ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ 100 ದಿನದ ಸಂಭ್ರಮ: ನಾಳೆ ವಿಧಾನಸೌಧದಲ್ಲಿ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ

ಕರ್ನಾಟಕ ಕಾಂಗ್ರೆಸ್ ಸರ್ಕಾರ 100 ದಿನಗಳನ್ನು ಪೂರೈಸಿದ್ದು, ಸಿಎಂ ಡಿ.ಕೆ. ಶಿವಕುಮಾರ್ ಪಂಚ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸರ್ಕಾರದ ಪ್ರಮುಖ ಸಾಧನೆಗಳು, ಅಧಿಕಾರಿಗಳ ವಿಳಂಬ ತಡೆಯಲು 'ಪ್ರಜಾ ಸೇವಾ ಇಲಾಖೆ' ಆರಂಭ ಹಾಗೂ 'ಭಾರತ್ ಜೋಡೋ ಯುವ ಸಂಘ'ಗಳ ಮೂಲಕ ಯುವ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮುಂದಿನ 500 ದಿನಗಳ ಅಭಿವೃದ್ಧಿ ದೃಷ್ಟಿಕೋನವನ್ನೂ ಅನಾವರಣಗೊಳಿಸಲಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರಕ್ಕೆ 100 ದಿನದ ಸಂಭ್ರಮ: ನಾಳೆ ವಿಧಾನಸೌಧದಲ್ಲಿ ಗ್ಯಾರಂಟಿ ಫಲಾನುಭವಿಗಳೊಂದಿಗೆ ಸಂವಾದ
ಡಿಕೆ ಶಿವಕುಮಾರ್

Updated on: Sep 09, 2026 | 10:35 AM

ಬೆಂಗಳೂರು, ಸೆ.9: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಗುರುವಾರಕ್ಕೆ (ಸೆಪ್ಟೆಂಬರ್ 10) ಬರೋಬ್ಬರಿ 100 ದಿನಗಳನ್ನು ಪೂರೈಸಲಿದೆ. ಈ ಸಂಭ್ರಮದ ಮೈಲಿಗಲ್ಲಿನ ನೆನಪಿಗಾಗಿ, ಗುರುವಾರ ಬೆಳಿಗ್ಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಪ್ರಮುಖ ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳೊಂದಿಗೆ ಸಿಎಂ ಬೃಹತ್ ಟೌನ್‌ಹಾಲ್ (Town Hall) ಸಂವಾದ ಸಭೆ ನಡೆಸಲಿದ್ದಾರೆ.

ಸಭೆಯಲ್ಲಿ ತಮ್ಮ ಸರ್ಕಾರದ ಪ್ರಮುಖ ಸಾಧನೆಗಳು ಹಾಗೂ ಮುಂಬರುವ 500 ದಿನಗಳ ಅಭಿವೃದ್ಧಿ ದೃಷ್ಟಿಕೋನವನ್ನು (Vision for 500 days) ಸಿಎಂ ಹಂಚಿಕೊಳ್ಳಲಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದಲೇ ಆಡಳಿತಕ್ಕೆ ವೇಗ ನೀಡಿರುವ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಯಾದ 5 ಗ್ಯಾರಂಟಿಗಳ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಸರ್ಕಾರಿ ಆಡಳಿತದಲ್ಲಿ ಅಧಿಕಾರಿಗಳ ವಿಳಂಬ ಧೋರಣೆಗೆ ಕಡಿವಾಣ ಹಾಕಿ, ತಕ್ಷಣದ ಸ್ಪಂದನೆ ಸಿಗುವಂತೆ ಮಾಡಲು ಶಿವಕುಮಾರ್ ಸರ್ಕಾರ ‘ಪ್ರಜಾ ಸೇವಾ ಇಲಾಖೆ’ಯನ್ನು ಹೊಸದಾಗಿ ಆರಂಭಿಸಿದೆ. ಸಾರ್ವಜನಿಕರ ಕುಂದುಕೊರತೆ ಅರ್ಜಿಗಳನ್ನು ಕೇವಲ ಕಡತ ವಿಲೇವಾರಿ ಮಾಡುವುದಕ್ಕಿಂತ ಹೆಚ್ಚಾಗಿ, ಸಮಸ್ಯೆ ನಿಜಕ್ಕೂ ಪರಿಹಾರವಾಗಿದೆಯೇ ಎಂಬುದರ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.

ಇದನ್ನೂ ಓದಿ: ಸತೀಶ್ ಜಾರಕಿಹೋಳಿ ಮನೆ ಮೇಲೆ ಇಡಿ ದಾಳಿ: 178 ಕೋಟಿ ಅಬಕಾರಿ ಅಕ್ರಮ, ವಿದೇಶಿ ಹಣ ವರ್ಗಾವಣೆ ಆರೋಪ

ಯುವ ಸಬಲೀಕರಣ ಹಾಗೂ ಸಂಘಟನೆಯ ಭಾಗವಾಗಿ ರಾಜ್ಯ ಸರ್ಕಾರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಪ್ರಾರಂಭಿಸಿದೆ. 2027 ಮಾರ್ಚ್ 31ರ ವೇಳೆಗೆ ಗ್ರಾಮೀಣ ಭಾಗದ ಗ್ರಾಮ ಪಂಚಾಯತಿಗಳಲ್ಲಿ 6 ಸಾವಿರ ಹಾಗೂ ನಗರ ಪ್ರದೇಶಗಳಲ್ಲಿ 4 ಸಾವಿರ ಸೇರಿದಂತೆ ಒಟ್ಟು 10 ಸಾವಿರ ಯುವ ಸಂಘಗಳನ್ನು ರಚಿಸುವ ಗುರಿ ಹೊಂದಲಾಗಿದೆ. ಆಗಸ್ಟ್ 31ರ ವರೆಗೆ ಗ್ರಾಮೀಣ ಭಾಗದಲ್ಲಿ 6 ಲಕ್ಷದ ಗುರಿಯ ಪೈಕಿ 5,55,762 ಸದಸ್ಯರು ಹಾಗೂ ನಗರ ಭಾಗದಲ್ಲಿ 4 ಲಕ್ಷದ ಗುರಿಯ ಪೈಕಿ 2,24,000ಕ್ಕೂ ಅಧಿಕ ಯುವಕರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:23 am, Wed, 9 September 26

Loading...
Unable to load recommendations.
Follow Us