ಬೆಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲುತೂರಾಟ, ಗಲಾಟೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುವ ಸಮಯದಲ್ಲೇ ಸಚಿವರು ಕ್ಲೀನ್ಚಿಟ್ ಕೊಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಶಿವಮೊಗ್ಗದ ಗಲಭೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಬಿಜೆಪಿಯವರೇ ಬೇರೆ ಬಟ್ಟೆ ತೊಟ್ಟು ಗಲಾಟೆ ಮಾಡುತ್ತಾರೆ ಎಂದರೆ ಹೇಗೆ? ಇದೊಂದು ಸಣ್ಣ ಘಟನೆಯಾದರೆ ಯಾಕೆ ಲಾಠಿ ಚಾರ್ಜ್ ಆಯ್ತು? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಅತಿಯಾದ ತುಷ್ಟೀಕರಣವೇ ಶಿವಮೊಗ್ಗದ ಗಲಾಟೆಗೆ ಕಾರಣ. ಶಿವಮೊಗ್ಗ ಗಲಾಟೆಯಲ್ಲಿ ಓಲೈಕೆ ರಾಜಕಾರಣ ಪ್ರಭಾವ ಬೀರಿದೆ. ತಪ್ಪಿತಸ್ಥರು ಯಾರೇ ಇರಲಿ, ಅವರನ್ನು ಕೂಡಲೇ ಬಂಧಿಸಿ ಶಿಕ್ಷೆ ಕೊಡಿಸಬೇಕು. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಇದು ಸಣ್ಣ ಘಟನೆ ಅಂತಿದ್ದಾರೆ. ಕಾಂಗ್ರೆಸ್ನವರಿಗೆ ಇನ್ನೆಷ್ಟು ದೊಡ್ಡ ಘಟನೆ ನಡೆಯಬೇಕಿತ್ತು? ಎಂದು ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ; ಸಂಕಷ್ಟಕ್ಕೆ ಸಿಲುಕಿದ ಸಾರ್ವಜನಿಕರು
ಇನ್ನೊಂದೆಡೆ, ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರೆಸಿದ್ದಾರೆ. ಇದು ಮುಸ್ಲಿಮರಿಗೆ ಮಾರಿಕೊಂಡ ಸರ್ಕಾರ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಬೆಂಬಲದಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಶಿವಮೊಗ್ಗದ ಗಲಾಟೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇರ ಕಾರಣ. ಮುಸ್ಲಿಂ ನಾಯಕನಾಗಲು ಅವರಿಬ್ಬರ ನಡುವೆ ಸ್ಪರ್ಧೆ ನಡೆಯುತ್ತಿದೆ. ಗಣೇಶ ವಿಸರ್ಜನೆ ವೇಳೆ ಏನಾದರೂ ದೇಶ ವಿರೋಧಿ ಕೃತ್ಯ ಆಗಿದ್ಯಾ? ಭಾರತದಲ್ಲಿ ಸನಾತನ ಧರ್ಮ ನಾಶ ಮಾಡಲು ಯಾವನೂ ಹುಟ್ಟಿಲ್ಲ. ಸನಾತನ ಧರ್ಮ ಒಡೆಯಲು ಬಂದವರೆಲ್ಲರೂ ನಾಶವಾಗಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೂಡ ನಾಶವಾಗಿ ಹೋಗುತ್ತಾರೆ. ಮುಸ್ಲಿಮರ ವಿರುದ್ಧ ಕ್ರಮ ತೆಗೆದುಕೊಳ್ಳುವ ಧಮ್ ಡಿಸಿಎಂ ಡಿಕೆ ಶಿವಕುಮಾರ್ಗೆ ಇಲ್ಲ ಎಂದು ಯತ್ನಾಳ್ ಟೀಕಿಸಿದ್ದಾರೆ.
ಶಿವಮೊಗ್ಗದಲ್ಲಿ ವೇಷ ಬದಲಿಸಿಕೊಂಡು ಬಿಜೆಪಿಯವರೇ ಗಲಾಟೆ ಮಾಡಿದ್ದಾರೆಂಬ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಜನರ ಹಿತ ಬಯಸಿಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ಗಾಗಿ ಕೆಲಸ ಮಾಡುತ್ತಿದೆ. ಪೊಲೀಸರ ಮೇಲೆ ಕಲ್ಲು ತೂರಿದವರ ಮೇಲೂ ಏಕೆ ಕ್ರಮ ಕೈಗೊಂಡಿಲ್ಲ? ಡಿ.ಜೆ. ಹಳ್ಳಿ ಗಲಭೆಕೋರರ ಕೇಸ್ ಕೈಬಿಡಿ ಎಂದು ತನ್ವೀರ್ ಸೇಠ್ ಪತ್ರ ಬರೆದಿದ್ದರು. ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ಬಿಜೆಪಿಯವರೇ ಗಲಾಟೆ ಮಾಡಿದ್ರಾ? ಕಾಂಗ್ರೆಸ್ಸಿಗರು ಹಿಂದಿನಿಂದಲೂ ಹಿಂದೂಗಳ ಮೇಲೆ ಕಿಡಿಕಾರುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಹರಿಹಾಯ್ದಿದ್ದಾರೆ.
ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ