ಬೆಂಗಳೂರು: ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ನೀಡಲು ಅನುದಾನ ಬಿಡುಗಡೆ ಮಾಡಲಾಗಿದೆ. ಮನೆ ಹಾನಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಎಸ್‌ಡಿಆರ್‌ಎಫ್ ನಿಧಿಯಡಿ ಅನುದಾನ ಬಿಡುಗಡೆ ಮಾಡುವಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಅದರಂತೆ, 418.72 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.
ಕಳೆದ ಕೆಲವು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ, ಬೆಳೆ ಹಾನಿ ಉಂಟಾಗಿದೆ. ಅದರಂತೆ, ರಾಯಚೂರು ಜಿಲ್ಲೆಯಲ್ಲಿ ಕೂಡ ಬಹಳಷ್ಟು ಪ್ರಮಾಣದ ಹಾನಿ ಸಂಭವಿಸಿದೆ. ಜಿಲ್ಲೆಯ ಬೆಳೆ ಹಾನಿ ಅಂಕಿ- ಅಂಶವನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಅದರಂತೆ, ರಾಯಚೂರು ಜಿಲ್ಲೆಯಲ್ಲಿ 40,534 ಹೆಕ್ಟೇರ್‌ನಷ್ಟು ಬೆಳೆ ನಾಶ ಆಗಿದೆ ಎಂದು ತಿಳಿದುಬಂದಿದೆ.
ಅತಿಹೆಚ್ಚು 34,496 ಹೆಕ್ಟೇರ್‌ನಲ್ಲಿದ್ದ ಭತ್ತದ ಬೆಳೆ ನಾಶವಾಗಿದೆ. ಸಿಂಧನೂರು ತಾಲೂಕಿನಲ್ಲೇ 24,108 ಹೆಕ್ಟೇರ್‌ನಷ್ಟು ಭತ್ತ ನಾಶ ಆಗಿದೆ. 23 ಹೆಕ್ಟೇರ್ ಜೋಳ, 3,742 ಹೆಕ್ಟೇರ್ ತೊಗರಿ ಬೆಳೆ, 7 ಹೆಕ್ಟೇರ್ ಶೇಂಗಾ, 1,860 ಹೆಕ್ಟೇರ್‌ನಲ್ಲಿದ್ದ ಕಡಲೆ, 15 ಹೆಕ್ಟೇರ್ ಸೂರ್ಯಕಾಂತಿ, 391 ಹೆಕ್ಟೇರ್ ಹತ್ತಿ ಬೆಳೆ ನಾಶ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಸಾವಿರಾರು ಹೆಕ್ಟೇರ್ ಬೆಳೆ ನಾಶದಿಂದ ನೂರಾರು ಕೋಟಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!
ಇದನ್ನೂ ಓದಿ: ಮಳೆ ಹಾನಿ ಕುರಿತು ಅಧಿಕಾರಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ; ಮುಖ್ಯಾಂಶಗಳು ಇಲ್ಲಿದೆ
Published On - 7:50 pm, Tue, 23 November 21