ಕರ್ನಾಟಕದಾದ್ಯಂತ 45 ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಆಹಾರ, ನಿಯಮ ಉಲ್ಲಂಘನೆ ಪತ್ತೆ
ಐಸ್‌ಕ್ರೀಂ ಉತ್ಪನ್ನಗಳ ಸುರಕ್ಷತೆ ಪರಿಶೀಲಿಸಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿದೆ. ತಪಾಸಣೆಯ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆ ಪತ್ತೆಯಾಗಿದೆ. ಸದ್ಯ ಪರೀಕ್ಷೆಗಾಗಿ 70 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಬೆಂಗಳೂರು, ಅಕ್ಟೋಬರ್ 9: ಕರ್ನಾಟಕದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಬೆಂಗಳೂರು, ಮೈಸೂರು, ರಾಯಚೂರು ಸೇರಿದಂತೆ ರಾಜ್ಯದ 45 ಘಟಕಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನಲ್ಲಿರುವ ಸಾವರ ಐಸ್‌ಕ್ರೀಂ ಕೆಫೆ, ಬಿಳೇಕಹಳ್ಳಿಯ ಬನ್ನೇರುಘಟ್ಟ ರಸ್ತೆಯ ಎನ್ ಎಂಟರ್‌ಪ್ರೈಸಸ್, ಮೈಸೂರಿನ ಜಾನ್ ಕ್ಯಾಂಡಿ ಐಸ್‌ಕ್ರೀಂ ತಯಾರಿಕಾ ಘಟಕ ಮತ್ತು ರಾಯಚೂರಿನ ಜೆಮಿನಿ ಐಸ್‌ಕ್ರೀಂ ತಯಾರಿಕಾ ಘಟಕ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
70 ಆಹಾರ ಮಾದರಿಗಳ ಸಂಗ್ರಹ
ತಪಾಸಣೆ ವೇಳೆ ಐಸ್‌ಕ್ರೀಂ, ಹಾಲು, ಹಾಲಿನ ಪುಡಿ, ಫ್ಲೇವರಿಂಗ್ ಪದಾರ್ಥಗಳು ಮತ್ತು ಸಕ್ಕರೆ ಸೇರಿದಂತೆ ಒಟ್ಟು 70 ಆಹಾರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಗುಣಮಟ್ಟದ ಪರಿಶೀಲನೆಗಾಗಿ ತೆಗೆದುಕೊಳ್ಳಲಾಗಿದೆ.
ಅವಧಿ ಮೀರಿದ ಆಹಾರ ಪದಾರ್ಥ ಪತ್ತೆ
ಪರಿಶೀಲನೆ ವೇಳೆ ಅವಧಿ ಮೀರಿದ ಐಸ್‌ಕ್ರೀಂ, ಹಾಲು, ಬಿಸ್ಕತ್ ಮತ್ತು ಕೊಬ್ಬರಿ ಪುಡಿ ಪತ್ತೆಯಾಗಿವೆ. ಇದರೊಂದಿಗೆ ಆಹಾರ ಉತ್ಪನ್ನಗಳ ಮೇಲೆ ಲೇಬಲಿಂಗ್ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆಯ ಪರಿಶೀಲನೆಗಾಗಿ ಈ ದಾಳಿ ನಡೆಸಲಾಗಿದೆ. ಸಂಗ್ರಹಿಸಿರುವ ಮಾದರಿಗಳ ಪರಿಶೀಲನೆಯಿಂದ ಆಹಾರ ಉತ್ಪನ್ನಗಳ ಗುಣಮಟ್ಟದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಇದನ್ನೂ ಓದಿ: ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು 64 ಪಿಜಿಗಳ ಮೇಲೆ ದಾಳಿ ನಡೆಸಿ, ನೈರ್ಮಲ್ಯ ವ್ಯವಸ್ಥೆ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳ ಕುರಿತು ಪರಿಶೀಲನೆ ನಡೆಸಿದ್ದರು. ಅದಕ್ಕೂ ಮುನ್ನ ಹೋಟೆಲ್, ರೆಸ್ಟೋರೆಂಟ್ಗಳ ಮೇಲೆ ಸರಣಿ ದಾಳಿಗಳು ನಡೆದಿದ್ದವು. ಮತ್ತೊಂದೆಡೆ, ಚಿಕ್ಕಮಗಳೂರಿನಲ್ಲಿ ನಕಲಿ ತುಪ್ಪ ತಯಾರಿಕಾ ಜಾಲವೊಂದು ಪತ್ತೆಯಾಗಿತ್ತು. ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸುರಕ್ಷತೆ ಕುರಿತು ಇಲಾಖೆ ಕೈಗೊಂಡಿದ್ದ ಹಿಂದಿನ ಕಾರ್ಯಾಚರಣೆಗಳ ಬೆನ್ನಲ್ಲೇ ಇದೀಗ ರಾಜ್ಯದ 45 ಐಸ್‌ಕ್ರೀಂ ತಯಾರಿಕಾ ಘಟಕಗಳ ಮೇಲೆ ಪರಿಶೀಲನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




