ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಸಮೀಪಿಸುತ್ತಿರುವ ಹೊತ್ತಿನಲ್ಲೇ ಅನೇಕ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಆದರೆ, ಈ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸದೇ ಇರುವುದಕ್ಕೆ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವವನ್ನು (OBC) ಬೊಟ್ಟು ಮಾಡುತ್ತಿದೆ. 2ಎ ಮೀಸಲಾತಿಗಾಗಿ (Panchamasali 2A Reservation) ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯ ಸರ್ಕಾರಕ್ಕೆ ಮಾರ್ಚ್ 15ರ ಗಡುವು ವಿಧಿಸಿದೆ. ಆಯೋಗದ ಅಂತಿಮ ವರದಿಗಾಗಿ ಕಾಯಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ ಚುನಾವಣೆಗೂ ಮುನ್ನ ಅಂತಿಮ ವರದಿ ಸಲ್ಲಿಸುವ ಪ್ರಮೇಯ ಇಲ್ಲ, ಇದಕ್ಕೆ ಕನಿಷ್ಠ ಆರು ತಿಂಗಳು ಬೇಕಾಗಬಹುದು ಎಂದು ಒಬಿಸಿ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ‘ನ್ಯೂಸ್ 9’ಗೆ ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯ, ಕುರುಬ, ಈಡಿಗ, ಬಿಲ್ಲವ, ಮುಸ್ಲಿಂ ಸಮುದಾಯದವರು ಮೀಸಲಾತಿಗೆ ಆಗ್ರಹಿಸುತ್ತಿದ್ದು, ಇದರ ಒತ್ತಡಕ್ಕೆ ಸರ್ಕಾರದ ಮೇಲಿದೆ. 2ಎ ವರ್ಗದಡಿ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯವು ಶನಿವಾರ (ಮಾರ್ಚ್ 4) ಕರ್ನಾಟಕದ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದೆ. ಕೂಡಲಸಂಗಮ ಮಠದ ಜಯಮೃತ್ಯುಂಜಯ ಶ್ರೀಗಳ ಸೂಚನೆಯಂತೆ ಈ ಪ್ರತಿಭಟನೆ ನಡೆದಿದೆ. ಅಲ್ಲದೆ, ಎಲ್ಲ 224 ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಬೇಡಿಕೆ ಈಡೇರಿಕೆಗೆ ಸಹಕರಿಸದ ನಾಯಕರ ವಿರುದ್ಧ ಪ್ರಚಾರ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಗುತ್ತಿಗೆ ನೌಕರರ ವೇತನ ಶೇಕಡಾ 15ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ: ಏ.1ರಿಂದ ಜಾರಿ
“ಈಗಲೇ ವರದಿಯನ್ನು ಸಲ್ಲಿಸಲು ಸಾಧ್ಯವಿಲ್ಲ. ವರದಿ ಸಲ್ಲಿಕೆಗೆ ಸಂಬಂಧಿಸಿದ ದಿನಾಂಕದ ಬಗ್ಗೆ ಈಗಲೇ ಏನೂ ಹೇಳಲಾಗದು. ವರದಿ ಸಲ್ಲಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಬಹುಶಃ ಆರು ತಿಂಗಳು ಹಿಡಿಯಬಹುದು. ಸದ್ಯ ಅಧಿಕಾರಿಗಳು ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಮಧ್ಯಂತರ ವರದಿಯ ಸಮಯದಲ್ಲಿ, ಆಯೋಗವು 17 ಜಿಲ್ಲೆಗಳಿಂದ ದತ್ತಾಂಶವನ್ನು ಸಂಗ್ರಹಿಸಿದೆ” ಎಂದು ಅವರು ಹೇಳಿದರು.
ಪಂಚಮಸಾಲಿ ಸಮುದಾಯವು 2019ರಿಂದ ರಾಜ್ಯ ಸರ್ಕಾರದ ಮೇಲೆ ಮೀಸಲಾತಿಗಾಗಿ ಒತ್ತಡ ಹೇರುತ್ತಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ಹಲವು ಒಕ್ಕಲಿಗ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತಮ್ಮ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡುವಂತೆ ಒತ್ತಾಯಿಸಿದ್ದರು. ಸಮುದಾಯಗಳ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಒಬಿಸಿ ಆಯೋಗದಿಂದ ಮಧ್ಯಂತರ ವರದಿ ಕೇಳಿತ್ತು. ಸರ್ಕಾರದ ಆದೇಶದ ಮೇರೆಗೆ ಒಬಿಸಿ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಡಿ.22ರಂದು ಸಿಎಂಗೆ ಮಧ್ಯಂತರ ವರದಿ ಸಲ್ಲಿಸಿದ್ದರು.
ಡಿಸೆಂಬರ್ 29 ರಂದು ಸಚಿವ ಸಂಪುಟವು 3 ಎ ಮತ್ತು 3 ಬಿ ವರ್ಗಗಳನ್ನು ರದ್ದುಗೊಳಿಸಲು ನಿರ್ಧರಿಸಿತ್ತು. ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯತರಿಗೆ ಮೀಸಲಾತಿ ಅವಕಾಶ ಕಲ್ಪಿಸಲು ಕ್ರಮವಾಗಿ 2 ಸಿ ಮತ್ತು 2 ಡಿ ಎಂಬ ಎರಡು ಹೊಸ ವಿಭಾಗಗಳನ್ನು ರಚಿಸಲು ನಿರ್ಧರಿಸಿತು. ವೀರಶೈವರಿಂದ ಹೆಚ್ಚಿನ ಒತ್ತಡ ಬರದಿದ್ದರೂ, ಇಡೀ ವೀರಶೈವ-ಲಿಂಗಾಯತರನ್ನು 2ಡಿ ವರ್ಗಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿತ್ತು.
ಅದಾಗ್ಯೂ, ಯಾವುದೇ ವರ್ಗದಲ್ಲಿ ಮೀಸಲಾತಿ ಕಡಿತ ಮಾಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹೊಸ ವರ್ಗಗಳ ರಚನೆಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಶಿಫಾರಸು ಮಾಡಿದೆ ಮತ್ತು ಸರ್ಕಾರವು ತಾತ್ವಿಕವಾಗಿ ಅದನ್ನು ಅನುಮೋದಿಸಿದೆ ಎಂದು ಅವರು ಹೇಳಿದ್ದರು.
ಬಹುದಿನಗಳ ಸಮಾಲೋಚನೆಯ ನಂತರ ಜಯಮೃತ್ಯುಂಜಯ ಶ್ರೀಗಳು, ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪಂಚಮಸಾಲಿ ಸಮಾಜದ ಒಂದು ವರ್ಗವು ತಮ್ಮ ಬೇಡಿಕೆಗೆ ಸರ್ಕಾರದ ಪರಿಹಾರವನ್ನು ತಿರಸ್ಕರಿಸಿ ಮತ್ತೆ ಧರಣಿ ಆರಂಭಿಸಲು ನಿರ್ಧರಿಸಿತು. ಅದರಂತೆ ಜನವರಿ 14 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜಯ ಮೃತ್ಯುಂಜಯ ಶ್ರೀಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೆಂಬಲಿಗರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಹಿರಂಗವಾಗಿ ಗುರಿಯಾಗಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವಂತೆ ಪ್ರಧಾನಿಗೆ ಪತ್ರವೂ ಬರೆದಿದ್ದಾರೆ.
ಫೆಬ್ರವರಿ 20 ರಂದು, ತಮ್ಮ ಕ್ಷೇತ್ರ ಶಿಗ್ಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ಪಂಚಮಸಾಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ಮತ್ತು ರಾಣಿ ಚನ್ನಮ್ಮನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಈ ವೇಳೆ ಮೀಸಲಾತಿ ಬಗ್ಗೆ ಹೇಳಿಕೆ ನೀಡಿದ್ದ ಅವರು, ಪಂಚಮಸಾಲಿಗಳನ್ನು ಉಲ್ಲೇಖಿಸಿ ಒಬಿಸಿ ಆಯೋಗ ಅಂತಿಮ ವರದಿ ಸಲ್ಲಿಸಿದ ನಂತರ ಸಮುದಾಯಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು.
ಪಂಚಮಸಾಲಿ ಸಮುದಾಯದ ಬೇಡಿಕೆಗಳನ್ನು ಆಡಳಿತಾರೂಢ ಬಿಜೆಪಿ ಕೊನೆಯ ಕ್ಷಣದಲ್ಲಿ ಈಡೇರಿಸಲಿದೆಯಾ ಎಂಬುದು ಈಕ್ಷ ಪ್ರಶ್ನೆಯಾಗಿದೆ. ಆದರೆ ಒಬಿಸಿ ಆಯೋಗದ ಅಧ್ಯಕ್ಷರು ನೀಡಿದ ಮಾಹಿತಿಯಾಧರಿಸಿ ನೋಡುವುದಾದರೆ 2023ರ ಮೇ ಚುನಾವಣೆಯ ಮೊದಲು ಬೇಡಿಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ. ಸೆಪ್ಟಂಬರ್‌ನೊಳಗೆ ಅಂತಿಮ ವರದಿ ಸಲ್ಲಿಸಲು ಆಯೋಗ ಮುಂದಾಗಿದೆ. ಅದರಂತೆ ಪಾರಂಪರಿಕವಾಗಿ ಕೇಸರಿ ಪಕ್ಷಕ್ಕೆ ಮತ ಹಾಕಿರುವ ಪಂಚಮಸಾಲಿ ಸಮುದಾಯವನ್ನು ಆಡಳಿತಾರೂಢ ಬಿಜೆಪಿ ಸಮಾಧಾನಪಡಿಸಬಹುದೇ ಅಥವಾ ಮತ ವಿಭಜನೆಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಮಹೇಶ್ ಚಿಟ್ನಿಸ್, ನ್ಯೂಸ್9
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ