ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!

ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ; ದುಪ್ಪಟ್ಟಾದ ತರಕಾರಿ ಬೆಲೆ, ಪ್ಯಾಕೆಟ್ ಒಂದರಲ್ಲಿ 2 ಟೊಮೆಟೋ ಮಾರಾಟ!
ಬೆಳೆಗಳು ನೀರು ಪಾಲಾಗಿದೆ

ಚುನಾಯಿತ ಪ್ರತಿನಿಧಿಗಳು ಸಂತ್ರಸ್ತ ಪ್ರದೇಶಗಳಿಗೆ ಇನ್ನೂ ಭೇಟಿ ನೀಡಿಲ್ಲ ಎಂಬ ದೂರು ಕೇಳಿ ಬರುತ್ತಿದ್ದಂತೆಯೇ, ನಿನ್ನೆ (ನವೆಂಬರ್​ 22) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

TV9kannada Web Team

| Edited By: preethi shettigar

Nov 23, 2021 | 1:49 PM

ಬೆಂಗಳೂರು: ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಒಂದು ಕಡೆ ಸಂಚಾರಕ್ಕೆ ತೊಂದರೆಯಾದರೆ ಇನ್ನೊಂದು ಕಡೆ ಕಟಾವಿಗೆ ಸಿದ್ಧವಾದ ಬೆಳೆಗಳು ನೀರು ಪಾಲಾಗಿದೆ. ಅದರಲ್ಲೂ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುವ ರೈತರ ಸ್ಥಿತಿ ಹೇಳತೀರದು. ಗದ್ದೆಗಳಲ್ಲಿ, ತೋಟಗಳಲ್ಲಿ ನೀರು ತುಂಬಿಕೊಂಡಿದ್ದು, ರೈತರು ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ. ಹೀಗಿರುವಾಗಲೇ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇದಕ್ಕೆ ಕಾರಣ ಫಸಲು ಸರಿಯಾಗಿ ಮಾರುಕಟ್ಟೆ ಸೇರದಿರುವುದು. ಅದರಲ್ಲೂ ಈ ಹಿಂದೆ ರಸ್ತೆಗೆ ಟೊಮೆಟೋಗಳನ್ನು ಸುರಿದು ಪ್ರತಿಭಟನೆ ನಡೆಸುತ್ತಿದ್ದ ಕೋಲಾರ ಜಿಲ್ಲೆಯಲ್ಲಿ ಕೆಜಿ ಟೊಮೆಟೋಗೆ 210 ರೂಪಾಯಿ ಬೆಲೆ ನಿಗದಿಯಾಗಿದೆ. ಅದರಲ್ಲೂ ಇದೇ ಮೊದಲ ಬಾರಿಕೆ 15 ಕೆಜಿಯ ಒಂದು ಬಾಕ್ಸ್​ನಲ್ಲಿ ಟೊಮೆಟೋ ಬೆಲೆ 3 ಸಾವಿರ ರೂಪಾಯಿ ಗಡಿ ದಾಟಿದೆ. ಅಂದರೆ ರೈತರು ಹೇಳುವ ಪ್ರಕಾರ ದಾಖಲೆಯ ಮೊತ್ತಕ್ಕೆ ಟೊಮೆಟೋ ಮಾರಾಟವಾಗುತ್ತಿದೆ. ಪರಿಸ್ಥಿತಿ ಕೂಡ ಹಾಗೆ ಇದೆ. ಅಲ್ಪಸ್ವಲ್ಪ ಕೆಟ್ಟ ಟೊಮೆಟೋ ಕೂಡ ಮಾರಾಟವಾಗುತ್ತಿದೆ. ಇದಕ್ಕೆ ಕಾರಣ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುತ್ತಿಲ್ಲ. ಇನ್ನು ಒಂದು ಅಥವಾ ಎರಡು ಟೊಮೆಟೋವಿನ ಪ್ಯಾಕೆಟ್ ಕೂಡ ಮಾರುಕಟ್ಟೆಗೆ ಬಂದಿದ್ದು, ಗಗನಕ್ಕೇರಿದ ಬೆಲೆಗೆ ಪ್ರತ್ಯಕ್ಷ ಸಾಕ್ಷಿ ಎಂಬಂತಾಗಿದೆ. ಇನ್ನಿತರ ತರಕಾರಿ ಮಾರಾಟ ಕೂಡ ಭಿನ್ನವಾಗಿಲ್ಲ ಎನ್ನುವುದು ವಿಪರ್ಯಾಸ.

ಭಾರೀ ಮಳೆಗೆ ಐದು ಲಕ್ಷ ಹೆಕ್ಟೇರ್ ಬೆಳೆ ನಾಶ ಈ ಬಗ್ಗೆ ಸರ್ಕಾರ ಕೂಡ ಗಮನಹರಿಸಿದ್ದು, ಆಯಾ ಜಿಲ್ಲೆಗಳಲ್ಲಿನ ಬೆಳೆ ನಷ್ಟದ ಕುರಿತು ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಚುನಾಯಿತ ಪ್ರತಿನಿಧಿಗಳು ಸಂತ್ರಸ್ತ ಪ್ರದೇಶಗಳಿಗೆ ಇನ್ನೂ ಭೇಟಿ ನೀಡಿಲ್ಲ ಎಂಬ ದೂರು ಕೇಳಿ ಬರುತ್ತಿದ್ದಂತೆಯೇ, ನಿನ್ನೆ (ನವೆಂಬರ್​ 22) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಐದು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದ್ದು, 30,114 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟವಾಗಿದೆ.

ಗದಗ ಉತ್ತರ ಕರ್ನಾಟಕ ಜಿಲ್ಲೆಯ ಗದಗದಲ್ಲಿ, ಆರಂಭಿಕ ಅಂದಾಜಿನ ಪ್ರಕಾರ 2,200 ಹೆಕ್ಟೇರ್ ಬೆಳೆಗಳು ಮತ್ತು 1,300 ಹೆಕ್ಟೇರ್ ತೋಟಗಾರಿಕಾ ಉತ್ಪನ್ನಗಳಿಗೆ ನಷ್ಟವಾಗಿದೆ. ಈರುಳ್ಳಿ, ಮೆಣಸಿನಕಾಯಿ, ಬಾಳೆ, ಮೆಕ್ಕೆ ಜೋಳ ಬೆಳೆಗಳು ಮಳೆಯಿಂದ ಹಾನಿಗೀಡಾಗಿವೆ.

ಧಾರವಾಡ ಜಿಲ್ಲೆಯ ಅಧಿಕಾರಿಗಳು ನಡೆಸಿದ ಪ್ರಾಥಮಿಕ ಸಮೀಕ್ಷೆ ಪ್ರಕಾರ ಇದುವರೆಗೆ 21,344 ಹೆಕ್ಟೇರ್ ಕೃಷಿ ಬೆಳೆ ಹಾಗೂ 8,759 ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿಯ ಅಂದಾಜು ನಡೆಸುತ್ತಿದ್ದಾರೆ. ಹಾನಿಗೊಳಗಾದ ಬೆಳೆಗಳಲ್ಲಿ ಗೋಧಿ, ಮೆಕ್ಕೆ ಜೋಳ, ಸೋಯಾ, ಹತ್ತಿ ಇತರವು ಸೇರಿವೆ.

ತುಮಕೂರು ತುಮಕೂರು ಜಿಲ್ಲೆಯಲ್ಲೂ ಧಾರಾಕಾರ ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಸುಮಾರು 60,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಗಿ, ನೆಲಗಡಲೆ, ತೊಗರಿ ಬೇಳೆ ನಾಶವಾಗಿದೆ.

ಕೊಪ್ಪಳ ಕೊಪ್ಪಳ ಜಿಲ್ಲೆಯನ್ನು ಭತ್ತದ ನಾಡು ಎಂದು ಕರೆಯಲಾಗುತ್ತದೆ. ಆದರೆ ಮಳೆಯಿಂದ ಸಾವಿರಾರು ಭತ್ತ ಬೆಳೆಗಾರರು ಬೆಳೆ ಕಳೆದುಕೊಂಡಿದ್ದು, ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಕೊಪ್ಪಳದಲ್ಲಿ 2,500 ಹೆಕ್ಟೇರ್ ಕೃಷಿ ಭೂಮಿ ನಾಶವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಭಾರೀ ಮಳೆಯಾಗುತ್ತಿದ್ದು, ವ್ಯಾಪಕ ಬೆಳೆ ನಾಶವಾಗಿದೆ. ಒಟ್ಟು 6 ಮಂದಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಹೆಕ್ಟೇರ್ ಬೆಳೆ ಜಲಾವೃತವಾಗಿದೆ. ಆಲಗಟ್ಟಿ ಗ್ರಾಮದಲ್ಲಿ 300 ಎಕರೆ ತೋಟಗಾರಿಕೆ ಬೆಳೆಗಳು ಜಲಾವೃತವಾಗಿದೆ. ಕಳೆದ ವರ್ಷ ನಿರ್ಮಿಸಿದ ಅವೈಜ್ಞಾನಿಕ ಚೆಕ್ ಡ್ಯಾಂಗಳೇ ನಷ್ಟಕ್ಕೆ ಕಾರಣ ಎಂದು ರೈತರು ಆರೋಪಿಸಿದ್ದಾರೆ.

ಹಾವೇರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ನ.1ರಿಂದ ಇಲ್ಲಿಯವರೆಗೆ 18,444 ಹೆಕ್ಟೇರ್ ಬೆಳೆ ನಾಶವಾಗಿದ್ದು, ಹತ್ತಿ, ಸೋಯಾಬೀನ್, ಶೇಂಗಾ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಸರಕಾರ ಮಧ್ಯಂತರ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ 34,454 ಹೆಕ್ಟೇರ್ ಬೆಳೆ ನಾಶವಾಗಿದೆ. ರಾಗಿ, ಟೊಮೆಟೋ ಸೇರಿದಂತೆ ಇತರೆ ಬೆಳೆಗಳು ನಾಶವಾಗಿವೆ. ಕೋಲಾರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಆರು ಎಕರೆ ಟೊಮೆಟೋ ಬೆಳೆ ನಾಶವಾಗಿದೆ.

ಇದನ್ನೂ ಓದಿ: ನಿರಂತರ ಮಳೆಗೆ ಗಗನಕ್ಕೇರಿದ ತರಕಾರಿ ಬೆಲೆ; ಯಾವ ಯಾವ ತರಕಾರಿಗಳಿಗೆ ದರ ಎಷ್ಟಿದೆ ನೋಡಿ

ಚಿಕ್ಕಬಳ್ಳಾಪುರ: ಮಳೆಗೆ ಬೆಳೆ ನಾಶ; ದುಬಾರಿಯಾಗಲಿದೆ ತರಕಾರಿ, ಹೂವು, ಹಣ್ಣಿನ ಬೆಲೆ

Follow us on

Related Stories

Most Read Stories

Click on your DTH Provider to Add TV9 Kannada