ಬೆಂಗಳೂರು: ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ಅನುಕೂಲವಾಗುವಂತೆ 348 ಮರಗಳನ್ನು ಸ್ಥಳಾಂತರ ಮಾಡಲು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ಗೆ ಒಪ್ಪಿಗೆ ನೀಡಿತ್ತು. ಇದರಿಂದಾಗಿ, ಎರಡನೇ ಹಂತದ ಅಂಡರ್ಗ್ರೌಂಡ್ ಮೆಟ್ರೋ ಕಾರಿಡರ್ ನಿರ್ಮಾಣಕ್ಕೆ ವೇಗ ಸಿಕ್ಕಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ. ಕರ್ನಾಟಕ ಹೈಕೋರ್ಟ್ ಜುಲೈ 15ರಂದು 348 ಮರಗಳನ್ನು ಸ್ಥಳಾಂತರಿಸಲು ಹಾಗೂ 4,000 ಗಿಡಗಳನ್ನು ಬದಲಿಯಾಗಿ ನೆಡಲು ತಿಳಿಸಿ ಮೆಟ್ರೋ ಕಾಮಗಾರಿಗೆ ಅನುವು ಮಾಡಿಕೊಟ್ಟಿತ್ತು.
ಮೆಟ್ರೋ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವಂತೆ, ಅವರು ಮಾರ್ಚ್ 2019ರಿಂದ ಕೋರ್ಟ್ನ ಅನುಮತಿಗಾಗಿ ಕಾಯುತ್ತಿದ್ದರು. ಇದೀಗ ಎರಡು ವರ್ಷದ ಬಳಿಕ, ನಿಧಾನವಾಗಿ ಸಾಗುತ್ತಿದ್ದ ನಾಗಾವರದಿಂದ ಡೈರಿ ಸರ್ಕಲ್ನ ಅಂಡರ್ಗ್ರೌಂಡ್ ಕಾಮಗಾರಿಗೆ ವೇಗ ಲಭಿಸಿದೆ. ಈಗ ನಾವು ಈ ಕಾಮಗಾರಿ ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. 13.92 ಕಿಲೋ ಮೀಟರ್ನ ನಾಗಾವರ- ಕಳೇನ ಅಗ್ರಹಾರ (ಗೊಟ್ಟಿಗೆರೆ) ಲೈನ್ನಲ್ಲಿ, ಒಟ್ಟು 522 ಮರಗಳನ್ನು ಸ್ಥಳಾಂತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮರಗಳ ಸ್ಥಳಾಂತರ ಕಾರ್ಯವು ಕನಿಷ್ಠ ಎರಡು ತಿಂಗಳ ಕಾಲ ನಡೆಯುತ್ತದೆ. ಆದರೆ, ಕಡಿಯಬೇಕಾಗಿರುವ ಮರಗಳನ್ನು ಈಗಾಗಲೇ ಕಡಿದಾಗಿದೆ ಎಂದು ಮತ್ತೋರ್ವ ಮೆಟ್ರೋ ಅಧಿಕಾರಿ ಮಾಹಿತಿ ನೀಡಿದ್ದಾರೆ. ನಾವು ಈ ಮೊದಲು ಬಹಳಷ್ಟು ಸಮಯದಿಂದ ಡೈರಿ ಸರ್ಕಲ್, ನಾಗಾವರ, ಲ್ಯಾಂಗ್ಫೋರ್ಡ್ ಸ್ಟೇಷನ್ ಹಾಘೂ ಎಮ್ಜಿ ರಸ್ತೆಯಲ್ಲಿ ಉಳಿದಿದ್ದ ಮೆಟ್ರೋ ಕಾಮಗಾರಿಯನ್ನು ಈಗ ಆರಂಭಿಸಿದ್ದೇವೆ. ಕೋರ್ಟ್ ಆದೇಶ ಬಂದಿದ್ದು, ಇದರಿಂದ ಪಿಂಕ್ ಲೈನ್ ಕಾಮಗಾರಿ ವೇಗ ಪಡೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ನಾಗಾವರ ಹಾಗೂ ಸುತ್ತಮುತ್ತ ಅತಿಹೆಚ್ಚು ಅಂದರೆ, 56 ಮರಗಳನ್ನು ಕಡಿಯಬೇಕಾಗಿದೆ ಹಾಗೂ 22 ಮರಗಳನ್ನು ಸ್ಥಳಾಂತರಿಸಬೇಕಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಎಮ್ಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೆಜ್, ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ಒಟ್ಟು 5,500 ಮರಗಳನ್ನು ಸ್ಥಳಾಂತರ ನಡೆಸಬೇಕಾಗಿದೆ ಹಾಗೂ 50,000 ಮರಗಳನ್ನು ನೆಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Metro: ಗಮನಿಸಿ, ಆಗಸ್ಟ್ 11,12 ರಂದು ವಿಜಯನಗರ-ಮೈಸೂರು ರಸ್ತೆಯ ಮೆಟ್ರೋ ಮಾರ್ಗದಲ್ಲಿ ಸೇವೆ ಇರದು
Bengaluru Metro: ರಾತ್ರಿ ಕರ್ಫ್ಯೂ ಹಿನ್ನೆಲೆ; ಮೆಟ್ರೋ ರೈಲು ಕಾರ್ಯನಿರ್ವಹಿಸುವ ಅವಧಿಯಲ್ಲಿ ಬದಲಾವಣೆ
(Karnataka High Court agrees to Transplant Trees for Bengaluru Namma Metro Work)