300 ರೂ. ಮೆಡಿಸಿನ್ 6 ಸಾವಿರಕ್ಕೆ ಸೇಲ್: ಸೈಲೆಂಟ್ ಆಗಿ ನಡೀತಿದ್ದ ನಕಲಿ ಆಂಟಿಬಯೋಟಿಕ್ ದಂಧೆ; SIT ತನಿಖೆಯಲ್ಲಿ ಸ್ಫೋಟಕ ಮಾಹಿತಿ
ಬೆಂಗಳೂರಿನಲ್ಲಿ ಭಾರೀ ನಕಲಿ ಔಷಧ ದಂಧೆ ಬಯಲಾಗಿದೆ. ಎಸ್‌ಐಟಿ ತನಿಖೆಯಿಂದ 200-300 ರೂ. ಬೆಲೆಯ ಸಾಮಾನ್ಯ ಆ್ಯಂಟಿಬಯಾಟಿಕ್‌ಗಳನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ನಕಲಿ ಲೇಬಲ್ ಅಂಟಿಸಿ, 26-30 ಪಟ್ಟು ದುಬಾರಿಗೆ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ಬಿಡದಿಯಲ್ಲಿ ಮರು-ಪ್ಯಾಕಿಂಗ್ ಮಾಡಿ, ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ಜಾಲದ 7 ಆರೋಪಿಗಳನ್ನು ಬಂಧಿಸಲಾಗಿದೆ. ಎಸ್‌ಐಟಿ ತನಿಖೆ ಮುಂದುವರಿದಿದೆ.

ಬೆಂಗಳೂರು, ಅ.9: ರಾಜ್ಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದ್ದ ನಕಲಿ ಔಷಧ ಜಾಲದ ಪ್ರಕರಣಕ್ಕೆ ಸಂಬಂಧಿದಂತೆ ದಿನಕ್ಕೊಂದು ಅಘಾತಕಾರಿ ವಿಚಾರಗಳು ತಿಳಿಯುತ್ತಿದೆ. ಈ ಹಿಂದೆ ಬಿಡದಿ ಸೇರಿದಂತೆ ಅನೇಕ ಕಡೆ ಅಧಿಕಾರಿಗಳು ದಾಳಿಯನ್ನು ನಡೆಸಿ ನಕಲಿ ಔಷಧಿಗಳನ್ನು ಪತ್ತೆ ಮಾಡಿದರು. ಇದೀಗ ಈ ಪ್ರಕರಣದ ಆಳ-ಅಗಲವನ್ನುವಿಶೇಷ ತನಿಖಾ ತಂಡ ಮತಷ್ಟು ಭೇದಿಸಿದ್ದು, ತನಿಖೆಯ ವೇಳೆ ಕಣ್ಣುಹಿಗ್ಗಿಸುವ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಕೇವಲ 200 ರಿಂದ 300 ರೂಪಾಯಿಯ ಸಾಮಾನ್ಯ ಆಂಟಿಬಯೋಟಿಕ್‌ಗಳಿಗೆ ಪ್ರಸಿದ್ಧ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ನಕಲಿ ಲೇಬಲ್ ಅಂಟಿಸಿ, ಸಾರ್ವಜನಿಕರಿಗೆ ಬರೋಬ್ಬರಿ 26 ರಿಂದ 30 ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಜಾಲದ ಕರಾಳ ದಂಧೆ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹಾಗೂ ಮಾನ್ಯತೆ ಹೊಂದಿರುವ ಎರಡು ಪ್ರಮುಖ ಆಂಟಿಬಯೋಟಿಕ್ ಔಷಧಗಳನ್ನು ಈ ನಕಲಿ ಗ್ಯಾಂಗ್ ಆಯ್ಕೆ ಮಾಡಿಕೊಂಡಿತ್ತು. ಒಂದು ಜಾವಿಸೆಫ್ಟಾ (ZAVICEFTA), ಮಾರುಕಟ್ಟೆಯಲ್ಲಿ ಇದರ ನೈಜ ಬೆಲೆ 5,000 ರೂ ರಿಂದ 6,000 ರೂ., ಇನ್ನೊಂದು ಎಂಬ್ಲಾಬಿಯೋ (EMBLABEO) ಮಾರುಕಟ್ಟೆಯಲ್ಲಿ ಇದರ ಬೆಲೆ 6,000 ರಿಂದ 7,800 ರೂ, ಇರಬಹುದು. ಆದರೆ ಭಾರತದಲ್ಲಿ ಸಣ್ಣಪುಟ್ಟ ಮೆಡಿಕಲ್ ಕಾಂಪೊನೆಂಟ್ಸ್ ವ್ಯತ್ಯಾಸದೊಂದಿಗೆ ಇದೇ ಮಾದರಿಯ ಆಂಟಿಬಯೋಟಿಕ್‌ಗಳು ಉತ್ಪಾದನೆಯಾಗುತ್ತವೆ. ಇವುಗಳ ಮಾರುಕಟ್ಟೆ ಬೆಲೆ ಕೇವಲ 200 ರಿಂದ 300 ರೂ. ಮಾತ್ರ. ಖದೀಮರು ಇದನ್ನೇ ಬಂಡವಾಳ ಮಾಡಿಕೊಂಡಿದ್ದರು.
ಇದನ್ನೂ ಓದಿ: ಕರ್ನಾಟಕದಾದ್ಯಂತ 45 ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಆಹಾರ, ನಿಯಮ ಉಲ್ಲಂಘನೆ ಪತ್ತೆ
ಬಿಡದಿಯಲ್ಲಿ ರೀ-ಪ್ಯಾಕಿಂಗ್ ಅಡ್ಡ: ಹೇಗೆ ನಡೆಯುತ್ತಿತ್ತು ದಂಧೆ?
ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ರಾಜಸ್ಥಾನದಲ್ಲಿರುವ ಸ್ಥಳೀಯ ಫ್ಯಾಕ್ಟರಿಗಳು ಮತ್ತು ಡೀಲರ್‌ಗಳಿಂದ ಅಧಿಕೃತವಾಗಿ ಇಂಡೆಂಟ್ ನೀಡಿ 200-300 ರೂ. ಬೆಲೆಯ ಆಂಟಿಬಯೋಟಿಕ್‌ಗಳನ್ನು ತರಿಸಿಕೊಳ್ಳುತ್ತಿದ್ದರು. ಹೀಗೆ ಬಂದ ಅಗ್ಗದ ಮೆಡಿಸಿನ್‌ಗಳನ್ನು ಬೆಂಗಳೂರು ಬಳಿಯ ಬಿಡದಿಗೆ ತಂದು, ಅಲ್ಲಿ ಜಾವಿಸೆಫ್ಟಾ ಮತ್ತು ಎಂಬ್ಲಾಬಿಯೋ ಬ್ರ್ಯಾಂಡ್‌ಗಳ ನಕಲಿ ಬಾಕ್ಸ್‌ಗಳಲ್ಲಿ ರೀ-ಪ್ಯಾಕ್ ಮಾಡುತ್ತಿದ್ದರು. ಈ 300 ರೂ. ದರದ ಔಷಧಗಳನ್ನು “ಇಂಟರ್ನ್ಯಾಷನಲ್ ಕ್ವಾಲಿಟಿ” ಎಂದು ಜನರನ್ನು ನಂಬಿಸಿ, ನೈಜ ಮಾರುಕಟ್ಟೆ ಮೌಲ್ಯದ 26 ರಿಂದ 30 ಪಟ್ಟು ಹೆಚ್ಚಿನ ದರಕ್ಕೆ ಅಂದರೆ ಸಾವಿರಾರು ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು.
ಮೂರು ರಾಜ್ಯಗಳಲ್ಲಿ ಪಕ್ಕಾ ಮಾಹಿತಿಯೊಂದಿಗೆ ಎಸ್‌ಐಟಿ ದಾಳಿ :
ಪ್ರಕರಣದ ಬೆನ್ನತ್ತಿದ ಎಸ್‌ಐಟಿ ಅಧಿಕಾರಿಗಳ ತಂಡ ಹಿಮಾಚಲ ಪ್ರದೇಶ, ತೆಲಂಗಾಣ ಹಾಗೂ ಹರಿಯಾಣ ರಾಜ್ಯಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ದಾಳಿಯ ವೇಳೆ ಆರೋಪಿಗಳು ನಕಲಿ ಮೆಡಿಸಿನ್‌ಗಳನ್ನು ತರಿಸಿಕೊಳ್ಳಲು ಬಳಸಿದ್ದ ದಾಖಲೆಗಳು, ನಕಲಿ ಬಾಕ್ಸ್ ಹಾಗೂ ಲೇಬಲ್ ಪ್ರಿಂಟ್ ಮಾಡಿಸಲು ನೀಡಿದ್ದ ಆರ್ಡರ್‌ಗಳ ಸಂಪೂರ್ಣ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನಿನ ಪ್ರಕಾರ ಯಾವುದೇ ಮೆಡಿಸಿನ್ ಅನ್ನು ಅನುಮತಿ ಇಲ್ಲದೆ ರೀ-ಪ್ಯಾಕಿಂಗ್ ಮಾಡುವುದು ಗಂಭೀರ ಅಪರಾಧವಾಗಿದೆ. ಸದ್ಯ ಬಂಧಿತ 7 ಆರೋಪಿಗಳಿಂದ ಇನ್ನಷ್ಟು ಜಾಲದ ಲಿಂಕ್‌ಗಳನ್ನು ಹೊರತೆಗೆಯಲು ಎಸ್‌ಐಟಿ ತನಿಖೆ ಮುಂದುವರಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




