ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿ ವಿರುದ್ಧದ ಲಂಚ (Corruption) ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಸೋಮವಾರ (ಜುಲೈ 11) ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಮೂರ್ತಿಗಳ ಎದುರು ವಾದ ಮಂಡಿಸಿದ ಸಿಬಿಐ ಪರ ವಕೀಲ ಪ್ರಸನ್ನ, ಅಧಿಕಾರಿಗಳ ವಿರುದ್ಧ ತನಿಖೆಗೆ ಸಿಬಿಐ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು ನಿಜ. ಆದರೆ ತನಿಖೆ ನಡೆಸಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇಲ್ಲ ಎಂದರು. ಹೈಕೋರ್ಟ್ ಏಕಸದಸ್ಯಪೀಠದಲ್ಲಿ ಮಂಜುನಾಥ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಆರೋಪಗಳಿರುವ ಹಿನ್ನೆಲೆಯಲ್ಲಿ ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಮೆಮೊ ದಾಖಲಿಸಿದರು. ಸೀಮಂತ್ ಕುಮಾರ್ ಸಿಂಗ್ ವಿರುದ್ಧ ದಾಳಿ ನಡೆಸಲಾಗಿತ್ತೆ ಎಂದು ಸಿಬಿಐ ಪರ ವಕೀಲರಿಗೆ ಹೈಕೋರ್ಟ್ ಪ್ರಶ್ನೆ ಕೇಳಿತು. ಅಧಿಕಾರಿಗಳ ವಿರುದ್ಧ ತನಿಖೆಗೆ ಮನವಿ ಮಾಡಲಾಗಿತ್ತು ಎಂದಷ್ಟೇ ಸಿಬಿಐ ವಕೀಲರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ; ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ವಿರುದ್ಧ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಮೇಲ್ಮನವಿ
ಅಶೋಕ್ ಹಾರನಹಳ್ಳಿ ವಾದಕ್ಕೆ ಹೈಕೋರ್ಟ್ ಆಕ್ಷೇಪ
ಸೀಮಂತ್ ಕುಮಾರ್ ಸಿಂಗ್ ವಿರುದ್ಧ ಹೈಕೋರ್ಟ್ ವಾಗ್ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಲು ಮುಂದಾದರು. ಇದಕ್ಕೆ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಆಕ್ಷೇಪ ವ್ಯಕ್ತಪಡಿಸಿದರು.
‘ಸೀಮಂತ್ ಕುಮಾರ್ ಸಿಂಗ್ ವಿರುದ್ಧ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಅವರು ಹುದ್ದೆಯಲ್ಲಿ ಇರಬಾರದೆಂಬಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಹೈಕೋರ್ಟ್ ಅಭಿಪ್ರಾಯ ಸರಿಯಲ್ಲ’ ಎಂದು ಅವರು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂದೇಶ್, ‘ಹೈಕೋರ್ಟ್ಗೆ ಅರ್ಜಿಯನ್ನೇ ಸಲ್ಲಿಸದೇ ವಾದ ಹೇಗೆ ಮಂಡಿಸುತ್ತೀರಿ? ಅರ್ಜಿ ಸಲ್ಲಿಸದೇ ಪ್ರಕರಣದಲ್ಲಿ ವಾದ ಮಂಡಿಸುವ ಹಕ್ಕು ಎಲ್ಲಿದೆ? ನೀವು ಅರ್ಜಿ ಸಲ್ಲಿಸಿದರೆ ಮಾತ್ರ ನಾವು ಪರಿಗಣಿಸಲು ಸಾಧ್ಯ. ನಿಮಗೆ ಲೋಕಸ್ ಸ್ಟಾಂಡಿ ಇಲ್ಲದಿರುವುದರಿಂದ ವಾದ ಮಂಡಿಸಲು ಆಗುವುದಿಲ್ಲ’ ಎಂದರು.
ಇದನ್ನೂ ಓದಿ: ಎಸಿಬಿ ಎಡಿಜಿಪಿಗೆ ಆತ್ಮಸಾಕ್ಷಿಯಿಂದ ಕೇಳಿಕೊಳ್ಳಲು ಹೇಳಿ ಎಂದು ಎಡಿಜಿಪಿಗೆ ಮತ್ತೆ ಝಾಡಿಸಿದ ನ್ಯಾ. ಹೆಚ್.ಪಿ. ಸಂದೇಶ್!
ನನಗೆ ಬೆದರಿಕೆ ಇರುವುದರಿಂದ ನಾನು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ನ್ಯಾಯಮೂರ್ತಿ ಮೂಲಕ ಬೆದರಿಕೆ ಹಾಕಿಸುವುದು ಸರಿಯೇ? ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ನಡೆದಿದೆ. ಬೆದರಿಕೆ ಇದೆ ಎನ್ನುವ ಕಾರಣಕ್ಕೆ ಸಹ ನ್ಯಾಯಮೂರ್ತಿಯ ಬಗ್ಗೆ ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ. ಇಲ್ಲಿ ನಾನು ನ್ಯಾಯಮೂರ್ತಿ ಹೆಸರು ಹೇಳುವ ಅಗತ್ಯವಿಲ್ಲ’ ಎಂದರು.
ಏನಿದು ಪ್ರಕರಣ?
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಅಧಿಕಾರಿಗಳು ‘ಜಿಲ್ಲಾಧಿಕಾರಿ ಸೂಚನೆ ಮೇರೆ ಲಂಚ ಪಡೆದಿದ್ದೇವೆ’ ಎಂದು ಹೇಳಿಕೊಂಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಆಗ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು.
ಪ್ರಭಾವಕ್ಕೆ ಒಳಗಾಗಿ ಎಸಿಬಿ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಹೈಕೋರ್ಟ್ ಚಾಟಿ ಬೀಸಿತ್ತು. ಅನಂತರವೇ ಮಂಜುನಾಥ್ ಅವರನ್ನು ಬಂಧಿಸಲಾಯಿತು. ಈ ವೇಳೆ ನ್ಯಾಯಮೂರ್ತಿ ಸಂದೇಶ್ ಅವರು ಆಡಿದ್ದ ಮಾತುಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು.