
ಬೆಂಗಳೂರು, ಫೆಬ್ರವರಿ 05: ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ ಕೆಲ ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಭುಗಲೇಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮೌನದ ಬಗ್ಗೆ ಕಾಂಗ್ರೆಸ್ ಶಾಸಕರು ಬೇಸರ ಹೊರಹಾಕಿದ್ದು, ನಾಯಕತ್ವ ಬದಲಾವಣೆ ಗೊಂದಲದಿಂದ ನಮ್ಮ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಲವೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರಲಿದೆ. ಹೀಗಿದ್ದರೂ ನಾಯಕತ್ವ ಬದಲಾವಣೆ ವಿಷಯವನ್ನು ಹೈಕಮಾಂಡ್ ಇತ್ಯರ್ಥಪಡಿಸದ ಕಾರಣ ಯಾರನ್ನು ನಂಬಿ ಚುನಾವಣೆ ಎದುರಿಸಬೇಕು ಎಂಬುದೇ ಕಾಂಗ್ರೆಸಿಗರ ಗೊಂದಲಕ್ಕೆ ಕಾರಣವಾಗಿದೆಯಂತೆ.
ಸಿಎಂ ಸಿದ್ದರಾಮಯ್ಯ ಬಳಿ ಅನುದಾನ ಕೇಳಲೆಂದು ತೆರಳಿದರೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಬೇಸರವಾಗುತ್ತೆ. ಇತ್ತ ಡಿಸಿಎಂ ಮನೆಗೆ ತೆರಳಿದರೆ ಸಿಎಂಗೆ ಸಿಟ್ಟು ಬರುತ್ತೆ. ಹೀಗಿರುವಾಗ ನಾವು ಏನು ಮಾಡೋದು ಎಂದು ಅಧಿವೇಶನ ನಡೆಯುವ ಸಂದರ್ಭದಲ್ಲಿ ಶಾಸಕರು ಪರಸ್ಪರ ಬೇಸರ ಹಂಚಿಕೊಂಡಿದ್ದಾರೆ. ಅಲ್ಲದೆ ಹಲವು ಬಾರಿ ಹಿರಿಯ ನಾಯಕರೇ ವಿಷಯ ಪ್ರಸ್ತಾಪಿಸದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೌನಕ್ಕೆ ಶರಣಾಗಿದ್ದಾರೆ. ಐಸಿಸಿ ನಾಯಕರ ಈ ಮೌನದಿಂದಲೇ ಉಂಟಾಗಿರುವ ಗೊಂದಲ ಮತ್ತಷ್ಟು ಹೆಚ್ಚಾಗುತ್ತಿದೆ ಎಂದು ಕೆಲ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಬಿಜೆಪಿ, ಜೆಡಿಎಸ್ ಟಿಕೆಟ್ ಫೈಟ್! ನಿಖಿಲ್ ವಿರುದ್ಧ ಕೇಸರಿ ಪಡೆ ಬಹಿರಂಗ ವಾಗ್ದಾಳಿ
ನಾಯಕತ್ವ ವಿಚಾರವಾಗಿ ಏನೇ ತೀರ್ಮಾನವಿದ್ದರೂ ಕರೆದು ಮಾತುಕತೆ ನಡೆಸುವುದು ಸೂಕ್ತ. ಗೊಂದಲ ಹೀಗೇ ಮುಂದುವರಿದರೆ ಅದು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ ಆಗಬಹುದು. ಹೀಗಾಗಿ ಎಲ್ಲ ಹಿರಿಯ ಸಚಿವರೂ ಗಾಢ ಮೌನ ಮುರಿಯುವಂತೆ ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಶಾಸಕರ ಸಭೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿದ್ದು, ಖರ್ಗೆ ಮತ್ತು ವೇಣುಗೋಪಾಲ್ ಅವರ ಮೌನದ ಬಗ್ಗೆ ಸ್ವಪಕ್ಷ ಶಾಸಕರೇ ಬೇಸರ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ನ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬರುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:48 am, Thu, 5 February 26