ನಿಂತ ದೇವಿ

Published On - 7:32 am, Wed, 10 November 21