ಬೆಂಗಳೂರು, ಫೆ.22: ಯುವಕರನ್ನು ಧೂಮಪಾನದಿಂದ ದೂರವಿಡುವ ಉದ್ದೇಶದಿಂದ ಸಿಗರೇಟ್ (Cigarette) ಖರೀದಿಸಲು ಕಾನೂನುಬದ್ಧ ವಯಸ್ಸನ್ನು 21ಕ್ಕೆ ಹೆಚ್ಚಿಸುವ ಮಸೂದೆಯನ್ನು ಕರ್ನಾಟಕ ವಿಧಾನಸಭೆ (Karnataka Assembly) ಅಂಗೀಕರಿಸಿದೆ. ಯುವಕರಲ್ಲಿ ತಂಬಾಕು ಸೇವನೆಗೆ ಬ್ರೇಕ್ ಹಾಕಲು ಇತ್ತೀಚೆಗೆ ಸರ್ಕಾರ ಹುಕ್ಕಾ ಬಾರ್‌ಗಳ ಮೇಲೆ ನಿಷೇಧ ಹೇರಿತ್ತು. ಇದೀಗ ಸಿಗರೇಟ್ ಖರೀದಿಸುವವರ ವಯಸ್ಸನ್ನು 21 ವರ್ಷಕ್ಕೆ ಏರಿಸಿದೆ.
ಸಿಗರೇಟ್ ಖರೀದಿಸಲು ಕನಿಷ್ಠ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಸುವ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದೆ. ಈ ಮೂಲಕ ಯುವಜನರು ಚಿಕ್ಕ ವಯಸ್ಸಿನಲ್ಲೇ ಧೂಮಪಾನ ಚಟಕ್ಕೆ ದಾಸರಾಗುವುದನ್ನು ತಡೆಯಬಹುದಾಗಿದೆ. ಹೆಚ್ಚುವರಿಯಾಗಿ, ಯುವಜನರಲ್ಲಿ ತಂಬಾಕು ಸೇವನೆಯನ್ನು ಮತ್ತಷ್ಟು ನಿರುತ್ಸಾಹಗೊಳಿಸಲು ವಿಧಾನಸಭೆಯು ರಾಜ್ಯದಾದ್ಯಂತ ಹುಕ್ಕಾ ಬಾರ್‌ಗಳ ಮೇಲೆ ನಿಷೇಧವನ್ನು ಹೇರಿದೆ.
ವಿಧಾನಸಭೆಯಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಗಿದೆ.
ಇದನ್ನೂ ಓದಿ: ಸರ್ಕಾರದಲ್ಲಿ 190 ಅಗತ್ಯ ಔಷಧಿಗಳ ದಾಸ್ತಾನು ಇಲ್ಲ: ದಿನೇಶ್ ಗುಂಡೂರಾವ್
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಹುಕ್ಕಾ ಬಾರ್‌ಗಳ ಮೇಲಿನ ಅಧಿಸೂಚನೆ ಆಧಾರಿತ ನಿಷೇಧದಿಂದಾಗಿ ಈ ಹಿಂದೆ ಎದುರಿಸಿದ ಕಾನೂನು ಸವಾಲುಗಳನ್ನು ನಿವಾರಿಸುವ ಅಗತ್ಯವನ್ನು ಒತ್ತಿ ಹೇಳಿದರು.
ನಾವು ಈ ಹಿಂದೆ ಅಧಿಸೂಚನೆಯ ಮೂಲಕ ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಷೇಧಿಸಿದ್ದೇವೆ. ಆದರೆ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಕಾನೂನು ಪರಿಶೀಲನೆಯಿಂದ ವಿನಾಯಿತಿ ನೀಡಲು, ನಾವು ಈ ಮಸೂದೆಯನ್ನು ಮಂಡಿಸಿದ್ದೇವೆ ಎಂದು ಅವರು ಹೇಳಿದರು.
ಶಾಲೆಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡುವರಿಗೆ ದಂಡದ ಪ್ರಮಾಣ 100 ರೂ. ನಿಂದ 1000 ರೂ. ಗೆ ಏರಿಕೆ ಮಾಡಿದ್ದೇವೆ ಎಂದು ತಿಳಿಸಿದರು.
ಮಸೂದೆಯ ಅನುಷ್ಠಾನದ ನಂತರ ಹುಕ್ಕಾ ಬಾರ್‌ಗಳನ್ನು ನಡೆಸುವುದು ಕಂಡುಬಂದರೆ, ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ವರೆಗಿನ ದಂಡ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತೆ ಎಂದು ಎಚ್ಚರಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ