ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಶಫಿ ಸಅದಿ (Shafi Aaadi) ಅವರು ರಾಜ್ಯದ 10 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜು ಆರಂಭಿಸಲು ಉದ್ದೇಶಿಸಿರುವ ಕುರಿತು ಪ್ರಸ್ತಾಪಿಸಿದ್ದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಸಾರಾಸಗಟಾಗಿ ತಿರಸ್ಕಾರಿಸಿದ್ದಾರೆ. ‘ವಕ್ಫ್ ಮಂಡಳಿಯು ಮಹಿಳಾ ಕಾಲೇಜು ಆರಂಭಿಸುವ ಕುರಿತು ಯಾವುದೇ ಪ್ರಸ್ತಾವ ಸಲ್ಲಿಸಿಲ್ಲ. ನನ್ನೊಂದಿಗೆಯಾಗಲೀ, ನಮ್ಮ ಸರ್ಕಾರದ ಯಾವುದೇ ಹಂತದಲ್ಲಿಯಾಗಲೀ ಈ ಬಗ್ಗೆ ಚರ್ಚೆಯಾಗಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
‘ವಕ್ಫ್ ಮಂಡಳಿಯ ಅಧ್ಯಕ್ಷರು ಏನು ಹೇಳಿದ್ದಾರೆ ಎಂಬ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದು ಅವರ ವೈಯಕ್ತಿಕ ದೃಷ್ಟಿಕೋನ ಅಥವಾ ನಿಲುವು ಇರಬಹುದು. ಇದು ನಮ್ಮ ಸರ್ಕಾರದ ನಿಲುವು ಅಲ್ಲ. ವಕ್ಫ್ ಮಂಡಳಿಯ ಅಧ್ಯಕ್ಷರು ತಮ್ಮ ಆಲೋಚನೆಗಳ ಬಗ್ಗೆ ನನ್ನೊಂದಿಗೆ ಮಾತನಾಡಲಿ’ ಎಂದು ವಿವಾದದಿಂದ ಅಂತರ ಕಾಯ್ದುಕೊಂಡರು.
ವಕ್ಫ್ ಮಂಡಳಿ ಅಧ್ಯಕ್ಷರ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡ ನಂತರ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ ಬಳಿಕ ‘ಟಿವಿ9’ಗೆ ಪ್ರತಿಕ್ರಿಯಿಸಿ ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ, ‘ಮುಸ್ಲಿಂ ಹೆಣ್ಣುಮಕ್ಕಳಿಗೆ ವಿಶೇಷ ಕಾಲೇಜು ತೆರೆಯುವ ಬಗ್ಗೆ ನಾನು ಇಂಥ ಯಾವುದೇ ಭರವಸೆ ಕೊಟ್ಟಿಲ್ಲ. ವಕ್ಫ್ ಮಂಡಳಿಯು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಲವು ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ವಕ್ಫ್ ಮಂಡಳಿಯು ಒಂದು ನಿರ್ದಿಷ್ಟ ಸಮುದಾಯಕ್ಕಾಗಿ ಶಿಕ್ಷಣ ಸಂಸ್ಥೆ ಆರಂಭಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಕ್ಫ್ ಮಂಡಳಿಯಿಂದ ಮುಸ್ಲಿಂ ಹೆಣ್ಣುಮಕ್ಕಳಿಗಾಗಿ 10 ಹೊಸ ಕಾಲೇಜು: ಸರ್ಕಾರಿ ಕಾಲೇಜುಗಳ ಪಠ್ಯಕ್ರಮ
ಮುಖ್ಯಮಂತ್ರಿ ಹೇಳಿಕೆ ಕುರಿತು ‘ಟಿವಿ9’ ಪ್ರತಿಕ್ರಿಯಿಸಿರುವ ವಕ್ಫ್ ಮಂಡಳಿ ಅಧ್ಯಕ್ಷ ಶಫಿ ಸಅದಿ, ‘ಸರ್ಕಾರದ ಅನುದಾನದಿಂದ ಕಾಲೇಜು ಆರಂಭಿಸಲಾಗುವುದು. ಇದರಲ್ಲಿ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರವೇ ಅವಕಾಶ ಇರುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಕಾಲೇಜು ಆರಂಭಿಸುವ ಕುರಿತು ನಾನು ಮಾತನಾಡಿದ್ದೆ. ನಮ್ಮ ಮಂಡಳಿಯಲ್ಲಿ ₹ 25 ಕೋಟಿಯಷ್ಟು ಹಣವಿದೆ. ಒಂದು ಕಾಲೇಜಿಗೆ ₹ 2.5 ಕೋಟಿ ಹಣ ನೀಡಿ ರಾಜ್ಯದ 10 ಜಿಲ್ಲೆಗಳಲ್ಲಿ ಕಾಲೇಜು ಆರಂಭಿಸುತ್ತೇವೆ. ಈ ಬಗ್ಗೆ ಸಚಿವರೊಂದಿಗೂ ಚರ್ಚಿಸಿದ್ದೆ ಎಂದಷ್ಟೇ ಹೇಳಿದ್ದೆ’ ಎಂದು ಸ್ಪಷ್ಟಪಡಿಸಿದರು.
‘ನನ್ನ ಪೂರ್ಣ ಹೇಳಿಕೆಯನ್ನು ಮಾಧ್ಯಮಗಳು ಪ್ರಸಾರ ಮಾಡಿಲ್ಲ. ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರವೇ ಕಾಲೇಜು ಆರಂಭಿಸುತ್ತೇವೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚುತ್ತಿವೆ. ವಕ್ಫ್ ಮಂಡಳಿಯಿಂದ ಈಗಾಗಲೇ 112 ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವು ಸರ್ಕಾರದ ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರವೇ ಕೆಲಸ ಮಾಡುತ್ತಿವೆ. ಪ್ರಸ್ತಾಪಿತ ಕಾಲೇಜುಗಳು ಸಹ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಪ್ರಸ್ತಾಪಿತ ಕಾಲೇಜುಗಳಿಗೂ ಹಿಜಾಬ್ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೊಂದಿಗೂ ನಾನು ಚರ್ಚಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಆಶಯಕ್ಕೆ ತಕ್ಕಂತೆ ಈ ಯೋಜನೆಗಳಿವೆ’ ಎಂದು ಹೇಳಿದರು.
ಕರ್ನಾಟಕಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Thu, 1 December 22