ಹೆಬ್ಬಾಳ ಎಲ್ಲಿದೆ ಎನ್ನುವುದು ತಿಳಿಯದ ಸಿಬ್ಬಂದಿ: ಪೊಲೀಸ್ ಕಂಟ್ರೋಲ್ ರೂಂ ಕಾರ್ಯವೈಖರಿಗೆ ತೀವ್ರ ಆಕ್ಷೇಪ
‘ನಿಮ್ಮ ಕಂಟ್ರೋಲ್ ರೂಂನಲ್ಲಿರುವ ಗುತ್ತಿಗೆ ನೌಕರರಿಗೆ ಹೆಬ್ಬಾಳ ಎಲ್ಲಿದೆ ಎಂದೇ ಗೊತ್ತಿಲ್ಲ. ಪೊಲೀಸರೇ ಇಲ್ಲದ ಕಂಟ್ರೋಲ್ ರೂಂ ನೀವು ಕಂಟ್ರೋಲ್ ಮಾಡ್ತಿದ್ದೀರಿ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.
ಬೆಂಗಳೂರು: ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಂ (Bengaluru Police Control Room) ಕಾರ್ಯವೈಖರಿ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಶರತ್ ಚಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನಿಮ್ಮ ಕಂಟ್ರೋಲ್ ರೂಂನಲ್ಲಿರುವ ಗುತ್ತಿಗೆ ನೌಕರರಿಗೆ ಹೆಬ್ಬಾಳ ಎಲ್ಲಿದೆ ಎಂದೇ ಗೊತ್ತಿಲ್ಲ. ಪೊಲೀಸರೇ ಇಲ್ಲದ ಕಂಟ್ರೋಲ್ ರೂಂ ನೀವು ಕಂಟ್ರೋಲ್ ಮಾಡ್ತಿದ್ದೀರಿ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು. ಈ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಕಂಟ್ರೋಲ್ ರೂಂಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬೈಕ್ನಲ್ಲಿ ಬಂದಿದ್ದ ಕಳ್ಳರು ಮೊಬೈಲ್ ಕಿತ್ತುಕೊಂಡು ಹೋಗುತ್ತಿದ್ದುದು ಗಮನಿಸಿದ ಶರತ್ಚಂದ್ರ ಅವರ ಮಗಳು ಬೈಕ್ ನಂಬರ್ಗಳನ್ನು ಗುರುತು ಮಾಡಿಕೊಂಡು ತಂದೆಗೆ ವಿಷಯ ತಿಳಿಸಿದ್ದರು. ಅವರು ತಕ್ಷಣ ಈ ವಿಷಯವನ್ನು ಪೊಲೀಸರ ಗಮನಕ್ಕೆ ತರಲು ಯತ್ನಿಸಿದರು. 11.20ಕ್ಕೆ ಪೊಲೀಸರಿಗೆ ಕರೆ ಮಾಡಿದರೂ ಯಾರೂ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಾಗಿ 12 ಗಂಟೆಯವರೆಗೂ ಕಂಟ್ರೋಲ್ ಸಿಬ್ಬಂದಿ ಮಾಹಿತಿ ಪಡೆದುಕೊಳ್ಳುತ್ತಲೇ ಇದ್ದರು.
ಬೇಸರಗೊಂಡ ಅವರು ನಂತರ ನಂತರ ಹೆಬ್ಬಾಳ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಲು ಯತ್ನಿಸಿದರು. ಅಲ್ಲಿಯೂ ಯಾರೊಬ್ಬರು ಕರೆ ಸ್ವೀಕರಿಸಲಿಲ್ಲ. ನಂತರ 15 ನಿಮಿಷದ ಬಳಿಕ ಹೆಬ್ಬಾಳ ಪೊಲೀಸ್ ಠಾಣೆಯಿಂದ ಕರೆ ಮಾಡಿದ್ದರು. ಅವರು ಇದು ನಮ್ಮ ಲಿಮಿಟ್ಸ್ಗೆ ಬರುವುದಿಲ್ಲ. ಅಮೃತಹಳ್ಳಿ ಪೊಲೀಸ್ ಠಾಣೆಗೆ ಬರುತ್ತದೆ ಎಂದು ಅಲ್ಲಿನ ಸಿಬ್ಬಂದಿ ಫೋನ್ ಇಟ್ಟಿದ್ದರು ಎಂದು ಶರತ್ಚಂದ್ರ ಬೇಸರ ವ್ಯಕ್ತಪಡಿಸಿದರು.
ಸ್ವಲ್ಪಹೊತ್ತಿನ ತರುವಾಯ ಎರಡೂ ಠಾಣೆಗಳಿಂದ ನಿರಂತರವಾಗಿ ಕರೆಗಳು ಬರುತ್ತಲೇ ಇದ್ದವು. ಮಾಹಿತಿ ಕೊಟ್ಟ ತಪ್ಪಿಗೆ ನಾಗರಿಕರು ರಾತ್ರಿಯಿಡೀ ಎಚ್ಚರವಿರಬೇಕಾ ಎಂದು ಅವರು ಪ್ರಶ್ನಿಸಿದರು.
ಮೊಬೈಲ್ ಕಳುವಾಗಿರುವ ಪ್ರಕರಣಗಳ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆಗೆ ಪ್ರತಿಕ್ರಿಯಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು ‘ನಿನ್ನೆ ರಾತ್ರಿ ಬೇಸರದಲ್ಲಿದ್ದ ಒಬ್ಬ ವ್ಯಕ್ತಿ ಠಾಣೆಗೆ ಬಂದಿದ್ದರು. ಮೊಬೈಲ್ ಕಳೆದಿದೆ ಎಂದು ಹೇಳಿದರಾದರೂ, ಅವರಿಗೆ IMEI ಸಂಖ್ಯೆ ಗೊತ್ತಿರಲಿಲ್ಲ. ಹೀಗಾಗಿ ಎಫ್ಐಆರ್ ದಾಖಲಿಸಲು ಆಗಲಿಲ್ಲ’ ಎಂದು ಹೇಳಿದ್ದಾರೆ.
Published On - 2:24 pm, Mon, 11 July 22