ಬೆಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಬೆಂಗಳೂರು ನಗರಕ್ಕೆ ₹ 25 ಲಕ್ಷ, ಉಳಿದಂತೆ ಪ್ರತಿ ಜಿಲ್ಲೆಗೆ ತಲಾ ₹ 1 ಲಕ್ಷ ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ಮಟ್ಟದ ಕಾರ್ಯಕ್ರಮಗಳಿಗೆ ತಲಾ ₹ 20 ಸಾವಿರ ಬಿಡುಗಡೆ ಮಾಡಲು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಕೇರಳ ಸ್ತಬ್ಧಚಿತ್ರ ತಿರಸ್ಕಾರ: ಯಡಿಯೂರಪ್ಪ ಸ್ಪಷ್ಟನೆ
ಕೇರಳ ಸರ್ಕಾರ ರೂಪಿಸಿದ್ದ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲು ಕೇಂದ್ರ ಸರ್ಕಾರ ಅವಕಾಶ ನಿರಾಕರಿಸಿದೆ ಎಂಬ ಆರೋಪಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸ್ತಬ್ಧಚಿತ್ರವನ್ನು ನಿರ್ದಿಷ್ಟ ಮಾರ್ಗಸೂಚಿಗೆ ಅನುಗುಣವಾಗಿ ರಕ್ಷಣಾ ಇಲಾಖೆಯು ಪ್ರತಿ ವರ್ಷ ಆಯ್ಕೆ ಮಾಡುತ್ತದೆ. ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಮಾಡುವ ಹಾಗೂ ಸೌಹಾರ್ದಕ್ಕೆ ಭಂಗ ತರುವ ಪ್ರವೃತ್ತಿ ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುವ ರಾಜ್ಯಗಳ ಸ್ತಬ್ಧಚಿತ್ರಗಳನ್ನು, ನಿರ್ದಿಷ್ಟ ಮಾರ್ಗಸೂಚಿಗಳ ಅನ್ವಯ ಆಯ್ಕೆ ಮಾಡುವುದು ರಕ್ಷಣಾ ಸಚಿವಾಲಯ. ನಿಯಮಗಳನ್ವಯವೇ ಪ್ರತಿವರ್ಷ ಹೀಗೆಯೇ ನಡೆಯುತ್ತಿದೆ. ಅನಗತ್ಯವಾಗಿ ಇದರಲ್ಲೂ ರಾಜಕೀಯ ಮಾಡುವ, ಶ್ರೇಷ್ಠ ವ್ಯಕ್ತಿಗಳ ಹೆಸರಿನಲ್ಲಿ ಸೌಹಾರ್ದತೆಗೆ ಭಂಗ ತರುವ ಪ್ರವೃತ್ತಿ ಖಂಡನೀಯ.
— B.S. Yediyurappa (@BSYBJP) January 19, 2022
ಸುಭಾಷ್ ಚಂದ್ರಬೋಸ್ ಜಯಂತಿ ಬಗ್ಗೆ ಸಿಎಂ ಚರ್ಚೆ
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಜನವರಿ 23ರಂದು ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳು ಹಾಗೂ ಗಣರಾಜ್ಯೋತ್ಸವ ಆಚರಣೆ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಹಾಗೂ ಪಕ್ಷದ ಪ್ರಮುಖ ನಾಯಕರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷರಾಗಿ ಒಂದೂವರೆ ವರ್ಷಗಳಾದ ಹಿನ್ನೆಲೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕಾತಿ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ನಿಗಮ-ಮಂಡಳಿಗಳ ಅಧ್ಯಕ್ಷರ ಬದಲಾವಣೆ ವಿಚಾರ, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಆದ್ಯತಾ ವಿಚಾರಗಳ ಕುರಿತು ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಜತೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಲಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ
ಇದನ್ನೂ ಓದಿ: Covid-19: ಕೊವಿಡ್ನಿಂದ ಮೃತಪಟ್ಟವರ ದೇಹದಲ್ಲೂ 9 ದಿನ ಕೊರೊನಾವೈರಸ್ ಜೀವಂತವಾಗಿರುತ್ತದೆ!
Published On - 10:17 pm, Wed, 19 January 22