AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಷೇಪಾರ್ಹ ಟ್ವಿಟ್ಟರ್ ಪೋಸ್ಟ್ ತೆಗೆಯಲು ಕೇಂದ್ರ ಸೂಚನೆ; ಎಕ್ಸ್ ಕಾರ್ಪ್ ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್ ಒಪ್ಪಿಗೆ

ಕೆಲವು ವೈಯಕ್ತಿಕ ಖಾತೆಗಳನ್ನು ರದ್ದು ಮಾಡಿದ್ದ ಸಚಿವಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪು ಕುರಿತು ಎಕ್ಸ್ ಕಾರ್ಪ್ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

ಆಕ್ಷೇಪಾರ್ಹ ಟ್ವಿಟ್ಟರ್ ಪೋಸ್ಟ್ ತೆಗೆಯಲು ಕೇಂದ್ರ ಸೂಚನೆ; ಎಕ್ಸ್ ಕಾರ್ಪ್ ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್ ಒಪ್ಪಿಗೆ
ಕರ್ನಾಟಕ ಹೈಕೋರ್ಟ್
Ramesha M
| Updated By: ಸುಷ್ಮಾ ಚಕ್ರೆ|

Updated on: Oct 04, 2023 | 6:26 PM

Share

ಬೆಂಗಳೂರು: ಆಕ್ಷೇಪಾರ್ಹ ಟ್ವಿಟ್ಟರ್ ಪೋಸ್ಟ್ ತೆಗೆಯಲು ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಆ ಸೂಚನೆಯನ್ನು ಪ್ರಶ್ನಿಸಿದ್ದ ಎಕ್ಸ್​ ಕಾರ್ಪ್(ಟ್ವಿಟ್ಟರ್) ಮೇಲ್ಮನವಿ ವಿಚಾರಣೆ ಹೈಕೋರ್ಟ್​ನಲ್ಲಿ ಇಂದು ನಡೆದಿದೆ. ಆಕ್ಷೇಪಾರ್ಹ ಪೋಸ್ಟ್​ ತೆಗೆಯುವ ಆದೇಶದ ಮರುಪರಿಶೀಲನೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿಲ್ಲ. ಈ ಬಗ್ಗೆ ಹೈಕೋರ್ಟ್‌ಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿಕೆ ನೀಡಿದ್ದು, ಆದೇಶ ಮರುಪರಿಶೀಲಿಸಲು ಯಾವುದೇ ಕಾರಣಗಳಿಲ್ಲವೆಂದು ಹೇಳಿದೆ. ಎಕ್ಸ್​ ಕಾರ್ಪ್(ಟ್ವಿಟ್ಟರ್) ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್​ ಅಂಗೀಕರಿಸಿದ್ದು, ವಿಭಾಗೀಯ ಪೀಠದಿಂದ ಮುಂದಿನ ವಿಚಾರಣೆ ನವೆಂಬರ್‌ 9ಕ್ಕೆ ನಡೆಯಲಿದೆ.

ಆಕ್ಷೇಪಾರ್ಹ ಟ್ವಿಟ್ಟರ್ ಪೋಸ್ಟ್ ತೆಗೆಯಲು ಕೇಂದ್ರ ಸರ್ಕಾರ ಸೂಚಿಸಿತ್ತು. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಟ್ವಿಟ್ಟರ್​ ಸಂಸ್ಥೆಗೆ ಎಚ್ಚರಿಕೆ ನೀಡಿತ್ತು. ಕೇಂದ್ರ ಸರ್ಕಾರದ ನೋಟಿಸ್ ಪ್ರಶ್ನಿಸಿದ್ದ ಎಕ್ಸ್ ಕಾರ್ಪ್(ಟ್ವಿಟರ್) ಸಂಸ್ಥೆಯ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಬಳಿಕ, ವಿಭಾಗೀಯ ಪೀಠಕ್ಕೆ ಎಕ್ಸ್ ಕಾರ್ಪ್ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ: Twitter: ಟ್ವಿಟ್ಟರ್ ಖರೀದಿಸುವಂತೆ ಮಾಡಿದ್ದ ಲಾ ಏಜೆನ್ಸಿ ವಿರುದ್ಧ ಇಲಾನ್ ಮಸ್ಕ್ ಕೇಸ್ ದಾಖಲು

ಹೈಕೋರ್ಟ್​ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರ ವಿಭಾಗೀಯ ಪೀಠವು ಬಳಕೆದಾರರ ಖಾತೆಗಳನ್ನು ನಿರ್ಬಂಧಿಸಲು ಎಕ್ಸ್ ಕಾರ್ಪ್ (ಹಿಂದೆ ಟ್ವಿಟರ್) ಗೆ ನಿರ್ದೇಶಿಸುವ ಮೂಲಕ ರವಾನಿಸಲಾದ ನಿರ್ಬಂಧಿಸುವ ಆದೇಶಗಳನ್ನು ಮರುಪರಿಶೀಲಿಸಬೇಕೆ ಎಂದು ಸೆಪ್ಟೆಂಬರ್ 20ರಂದು ಕೇಂದ್ರವನ್ನು ಮೌಖಿಕವಾಗಿ ಕೇಳಿತ್ತು. ಎಕ್ಸ್​​ ಕಾರ್ಪ್​​ನಿಂದ (ಟ್ವಿಟರ್) ಆಕ್ಷೇಪಾರ್ಹ ಟ್ವೀಟ್​ಗಳನ್ನು ತೆಗೆದಿರುವುದಕ್ಕೆ ಸಂಬಂಧಿಸಿದಂತೆ ಸಕಾರಣ ನೀಡಿಲ್ಲ. ಈ ಸಂಬಂಧ ಪರಿಶೀಲನೆ ನಡೆಸಬೇಕು ಎಂಬ ಅರ್ಜಿದಾರರ ಮನವಿ ಸಂಬಂಧ ನಿಲುವು ತಿಳಿಸುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು.

ಕೆಲವು ವೈಯಕ್ತಿಕ ಖಾತೆಗಳನ್ನು ರದ್ದು ಮಾಡಿದ್ದ ಸಚಿವಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪು ಕುರಿತು ಎಕ್ಸ್ ಕಾರ್ಪ್ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಈ ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಸಜ್ಜನ್​ ಪೂವಯ್ಯ, ಕೆಲವು ಟ್ವಿಟ್ಟರ್ ಖಾತೆಗಳಿಗೆ ನಿರ್ಬಂಧ ಹೇರಿರುವ ಕುರಿತು ಕಾರಣ ನೀಡಬೇಕು ಎಂಬ ನಿಯಮವಿದ್ದರೂ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸೂಕ್ತ ಕಾರಣಗಳನ್ನು ನೀಡಿಲ್ಲ. ಹೀಗಾಗಿ, ಖಾತೆಗಳನ್ನು ಸ್ಥಗಿತಗೊಳಿಸಿರುವ ಆದೇಶವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ನಷ್ಟದ ಹೊರೆಯಲ್ಲಿದ್ದ ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಖರೀದಿಸಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಕಾರಣ

ಈ ಹಿಂದೆ ಕೆಲವು ವೈಯಕ್ತಿಕ ಟ್ವಿಟ್ಟರ್ ಖಾತೆಗಳನ್ನು ನಿರ್ಬಂಧಿಸಿದ್ದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ (ಟ್ವಿಟ್ಟರ್) ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ 50 ಲಕ್ಷ ರೂ.ಗಳ ದಂಡ ವಿಧಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ಕುರಿತು ಈ ಹಿಂದೆ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, 50 ಲಕ್ಷ ರೂ.ಗಳ ದಂಡದ ಆದೇಶಕ್ಕೆ ತಡೆ ನೀಡಿತ್ತು. ಎಕ್ಸ್​ ಕಾರ್ಪ್ ತನ್ನ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕಾಗಿ ದಂಡದ ಒಟ್ಟು ಮೊತ್ತದಲ್ಲಿ ಶೇ. 50ರಷ್ಟು ಅಂದರೆ 25 ಲಕ್ಷ ರೂ. ಹಣವನ್ನು 1 ವಾರದೊಳಗೆ ಪಾವತಿಸಲು ನಿರ್ದೇಶನ ನೀಡಿತ್ತು.

ಇನ್ನಷ್ಟು ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ